ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀವ್ಯಾಸರಾಜರು



 ಶ್ರೀವ್ಯಾಸರಾಜರು 


ಶ್ರೀವ್ಯಾಸರಾಜರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. 
  
ಶ್ರೀಕೃಷ್ಣನೆಂದರೆ ಅಬಾಲ ವೃದ್ಧರಾಗಿ ಸಕಲರಿಗೂ ಉದಿಸುವ ಬಾಲಕೃಷ್ಣನ ಮುದಭಾವವೆಂದರೆ ‘ಕೃಷ್ಣಾ ನೀ ಬೇಗನೆ ಬಾರೋ’ ಎಂಬ ಗೀತೆ.  ಕರ್ಣಾಟಕ, ಹಿಂದೂಸ್ಥಾನಿ ಸಂಗೀತಗಳಿಂದ ಇಂದಿನ ಫ್ಯೂಷನ್ ಸಂಗೀತದವರೆಗೆ ಎಲ್ಲೆಡೆಗಳಲ್ಲಿ ಎಲ್ಲ ಭಾಷಿಗರಿಗೂ ಈ ಗೀತೆ ಪ್ರಿಯವಾಗಿರುವುದೆಂದರೆ ಅಲ್ಲಿ ತುಂಬಿರುವ ಸೌಂಧರ್ಯ, ಪ್ರೇಮ, ಆನಂದ ಭಾವಗಳು ಶ್ರೀಕೃಷ್ಣ ಎಂಬ ಆಕರ್ಷಣೆಯನ್ನೇ ತನ್ನ ಅಂತರಾತ್ಮವಾಗಿಸಿಕೊಂಡಿದೆ ಎಂದರೆ ತಪ್ಪಾಗಲಾರದು.  ಇಂತಹ ಮುದಭಾವವನ್ನು ಆಳವಾದ ಪ್ರೀತಿಯೆಂಬ ಭಕ್ತಿ ಮಾತ್ರ ಅನುಭಾವಿಸಿ ಸೃಜಿಸಬಲ್ಲದು.  ಈ ಗೀತೆಯ ಕರ್ತೃ ಶ್ರೀವ್ಯಾಸರಾಯರು.   ತಾವೇ ಸ್ವತಃ ಕಾವ್ಯ ಸೃಷ್ಟಿಸಿದ್ದಲ್ಲದೆ ತಮ್ಮ ಶಿಷ್ಯರಾದ ಪುರಂದರ, ಕನಕರಂತಹ ದಾಸಪರಂಪರೆಯ ಅನೇಕರಿಗೆ ಅಂತಹ ಕಾಯಕಕ್ಕೆ ಪ್ರೇರಣೆಯಾದವರು.  

ಶ್ರೀವ್ಯಾಸರಾಜರು ವ್ಯಾಸತೀರ್ಥ, ವ್ಯಾಸಯೋಗಿ ಹೀಗೆ ಹಲವು ಭಾವಗಳಿಂದ ಈ ನಾಡಿನ ಹೃದ್ಭಾವಗಳಲ್ಲಿ ನೆಲೆಸಿದ್ದಾರೆ.   ಕ್ರಿಸ್ತಶಕ 1447-1548ರ ಕಾಲದಲ್ಲಿ ಸುಮಾರು ನೂರುವರ್ಷಗಳ ಕಾಲ ಈ ಲೋಕದಲ್ಲಿ ಸಂಚರಿಸಿದ  ವ್ಯಾಸರಾಯರು ತಮ್ಮ ಗುರುಗಳಿಂದಲೇ ಕೊಂಡಾಡಲ್ಪಟ್ಟ ಮಹನೀಯರು.  ಶಿಷ್ಯರು ಗುರುಗಳನ್ನು ಕೊಂಡಾಡುವುದು ಅತ್ಯಂತ ಸಹಜ. ಲೋಕದ ವಾಡಿಕೆಯೇ ಹಾಗೆ. ಆದರೆ ಗುರುಗಳು ಶಿಷ್ಯನನ್ನು ಕೊಂಡಾಡುವುದು ಹಾಗೆನಿಸುವುದಿಲ್ಲ. ಅಂತಹ ಸಂದರ್ಭಗಳೂ ಅತಿ ವಿರಳ. ಅದರಲ್ಲೂ, ಗುರುಗಳು ಅಸಾಧಾರಣ ವ್ಯಕ್ತಿಯಾಗಿದ್ದರೆ ಅಂತಹವರು ಕೊಂಡಾಡುವ ಶಿಷ್ಯ ಕೂಡ ಅಷ್ಟೇ ಪ್ರತಿಭಾವಂತ ಇರಬೇಕು. ಅಂತಹ ಅದ್ಭುತ ವ್ಯಕ್ತಿ ಶ್ರೀ ವ್ಯಾಸರಾಯರು. 

ಶ್ರೀವ್ಯಾಸರಾಯರ ಜನ್ಮಸ್ಥಳ  ಮೈಸೂರು ಜಿಲ್ಲೆಯ ಬನ್ನೂರು. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಆ ಕಾಲದ ಪ್ರಸಿದ್ಧ ಯತಿಗಳಾದ ಶ್ರೀಪಾದರಾಜರ  ವಿದ್ಯಾಪೀಠದಲ್ಲಿ ಅಧ್ಯಯನಮಾಡಲು ನಾನಾ ಕಡೆಗಳಿಂದ ವಿದ್ಯಾರ್ಥಿಗಳು ಬರತೊಡಗಿದರು. ಹೀಗೆ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಮುಖ್ಯರಾದವರು ಶ್ರೀವ್ಯಾಸರಾಯರು. ಇವರು ವಿದ್ಯಾಭ್ಯಾಸಕ್ಕೆ ಬಂದಾಗ ಶ್ರೀಪಾದರಾಜರಿಗೆ 54 ವರ್ಷ ವಯಸ್ಸು. ಬೆಂಗಳೂರು ಜಿಲ್ಲೆಯ ಚನ್ನಪಟ್ಟಣಕ್ಕೆ ಸಮೀಪದಲ್ಲಿ ಅಬ್ಬೂರು ಎಂಬ ಗ್ರಾಮವಿದೆ. ಇಲ್ಲಿ ಮಹಾತಪಸ್ವಿಗಳಾದ ಬ್ರಹ್ಮಣ್ಯ ತೀರ್ಥರೆಂಬ ಯತಿಗಳಿದ್ದರು. ಈ ಬ್ರಹ್ಮಣ್ಯತೀರ್ಥರು ಶ್ರೀಪಾದರಾಜರ ತಾಯಿಯ ಅಕ್ಕನ, ಅಂದರೆ ದೊಡ್ಡಮ್ಮನ ಮಗ. ಬ್ರಹ್ಮಣ್ಯತೀರ್ಥರ ಸಾಕು ಮಗನೇ ವ್ಯಾಸಯೋಗಿ. ಶ್ರೀಪಾದರಾಜರ ಬಳಿ ವಿದ್ಯಾಭ್ಯಾಸಕ್ಕೆಂದು ಬ್ರಹ್ಮಣ್ಯತೀರ್ಥರು ವ್ಯಾಸಯೋಗಿಯನ್ನು ಕಳುಹಿಸಿ ಕೊಟ್ಟಿದ್ದರು. ಸುಮಾರು ಹನ್ನೆರಡು ವರ್ಷಗಳ ಕಾಲ ವ್ಯಾಸಯೋಗಿಗಳು ಶ್ರೀಪಾದರಾಜರಲ್ಲಿ ವಿದ್ಯಾರ್ಜನೆ ಮಾಡಿದರು.

ವ್ಯಾಸಯೋಗಿಗಳ ವಿದ್ಯಾಭ್ಯಾಸ ನಡೆಯುತ್ತಿದ್ದ ಸಮಯದಲ್ಲಿ ಒಮ್ಮೆ ಒಂದು ವಿಚಿತ್ರ ಪ್ರಸಂಗ ನಡೆಯಿತು ಎಂದು ಹೇಳುತ್ತಾರೆ. ಗುರುಗಳು ಹೇಳಿ ಕೊಟ್ಟ ಪಾಠವನ್ನೇ ಗಾಢವಾಗಿ ಮನನಮಾಡುತ್ತಿದ್ದ ವ್ಯಾಸಯೋಗಿಗೆ ನಿದ್ರೆ ಹತ್ತಿತು. ಎಲ್ಲೋ ಹೊಂಚು ಹಾಕುತ್ತಿದ್ದ ಒಂದು ಹೆಬ್ಬಾವು ವ್ಯಾಸಯೋಗಿ ಮಲಗಿದ್ದ ಗುಹೆಗೆ ನುಗ್ಗಿ, ವ್ಯಾಸಯೋಗಿಯನ್ನು ಕಾಲಕಡೆಯಿಂದ ನುಂಗುತ್ತಿತ್ತು. ಇನ್ನಿತರ ಶಿಷ್ಯರು ಇದನ್ನು ಕಂಡು ಹೌಹಾರಿದರು. ಕೂಡಲೆ ಗುರುಗಳಿಗೆ ಸುದ್ದಿ ಮುಟ್ಟಿಸಿದರು. ಶ್ರೀಪಾದರಾಜರು ಬಂದು ನೋಡುತ್ತಾರೆ, ಮಹಾಸರ್ಪವೊಂದು ವ್ಯಾಸಯೋಗಿಯನ್ನು ಬಾಯ್ತೆರೆದು ನುಂಗುತ್ತಿದೆ. ಕೂಡಲೆ ಸರ್ಪದೊಡನೆ ಅದರ ಭಾಷೆಯಲ್ಲಿಯೇ ಮಾತನಾಡ ತೊಡಗಿದರು. ಸರ್ಪ ಮೆಲ್ಲಗೆ ಹಿಂಜರಿಯುತ್ತಾ ಹಾಗೆಯೇ ಬಿಟ್ಟು ಹೋಯಿತು. ಈ ಪ್ರಸಂಗವನ್ನು ಶ್ರೀನಿತೀರ್ಥ ಎಂಬವರು ತಾವು ಬರೆದಂತಹ ‘ಶ್ರೀಪಾದರಾಜಾಷ್ಟಕ’ ಎಂಬ ಶ್ಲೋಕದಲ್ಲಿ ವರ್ಣನೆ ಮಾಡಿದ್ದಾರೆ : ‘ಶ್ರೀವ್ಯಾಸರಾಜ ಪಣಿಬಂಧ ನಿವಾರಕಾಯ ತದ್ಭಾಷಯೈವ ಫಣಿರಾಜ ಸಂತೋಷಕಾಯ ಶ್ರೀಮತ್ಸುರತ್ನ ಖಚಿತೋದ್ವಲ ಕುಂಡಲಾಯ ಶ್ರೀಪಾದರಾಜ ಗುರುವೇ ನಮಃ ಶುಭಾಯ’.

ಬಹು ಆದರದಿಂದ ಶಿಷ್ಯ ವ್ಯಾಸತೀರ್ಥರಿಗೆ ಶ್ರೀಪಾದರಾಜರು ಸಕಲ ಶಾಸ್ತ್ರಗಳನ್ನು ಬೋಧಿಸಿದರು. ಈ ಶಿಷ್ಯನೋ ಮಹಾಮೇಧಾವಿ. ಶಿಕ್ಷಣ ಮುಗಿದ ಮೇಲೆ ಶ್ರೀಪಾದರಾಜರು ಶಿಷ್ಯ ವ್ಯಾಸರಾಜರೊಡನೆ ಮೊದಲು ಭೇಟಿ ಕೊಟ್ಟಿದ್ದು ಚನ್ನಪಟ್ಟಣದ ಸಮೀಪದಲ್ಲಿರುವ ಅಬ್ಬೂರಿಗೆ. ವಿದ್ಯಾಪ್ರೌಢಿಮೆಯಿಂದ ತೇಜಃಪುಂಜನಾದ ವ್ಯಾಸಯೋಗಿಯನ್ನು ತಾವೇ ಸ್ವತಃ ಬ್ರಹ್ಮಣ್ಯತೀರ್ಥರಿಗೆ ಒಪ್ಪಿಸಿಕೊಡುವುದು ಶ್ರೀಪಾದರಾಜರ ಅಪೇಕ್ಷೆಯಾಗಿತ್ತು. 

ಒಮ್ಮೆ ಹೀಗಾಯಿತು: ಗುರು-ಶಿಷ್ಯರು ಜತೆಗೂಡಿ ಸಂಚಾರ ಕೈಗೊಂಡಿದ್ದಾಗ ಪಂಢರಾಪುರದ ಭೀಮಾ ನದಿಯ ತೀರದಲ್ಲಿ ಬಹುಕಾಲದಿಂದ ಮರಳಿನಲ್ಲಿ ಹೂತು ಹೋಗಿದ್ದ ವಿಗ್ರಹಗಳಿದ್ದ ಎರಡು ಸಂಪುಟಗಳು ದೊರೆತವು. ಹಾಗೆ ಹೂತಿರುವುದು ಶ್ರೀಪಾದರಾಜರಿಗೆ ಕನಸಿನಲ್ಲಿ ಕಂಡಂತಾಯಿತಂತೆ. ಆ ಸ್ಥಳದಲ್ಲಿ ಹುಡುಕಿ ನೋಡಿದಾಗ ಎರಡು ಸಂಪುಟಗಳು ಕಣ್ಣಿಗೆ ಕಂಡವು. ಅವುಗಳಲ್ಲಿ ಒಂದು ಸಂಪುಟವನ್ನೇನೋ ಕೂಡಲೆ ತೆರೆಯಲು ಸಾಧ್ಯವಾಯಿತು. ಅದರೊಳಗೆ ‘ರಂಗವಿಠಲ’ ಮೂರ್ತಿಯಿತ್ತು. ಇನ್ನೊಂದು ಸಂಪುಟವನ್ನು ತೆರೆಯಲು ಯತ್ನಿಸಿದಾಗ, ಏನು ಮಾಡಿದರೂ ಅದು ಬರಲಿಲ್ಲ. ಅದನ್ನು ಹಾಗೆಯೇ ಇಟ್ಟು ಪೂಜೆ ಮಾಡಲಾಗುತ್ತಿತ್ತು. ಒಮ್ಮೆ ಗುರು ಶ್ರೀಪಾದರಾಜರಿಗೆ ದೇಹಾಲಸ್ಯದ ಕಾರಣದಿಂದಾಗಿ ಪೂಜೆಮಾಡಲು ಸಾಧ್ಯವಾಗದೆ, ಆ ದಿನದ ಪೂಜೆಯನ್ನು ಶಿಷ್ಯ ವ್ಯಾಸರಾಜರಿಗೆ ಒಪ್ಪಿಸಿದರು. ವ್ಯಾಸರಾಜರಿಗೋ ಅದೊಂದು ಅಪೂರ್ವ ಸುಸಂಗತಿ, ಅಗಾಧ ಸಂತೋಷ. ಎಲ್ಲ ದೇವತಾ ವಿಗ್ರಹಗಳನ್ನೂ ಪೂಜೆಗೆ ಅನುಗೊಳಿಸಿ, ಅದುವರೆಗೂ ತೆರೆಯಲು ಬಾರದಿದ್ದ, ಭೀಮಾನದೀ ತೀರದಲ್ಲಿ ದೊರಕಿದ್ದ ಸಂಪುಟವನ್ನು ತೆರೆಯಲು ಹೋದಾಗ ಅದು ತಟಕ್ಕನೆ ಬಾಯ್ದೆರೆದುಕೊಂಡಿತು. ಸಂಪುಟದ ಒಳಗೆ ನೋಡಿದರೆ ಮೋಹಕ ವೇಣುಗೋಪಾಲ ಮೂರ್ತಿ. ತುಟಿಗೆ ಕೊಳಲಿಟ್ಟು, ಕಾಲಿಗೆ ಗೆಜ್ಜೆಕಟ್ಟಿ ಝಣತ್ಕಾರ ಮಾಡುತ್ತಾ ತ್ರಿಭಂಗಿಯಲ್ಲಿ ನಿಂತು ನೃತ್ಯ ಮಾಡುತ್ತಿದ್ದಾನೆ. ಕೊಳಲ ಇಂಪಾದ ನಾದ ಎಲ್ಲೆಡೆಗೂ ತುಂಬಿಕೊಂಡಿದೆ. ವ್ಯಾಸರಾಜರ ಮೈ ಜುಮ್ಮೆಂದಿತು. ಆ ದಿವ್ಯ ಮೂರ್ತಿಯ ಗೆಜ್ಜೆ ಶಬ್ದದಲ್ಲಿ, ವೇಣುನಾದದಲ್ಲಿ ಮೈಮರೆತು, ಅಲ್ಲಿಯೇ ಕೈಗೆ ಸಿಕ್ಕಿದ ಎರಡು ಸಾಲಿಗ್ರಾಮಗಳನ್ನು ಎತ್ತಿಕೊಂಡು ತಾಳ ಹಾಕುತ್ತಾ, ಕುಣಿಯಲಾರಂಭಿಸಿದರು. ವೇಣುಗೋಪಾಲ ಬಲಗಾಲಿನ ಮೇಲೆ ಎಡಗಾಲನ್ನಿಟ್ಟು ಅಪೂರ್ವ ಭಂಗಿಯಲ್ಲಿ ಕುಣಿಯುತ್ತಿದ್ದ. ಭಕ್ತಿಯ ಉನ್ಮಾದದಲ್ಲಿ ವ್ಯಾಸರಾಜರು ಕುಣಿದರು, ಕುಣಿ ಕುಣಿದಾಡಿರು. ಕುಣಿಯುತ್ತಲೇ ಇದ್ದರು. ಇದನ್ನು ಕಂಡ ಇನ್ನಿತರ ಶಿಷ್ಯರು ಕೂಡಲೇ ಶ್ರೀಪಾದರಾಜರ ಬಳಿಗೆ ಓಡಿಹೋದರು; ನಡೆಯುತ್ತಿರುವುದನ್ನು ತಿಳಿಸಿದರು. ಗುರುಗಳು ಓಡಿ ಬಂದು ನೋಡಿದರು. ಇದುವರೆಗೂ ತೆರೆಯಲಾಗದಿದ್ದ  ಸಂಪುಟ ತೆರೆದಿದೆ. ವೇಣುಗೋಪಾಲ ಕಾಲುಗೆಜ್ಜೆಗಳನ್ನು ಶಬ್ದ ಮಾಡುತ್ತಾ ಕೊಳಲ ನಾದ ಮಾಡುತ್ತಾ ಕುಣಿಯುತ್ತಿದ್ದಾನೆ. ಅವನ ಜತೆಗೆ ವ್ಯಾಸರಾಜರೂ ಕುಣಿದಾಡುತ್ತಿದ್ದಾರೆ.  “ವ್ಯಾಸರಾಜರೇ, ನೀವೇ ಧನ್ಯರು. ನಿಮ್ಮಿಂದ ನನಗೂ ವೇಣುಗೋಪಾಲನ ದಿವ್ಯದರ್ಶನವಾಯಿತು. ನಿಮಗೆ ಅನುಗ್ರಹಿತವಾದ ಈ ವೇಣುಗೋಪಾಲ ಮೂರ್ತಿಯನ್ನು ನೀವೇ ಇಟ್ಟುಕೊಂಡು ಪೂಜಿಸಿ” ಎಂದು ಶ್ರೀಪಾದರಾಜರು ಆ ವೇಣುಗೋಪಾಲ ಸಂಪುಟವನ್ನು ವ್ಯಾಸರಾಜರಿಗೇ ಕೊಟ್ಟುಬಿಟ್ಟರು. ಈಗಲೂ ಈ ವಿಗ್ರಹ ಕುಂದಾಪುರದ ವ್ಯಾಸರಾಜ ಮಠದಲ್ಲಿದೆ.

ಶ್ರೀವ್ಯಾಸರಾಜರು  ಶ್ರೀಪಾದರಾಜರ ಬಳಿ ಸುಮಾರು ಹನ್ನೆರಡು ವರ್ಷ ವಿದ್ಯಾಭ್ಯಾಸ ಮಾಡಿದರೆಂದು ಐತಿಹ್ಯವಿದೆ. ವ್ಯಾಸಂಗ ಕಾಲದಲ್ಲೇ ಶ್ರೀವ್ಯಾಸರಾಜರ ಅಪ್ರತಿಮ ಮೇಧಾಶಕ್ತಿಯನ್ನು ಅವರು ಅನುಭವಿಸಿದವರು. ನಂತರವೂ ಸುಮಾರು 17-18 ವರ್ಷ ಕಾಲ ಅವರ ವಿದ್ಯಾಪ್ರಕಾಶವನ್ನು ಸಾಕ್ಷಾತ್ತಾಗಿ ನೋಡಿದವರು. ಶ್ರೀ ವ್ಯಾಸರಾಜರು ಕೊನೆಯದಾಗಿ ಬರೆದ ಗ್ರಂಥ ತಾತ್ಪರ್ಯ ಚಂದ್ರಿಕಾ. ಆದರೆ ಅದಕ್ಕೂ ಮುಂಚೆ ರಚನೆಯಾದ ನ್ಯಾಯಾಮೃತ, ತರ್ಕತಾಂಡವ ಗ್ರಂಥಗಳನ್ನು ಅವರು ನೋಡಿರಬೇಕು.  ಶಿಷ್ಯನ ಮೇಲೆ ಶ್ರೀಪಾದರಾಜರಿಗೆ ಅದೆಷ್ಟು ಪ್ರೀತಿಯೆಂದರೆ ‘ಇದಿರದಾವದು ನಿನಗೆ ವ್ಯಾಸರಾಯ, ವಾದಿತಿಮಿರ ಮಾರ್ತಾಂಡ, ವಾದಿಶರಭ ಭೇರುಂಡ’ ಎಂದು ತಾವೇ ತಮ್ಮ ಶಿಷ್ಯನನ್ನು ಕುರಿತು ಕೀರ್ತನೆಯೊಂದನ್ನು ರಚಿಸಿದ್ದಾರೆ. ಗುರುವಿನಿಂದಲೇ ಹೊಗಳಿಸಿಕೊಳ್ಳುವಂತಹ ಪುಣ್ಯ, ಮಹಿಮೆ, ವಿದ್ವತ್ತು, ಸಚ್ಚಾರಿತ್ರ್ಯ  ವ್ಯಾಸರಾಜರದು.  ಶ್ರೀ ವ್ಯಾಸರಾಜರ ವಿದ್ಯಾಸಂಪತ್ತು, ವಾದದಲ್ಲಿ ಅವರಿಗಿದ್ದ ಅಪ್ರತಿಮ ಸಾಮರ್ಥ್ಯ ಇವುಗಳನ್ನು ಮೇಲಿನ ಪದ ವರ್ಣಿಸಿದರೆ ಅವರ ಆಶ್ರಮ ಧರ್ಮವನ್ನು ಪರಿಪಾಲಿಸುವ ವೈಖರಿ, ಔದಾರ್ಯ ಮೊದಲಾದ ಗುಣಗಳನ್ನು ಬಣ್ಣಿಸುವ  ಶ್ರೀಪಾದರಾಜರ ಮತ್ತೊಂದು ಪದವೂ ಇದೆ.

ವ್ಯಾಸತ್ರಯವೆಂದು ಪ್ರಸಿದ್ಧವಾದ ಅವರ ತರ್ಕ ತಾಂಡವ, ನ್ಯಾಯಾಮೃತ ಮತ್ತು ತಾತ್ಪರ್ಯ ಚಂದ್ರಿಕೆ ಎಂಬ ಮೂರು ಗ್ರಂಥಗಳಲ್ಲಿ ಪ್ರತಿಯೊಂದೂ ತನ್ನದೆ ಆದ ವಿಶಿಷ್ಟತೆಯನ್ನು ಪಡೆದಿದೆ. ಮೂರರಲ್ಲಿ ಮೊದಲಿನ ಎರಡು ಸ್ವತಂತ್ರ ಗ್ರಂಥಗಳಾದರೆ ಮೂರನೆಯದು ಶ್ರೀಮಧ್ವಾಚಾರ್ಯರ ಬ್ರಹ್ಮಸೂತ್ರ ಭಾಷ್ಯಕ್ಕೆ ಶ್ರೀ ಜಯತೀರ್ಥರು ಬರೆದ ತತ್ತ್ವಪ್ರಕಾಶಿಕೆಯೆಂಬ ಟೀಕೆಗೆ ಟಿಪ್ಪಣಿಯಾಗಿದೆ.  ಶ್ರೀ ವ್ಯಾಸರಾಜರ ಇನ್ನೊಂದು ಮಹತ್ತರ ಕೃತಿಯಾದ ನ್ಯಾಯಾಮೃತ ನಾಲ್ಕು ಪರಿಚ್ಛೇದಗಳಲ್ಲಿ ಸಮಗ್ರ ಅದ್ವೈತ ದರ್ಶನದ ವಿಮರ್ಶೆಯಾಗಿದೆ.

ವ್ಯಾಸತೀರ್ಥರು, ಉದ್ದಾಮ ಪಂಡಿತರಾಗಿದ್ದು, ಶ್ರೀಪಾದರಾಯರಲ್ಲಿಗೆ ಬಂದಾಗ, ಶ್ರೀಪಾದರಾಯರು ಕನ್ನಡದಲ್ಲಿ ಬರೆದು, ದೇವರಪೂಜೆಯ ವೇಳೆಗೆ ಬಳಸುತ್ತಿದ್ದ ಹರಿಭಕ್ತಿ ಪರವಾದ ಹಾಡುಗಳನ್ನು ಕೇಳಿ, ಅವುಗಳಿಂದ ಬಹುಮಟ್ಟಿಗೆ ಪ್ರಭಾವಿತರಾದರು. ಮುಂದೆ  ವಿಜಯನಗರದಲ್ಲಿ ಕೃಷ್ಣದೇವರಾಯನ ಗುರುಗಳಾಗಿದ್ದ ಸಂದರ್ಭದಲ್ಲಿ, ಬ್ರಹ್ಮಸೂತ್ರಗಳ ಅರ್ಥ ಎಲ್ಲರಿಗೂ ತಿಳಿಯುವಂತೆ ಕನ್ನಡದಲ್ಲಿ ಬರೆಯುವ ಸಾಹಸವನ್ನು ಮಾಡಿದರು. ಹಾಗೂ ಪುರಂದರದಾಸ, ಕನಕದಾಸರಂಥ ಶಿಷ್ಯರಿಗೆ ಅನುಗ್ರಹ ಮಾಡಿ ಕನ್ನಡದ ಕೀರ್ತನ ಪರಂಪರೆಯ, ಉತ್ಕರ್ಷಕ್ಕೆ ಕಾರಣರಾದರು. 

ಶ್ರೀಪಾದರಾಜರು ಮುಂದೆ ಭಾರತದ ಪವಿತ್ರ ಕ್ಷೇತ್ರಗಳನ್ನೆಲ್ಲ ಸಂಚಾರ ಮಾಡಿದರು. ಅವರು ಹೋದ ಕಡೆಯಲ್ಲೆಲ್ಲ ವಿದ್ವತ್‌ಸಭೆಗಳು, ಚರ್ಚಾಗೋಷ್ಠಿಗಳು ನಡೆದವು. ಎಲ್ಲ ಕಡೆಯಲ್ಲೂ ಶ್ರೀಪಾದರಾಜರು ತಮ್ಮ ವಿದ್ಯಾಪ್ರೌಢಿಮೆಯನ್ನು ಮೆರೆಯಿಸಿ, ಜಯಮಾಲೆಗಳನ್ನು ಸಂಪಾದನೆ ಮಾಡಿದರು. 

ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. ಸಾಳ್ವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ,  ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು ಗುರುಗಳಾಗಿ ಪೂಜಿಸುತ್ತಿದ್ದನು. 

ಶ್ರೀವ್ಯಾಸರಾಜರು ಸಮಾಜವನ್ನು ಪೊರೆದವರೂ ಹೌದು.  ಸುಪ್ರಸಿದ್ಧವಾದ ವ್ಯಾಸ ಸಮುದ್ರ ಕೆರೆಯನ್ನು ಕಟ್ಟಿಸಿದ್ದು ಸುಮಾರು ಕ್ರಿ.ಶ. 1522ರ ಸುಮಾರಿಗೆ. ಶ್ರೀ ಶ್ರೀಪಾದರಾಜರು ಬೃಂದಾವನ ಪ್ರವೇಶಿಸಿದ ವರ್ಷ ಕ್ರಿ.ಶ. 1486. ಆದ್ದರಿಂದ ವ್ಯಾಸ ಸಮುದ್ರರನ್ನು ಕಟ್ಟಿಸುವುದಕ್ಕಿಂತ ಸುಮಾರು 36 ವರ್ಷಗಳಿಗೂ ಮುಂಚೆ ಶ್ರೀವ್ಯಾಸರಾಜರು ‘ಕೆರೆ ಭಾವಿ ಪುರ ಅಗ್ರಹಾರಂಗಳ ಮಾಡಿ ಭೂಸರರೊಂದು ಲಕ್ಷ ಕುಟುಂಬ ಪೊರೆವ ವೈಭವ’ ತೋರಿದವರೆಂದು ಎರಡನೆ ಪದ್ಯದಿಂದ ಸ್ಪಷ್ಟವಾಗುವುದು. 

ವ್ಯಾಸರಾಯರು 1548 , ಫಾಲ್ಗುಣ ಮಾಸದ ಚತುರ್ಥಿ ದಿನದಂದು, ಹಂಪೆಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತಿದೆ.

ತಮ್ಮ ಗುರುಗಳಾದ ವ್ಯಾಸರಾಯರು ಬೃಂದಾವನಸ್ಥರಾದಾಗ ಪುರಂದರ ದಾಸರು 

ಚಿತೈಸಿದ ವ್ಯಾಸರಾಯ | ಜಿತ್ತಜನೈಯನ ಸಭೆಗೆ |
ಮುಕ್ತ ಮುತ್ತೈದೆಯರೆಲ್ಲಾ | ರತ್ನದಾರುತಿಯೆತ್ತೆ ||... ಎನ್ನುತ್ತಾ 
ಭಕುತಿಯುಕುತರಾಗಿ ಮುಕುತಿ ಮಾರ್ಗ ಪಿಡಿದು | ಅಖಿಳ ಬಗೆಯಿಂದ ಧ್ಯಾನಿಸುತ
ಸಕಲಾಗಮಗೇಯ ಸದ್ಗುಣ ಪರಿಪೂರ್ಣ | ಅಕಳಂಕ ಪುರಂದರ ವಿಠಲನ ಬಳಿಗೆ || 

ಎಂದು ಹಾಡುತ್ತಾ ತಮ್ಮ ಗೌರವ ತೋರಿಸುತ್ತಾ ಸ್ಮರಿಸುತ್ತಾರೆ.  ಈ ಮಹಾನ್ ತಪಸ್ವಿಗೆ ಶಿರಬಾಗಿ ನಮನಗಳು.

ಚಿತ್ರಕಲಾವಿದರು ಮತ್ತು ಕೃಪೆ: ಕೆ. ಎಮ್. ಶೇಷಗಿರಿ Sheshagiri KM

Sri Vyasaraja

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ