ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಾಸಪಂಥ


 ದಾಸಪಂಥ

ದಾಸಪಂಥ ಭಕ್ತಿಪಂಥಕ್ಕೆ ಇರುವ ಇನ್ನೊಂದು ಹೆಸರು. ಇದರ ಸಾಹಿತ್ಯ ವಿಪುಲ, ವೈವಿಧ್ಯಮಯ. ಮಧ್ಯಯುಗದ ಕನ್ನಡ ಸಾಹಿತ್ಯ ತಾಯಿಯ ಒಂದು ಕಣ್ಣು ಶಿವಶರಣರ ವಚನಗಳಾದರೆ, ಅದರ ಇನ್ನೊಂದು ಕಣ್ಣೇದಾಸರ ಪದಗಳು. ದಾಸಪಂಥದವರನ್ನು ಹರಿದಾಸರು ಎಂದು ಕರೆಯುವುದು ರೂಢಿ.

ಹರಿದಾಸ ಸಾಹಿತ್ಯಕ್ಕೆ ಮೂಲ ಶ್ರೀ ಮಧ್ವಾಚಾರ್ಯರ ದ್ವಾದಶಸ್ತೋತ್ರ. ಇದಾದ ಅನಂತರ ಶ್ರೀ ನರಹರಿತೀರ್ಥರು ಕನ್ನಡ ಭಾಷೆಯಲ್ಲಿ ಕೆಲವು ಕೀರ್ತನೆಗಳನ್ನು ರಚಿಸಿದ್ದಾರೆ. ಆದರೂ ದಾಸ-ಸಾಹಿತ್ಯವನ್ನು ಪುನರುದ್ಧಾರ ಮಾಡಿದ ಕೀರ್ತಿ ಶ್ರೀ ಶ್ರೀಪಾದರಾಯರಿಗೇ ಸಲ್ಲಬೇಕು.

ಶ್ರೀಪಾದರಾಯರ ಅನಂತರ ಬಂದ ಶ್ರೀ ವ್ಯಾಸರಾಯರು ಹೇರಳವಾಗಿ ಕೀರ್ತನೆಗಳನ್ನು ರಚಿಸಿ ದಾಸಪಂಥವನ್ನೇ ನೂತನವಾಗಿ ನಿರ್ಮಿಸಿ, ಪೋಷಿಸಿ ಕಟ್ಟಿ ಬೆಳೆಸಿದರು. ಅವರು ಮಹಾಶಾಸ್ತ್ರಜ್ಞರಾಗಿದ್ದರು. ಪುರಂದದಾಸರು, ಕನಕದಾಸರು, ವಾದಿರಾಜರು ಮೊದಲಾದ ಭಕ್ತಮಣಿಗಳಿಗೆ ಜ್ಞಾನೋಪದೇಶ ಮಾಡಿದರು; ಅವರಿಗೆ ದಾಸಪಂಥದಲ್ಲಿ ಸೇವೆ ಮಾಡುವಂತೆ ಆಜ್ಞೆಮಾಡಿದರು. ಅಂದಿನಿಂದ ದಾಸಕೂಟ ವಿಸ್ತೃತವಾಗಿ ಪಂಡಿತಪಾಮರರೆನ್ನದೆ ಎಲ್ಲರಲ್ಲೂ ಜ್ಞಾನ ಭಕ್ತಿ ವೈರಾಗ್ಯಗಳ ಹೊನಲುಕ್ಕುವಂತೆ ಮಾಡಿ ಲೋಕೋದ್ಧಾರ ಕೂಟವೆಂದು ಗೌರವ ಪಡೆಯಿತು.

ಭಕ್ತಿಭಾವವೇ ದಾಸಪಂಥದ ಸರ್ವಸ್ವ, ಬಂಡವಾಳ. ಭಕ್ತಿಭಾವ ವೇದಗಳಷ್ಟೇ ಪ್ರಾಚೀನವಾದುದು. ಹರಿದಾಸ ಬೋಧನೆಗೆ ವೇದಾಂತವೇ ಆಧಾರ. ಕ್ರಿ.ಶ. 12ನೆಯ ಶತಮಾನದಲ್ಲಿ ರಾಮಾನುಜರು ಕರ್ನಾಟಕದಲ್ಲಿ ವಿಷ್ಣುಭಕ್ತಿಯನ್ನು ಪ್ರಚಾರ ಮಾಡಿದರು. ಇದಕ್ಕೂ ಮುಂಚೆಯೇ ಶಂಕರರು ಕ್ರಿ.ಶ. ಎಂಟನೆಯ ಶತಮಾನದಲ್ಲಿಯೇ ಭಜಗೋವಿಂದಂ ಮುಂತಾದ ಸ್ತೋತ್ರಗಳನ್ನು ರಚಿಸಿ ಹಾಗೂ ವಿಷ್ಣುಸಹಸ್ರನಾಮಕ್ಕೆ ಟಿಪ್ಪಣಿಯನ್ನು ಬರೆಯುವುದರ ಮೂಲಕ ಮಾನವ ಜೀವನದಲ್ಲಿ ದೈವಭಕ್ತಿಯ ಅನಿವಾರ್ಯತೆಯನ್ನು ಪ್ರಚುರಪಡಿಸಿದ್ದರು. ಅನಂತರ ಸುಮಾರು ಕ್ರಿ.ಶ. 13ನೆಯ ಶತಮಾನದಲ್ಲಿ ಮಧ್ವರು ತಮ್ಮ ದ್ವೈತ ವೇದಾಂತವನ್ನು ಪ್ರತಿಪಾದಿಸಿ, ವೈಷ್ಣವ ಭಕ್ತಿಯನ್ನು ಇನ್ನೂ ಹೆಚ್ಚಿಸಿದರು.

ಮಧ್ವರ ದ್ವೈತ ವೇದಾಂತವೇ ಹರಿದಾಸರ ತಾತ್ತ್ವಿಕ ಬೋಧನೆಗೆ ತಳಹದಿ. ಮಧ್ವರು ತಮ್ಮ ದ್ವೈತತತ್ತ್ವವನ್ನು ವೇದೋಪನಿಷತ್ತುಗಳು, ಗೀತೆ, ಬ್ರಹ್ಮಸೂತ್ರಗಳು, ಪುರಾಣ, ಇತಿಹಾಸ ಮತ್ತು ಪಂಚರಾತ್ರಾಗಮಗಳು ಇವನ್ನು ಸಮನ್ವಯ ಮಾಡಿ ಪ್ರತಿಪಾದಿಸಿದರು. ಮುಂದೆ ಬಂದ ದಾಸಪಂಥ ಮೇಲೆ ಹೇಳಿದ ಆಧಾರಗಳನ್ನು ತಮ್ಮ ಸಾಹಿತ್ಯವನ್ನು ಸೃಷ್ಟಿಸುವುದರಲ್ಲಿ ವಿಪುಲವಾಗಿ ಉಪಯೋಗಿಸಿಕೊಂಡಿತು.

ಭಕ್ತಿಭಾವಕ್ಕೆ ಭೇದತತ್ತ್ವ ಅತಿಮುಖ್ಯವಾದ ಸತ್ಯ. ಪರಮಾತ್ಮ ಮತ್ತು ಮಾನವರ ನಡುವೆ ಯಾವ ಭೇದವೂ ಇಲ್ಲದಿದ್ದರೆ (ಜ್ಞಾನಿ, ಅಜ್ಞಾನಿ, ಸ್ವತಂತ್ರ, ಪರತಂತ್ರ ಮುಂತಾದ ಭೇದಗಳು) ಭಕ್ತಿಯ ಅವಶ್ಯಕತೆಯಾದರೂ ಏನು? ದೇವರು ಸ್ವಾಮಿ; ಮಾನವ ದಾಸ. ಮಾನವನ ಇರುವಿಕೆ ಮತ್ತು ಸಕಲ ಕಾರ್ಯಗಳೂ ಭಗವಂತನಿಗೇ ಸೇರಿವೆಯಾದ್ದರಿಂದ ಅವನನ್ನು ಭಜಿಸಿ, ಪೂಜಿಸಿ, ಅವನ ಅನನ್ಯದಾಸನಾಗುವುದೇ ಮಾನವನ ಸರ್ವೋತ್ಕೃಷ್ಟ ಗುರಿ. ಯಾವಾತ ಆ ಗುರಿಯನ್ನು ಪಡೆಯುತ್ತಾನೋ ಆತನೇ ಧನ್ಯ. ಭಗವಂತನ ದಯೆಯಿಲ್ಲದೆ ಮೋಕ್ಷ ಲಭ್ಯವಾಗುವುದಿಲ್ಲ. ಆದ್ದರಿಂದ ಮಾನವರು ದೇವರಲ್ಲಿ ಭಕ್ತಿಯನ್ನಿಟ್ಟು ತನ್ಮೂಲಕ ಅವನ ಕೃಪೆಗೆ ಪಾತ್ರರಾಗಿ ಮೋಕ್ಷವನ್ನು ಪಡೆಯಬಹುದೆಂದು ಬೋಧಿಸಿದ ಮಧ್ವಾಚಾರ್ಯರೇ ದಾಸಪಂಥದ ತಾತ್ತ್ವಿಕ ತಳಹದಿ ಅಥವಾ ಅಸ್ತಿ ಭಾರವಾಗಿದ್ದಾರೆ.

ನರಹರಿತೀರ್ಥರಿಂದ ಕನ್ನಡದಲ್ಲಿ ಕೀರ್ತನೆಗಳು ಬಂದ ಅನಂತರ ದಾಸಪೀಠವನ್ನು ಅಲಂಕರಿಸಿದವರು ಜಯತೀರ್ಥರು. ಇವರು ಮಧ್ವಸಿದ್ಧಾಂತದ ಮೇಲೆ ಟೀಕೆಗಳನ್ನು ಬರೆದು ಟೀಕಾಚಾರ್ಯರೆಂದು ಪ್ರಸಿದ್ಧರಾಗಿದ್ದಾರೆ. ಮಧ್ವ ಸಿದ್ಧಾಂತ ಕರ್ನಾಟಕದಲ್ಲಿ ವೈಷ್ಣವ ಧರ್ಮಕ್ಕೆ ಮೂಲವಾಗಿ, ಅದು ಎರಡು ಸಂಪ್ರದಾಯಗಳಿಗೆ ಎಡೆಮಾಡಿಕೊಟ್ಟಿತು. ಶಾಸ್ತ್ರಪಾಂಡಿತ್ಯ ಪಡೆದು ಮಧ್ವಸಿದ್ಧಾಂತವನ್ನು ಪುಷ್ಟೀಕರಿಸಿ, ಅದಕ್ಕನುಗುಣವಾಗಿ ಸಂಸ್ಕೃತ ಭಾಷೆಯಲ್ಲಿ ಅನೇಕ ಗ್ರಂಥಗಳನ್ನು ರಚಿಸಿದ್ದು ವ್ಯಾಸಕೂಟವಾದರೆ, ಜನಸಾಮಾನ್ಯರಿಗೂ ದ್ವೈತ ತತ್ತ್ವಗಳನ್ನು ಅವರ ಮಾತೃಭಾಷೆಯೇ ಆದ ಕನ್ನಡದಲ್ಲಿ ಸ್ವಚ್ಛವಾಗಿ ಬೋಧಿಸಿದ್ದು ದಾಸಕೂಟ.

ದಾಸರ ಪದಗಳಿಗೆ ಮೂಲಪುರುಷರು ಪುರಂದರದಾಸರು (1484-1564). ಇವರಿಗೆ ಮುಂಚೆಯೂ ಈ ಬಗೆಯ ಸಾಹಿತ್ಯವನ್ನು ಕೆಲವರು ರಚಿಸಿರುವುದು ನಿಜವಾದರೂ ಅವರೆಲ್ಲ ಮಾಧ್ವಸಂಪ್ರದಾಯದ ಮಠಗಳ ಪೀಠಾಧಿಪತಿಗಳಾಗಿದ್ದರು. ನರಹರಿತೀರ್ಥರು, ಶ್ರೀಪಾದರಾಜರು ಮತ್ತು ವ್ಯಾಸರಾಜರು, ಪುರಂದರದಾಸರ ಸಮಕಾಲೀನರಾದ ವಾದಿರಾಜರು ವಿಜಯಿಂದ್ರರು ಈ ಗುಂಪಿನವರು. ಗೃಹಸ್ಥಧರ್ಮದಲ್ಲಿದ್ದು ಗುರುಗಳಿಂದ ಅಂಕಿತ ಪಡೆದು ಆದರ್ಶ ಹರಿದಾಸಜೀವನವನ್ನು ಕಟ್ಟುನಿಟ್ಟಾಗಿ ಅನುಸರಿಸಿ ಮುಂದೆ ಬಂದವರಿಗೆ ಮೇಲ್ಪಂಕ್ತಿ ಹಾಕಿಕೊಟ್ಟು ‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಗುರುಗಳ ಹೊಗಳಿಕೆಗೆ ಪಾತ್ರರಾದವರು ಪುರಂದರದಾಸರು.

ಪುರಂದರದಾಸರು, ವಿಜಯದಾಸರು (1687-1755), ಗೋಪಾಲದಾಸರು (1721-1762) ಮತ್ತು ಜಗನ್ನಾಥದಾಸರು (1728-1809), ಈ ನಾಲ್ವರು ಹರಿದಾಸರನ್ನು (ಹರಿ)ದಾಸ ಚತುಷ್ಟಯ ಎಂದು ಕರೆಯುವುದು ವಾಡಿಕೆ. ಇವರಲ್ಲದೆ ಕನಕದಾಸರು, ವೈಕುಂಠದಾಸರು, ಪುರಂದರದಾಸರ ನಾಲ್ವರು ಮಕ್ಕಳು (ವರದಪ್ಪ, ಅಭಿನವ, ಗುರು, ಮಧ್ವಪತಿ), ಪ್ರಸನ್ನ ವೆಂಕಟದಾಸರು, ಪಂಗನಾಮದ ತಿಮ್ಮಣ್ಣದಾಸರು, ಮೋಹನದಾಸರು, ಆನಂದದಾಸರು, ಮೀನಪ್ಪದಾಸರು, ನರಸಿಂಗದಾಸರು, ಹೆಳವನಕಟ್ಟೆ ಗಿರಿಯಮ್ಮ, ವರದಗೋಪಾಲದಾಸರು, ಗುರು ಗೋಪಾಲದಾಸರು, ರಂಗಪ್ಪದಾಸರು ಕಲ್ಲೂರು ಸುಬ್ಬಣ್ಣದಾಸರು, ಐಜಿದಾಸರು, ಕಮಲೇಶದಾಸರು, ಕಮಲಾಪತಿದಾಸರು, ವೈರಾಗ್ಯಶಾಲಿ ತಿಮ್ಮಣ್ಣದಾಸರು, ವಾರಿ ಶೇಷಾಚಾರ್ಯರು, ಕರ್ಜಗಿದಾಸರು, ಪ್ರಾಣೇಶದಾಸರು, ಶ್ರೀಶವಿಠಲದಾಸರು ಮೊದಲಾಗಿ ಕೃತಿರಚನೆ ಮಾಡಿರುವ ಸುಮಾರು ಇನ್ನೂರು ಮಂದಿ ಹರಿದಾಸರಿದ್ದಾರೆ. ಇವರೆಲ್ಲರೂ ಭಕ್ತಿಸಾಹಿತ್ಯ ಗ್ರಂಥರಾಶಿಯೇ ಕನ್ನಡದಲ್ಲಿ ಅಗಾಧವಾಗಿದೆ.

ಹರಿದಾಸರ ಕೇಂದ್ರಗಳು ಮುಖ್ಯವಾಗಿ ಎರಡು ಎಂದು ಗುರುತಿಸಬಹುದು. ಪುರಂದರದಾಸರ ಕಾಲಕ್ಕೆ ವಿಜಯನಗರ (ಹಂಪೆ); ವಿಜಯದಾಸರ ಕಾಲಕ್ಕೆ ರಾಯಚೂರು ಜಿಲ್ಲೆ. ಕರ್ನಾಟಕದ ಇತರ ಕೆಲವೆಡೆಗಳಲ್ಲೂ ಹಲವರು ಹರಿದಾಸವರ್ಯರು ಇದ್ದರು. ಅಗಾಧ ಸಂಖ್ಯೆಯಲ್ಲಿ ರಚಿತವಾದ ಹರಿದಾಸರ ಕೃತಿಗಳಲ್ಲಿನ ಮುಖ್ಯ ತತ್ತ್ವ ಇದು : ಸರ್ವೋತ್ತಮನಾದ, ಸರ್ವತಂತ್ರ ಸ್ವತಂತ್ರನಾದ, ದೋಷಲವವೂ ಇಲ್ಲದ, ಅಗಾಧ ಅನುಪಮ ಶಕ್ತಿಯುಳ್ಳ, ಸರ್ವಜ್ಞಶಿಖಾಮಣಿಯಾದ ಪರಮಾತ್ಮನೊಬ್ಬನಿದ್ದಾನೆ. ಅವನನ್ನು ದೃಢವಾಗಿ ನಂಬಿ ಅವನಲ್ಲಿ ಶುದ್ಧವಾದ ನಿಷ್ಕಾಮವಾದ ಭಕ್ತಿಯನ್ನು ಹೊಂದಿ ಇಹ-ಪರ ಸಾಧನೆ ಮಾಡಿಕೊಂಡು ಸುಖವಾಗಿರಿ. ಲೋಕದ ಸುಖವನ್ನೇ ನಂಬಿ ಮೋಸಹೋಗದೆ, ಅಥವಾ ಕಷ್ಟವನ್ನೇ ಕಂಡು ಕರಗಿ ದುಃಖಿಸಿ ಅದೇ ಶಾಶ್ವತ ಎಂದು ನಂಬಿ ಕಂಗಾಲಾಗದೆ, ಎರಡೂ ನಶ್ವರ ಎಂದು ಚೆನ್ನಾಗಿ ತಿಳಿದು, ಸಕಲಲೋಕಗಳಿಗೂ ಒಡೆಯನಾದ ಲಕ್ಷ್ಮೀವಲ್ಲಭನಾದ ಶ್ರೀಮನ್ನಾರಾಯಣನನ್ನು, ಅವನ ಪರಿವಾರ ದೇವತೆಗಳನ್ನು ಆರಾಧಿಸಿ ಇಹದಲ್ಲಿ ನಿರ್ಲಿಪ್ತ ಬುದ್ಧಿಯಿಂದಿದ್ದು ಸುಖವನ್ನೂ ಅದರ ಪರಿಣಾಮವಾಗಿ ಬರುವ ಪರಲೋಕ ಸುಖವನ್ನೂ ಪಡೆಯಿರಿ. ಇದೇ ಹರಿದಾಸ ಸಾಹಿತ್ಯದ ಮುಖ್ಯ ಸಂದೇಶ. ಈ ಮಹಾತತ್ತ್ವವನ್ನು ಸಾಮಾನ್ಯ ಜನತೆಗೂ ಅರ್ಥವಾಗುವಂತೆ ಬೋಧಿಸಲು ಕಾವ್ಯಮಾರ್ಗವನ್ನು ಅನುಸರಿಸಿ, ಅದಕ್ಕೆ ಸಂಗೀತವನ್ನು ಹಿತಮಿತವಾಗಿ ಬೆರೆಸಿ ಹರಿದಾಸರು ಮಹೋಪಕಾರ ಮಾಡಿದ್ದಾರೆ. 

ಕೇಳಲು ಹಿತವಾಗಿದ್ದು ಅರ್ಥ ತಿಳಿಯಾಗಿರುವುದರಿಂದ ಅವರ ಕೃತಿಗಳನ್ನು ಕೇಳುವವರ, ಓದುವವರ, ಹಾಡುವವರ ಹೃದಯ ಅರಳುತ್ತದೆ, ಹಸನಾಗುತ್ತದೆ. ಜನಜೀವನ ಹೇಗಿರಬೇಕು, ಯಾವುದನ್ನು ಯಾರನ್ನು ನಂಬಬೇಕು, ನಿಜವಾದ ತತ್ತ್ವ ಯಾವುದು, ಭಗವಂತನ, ಆತನ ಪರಿವಾರದವರ ಲಕ್ಷಣ, ಗುಣ ನಡತೆ ಏನು ಎಂಬುದನ್ನು ಹಲವು ಭಾವಭಂಗಿಗಳಲ್ಲಿ ಹರಿದಾಸರು ಹೃದಯ ತುಂಬಿ ಹಾಡಿದ್ದಾರೆ. ದಾಸರಪದಗಳು ಬಹು ಮಟ್ಟಿಗೆ ಆಶುಕವಿತೆಗಳು; ಕಷ್ಟಪಟ್ಟು ಕುಳಿತು ಹೊಸೆದು ಬರೆದು ಪ್ರೌಢ ಗ್ರಂಥಗಳಲ್ಲ. ಆದರೆ ಪ್ರೌಢವಿಚಾರಗರ್ಭಿತವಾದ ಸರಳ ಸಾಹಿತ್ಯರಾಶಿ. ಕೆಲವು ದೃಷ್ಟಾಂತಗಳಿಂದ ಇದು ಸ್ಪಷ್ಟವಾಗುವುದು.

ಈಸಬೇಕು ಇದ್ದು ಜೈಸಬೇಕು ತಾಮರಸ ಜಲದಂತೆ ಪ್ರೇಮವಿಟ್ಟು, ಭವದೊಳು ನಂಬಿ ಕೆಟ್ಟವರಿಲ್ಲವೊ ರಂಗಯ್ಯನ, ಹೂವ ತರುವರ ಮನೆಗೆ ಹುಲ್ಲ ತರುವ ಅವ್ವ ಲಕುಮೀ ರಮಣ ಇವಗಿಲ್ಲ ಗರುವ,  ಈ ಪರಿಯ ಸೊಬಗಾವ ದೇವರಲಿ ಕಾಣೆ ಗೋಪೀಜನಪ್ರಿಯ ಗೋಪಾಲಗಲ್ಲದೆ, ನೆಚ್ಚದಿರು ಈ ಭಾಗ್ಯ ಯಾರಿಗೂ ಸ್ಥಿರವಲ್ಲ ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕ್ಕೆ ಮೆಚ್ಚು, ಸಂಸಾರವೆಂಬಂಥ ಭಾಗ್ಯವಿರಲಿ ಕಂಸಾರಿನೆನಹೆಂಬ ಸೌಭಾಗ್ಯವಿರಲಿ,  ನಾನೇಕೆ ಪರದೇಶಿ ನಾನೇಕೆ ಬಡವನು ಶ್ರೀನಿಧೇ ಹರಿಯೆ ನೀನಿರುವತನಕ, ತಲ್ಲಣಿಸದಿರು ಕಂಡ್ಯ ತಾಳುಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ,  ತಾಳುವುದಕ್ಕಿಂತ ತಪವು ಇಲ್ಲ ಕಾಮಕ್ರೋಧ ಬಿಡುವುದೆ ಹಬ್ಬ ಕಾಮನ ಉಪಹತಿಗೆ ಅಂಜುವುದೆ ಹಬ್ಬ ಭೂಮಿಯೊಳಗೆ ಜ್ಞಾನಿಯಾಗುವುದೆ ಹಬ್ಬ; ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ,  ಸಿರಿಯೆಂಬ ಸೊಡರಿಗೆ ಮಾನ್ಯರ ಅವಮಾನ ಬಿರುಗಾಳಿ ಎಚ್ಚರಿಕೆ ಅಳಿವುದು ಕಾಯವು ಉಳಿವುದೊಂದೇ ಕೀರ್ತಿ;  ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ, ಕ್ಲೇಶಾನಂದಗಳೀಶಾಧೀನ ದಾನವೇ ಭೂಷಣ, ಎರಡು ಹಸ್ತಂಗಳಿಗೆ ಆಸೆಗೊಳಗಾದವನು ಜನರಿಗೆ ದಾಸನೆನಿಸುವನು - ಈ ಮೊದಲಾದ ಹರಿದಾಸರ ಸವಿಮಾತುಗಳು, ಸುಭಾಷಿತಗಳು ಜನಜೀವನಕ್ಕೆ ದಾರಿದೀಪಗಳಾಗಿವೆ. 

ದಾಸರ ಪದಗಳಲ್ಲಿ ಭಕ್ತಿರಸ ಉಕ್ಕಿ ಹರಿಯುತ್ತದೆ. ಹೃದಯಕ್ಕೆ ನೇರವಾಗಿ ಪ್ರವೇಶಿಸಿ, ತಮ್ಮ ಪ್ರಭಾವವನ್ನು ಬೀರಿ ತಿದ್ದುವ ಕೆಲಸವನ್ನು ಯಶಸ್ವಿಯಾಗಿ ಸದ್ದಿಲ್ಲದೆ ಅವು ಮಾಡುತ್ತವೆ. ಅವು ಅನುಭವದ ಅಮೃತವಾಕ್ಯಗಳಾಗಿರುವುದೇ ಅದಕ್ಕೆ ಕಾರಣ. ಲೋಕದಲ್ಲಿ ಜನ ಹೇಗೆ ಬದುಕಬೇಕು ಎಂಬುದನ್ನು ಈ ಪದಗಳು ಸ್ಪಷ್ಟವಾಗಿಯೂ ಆಕರ್ಷಕವಾಗಿಯೂ ತಿಳಿಸುತ್ತವೆ. ಸಮಾಜದಲ್ಲಿ ಕಂಡುಬರುವ ಡೊಂಕುಗಳನ್ನು ಅನೀತಿ, ಅಧರ್ಮ, ಆಡಂಬರ, ವಂಚನೆ ಮೊದಲಾದುವನ್ನು ಎತ್ತಿ ಆಡಿ ಸೊಗಸಾದ ಉಪಮಾನಗಳಿಂದ ಅವು ವಿಡಂಬನೆ ಮಾಡಿವೆ. ಪ್ರೌಢವಾದ ಗೀರ್ವಾಣ ವಾಣಿಯಲ್ಲಿ ಕ್ಲಿಷ್ಟವಾಗಿ ಮಹಾಗ್ರಂಥಗಳಲ್ಲಿ ಅಡಗಿಕೊಂಡಿರುವ ತತ್ತ್ವ ರತ್ನಗಳನ್ನು ಅವು ಸರಳಸುಂದರ ಶೈಲಿಯಲ್ಲಿ ಸಾಮಾನ್ಯರಿಗೂ ಹಂಚಿಬಿಟ್ಟಿವೆ. ಈ ಉಪಕಾರ ಸಾಮಾನ್ಯವಾದುದಲ್ಲ.

ದಾಸರ ಪದಗಳನ್ನು ಓದುತ್ತಿದ್ದರೆ ಕೇಳುತ್ತಿದ್ದರೆ ಅವು ಪ್ರತಿಯೊಬ್ಬ ಓದುಗನಿಗೂ ಅನ್ವಯಿಸುವುವೋ ಎಂಬಂತೆ ತೋರುತ್ತಿರುತ್ತದೆ. ಮಾಡಿದ, ಮಾಡಿರಬಹುದಾದ ಪಾಪಗಳನ್ನು ನೆನೆದು ನಡುಗಿ, ಕ್ಷಮಿಸಿ ಉದ್ಧರಿಸು ಎಂದು ಹರಿಯಲ್ಲಿ ಮೊರೆಹೋಗೋಣವೆನಿಸುತ್ತದೆ. ಇಷ್ಟು ಪಾಪವನೆ ಮಾಡಿದ್ದು ಸಾಕೊ ಸೃಷ್ಟೀಶ ಕಾಯೋ, ಬಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನಲಿ ಇರಲಾಗಿ ಎಂಬುದೇ ಈ ಮಾತಿನ ದೃಷ್ಟಾಂತ.

ದಾಸರು ಭಗವಂತನನ್ನು ಸಖನಂತೆ ಸಂಬೋಧಿಸುವರು; ದೇವದೇವನ ಮಹಿಮೆಗಳನ್ನು ಲೀಲೆಗಳನ್ನು ಕೊಂಡಾಡಿ ಕುಣಿಯುವರು ಪತಿಯೆಂದು ಹೊಗಳುವರು, ಮಗುವಿನಂತೆ ಮುದ್ದಿಸುವರು ನಿಂದಾಸ್ತುತಿ ಮಾಡುವರು, ನಿನಗಿಂತ ನಿನ್ನ ಹೆಸರೇ ಹಿರಿದು ಎನ್ನುವರು. ನೀನು ಹೆಚ್ಚೂ ನಿನ್ನ ಭಕ್ತರು ಹೆಚ್ಚೊ ಎಂದು ಸವಾಲು ಹಾಕುವರು. ಇದು ನಿನಗೆ ಧರ್ಮವೇ ಇಂದಿರೇಶ ಪರಾಕು ಮಾಡದೆ ಪರಾಂಬರಿಸಿ ಎನ್ನಪರಾಧಗಳ ಕ್ಷಮಿಸೊ ಬಿಡೆ ನಿನ್ನ ಪಾದವ ಬಿಂಕವಿದೇಕೊ ? ನೀನ್ಯಾಕೊ ನಿನ್ನ ಹಂಗ್ಯಾಕೊ - ಈ ಮುಂತಾದ ವಾಕ್ಯಗಳಲ್ಲಿ ದೇವರ ಪಾರಮ್ಯವನ್ನೂ ಪ್ರಪತ್ತಿಭಾವವನ್ನೂ ದಾಸರು ಚೆನ್ನಾಗಿ ವ್ಯಕ್ತಪಡಿಸಿದ್ದಾರೆ. 

ಶ್ರೀಮದ್ಭಾಗವತ ದಶಮ ಸ್ಕಂಧದಲ್ಲಿ ಬರುವ ಶ್ರೀಕೃಷ್ಣನ ಲೀಲಾವರ್ಣನೆಯ ಹಾಡನ್ನು ಆಧರಿಸಿ ದಾಸರು ಚಿತ್ರಿಸಿರುವ ವಾತ್ಸಲ್ಯಪೂರ್ಣ ಭಾವಗೀತೆಗಳು ಕನ್ನಡದ ಹೆಮ್ಮೆಯ ಸಾಹಿತ್ಯವಾಗಿದೆ. ತಾಯಿ ಮಕ್ಕಳ ಆ ಚಿತ್ರಣ ಬಹು ಮನೋರಂಜಕವಾಗಿ ರಮ್ಯಪ್ರಪಂಚ ಒಂದನ್ನು ಸೃಷ್ಟಿಸಿದೆ.

ಶ್ರುತಿ ಸ್ಮೃತಿ ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲ ಪ್ರಮುಖ ವಿಚಾರವನ್ನೂ ಶ್ರೀಮದ್ರಾಮಾಯಣ, ಶ್ರೀಮನ್ಮಹಾಭಾರತ ಮತ್ತು ಶ್ರೀಮದ್ಭಾಗವತ ಮಹಾಗ್ರಂಥಗಳಿಂದ ಆರಿಸಿದ ಅಪೂರ್ವ ಕಥಾನಕ ದೃಷ್ಟಾಂತಗಳಿಂದ ಸರಳ ಸುಂದರವಾಗಿ ದಾಸರ ಪದಗಳು ವರ್ಣಿಸಿವೆ. ಆದ್ದರಿಂದಲೇ ಅವು ಕಿವಿಗೆ ಶ್ರಾವ್ಯವೂ ಬುದ್ಧಿಗೆ ಬಂಧುರವೂ ಹೃದಯಕ್ಕೆ ಹಿತವೂ ಆಗಿವೆ. ಆ ಕಾರಣದಿಂದಲೇ ಸಂಸ್ಕಾರ ಪ್ರದವಾಗಿವೆ. ಹಿಂದೂದೇಶದ ಹಿರಿಯ ಸಂಸ್ಕೃತಿಯ ಆಸ್ತಿ ದಾಸರಪದಗಳಲ್ಲಿ ಹೃದಯಂಗಮವಾಗಿ ಹುದುಗಿಕೊಂಡಿದೆ. ಸಂಸ್ಕೃತದ ನೇರ ಪರಿಚಯವಿಲ್ಲದ ಅಚ್ಚಕನ್ನಡಿಗನಿಗೆ ಆಧ್ಯಾತ್ಮಿಕ ಅರಿವು ದಾಸರ ಪದಗಳಿಂದ ಲಭಿಸುತ್ತದೆ.

ದಾಸರಪದಗಳೆಂಬ ಈ ಸಾಹಿತ್ಯರಾಶಿ ಕನ್ನಡವಾಙ್ಮಯವನ್ನು ಬೆಳೆಸಲು, ಅದನ್ನು ಶಾಸ್ತ್ರೀಯ ಸಂಗೀತದ ಸ್ಥಾನಕ್ಕೇರಿಸಲು ಸಹಾಯಕವಾಗಿವೆ. ವಿಶ್ವಪ್ರೇಮ ವಿಶಾಲ ಹೃದಯಗಳಿಂದ ದಾಸರು ತಾವು ನಡೆದು ನುಡಿದ ಮುತ್ತಿನಂಥ ಮಾತುಗಳಿಂದ ಜನತೆ ಶಾಂತಿಸುಖ ಸಮಾಧಾನಗಳನ್ನು ಪಡೆದು ಸಮಾಜದ ಶಾಂತಿಗೂ ಸಂಸ್ಕೃತಿಯ ಪ್ರಗತಿಗೂ ನೆರವಾಗಿದ್ದಾರೆ.

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ

Haridasa Movement in Kannada 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ