ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಯಸೇನ


ನಯಸೇನ

ನಯಸೇನನ ಕಾಲ ಕ್ರಿ.ಶ. 1112 ಎನ್ನಲಾಗಿದೆ. 

ನಯಸೇನ ಧರ್ಮಾಮೃತವೆಂಬ ಚಂಪೂಕಾವ್ಯವನ್ನು ರಚಿಸಿದ. ಈತ ಬರೆದಿರಬಹುದಾದ ಒಂದು ವ್ಯಾಕರಣ ಗ್ರಂಥ ಇಂದು ಉಪಲಬ್ದವಿಲ್ಲ. ಧಾರವಾಡ ಜಿಲ್ಲೆಯ ಮುಳುಗುಂದದಲ್ಲಿ ಜೈನ ಸನ್ಯಾಸಿಯಾಗಿದ್ದ ಈತ ಆ ಕಾಲದಲ್ಲಿ ರಾಜಪೂಜ್ಯನೂ ಆಗಿದ್ದು ಪ್ರಭಾವಶಾಲಿ ವ್ಯಕ್ತಿಯೆನಿಸಿದ್ದ. ಈತನ ಗುರು "ನರೇಂದ್ರಸೇನಮುನಿ "ಎಂದು ಗೊತ್ತಾಗುತ್ತದೆ. ಕವಿಗೆ ಸಂಬಂಧಿಸಿದ ಸ್ವಕೀಯ ವಿಷಯಗಳು ಇದಕ್ಕಿಂತ ಹೆಚ್ಚು ತಿಳಿದುಬಂದಿಲ್ಲ. ಈತನಿಗೆ ಸಂದಿದ್ದ ಹಲವಾರು ಬಿರುದುಗಳಲ್ಲಿ ನಿರುಪಮ ಸಹಜಕವಿ ಜನಪಯಃಪಯೋಧಿಹಿಮಕರ ಎಂಬುದೂ ನೂತ್ನಕವಿತಾವಿಲಾಸ ಎಂಬುದೂ ಗಮನಾರ್ಹವಾಗಿದೆ. ಚಂಪೂ ಸಂಪ್ರದಾಯವನ್ನೇ ಅನುಸರಿಸಿದರೂ ಕಾವ್ಯದಲ್ಲಿ ಸಹಜತೆಯನ್ನು ತಂದು ನೂತನತೆಯನ್ನು ಸಾಧಿಸಿರುವ ಕವಿ ಈತ.

ಧರ್ಮಾಮೃತ ಅಧ್ಯಾಯಕ್ಕೆ ಒಂದರಂತೆ ಒಟ್ಟು ಹದಿನಾಲ್ಕು ಕತೆಗಳ ಒಂದು ಗುಚ್ಫ. ಒಂದೊಂದು ಕತೆಯಲ್ಲೂ ಒಂದೊಂದು ಜೈನತತ್ತ್ವವನ್ನು ಪ್ರತಿಪಾದನೆ ಮಾಡಲಾಗಿದೆ. ಸಮ್ಯಗ್ದರ್ಶನ, ನಿಶ್ಶಂಕೆ, ನಿಷ್ಕಾಂಷ್ಕೆ, ನಿರ್ವಿಚಿಕಿತ್ಸೆ, ಅಮೂಢ ದೃಷ್ಟಿತ್ವ, ಉಪಗೂಹನ, ಸ್ಥಿತಿಕರಣ, ವಾತ್ಸಲ್ಯ, ಧರ್ಮಪ್ರಭಾವನೆ, ಅಹಿಂಸೆ, ಸತ್ಯ ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ-ಇವೇ ಆ ಹದಿನಾಲ್ಕು. ಜೈನಧರ್ಮದ ಸಾರ ಎಷ್ಟಿದೆಯೋ ಅಷ್ಟೂ ತನ್ನ ಕೃತಿಯಲ್ಲಿ ಭಟ್ಟಿಯಿಳಿದಿದೆ ಎಂದು ಕವಿ ಹೇಳಿಕೊಂಡಿದ್ದಾನೆ. ಈ ಕತೆಗಳ ಉದ್ದೇಶ ಬರಿಯ ಮನರಂಜನೆಯಲ್ಲ. ಜೈನಧರ್ಮದ ಬೋಧನೆ, ಜೈನಧರ್ಮದಲ್ಲಿ ಜನಕ್ಕೆ ಶ್ರದ್ಧೆ ಹುಟ್ಟುವಂತೆ ಮಾಡುವುದು ಅಥವಾ ಇರುವ ಶ್ರದ್ಧೆ ಬಲಿಯುವಂತೆ ಮಾಡುವುದು.
ಈತನ ಕಾಲದಲ್ಲಿ ಜೈನಧರ್ಮ ಇಳಿಮುಖವಾಗುತ್ತಿತ್ತು. ಆ ಧರ್ಮದಿಂದ ಬೇರೆ ಧರ್ಮಗಳಿಗೆ ಜನ ಹೆಚ್ಚು ಸಂಖ್ಯೆಯಲ್ಲಿ ಮತಾಂತರ ಹೊಂದುತ್ತಿದ್ದರೆಂಬುದಕ್ಕೆ ಸ್ಪಷ್ಟ ಆಧಾರಗಳಿವೆ. ಅಂಥ ಸಮಯದಲ್ಲಿ, ಜೈನಧರ್ಮಕ್ಕೆ ಸಂಬಂಧಿಸಿದ ಸ್ವಾರಸ್ಯವಾದ ಕತೆಗಳನ್ನು ಸರಳ ಭಾಷೆಯಲ್ಲಿ ನಿರೂಪಿಸುವ ಅಗತ್ಯವಿದ್ದಿತು.

ನಯಸೇನ ಆರಿಸಿಕೊಂಡ ಕಾವ್ಯರೂಪ ಚಂಪೂ. ಇದು ಈತನಿಗಿಂತ ಹಿಂದಿನ ಜೈನಕವಿಗಳೆಲ್ಲ ಬಳಸಿ ಸಿದ್ಧವಾಗಿದ್ದ ಕಾವ್ಯಪ್ರಕಾರ. ಆದರೆ ಅನೇಕ ಕವಿಗಳಂತೆ ಈತ ಬಹುಕಷ್ಟವಾದ ಭಾಷೆಯನ್ನು ಬಳಸದೆ, ಒಂದು ಬಗೆಯ ಮಧ್ಯಮ ಮಾರ್ಗವನ್ನು ಹಿಡಿದಂತೆ ತೋರುತ್ತದೆ. ಈತನ ಭಾಷೆ ಹಳಗನ್ನಡದ ಬಿಗಿಯನ್ನೂ ನಡುಗನ್ನಡದ ಸರಳತೆಯನ್ನೂ ಒಳಗೊಂಡಿದೆ. ಈತನ ಕಾವ್ಯೋದ್ದೇಶವನ್ನು ಗಮನಿಸಿದರೆ, ಈತನ ಹಳಗನ್ನಡ ಭಾಷೆ ಸಾಮಾನ್ಯ ವಿದ್ಯಾವಂತರಿಗೂ ಅರ್ಥವಾಗುವಂಥದಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ತನ್ನ ಕೃತಿಯನ್ನು ವಿದ್ವಾಂಸರೂ ಮೆಚ್ಚಬೇಕೆಂಬ ಸಹಜ ಆಸೆಯ ಜೊತೆಗೆ, ತನ್ನ ಕಾವ್ಯ ಸಕಲಜೀವಿಗಳಿಗೆ ಹಿತವನ್ನುಂಟುಮಾಡಲೆಂಬ ಕಾವ್ಯೋದ್ದೇಶವೂ ಈತನಿಗೆ ಇದ್ದಿತು.

ನಯಸೇನ ಜನತೆಯಿಂದ ದೂರವಿದ್ದ ಸಂನ್ಯಾಸಿಯಾಗಿರಲಿಲ್ಲ. ಜನರ ಮಧ್ಯೆ ಬಾಳುತ್ತ, ಜನತೆಯ ಜೀವನವನ್ನು ಸೂಕ್ಷ್ಮದೃಷ್ಟಿಯಿಂದ ಅರ್ಥಮಾಡಿಕೊಂಡಿದ್ದ ವ್ಯಕ್ತಿಯಾಗಿದ್ದ. ಸಾಮಾನ್ಯ ಜನರು ಆಡುತ್ತಿದ್ದ ಭಾಷೆಯನ್ನು ಇವನಷ್ಟು ಚೆನ್ನಾಗಿ ಬಲ್ಲವರು, ಬಳಸಿದವರು ಚಂಪೂ ಸಂಪ್ರದಾಯದ ಕವಿಗಳಲ್ಲಿ ಮತ್ತೊಬ್ಬರಿಲ್ಲ. ಈತನ ಕೃತಿಯಲ್ಲಿ ಗಾದೆಗಳ ದೊಡ್ಡ ಸಂಗ್ರಹವೇ ಹುದುಗಿದೆ. ಈತ ಬಳಸಿದ ಡೊಂಕೆಂಬ ನಾಯ ಬಾಲದ ತೆರದಿಂ ಮುಂತಾದ ಗಾದೆಗಳು ಇನ್ನೂ ಜೀವಂತವಾಗಿವೆ. ಆ ಕಾಲದ ಜನಜೀವನವನ್ನು ಅರಿಯುವ ಸಮಾಜಶಾಸ್ತ್ರದ ವಿದ್ಯಾರ್ಥಿಗೆ ಈತನ ಕೃತಿ ಒಂದು ಗಣಿಯೇ ಸರಿ. 

ಸಾಹಿತ್ಯದ ವಿದ್ಯಾರ್ಥಿಗಳಿಗೆ ನಯಸೇನ ಮುಖ್ಯವೆನಿಸುವುದು ಎರಡು ಕಾರಣಗಳಿಗಾಗಿ: ಒಂದು ಈತನ ಕತೆಗಾರಿಕೆ; ಮತ್ತೊಂದು ಈತನ ಮಾಲೋಪಮೆಗಳು. ನಯಸೇನ ಹುಟ್ಟುಕತೆಗಾರ. ಬ್ರಾಹ್ಮಣನಾಗಿದ್ದ ವಸುಭೂತಿ ಕೇವಲ ಹಣದ ಆಸೆಗಾಗಿ ಕೆಲವು ಕಾಲ ಜೈನ ಸಂನ್ಯಾಸಿಯಂತಿರಲು ಒಪ್ಪಿಕೊಂಡವ ಹೇಗೆ ಕ್ರಮೇಣ ಜೈನಧರ್ಮದಲ್ಲಿ ಶ್ರದ್ಧೆ ಬೆಳಸಿಕೊಂಡ ವ್ಯಕ್ತಿಯಾದನೆಂಬುದನ್ನು ಕವಿ ಅತ್ಯಂತ ಪರಿಣಾಮಕಾರಿಯಾಗಿ ಹೇಳಿದ್ದಾನೆ. ಇಲ್ಲಿ ಬರುವ ಅನೇಕ ಕತೆಗಳಿಗೂ ಹಿಂದೂ ಸಂಪ್ರದಾಯದ ಅನೇಕ ಕತೆಗಳಿಗೂ ಹೋಲಿಕೆಯುಂಟು. ಕೆಲವು ಕಡೆ ಕವಿ ಪರಮತೀಯರೊಂದಿಗೆ ಪ್ರಾಮಾಣೀಕರಲ್ಲದ ಜೈನರನ್ನೂ ವಿಡಂಬನೆಮಾಡುತ್ತಾನೆ. ಕತೆಗಳಲ್ಲಿ ನೇರವಾಗಿ ಅಥವಾ ಸೂಚ್ಯವಾಗಿ ವಿಡಂಬನೆ ಬಂದಿದ್ದರೂ ಅದು ಎಲ್ಲಿಯೂ ಕಟುವಾಗುವುದಿಲ್ಲ. ಒಂದು ತಿಳಿಯಾದ ಹಾಸ್ಯ ಎಲ್ಲೆಲ್ಲಿಯೂ ವ್ಯಾಪಿಸಿರುವುದನ್ನು ಓದುಗರು ಗುರುತಿಸಬಹುದು. 

ಕಲಿತನದಿಂದಂ ಲೋಗರ್ ಪುಲಿಯಂ ಪಿಡಿದೊಡಂ ಅದೇಂ ಬಿಡೆಂಬರ್, ತಾಂ ಒಂದು ಇಲಿಯಂ ಪಿಡಿದೊಡಂ ಅದು ಪೆರ್ಬುಲಿಯೆಂಬರ್ ದುರ್ಜನರ್ಗೆ ತಾನಿದು ಸಹಜಂ

ಇಂಥ ಪದ್ಯಗಳನ್ನು ಈತನ ಕಾವ್ಯದಲ್ಲಿ ಅಲ್ಲಲ್ಲಿ ಕಾಣಬಹುದು.
ಮಾಲೋಪಮೆಗಳು ಈತನ ವೈಶಿಷ್ಟ್ಯ. ಒಂದು ಸಂಗತಿಯನ್ನು ಸ್ಪಷ್ಟಪಡಿಸಲು ಸಾಮಾನ್ಯವಾಗಿ ಒಂದು ಉಪಮೆಯನ್ನು ತರುವುದು ರೂಢಿ. ಒಂದಕ್ಕಿಂತ ಹೆಚ್ಚು ಉಪಮೆಗಳನ್ನು ತಂದರೆ ಅದು ಮಾಲೋಪಮೆಯೆನಿಸಿಕೊಳ್ಳುತ್ತದೆ. ಮಾಲೋಪಮೆಗಳನ್ನು ಬಹುತೇಕ ಎಲ್ಲ ಕವಿಗಳೂ ಬಳಸಿರುತ್ತಾರೆ. ಆದರೆ ನಯಸೇನನವು ತಮ್ಮ ಬರಿಯ ಗಾತ್ರದಲ್ಲೇ ಹಿಂದಿನವೆಲ್ಲವನ್ನೂ ಮೀರಿಸುತ್ತವೆ. ಒಂದು ಸಂಗತಿಯನ್ನು ಸ್ಪಷ್ಟಪಡಿಸಲು ತೊಂಬತ್ತೊಂದು ಉಪಮೆಗಳ ಒಂದು ಮಾಲೆಯನ್ನೇ ಕವಿ ಕಟ್ಟಿದ್ದಾನೆ.  ಈತ ಹಳಗನ್ನಡದ ಚಂಪೂ ಸಂಪ್ರದಾಯ ಮತ್ತು ನಡುಗನ್ನಡದ ವಚನ ಸಂಪ್ರದಾಯ- ಇವುಗಳ ಸಂಧಿ ಕಾಲದಲ್ಲಿ ಇದ್ದವ. ಈತನ ಕೃತಿಯ ಹಲವಾರು ಉಕ್ತಿಗಳಿಗೂ ಬಸವಣ್ಣನವರ ವಚನಗಳಿಗೂ ಇರುವ ಸಾಮ್ಯ ಆಕಸ್ಮಿಕವಲ್ಲವಾದರೆ, ಈತನಿಂದ ವಚನ ಸಾಹಿತ್ಯ ಅನೇಕ ಸೂಚನೆಗಳನ್ನು ಸ್ವೀಕರಿಸಿದ್ದಿರಬಹುದು ಎಂಬ ಊಹೆ ನಿರರ್ಥಕವಾಗುವುದಿಲ್ಲ. ಪಂಪ, ರನ್ನ ಮುಂತಾದ ಕವಿಗಳ ಮಾರ್ಗದರ್ಶನದಲ್ಲಿ ನಡೆದ ನಯಸೇನ ಮುಂದೆ ಜನ್ನನಂಥ ಸಮರ್ಥ ಕವಿಗಳ ಮೇಲೆ ಪ್ರಭಾವವನ್ನು ಬೀರಿದ್ದಾನೆ ಎಂಬುದು ಈತನ ಹಿರಿಮೆಯಾಗಿದೆ.

Nayasena


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ