ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತುಳಸಿ



 ತುಳಸಿ


ಸೇವಂತಿಕಾ ವಕುಲ ಚಂಪಕ ಪಾತಾಬ್ಜೈ
ಪುನ್ನಗಜಾತಿ ಕರವೀರ ರಸಾಲ ಪುಷ್ಪೈ
ಬಿಲ್ವ ಪ್ರವಾಲ ತುಳಸೀದಳ ಮಲ್ಲಿಕಾಮಿ ಸತ್ವಾಂ
ಪೂಜಯಾಮಿ ಜಗದೀಶ್ವರ ಮೇ ಪ್ರಸೀದ

ಜಗನ್ನಿಯಾಮಕ ಜಗದೀಶ್ವರನಿಗೆ ತುಳಸೀದಳವು ಪೂಜೆಯ ಸಮಯದಲ್ಲಿ ಪ್ರಧಾನವಾದ ಅರ್ಪಣೆ.

ಎಲ್ಲಾ ಮನೆಯ ಆವರಣದಲ್ಲೂ ಪೂಜೆಯನ್ನು ಪಡೆಯುವ ತುಳಸೀ ಸಸ್ಯವು, ಮಾನವನು  ಸಸ್ಯರಾಶಿಗೆ ಅರ್ಪಿಸುವ ಕೃತಜ್ಞತೆಯ ಸಂಕೇತವೂ, ಔಷದೀಯ ಗುಣಗಳ ಶ್ರೇಷ್ಠತೆಗಾಗಿನ ಗೌರವಾನ್ವಿತವೂ ಆಗಿದ್ದು, ಅದಿಲ್ಲದೆ ಪೂಜೆಯಿಲ್ಲ – ನಮ್ಮ ಬದುಕಿಗೆ ಮಹತ್ವವಿಲ್ಲ ಎಂಬ ದಿವ್ಯಭಾವಗಳಿಂದ ಮೂಡಿರುವಂತದ್ದಾಗಿದ್ದು  ನಮ್ಮ ಜನಜೀವನ ಸಂಸ್ಕೃತಿಗಳ ಅಂತರ್ಭಾವವೇ ಆಗಿದೆ.  

`ಕಲ್ಯಾಣಂ ತುಳಸಿ ಕಲ್ಯಾಣಂ,
 ಕಲ್ಯಾಣವೇ ನಮ್ಮ ಶ್ರಿಕೃಷ್ಣ ತುಲಸಿಗೆ
 ಬಲ್ಲಿದ ಶ್ರಿ ವಾಸುದೇವನಿಗೇ`.

`ಒಲ್ಲನೋ ಹರಿ ಕೊಳ್ಳನೋ
 ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ
 ಒಲ್ಲನೋ ಹರಿ ಕೊಳ್ಳನೋ`,

`.... ಒಂದು ದಳ ಶ್ರಿತುಳಸಿ ಬಿಂದುಗಂಗೋದಕವ
 ಇಂದಿರಾರಮಣಗರ್ಪಿತವೆನ್ನಲು
ಹೂವ ತರುವರ ಮನೆಗೆ ಹುಲ್ಲ ತರುವ’

`....ಕಾಶಿ ಪೀತಾಂಬರ ಕೈಯಲಿ ಕೊಳಲು,
 ಪೂಸಿದ ಶ್ರಿಗಂಧ ಮೈಯೊಳಗಮ್ಮಾ
 ಲೇಸಾಗಿ ತುಲಸಿಯ ಮಾಲೆಯ ಧರಿಸಿದ
 ವಾಸುದೇವನು ಬಂದ ಕಂಡಿರೇನೇ
.... ಅಮ್ಮ ನಿಮ್ಮ ಮನೆಗಳಲ್ಲಿ....` 

ಹೀಗೆ ತುಳಸೀಮಾತೆಯ ಮಹಿಮೆಯನ್ನು ದಾಸವರೇಣ್ಯರು ತಮ್ಮ ಪದಗಳಲ್ಲಿ ಮೂಡಿಸಿದ್ದಾರೆ.

ಪುರಾಣ ಗ್ರಂಥಗಳಲ್ಲಿ ತಿಳಿಸಿದಂತೆ ಹತ್ತು ಸಹಸ್ರ ಪುಷ್ಪಾರ್ಚನೆಗೆ ಒಂದು ತುಳಸೀ ಪತ್ರೆಯ ಪೂಜೆಯು ಸಮ.

ಕ್ಷೀರಸಮುದ್ರ ಮಥನ ಸಮಯದಲ್ಲಿ ಅಮೃತೋದ್ಭವವಾದಾಗ ಅಮೃತ ಕಲಶವು ಹೊರಬಂದಿತು. ಮಹಾವಿಷ್ಣುವು ಅದನ್ನು ತನ್ನ ಕರಗಳಲ್ಲಿ ಹಿಡಿದುಕೊಂಡಾಗ ಅವನ ಕಣ್ಣುಗಳಿಂದ ಬಿದ್ದ ಆನಂದ ಬಾಷ್ಪಗಳು ಆ ಕಲಶದಲ್ಲಿ ಸೇರಿ ಸಣ್ಣ ಗಿಡ ಹುಟ್ಟಿತು. ಈ ಗಿಡಕ್ಕೆ ತುಲನೆ (ಹೋಲಿಕೆ) ಇಲ್ಲದ್ದರಿಂದ ಇದಕ್ಕೆ ತುಳಸಿ ಎಂದು ಹೆಸರಿಸಿ ವಿಷ್ಣುವು ಲಕ್ಷ್ಮಿಯೊಂದಿಗೆ ತುಳಸಿಯನ್ನು ಉತ್ಥಾನ ದ್ವಾದಶಿಯಂದು ಲಗ್ನವಾದನು ಎಂದು ಪುರಾಣನಾಮ ಚೂಡಾಮಣಿಯಲ್ಲಿ ಉಲ್ಲೇಖವಿದೆ.

ಕಾರ್ತೀಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಸಂಜೆ ತುಳಸಿ ವಿವಾಹವು ಆಚರಿಸಲ್ಪಡುತ್ತದೆ. ಅಂದು ಎಲ್ಲರ ಮನೆಯಂಗಳದ ಬಲಭಾಗದಲ್ಲಿ ಪ್ರತಿಷ್ಠಾಪಿಸಿದ ಬೃಂದಾವನ ತುಳಸೀಕಟ್ಟೆಯನ್ನು ಮಾವಿನ ತೋರಣ  ನೆಲ್ಲಿಗಿಡದ ರೆಂಬೆಗಳು, ಬಣ್ಣ ಬಣ್ಣದ ರಂಗೋಲಿ, ಹೂ ಮಾಲೆಗಳು ಮತ್ತು ಸಾಲುದೀಪಗಳನ್ನು ಬೆಳಗಿ ಅಲಂಕರಿಸಿ ನೈವೇದ್ಯಗಳನ್ನು ಅರ್ಪಿಸಿ ಪೂಜಿಸುವ ಪದ್ಧತಿಯಿದೆ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ