ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆಚಾರ್ಯ ಕೃಪಲಾನಿ


 ಆಚಾರ್ಯ ಕೃಪಲಾನಿ


ಆಚಾರ್ಯ ಜೀವಾತ್ ರಾಮ್ ಕೃಪಲಾನಿ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಪರಿಸರವಾದಿಯಾಗಿ, ಅಧ್ಯಾತ್ಮಿಯಾಗಿ, ಜನಪರ ಹಿತಚಿಂತಕರಾಗಿ ಹೆಸರಾದವರು. 

ಆಚಾರ್ಯ ಕೃಪಲಾನಿ 1888ರ ನವೆಂಬರ್ 11ರಂದು ಜನಿಸಿದರು. ಅವರು ಹುಟ್ಟಿ ಬೆಳೆದ ಊರು ಆಗಿನ ಭಾರತದ ಭಾಗವಾಗಿದ್ದ  ಸಿಂದ್ ಪ್ರಾಂತ್ಯದ ಹೈದರಾಬಾದು.   ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಪದವಿ ಪಡೆದು ಶಿಕ್ಷಕರಾಗಿದ್ದವರು, ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಬಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಸಮಯದಲ್ಲಿ ತಮ್ಮ ಹುದ್ಧೆಯನ್ನು  ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಳಿದರು.  

1920ರ ಬ್ರಿಟಿಷರ ವಿರುದ್ಧದ ಅಸಹಕಾರ ಚಳುವಳಿಯಿಂದ ಮೊದಲುಗೊಂಡಂತೆ ಎಂಭತ್ತರ ದಶಕದ ತುರ್ತುಪರಿಸ್ಥಿತಿಯವರೆಗೆ ಅವರು ಅಧಿಕಾರಶಾಹಿಯೊಂದಿಗಿನ ತಮ್ಮ ಭಿನ್ನಾಭಿಪ್ರಾಯಗಳ ಮೂಲಕ ಭಾರತೀಯ ಜನತೆಗೆ ಚಿರಪರಿಚಿತರಾದವರು. ಅವರು  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಕಾರ್ಯಕರ್ತರಾಗಿ ದುಡಿದವರು.  ಹಲವಾರು ಸೆರೆವಾಸಗಳಿಗೆ ಒಗ್ಗಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ನಿರಂತರ ತಮ್ಮನ್ನು ತೊಡಗಿಸಿಕೊಂಡವರು.  ಕೃಪಲಾನಿಯವರು ಭಾರತಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು.

ಕೃಪಲಾನಿ ಅವರು ಮುಂದೆ 1950ರ ಅವಧಿಯಲ್ಲಿ ನೆಹರೂ ಅವರ ಬೆಂಬಲ ಹೊಂದಿದ್ದರೂ ಪಟೇಲರ ಆತ್ಮೀಯರಾದ ಟಾಂಡನ್ ಅವರ  ವಿರುದ್ಧ ಅಧ್ಯಕ್ಷ ಚುನಾವಣೆಯಲ್ಲಿ ಸೋಲುಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ತೊರೆದು ರೈತ ಕಾರ್ಮಿಕರ ಪ್ರಜಾ ಪಕ್ಷ ಸ್ಥಾಪಿಸಿ, ನಂತರ ಅದನ್ನು  ಪ್ರಜಾ ಸೋಷಿಯಲಿಸ್ಟ್ ಪಕ್ಷದಲ್ಲಿ ವಿಲೀನಗೊಳಿಸಿದರು.  ಅವರ ಪತ್ನಿ ಸುಚೇತ ಕೃಪಲಾನಿ ಅವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದು ಹಲವಾರು ಅವಧಿಯವರೆಗೆ ವಿವಿಧ ಮಂತ್ರಿಪದವಿಗಳಲ್ಲಿ ರಾರಾಜಿಸಿದ್ದರು.  ಆಕೆ ಉತ್ತರ ಪ್ರದೇಶದ ಪ್ರಥಮ ಮಹಿಳಾ ಮುಖ್ಯಮಂತ್ರಿಯೂ ಆಗಿದ್ದರು.    1963ರಲ್ಲಿ ಭಾರತವು ಚೀಣಾ ದೇಶದ ವಿರುದ್ಧದ ಯುದ್ಧದಲ್ಲಿ ಹೀನಾಯವಾದ ಸೋಲುಂಡ ಹಿನ್ನೆಲೆಯಲ್ಲಿ ಆಚಾರ್ಯ ಕೃಪಲಾನಿ ಅವರು ನೆಹರೂ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದರು.  

ನಿರಂತರವಾಗಿ ನೆಹರೂ ಅವರ ಆಡಳಿತ ಮತ್ತು ನೀತಿಗಳನ್ನು ವಿರೋಧಿಸುತ್ತಾ ಬಂದ ಕೃಪಲಾನಿಯವರು ಜೊತೆ ಜೊತೆಗೆ ಪರಿಸರ, ಆಧ್ಯಾತ್ಮ ಮುಂತಾದ ವಿಚಾರಗಳ ಜೊತೆಗೆ ಕಾಳಜಿ ವಹಿಸುತ್ತಾ ವಿನೋಬಾ ಭಾವೆಯವರ ಆದರ್ಶಗಳತ್ತ ನಡೆಯ ತೊಡಗಿದರು.  

ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆಗಳನ್ನು ನಿರಂತರವಾಗಿ ವಿರೋಧಿಸುತ್ತಾ ಬಂದ ಕೃಪಲಾನಿ ಅವರನ್ನು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮೊದಲ ದಿನದಿಂದಲೇ ಕಾರಾಗ್ರಹದಲ್ಲಿ ಇರಿಸಲಾಗಿತ್ತು.  ಮುಂದೆ ಜಯಪ್ರಕಾಶ್ ನಾರಾಯಣ ಮತ್ತು ಆಚಾರ್ಯ ಕೃಪಲಾನಿ ಜನತಾ ಪಕ್ಷದ ಮುಖೇನ  ಭಾರತದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಕೇಂದ್ರ ಸರ್ಕಾರವನ್ನು ಸ್ಥಾಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.  

ಆಚಾರ್ಯ ಕೃಪಲಾನಿಯವರು 1982ರ ಮಾರ್ಚ್ 19ರಂದು ತಮ್ಮ 94ನೆಯ ವಯಸ್ಸಿನಲ್ಲಿ ನಿಧನರಾದರು.

On the birth anniversary of freedom fighter Acharya Kripalani 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ