ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚೆನ್ನಣ್ಣ ವಾಲೀಕಾರ


ಚೆನ್ನಣ್ಣ ವಾಲೀಕಾರ 


ಚೆನ್ನಣ್ಣ ವಾಲೀಕಾರ  ಕವಿಗಳಾಗಿ, ಕಥೆಗಾರರಾಗಿ ಮತ್ತು ಜಾನಪದ ಸಂಶೋಧಕರಾಗಿ ಪ್ರಸಿದ್ಧರಾದವರು.  ಅವರ ಸಂಸ್ಮರಣಾ ದಿನವಿದು.

ಚೆನ್ನಣ್ಣ ವಾಲೀಕಾರ  1943ರ ಏಪ್ರಿಲ್ 6ರಂದು ಗುಲ್ಬರ್ಗ ಜಿಲ್ಲೆಯ  ಚಿತ್ತಾಪುರ ತಾಲ್ಲೂಕಿನ ಶಂಕರವಾಡ ಗ್ರಾಮದಲ್ಲಿ ಜನಿಸಿದರು. ತಾಯಿ ಸಾಬಮ್ಮ ಮತ್ತು ತಂದೆ ಧೂಳಪ್ಪ.

ಗುಲ್ಬರ್ಗದ ಶರಣ ಬಸವೇಶ್ವರ ಕಲಾ ಕಾಲೇಜಿನಲ್ಲಿ ಬಿ.ಎ.ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ವಾಲೀಕರ ಅವರು ರಾಯಚೂರು ಕಾಲೇಜಿನ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಸೆನೆಟ್‌ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. 

ಮರದ ಮೇಲಿನ ಗಾಳಿ, ಹಾಡಕ್ಕಿ ಹಾಗೂ ಇತರ ಪದಗಳು, ಪ್ಯಾಂಥರ್ ಪದ್ಯಗಳು, ಧಿಕ್ಕಾರದ ಹಾಡುಗಳು, ಆಯ್ದ ಕವನಗಳು, ಐದು ಜನಪದ ಸಮಾಜವಾದಿ ಕಾವ್ಯಗಳು ಮುಂತಾದವು ಚೆನ್ನಣ್ಣ ವಾಲೀಕಾರ ಅವರ ಕವನ ಸಂಕಲನಗಳು.

ಕಪ್ಪುಕಥೆಗಳು, ಹುತ್ತದಲ್ಲಿ ಕುದ್ದವರ ಕಥೆಗಳು ಚೆನ್ನಣ್ಣ ವಾಲೀಕಾರ ಅವರ ಕಥಾ ಸಂಕಲನಗಳು.

ಬೆಳ್ಯ, ಕೋಟೆ ಬಾಗಿಲು, ಹುಲಿಗಮ್ಮ, ಗ್ರಾಮಭಾರತ, ಒಂದು ಹೆಂಚಿನ ಒಳ ಜಗತ್ತು ಚೆನ್ನಣ್ಣ ವಾಲೀಕಾರ ಅವರ ಕಾದಂಬರಿಗಳು.

ಮೋಹರಂ ಪದಗಳು, ಮದುವೆ ಹಾಡುಗಳು, ಕಲ್ಯಾಣ ನಾಡಿನ ಕಂಪು ಕವಿತೆಗಳು  ಚೆನ್ನಣ್ಣ ವಾಲೀಕಾರ ಅವರ ಸಂಪಾದನೆಯಲ್ಲಿ ಹೊರಹೊಮ್ಮಿವೆ.  

ಒಂದು ಗ್ರಾಮದ ಜಾನಪದೀಯ ಅಧ್ಯಯನ, ಒಂದು ಸಾಂಸ್ಕೃತಿಕ ಅಧ್ಯಯನ, ಕರ್ನಾಟಕದಲ್ಲಿ ದೇವದಾಸಿ ಪದ್ಧತಿ ಮುಂತಾದವು ಚೆನ್ನಣ್ಣ ವಾಲೀಕಾರ ಅವರ ಸಂಶೋಧನೆಗಳು.

ಚೆನ್ನಣ್ಣ ವಾಲೀಕಾರ ಅವರು ಬರೆದ 1030 ಪುಟಗಳ ಬೃಹತ್ ಪ್ರಾಯೋಗಿಕ ಕಾವ್ಯ 'ವ್ಯೋಮಾವ್ಯೋಮ' ಕೃತಿ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಒಂದೇ ವಾಕ್ಯ, ಎಲ್ಲೂ ಪೂರ್ಣವಿರಾಮ, ಅಲ್ಪವಿರಾಮ, ಪ್ರಶ್ನಾರ್ಥಕ ಇತ್ಯಾದಿ ಬಳಸದೆ ಮೂಡಿರುವ ವಿಶೇಷ ಪ್ರಯೋಗ. ಬಂಡಾಯ ಸಂಘಟನೆಯಲ್ಲಿ ಅವರು ತಮ್ಮನ್ನು  ಸಂಪೂರ್ಣವಾಗಿ ತೊಡಗಿಸಿಕೊಂಡವರು. ಅನೇಕ ಸಲ ಸಂಘಟನೆಯ  ಸಂಚಾಲಕರಾಗಿ ಮತ್ತು ಮುಂಚೂಣಿ ನಾಯಕರಾಗಿ ಕೆಲಸ ಮಾಡಿದ್ದರು.

ಚೆನ್ನಣ್ಣ ವಾಲೀಕಾರ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಗೌರವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಅನೇಕ ಗೌರವಗಳು ಸಂದಿದ್ದವು.

ಚೆನ್ನಣ್ಣ ವಾಲೀಕಾರ ಅವರು 2019ರ ನವೆಂಬರ್ 24ರಂದು ಈ ಲೋಕವನ್ನಗಲಿದರು.

On Remembrance Day of  great scholar and writer Dr. Channanna Vaalikara


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ