ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣಮಾಚಾರ್ಯ


ತಿರುಮಲೈ ಕೃಷ್ಣಮಾಚಾರ್ಯ 

ತಿರುಮಲೈ ಕೃಷ್ಣಮಾಚಾರ್ಯ ಆಧುನಿಕ ಯೋಗದ ಪಿತಾಮಹರೆಂದು ಪರಿಗಣಿತರಾದವರು. ದೇಹವ್ಯಾಯಾಮ ಸಂಸ್ಕೃತಿಯಲ್ಲಿ ಪ್ರಸಿದ್ಧರಾದ ಯೋಗೇಂದ್ರ, ಕುವಲಯಾನಂದರಂತಹ ಹಿಂದಿನವರಿಂದ ಪ್ರೇರಿತರಾದ ಕೃಷ್ಣಮಾಚಾರ್ಯರು ಹಠಯೋಗವನ್ನು ಪುನರುಜ್ಜೀವನಗೊಳಿಸಿದವರು. ಅವರು ಸಂಸ್ಕೃತ ವಿದ್ವಾಂಸರಾಗಿಯೂ, ಮಹಾನ್ ಆಯುರ್ವೇದ ಶಾಸ್ತ್ರಜ್ಞರಾಗಿಯೂ ಹೆಸರಾಗಿದ್ದರು.  ಅವರ ಶಿಷ್ಯರಾದ ಬಿ. ಕೆ. ಎಸ್. ಅಯ್ಯಂಗಾರ್, ಪಟ್ಟಾಭಿ ಜೋಯಿಸ್ ಮತ್ತು ಪುತ್ರ ದೇಶಿಕಾಚಾರ್ ಯೋಗಗುರುಗಳಾಗಿ ವಿಶ್ವಪ್ರಸಿದ್ಧರು.

ತಿರುಮಲೈ ಕೃಷ್ಣಮಾಚಾರ್ಯರು 1888ರ ನವೆಂಬರ್ 18ರಂದು ಚಿತ್ರದುರ್ಗದ ಮುಚುಕುಂದಪುರದಲ್ಲಿ ಜನಿಸಿದರು. ಸಂಸ್ಕೃತ ಮತ್ತು ವೇದಗಳ ಜೊತೆಗೆ, ತಮ್ಮ ತಂದೆಯವರಾದ ‘ಶ್ರೀ ತಿರುಮಲೈ ಶ್ರೀನಿವಾಸ ತಾತಾಚಾರ್ಯ’ ಅವರಿಂದ ಯೋಗ ಹಾಗೂ ಪ್ರಾಣಾಯಾಮವನ್ನು ಕಲಿತರು. 

ಕೃಷ್ಣಮಾಚಾರ್ಯರು ತಮ್ಮ ತಂದೆಯವರ ಮರಣಾನಂತರ ಬದುಕನ್ನರಸಿ ಮೈಸೂರಿಗೆ ಬಂದರು. ಅಲ್ಲಿಂದ ಬನಾರಸ್ಸಿಗೆ ತಲುಪಿ ಹಿಂದೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಹೀಗೆ ಮೈಸೂರು, ಪಟ್ನಾ ಹಾಗೂ ಕಾಶಿಯಲ್ಲಿ  ಸಕಲವೇದ ಪಾರಂಗತರಾದರು.  ಹಿಮಾಲಯದ ಸಾಧುಗಳ ಮಾರ್ಗದರ್ಶನದಲ್ಲಿ ಯೋಗಾಭ್ಯಾಸವನ್ನು ಮಾಡಿ, ಯೋಗ ಚಿಕಿತ್ಸೆಯಲ್ಲಿ ಪರಿಣತಿ ಗಳಿಸಿದರು. ಮಾನಸ ಸರೋವರದ ಬಳಿ ಒಂದು ಗುಹೆಯಲ್ಲಿ ವಾಸವಾಗಿದ್ದ ‘ರಾಮ ಮೋಹನ ಬ್ರಹ್ಮಚಾರಿ’ ಅವರಿಂದಲೂ ವಿದ್ಯೆ ಸ್ವೀಕರಿಸಿದರು.

ನಂತರ ಮೈಸೂರಿಗೆ ಹಿಂದುರುಗಿ ಬಂದ ಕೃಷ್ಣಮಾಚಾರ್ಯರು  ಮೈಸೂರು ಮಹಾರಾಜರ ಆಸ್ಥಾನದ ವಿದ್ವಾಂಸರಾದರು. ಅಂದಿನ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಯೋಗ ಚಿಕಿತ್ಸೆಯನ್ನು ನೀಡಿ ರಾಜರ ಆದರಕ್ಕೆ ಪಾತ್ರರಾದರು.  ಆಗಿನ ಬ್ರಿಟಿಷ್ ವೈಸ್‌ರಾಯ್ ಆಗಿದ್ದ ಮಧುಮೇಹದಿಂದ ಬಳಲುತ್ತಿದ್ದ ಲಾರ್ಡ್ ಇರ್ವಿನ್‌ಗೆ ಯೋಗ ಚಿಕಿತ್ಸೆಯ ಮೂಲಕ ಗುಣ ಪಡಿಸಿದರು. 

ಕೃಷ್ಣಮಾಚಾರ್ಯರು ಮಹಾರಾಜರ ಪ್ರೋತ್ಸಾಹದಲ್ಲಿ ಭಾರತದಾದ್ಯಂತ ಉಪನ್ಯಾಸಗಳನ್ನು ನೀಡುವುದರ ಜೊತೆಗೆ ಯೋಗಾಸನವನ್ನೂ ಪ್ರದರ್ಶಿಸಿದರು.
ಕೃಷ್ಣಮಾಚಾರ್ಯರು 1933ರಲ್ಲಿ ಜಗನ್ಮೋಹನ ಅರಮನೆಯಲ್ಲಿ ಯೋಗಶಾಲೆಯೊಂದನ್ನೂ ಆರಂಭಿಸಿದರು. ಮುಂದೆ ಆಚಾರ್ಯರು ಮೈಸೂರಿನಿಂದ ಬೆಂಗಳೂರಿಗೆ, ಅನಂತರ ಮದ್ರಾಸಿಗೆ ತೆರಳಿದರು. ಮದ್ರಾಸಿನಲ್ಲಿ ಕೆಲ ಕಾಲ ವಿವೇಕಾನಂದ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ತಿರುಮಲೈ ಕೃಷ್ಣಮಾಚಾರ್ಯರ ಸುಪುತ್ರ ಟಿ.ಕೆ.ವಿ ದೇಶಿಕಾಚಾರ್ಯರು ಚೆನ್ನೈನಲ್ಲಿ ’ಕೃಷ್ಣಮಾಚಾರ್ಯ ಯೋಗ ಮಂದಿರಂ’ ಎಂಬ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಈ ಯೋಗ ಪದ್ಧತಿಯನ್ನು ಮುಂದುವರೆಸಿದರು. 

ತಿರುಮಲೈ ಕೃಷ್ಣಮಾಚಾರ್ಯರು ಯೋಗ ಮಕರಂದ, ಯೋಗಾಸನಗಳು, ಯೋಗ ರಹಸ್ಯ ಮತ್ತು ಯೋಗವಲ್ಲಿ ಎಂಬ ಮಹತ್ವದ ನಾಲ್ಕು ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮುಂದೆ ಇವು ಇಂಗ್ಲಿಷ್ ಮತ್ತಿತರ ಭಾಷೆಗಳಿಗೆ ತರ್ಜುಮೆಗೊಂಡು ಬಹು ಪ್ರಸಿದ್ಧಿ ಪಡೆದಿವೆ.

ಕೃಷ್ಣಮಾಚಾರ್ಯರು ಹಠಯೋಗಿಗಳಾಗಿ ಹೆಸರಾದವರು. ಆದರೂ ತಮ್ಮ ಯೋಗ ಸಾಧನೆಯ ಕಾಲದಲ್ಲಿ ಭಕ್ತಿ, ಜ್ಞಾನಗಳ ಹಾದಿಯನ್ನು ಬಳಸಿಕೊಂಡು ಪರಿಪೂರ್ಣತೆಯೆಡೆಗೆ ಹೆಜ್ಜೆಯನ್ನಿಟ್ಟರು. ತೀವ್ರತರವಾದ ದೈಹಿಕ ವ್ಯಾಯಾಮಗಳನ್ನು ಒಳಗೊಂಡ ನೂತನ ಸಾಧನಾ ಮಾರ್ಗವನ್ನು ತಮ್ಮ ಶಿಷ್ಯರಿಗೆ ಬೋಧಿಸುತ್ತಿದ್ದರು. ಇವರ ಶಿಷ್ಯರಾದ ಕೃಷ್ಣ ಪಟ್ಟಾಭಿ ಜೋಯಿಸರು ಇದನ್ನೇ ಮುಂದುವರೆಸಿ ’ಅಷ್ಟಾಂಗ ವಿನ್ಯಾಸ ಯೋಗ’ವೆಂದು ಹೆಸರಿಸಿದರು. ಇಂದಿಗೂ ದೇಶವಿದೇಶಗಳ ಯೋಗಶಾಲೆಗಳಲ್ಲಿ ಕಲಿಸಲಾಗುತ್ತಿರುವ ಯೋಗ ಪದ್ಧತಿಗಳು ಕೃಷ್ಣಮಾಚಾರ್ಯರ ಅಷ್ಟಾಂಗ ವಿನ್ಯಾಸ ಯೋಗದ ಮೇಲೆ ಬೆಳೆದಿವೆ. 

ಕೃಷ್ಣಮಾಚಾರ್ಯರು ಮೈಸೂರಿನಲ್ಲಿ ಯೋಗಾಶಾಲೆಯನ್ನು ನಡೆಸುತ್ತಿದ್ದ ಆ ದಿನಗಳೆ ಭಾರತದಲ್ಲಿ ಯೋಗದೀಪವನ್ನು ಮತ್ತೆ ಬೆಳಗಿದ ದಿನಗಳು. ಆ ಜ್ಯೋತಿ ನಿರಂತರ ಬೆಳಗಿಸುವ ಹೊಣೆಯನ್ನು ಹೊತ್ತವರು ಮುಖ್ಯವಾಗಿ ಅವರ ಮೂರು ಶಿಷ್ಯರು. ಕೆ ಪಟ್ಟಾಭಿ ಜೋಯಿಸ್, ಮಗನಾದ ದೇಶಿಕಾಚಾರ್ ಹಾಗು ಭಾವಮೈದುನನಾದ ಬಿ.ಕೆ.ಎಸ್ ಅಯ್ಯಂಗಾರ್. ಪಟ್ಟಾಭಿ ಜೋಯಿಸ್ ಅವರು ಮೈಸೂರಿನಲ್ಲಿ, ದೇಶಿಕಾಚಾರ್ ಅವರು ಮದ್ರಾಸಿನಲ್ಲಿ ಮತ್ತು ಬಿ.ಕೆ.ಎಸ್ ಅಯ್ಯಂಗಾರ್ ಅವರು ಪುಣೆಯಲ್ಲಿ ಯೋಗವೃಕ್ಷದ ಇನ್ನಷ್ಟು ಬೀಜಗಳನ್ನು ಬಿತ್ತಿದರು. ಕ್ರಮೆಣ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಈ ಮೂವರೂ ಯೋಗ ಪ್ರಚಾರಕ್ಕೆ ಕಾರಣರಾದರು.

ಕೃಷ್ಣಮಾಚಾರ್ಯರು "ಉಸಿರನ್ನು ತೆಗೆದುಕೊಂಡರೆ ಪರಮಾತ್ಮ ನಮ್ಮಲ್ಲಿಗೆ ಬರುತ್ತಾನೆ, ಆ ಉಸಿರನ್ನು ಹಿಡಿದರೆ ಪರಮಾತ್ಮ ನಮ್ಮಲ್ಲಿ ಉಳಿಯುತ್ತಾನೆ, ಆ ಉಸಿರನ್ನು ಬಿಟ್ಟಾಗ ನಾವು ಪರಮಾತ್ಮನೆಡೆಗೆ ಹೋಗುತ್ತೇವೆ, ಆ ಬಿಟ್ಟ ಉಸಿರಿನ ಸ್ಥಿತಿಯನ್ನು ಹಿಡಿದರೆ ನಮ್ಮನ್ನು ನಾವು ಪರಮಾತ್ಮನಿಗೆ ನಮ್ಮನ್ನು ಸಮರ್ಪಿಸುತ್ತೇವೆ” ಎಂದು ನುಡಿಯುತ್ತಿದ್ದರು. 

ತಿರುಮಲೈ ಕೃಷ್ಣಮಾಚಾರ್ಯರು1989ರ ಫೆಬ್ರವರಿ 28ರಂದು ತಮ್ಮ 101ನೆಯ ವಯಸ್ಸಿನಲ್ಲಿ ನಿಧನರಾದರು. 

On the birth anniversary of Father of modern yoga Thirumalai Krishnamacharya 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ