ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಲಕೃಷ್ಣ


 ಬಾಲಕೃಷ್ಣ


ಕನ್ನಡ ಚಿತ್ರರಂಗವನ್ನು ಬಣ್ಣಿಸುವುದಾದರೆ ಮೊದಲು ‘ಬಾಲಣ್ಣ’ನನ್ನು ಓದಬೇಕು.  ಈ ಪದಗಳು ಪ್ರಾಸಕ್ಕೆ ಬಳಸಿದಂತೆ ಕಂಡರೂ ಅದು ಅಷ್ಟೇ ಸತ್ಯವೂ ಹೌದು. 

ನಮ್ಮ ಪ್ರೀತಿಯ ಬಾಲಣ್ಣ ಅವರು ಹುಟ್ಟಿದ ದಿನ  1911ರ ನವೆಂಬರ್ 2ರಂದು ಅಲ್ಲಲ್ಲಿ ಉಲ್ಲೇಖವಿದೆ. ವಾಸ್ತವ ಎಂದರೆ ಸ್ವತಃ ಬಾಲಕೃಷ್ಣ ಅವರಿಗೂ ಅವರ ಜನ್ಮ ದಿನ ಗೊತ್ತಿರಲಿಲ್ಲವಂತೆ.  ಹುಟ್ಟಿದ ಊರು ಹಾಸನ ಜಿಲ್ಲೆಯ ಅರಸೀಕೆರೆ. ಹೆತ್ತ ತಾಯಿ ಎಂಟು ರೂಪಾಯಿಗೆ ಅವರನ್ನು ಅರಸೀಕೆರೆ ಮಂಡಿ ವ್ಯಾಪಾರಿ ಒಬ್ಬರ ಉಪ ಪತ್ನಿಗೆ ಮಾರಾಟ ಮಾಡಿದ್ದರಂತೆ.
 
ನಾಟಕ ಕಂಪೆನಿಯ ಗೇಟು ಕಾಯುವುದು, ಬೋರ್ಡು ಬರೆಯುವುದು, ಪೋಸ್ಟರ್ ಅಂಟಿಸುವುದು ಹೀಗೆ ಆರಂಭವಾಯಿತು ಬಾಲಣ್ಣನವರ ವೃತ್ತಿ ಜೀವನ.  ಮುಂದೆ ರಂಗಭೂಮಿಯ ನಟನೆ ಅವರ ಪಾಲಿಗೆ ಬಂತು. ‘ಕೃಷ್ಣಲೀಲಾ’ ಇವರು ಅಭಿನಯಿಸಿದ ಮೊದಲ ನಾಟಕ.

1943ರಲ್ಲಿ ‘ರಾಧಾರಮಣ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಾಲಣ್ಣ 500ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು.  ಹಾಸ್ಯ ನಟ, ಖಳ ನಟ, ಪೋಷಕ ನಟ ಹೀಗೆ ಬಾಲಣ್ಣ  ಹಲವು ಬಗೆಯ  ವಿವಿಧ ಅವತಾರಗಳನ್ನು ತಾಳಿದರು.
 
ಬಾಲಣ್ಣ ಅವರನ್ನು ನೆನೆಯುವಾಗ  ಹತ್ತು ಹಲವು ಪಾತ್ರಗಳು ನನ್ನ ಕಣ್ಮುಂದೆ ಹಾದು ಹೋಗುತ್ತವೆ.  ‘ಬೆಳ್ಳಿ ಮೋಡ’ ಚಿತ್ರದ ‘ಮುದ್ದಿನ ಗಿಣಿಯೆ ಬಾರೋ' ಹಾಡಿನಲ್ಲಿ,  “ಊರಿಂದ ಭಾವ ಬರ್ತ್ತಾರೆ, ಏರೋಪ್ಲೇನು ತರ್ತಾರೆ, ಓಡೋಡಿ ಬಂದು ಹತ್ತಿರ ನಿಂತು ಕೆನ್ನೆಗೆ ಮುತ್ತು ಕೊಡ್ತಾರೆ” ಎಂದು ಕಲ್ಪನ ತನ್ನ ಪುಟ್ಟ ತಮ್ಮನಿಗೆ ಹಾಡುತ್ತಿದ್ದರೆ, ‘ಯಾರ್ಗಮ್ಮಣ್ಣಿ?’ ಇಂದು ಇಣುಕಿ ಚೇಡಿಸುವ ಮುದ್ದು ಮುದುಕನ ಮುಖ ನನಗೆ ಅಚ್ಚುಮೆಚ್ಚು.  “ರಾಶಿ ರೊಕ್ಕ ಇರೋವ್ರೆಲ್ಲ ರಾಚೂಟಪ್ನನಂಗಿರಬೇಕು” ಎಂದು ಎಲ್ಲರಿಗೂ ಪ್ರೀತಿ ಹುಟ್ಟಿಸುತ್ತದೆ  ‘ಬಂಗಾರದ ಮನುಷ್ಯ’ದ ಅವರ ಪಾತ್ರ.  ‘ಕಣ್ತೆರದು ನೋಡು’ ಚಿತ್ರದಲ್ಲಿ ಮೋಸ ಮಾಡುವ ಅವರ ಪರಿಣಾಮಕಾರಿ ಖಳನಾಯಕ ಪಾತ್ರದ ಮುಂದೆ ನಾಯಕ ಪಾತ್ರವೂ ಪಿಚ್ಚೆನಿಸಿಬಿಡುತ್ತದೆ.  

'ಬೂತಯ್ಯನ ಮಗ ಅಯ್ಯು' ಚಿತ್ರದ ಅಭಿನಯದಲ್ಲಿನ ಅವರ ಸಹಜತೆ ಅಪ್ರತಿಮವಾದದ್ದು.   ಪ್ರೊಫೆಸರ್ ಹುಚ್ಚೂರಾಯ ಚಿತ್ರದಲ್ಲಿ  “ನೋಡೋ ನಾ ನನ್ನಾಸ್ತೀನೆಲ್ಲ ಈ ನಾಯಿ ಹೆಸರಿಗೆ ಬರೆದು ಬಿಡ್ತೀನಿ, ಗೆಟ್ ಔಟ್” ಎಂದು ಮಗನಿಗೆ ಹೇಳುವ ಹಾಸ್ಯ ಪಾತ್ರ ಮತ್ತೊಂದು.  ಗನ್ ಹಿಡಿದು ಪ್ರಚಂಡ ಖಳರಿಗೂ ನಾಯಕನಾದ ‘ಗಂಧದ ಗುಡಿ’ ಇನ್ನೂ ಒಂದು.  ನೋಡಲು ಕೃಷ್ಣನಂತೆ ಸುಂದರಾಂಗನಲ್ಲದಿದ್ದರೂ ‘ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು’ ಎಂಬ ಹಾಡಿನಲ್ಲಿ ಕೃಷ್ಣನಂತೆ ಅವರು ಮೂಡಿಸುವ ಹಾವ ಭಾವ ಅಷ್ಟೇ ಮನೋಹರವಾದದ್ದು.  ‘ಕವಿರತ್ನ ಕಾಳಿದಾಸ’, ‘ಬೆಂಕಿಯ ಬಲೆ’ ಮುಂತಾದ ಚಿತ್ರಗಳಲ್ಲಿ ಅವರ ಪೋಷಕ ಪಾತ್ರಾಭಿನಯವೂ ಸ್ಮರಣೀಯವಾದದ್ದು.  

‘ಭಕ್ತ ಕುಂಬಾರ’, ‘ಗಲಾಟೆ ಸಂಸಾರ’ ಮುಂತಾದ ಚಿತ್ರಗಳ ಬಾಲಣ್ಣ ಮತ್ತು ದ್ವಾರಕೀಶರ ಅಪ್ಪ ಮಗನ ಜೋಡಿ  ಹೇಗೆ ತಾನೇ ಮರೆಯಲು ಸಾಧ್ಯ.  ‘ಸ್ಕೂಲ್ ಮಾಸ್ಟರ್’ ಅಂತಹ ಚಿತ್ರಗಳಲ್ಲಿ ನರಸಿಂಹ ರಾಜು ಅವರೊಡನೆ ಅವರು  ನಟಿಸಿದ ಹಾಸ್ಯ ಪಾತ್ರಗಳು ಒಂದೇ ಎರಡೇ!  ಬಾಲಕೃಷ್ಣ ಸ್ವಲ್ಪ ಒರಟಾದ ಕಿಲಾಡಿ ಪಾತ್ರಧಾರಿಯಾದರೆ, ನರಸಿಂಹರಾಜು ತುಂಬಾ ದುರ್ಬಲನಾದ ಪ್ರೀತಿಯ ವ್ಯಕ್ತಿಯಾಗಿರುತ್ತಿದ್ದರು. ಇವರಿಬ್ಬರೂ ನಮ್ಮ ಸಮಾಜದ ಎರಡು ಸ್ತರಗಳನ್ನು ಪ್ರತಿನಿಧಿಸಿದವರಂತೆ ಇರುತ್ತಿದ್ದರು.  ಅಂದಿನ ದಿನದಲ್ಲಿ ಅವರಿಬ್ಬರಿಲ್ಲದ ಚಿತ್ರಗಳನ್ನು ಊಹಿಸುವುದೂ ಸಾಧ್ಯವಿರಲಿಲ್ಲ.  

ಅಂದಿನ ದಿನದಲ್ಲಿ ರಾಜ್‍ಕುಮಾರ್, ಬಾಲಣ್ಣ, ಜಿ.ವಿ. ಅಯ್ಯರ್ ಮತ್ತು ನರಸಿಂಹರಾಜು ಒಟ್ಟಿಗೆ ಗುಬ್ಬಿ ಕಂಪನಿಯಲ್ಲಿ ಇದ್ದು, ಬಹುಶಃ ಒಂದೇ ಸಮಯದಲ್ಲಿ ಚಿತ್ರರಂಗಕ್ಕೂ ಬಂದರು.  ಈ ನಾಲ್ವರು ಒಟ್ಟಿಗೆ ಸೇರಿ ‘ರಣಧೀರ ಕಂಠೀರವ’ ನಿರ್ಮಿಸಿ, ಸಿನಿಮಾ ನಿರ್ಮಾಣ ಎಂದರೆ ಅತೀ ಕಷ್ಟ ಎನ್ನುವ ಕಾಲದಲ್ಲಿ ದೊಡ್ಡ ಸಾಹಸ ಮೆರೆದರು.  ಈ ನಾಲ್ಕೂ ಮಹನೀಯರು ಅರ್ಧ ದಶಕಕ್ಕೂ ಹೆಚ್ಚಿನ ಕಾಲಾವಧಿಯಲ್ಲಿ ಕನ್ನಡಿಗರ ಹೃದಯವನ್ನು ತಮ್ಮದೇ ನೆಲೆಗಳಲ್ಲಿ ಆಳಿದ ಪರಿ ಅನನ್ಯ.  ಮತ್ತೊಂದು ಆಶ್ಚರ್ಯವೆಂದರೆ ಅವರಿಗೆ ಕಿವಿ ಕೇಳುತ್ತಿರಲಿಲ್ಲವಂತೆ.   ಕಿವಿ ಕೇಳದಿದ್ದರೂ ಎದುರು ನಟನ ಹಾವಭಾವಗಳಿಗೆ ಅನುಗುಣವಾಗಿ ಅವರು ಅಸಂಖ್ಯಾತ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಸಂಭಾಷಣೆ ಹೇಳುತ್ತಿದ್ದ ಪರಿ ಅಭಿನಯ ಕಲೆಯ ಇತಿಹಾಸದಲ್ಲೇ ಅಪೂರ್ವವಾದದ್ದು.  

ಬದುಕಿನ ಅತಿ ದೊಡ್ಡ ವಿಪರ್ಯಾಸವೆಂದರೆ, ಮನುಷ್ಯ ತನ್ನ ಅತಿ ಉತ್ಸಾಹ ಆದರ್ಶಗಳಿಂದಲೇ ಜೀವನವೆಲ್ಲ ಹಲವಾರು ಕಷ್ಟಗಳಿಗೊಳಪಡುತ್ತಾನೆ.  ಅಂದಿನ ದಿನ, ಚಿತ್ರರಂಗದ ಮಂದಿ ಕರ್ನಾಟಕ ಸರ್ಕಾರದ ಬಳಿ  ನಮಗೆ ಚಿತ್ರ ನಿರ್ಮಿಸುವುದಕ್ಕೆ ಸ್ಟುಡಿಯೋ ಮಾಡಿ ಕೊಡಿ ಅಂದರು.  ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು  "ನಾವು ಮಾಡುವುದಕ್ಕಿಂತ ಚಿತ್ರರಂಗದಲ್ಲಿರುವವರೇ ಮಾಡಿ, ನಾವು ಸಹಾಯ ಮಾಡುತ್ತೇವೆ" ಎಂದರು.  ನಮ್ಮ ಬಾಲಣ್ಣ ನಾನು ಮಾಡುತ್ತೇನೆ ಎಂದು ಕೈ ಎತ್ತಿದರು.  ಸರ್ಕಾರ ಒಂದಷ್ಟು ಜಾಗ ಕೊಟ್ಟಿತು.  ಬಾಲಣ್ಣ ನಮ್ಮ ಚಿತ್ರರಂಗದವರು ತಮ್ಮ ಹಿಂದೆ ಬರುತ್ತಾರೆ ಎಂದು ಸಾಲ ಮಾಡಿ ‘ಅಭಿಮಾನ್’ ಸ್ಟುಡಿಯೋ ಮಾಡಿದರೆ, ಅವರ ಹಿಂದೆ ಯಾರೂ ಇರಲಿಲ್ಲ.  ಬಹುಶಃ ಅದಕ್ಕೆ ಬೇಕಾದ ವ್ಯಾವಹಾರಿಕೆ ಕೂಡ ಅವರಿಗೆ ಗೊತ್ತಿರಲಿಲ್ಲವೆನಿಸುತ್ತದೆ.  

ಜೀವನವನ್ನು ಸಾಮಾನ್ಯ ರೀತಿಯ ಹೊಟ್ಟೆ ಪಾಡು ನಿರ್ವಹಣೆಯ ಪರಿಧಿಯಲ್ಲೇ ಕಂಡ  ಬಾಲಣ್ಣನಂತವರಿಗೆ ಸಿನಿ ಸ್ಟುಡಿಯೋದಂತಹ  ಬಿಳಿ ಆನೆ ಉದ್ಯಮ ಕೈಗೂಡಲಿಲ್ಲ.   ತಮ್ಮ ಜೀವಮಾನವೆಲ್ಲ ಬಡ್ಡಿ ಸಾಲಗಳ ನೋವಿನಲ್ಲೇ ಕಳೆಯುವಂತಾಯ್ತು.  ಕೊನೆಗೆ ನೀನು ಈ ಜಾಗಕ್ಕೊಸ್ಕರ ತುಂಬಾ ಕಷ್ಟ ಪಟ್ಟಿದ್ದೀಯ ನೀನು ಇಲ್ಲೇ ಇರು, ಇನ್ನು ಮೇಲೆ ನೀನು ಸಾಲ, ಬಡ್ಡಿ ಏನೂ ಚಿಂತಿಸುವುದು ಬೇಡ ಎಂದು ಅದೇ ಅಭಿಮಾನ್ ಸ್ಟುಡಿಯೋದಲ್ಲಿ  ಅವರ ಸಮಾಧಿ ಮಾಡಲಾಯಿತು!  ಬಾಲಕೃಷ್ಣ ಅವರು 1995ರ ಜುಲೈ 19ರಂದು ನಿಧನರಾದರು.  ಕನ್ನಡದ ಕಣ್ಮಣಿಗಳ ಹೃದಯ ಸಿಂಹಾಸನದಲ್ಲಿ ಅವರು ಎಂದೆಂದೂ ವಿರಾಜಮಾನರು.  

ಬಾಲಣ್ಣ ನಿಮಗೆ ನಮ್ಮ ಅನಂತ ನಮನಗಳು.

Balakrishna 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ