ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಚಿಯ ಹೊನ್ನಮ್ಮ


ಸಂಚಿಯ ಹೊನ್ನಮ್ಮ


ಸಂಚಿಯ ಹೊನ್ನಮ್ಮ17ನೇ ಶತಮಾನದ ಕವಯತ್ರಿ. ಈಕೆ ಕ್ರಿ.ಶ. 1673-1704ರ ಅವಧಿಯಲ್ಲಿ ಮೈಸೂರಿನ ಅರಸರಾಗಿದ್ದ ಚಿಕ್ಕದೇವರಾಜ ಒಡೆಯರ ಊಳಿಗದಲ್ಲಿ ಇದ್ದ ಮಹಿಳೆ. 

ಹೊನ್ನಮ್ಮ ಮೈಸೂರು ಜಿಲ್ಲೆಯ ಯಳಂದೂರಿನಲ್ಲಿ ಜನಿಸಿದಳು. ಆಕೆ ಜನಿಸಿದ್ದು ಕ್ರಿ. ಶ. ಸುಮಾರು 1680ರಲ್ಲಿ ಎನ್ನಲಾಗಿದೆ. ಈಕೆ ಇದೇ ಸ್ಥಳಕ್ಕೆ ಸೇರಿದ್ದ ಚಿಕ್ಕದೇವರಾಜರ ಪಟ್ಟದರಸಿಯಾಗಿದ್ದ ದೇವರಾಜಮ್ಮಣ್ಣಿಯ ಬಾಲ್ಯ ಸ್ನೇಹಿತೆಯಾಗಿದ್ದಳು.

ಚಿಕದೇವರಾಯರ ಅರಮನೆಯ ಪರಿಸರದಲ್ಲಿ, ಹೊನ್ನಮ್ಮ, ಶೃಂಗಾರಮ್ಮ, ಚೆಲುವಾಂಬೆಯರೆಂಬ ಕವಯಿತ್ರಿಯರಿದ್ದರು.
ಶೃಂಗಾರಮ್ಮನು ಬರೆದ ‘ಪದ್ಮಿನೀ ಕಲ್ಯಾಣ’, ರಾಣಿಯಾದ ಚೆಲುವಾಂಬೆ ಬರೆದ ‘ವರನಂದೀ ಕಲ್ಯಾಣ’ ಮತ್ತು ‘ವೆಂಕಟಾಚಲ ಮಹಾತ್ಮೆ ಲಾಲಿಪದ’, ಇವುಗಳಲ್ಲಿ ಸೇರಿವೆ. ಇವರುಗಳಲ್ಲಿ ಹೊನ್ನಮ್ಮನ ಕಾವ್ಯಶಕ್ತಿ ಎದ್ದು ಕಾಣುವಂಥದ್ದು.

ಹೊನ್ನಮ್ಮನಿಗೆ ‘ಸಂಚಿಯ ಹೊನ್ನಮ್ಮ’ ಎನ್ನುವುದು ಪೂರ್ತಿಯಾದ ಹೆಸರು. ಸಂಚಿ ಎಂದರೆ ಚೀಲ; ಹೊನ್ನಮ್ಮ ಎಲೆಯಡಕೆಯ ಚೀಲವನ್ನು ಹಿಡಿದು, ಅರಮನೆಯಲ್ಲಿ ರಾಜ – ರಾಣಿಯರ ಸಮೀಪವರ್ತಿಯಾಗಿ ಕೆಲಸ ಮಾಡಿಕೊಂಡಿದ್ದವಳು. ಅರಮನೆಯ ಊಳಿಗದ ಹೆಣ್ಣಾದ ಇವಳು ಸಿಂಗರಾರ್ಯನಿಂದ ವ್ಯಾಸಂಗವನ್ನು ಪಡೆದು, ‘ಹದಿಬದೆಯ ಧರ್ಮ’ ಎಂಬ ಕಾವ್ಯವನ್ನು ಬರೆದು ಕವಯಿತ್ರಿಯಾದಳು. 

‘ಹದಿಬದೆಯ ಧರ್ಮ’  ಅಂದರೆ ಪತಿವ್ರತೆಯರ ಧರ್ಮ ಅಥವಾ ಕರ್ತವ್ಯ.  ಇದು  ಗೃಹಿಣೀ ಧರ್ಮದ ಕೈಪಿಡಿ. ಗಂಡನೊಡನೆ, ಗರತಿಯಾಗಿ ಸುಗಮವಾಗಿ ಸಂಸಾರ ಮಾಡುವ ಹೆಣ್ಣಿಗೆ ಹೇಳಿದ ಬುದ್ಧಿವಾದದಂತಿದೆ ಈ ಕಾವ್ಯ. ಧರ್ಮಶಾಸ್ತ್ರದಲ್ಲಿರುವ ಸಂಗತಿಗಳನ್ನೆಲ್ಲಾ ಸಂಗ್ರಹಿಸಿ, ಕನ್ನಡದ ಹೆಣ್ಣು ಮಕ್ಕಳಿಗೆ ತಿಳಿಯುವಂತೆ ಸಾಂಗತ್ಯದಲ್ಲಿ ಈ ನೀತಿ ಕಾವ್ಯ ರಚಿತವಾಗಿದೆ.  9 ಸಂಧಿಗಳು ಹಾಗು 420 ಪದ್ಯಗಳನ್ನು ಒಳಗೊಂಡ ಈ ಕೃತಿಯು ತನ್ನ ಕಾವ್ಯಸೌಂದರ್ಯದಿಂದಾಗಿ ಹಾಗು ದಿಟ್ಟ ಸ್ತ್ರೀಪರ ಧೋರಣೆಯಿಂದಾಗಿ ಖ್ಯಾತವಾಗಿದೆ. ಇದರ ಒಂದು ಪದ್ಯ  ಹೀಗಿದೆ:

ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು?

ತಮ್ಮೆಲ್ಲರನ್ನು ಹಡೆದವಳು ಹೆಣ್ಣಲ್ಲವೆ? ಕಾಪಾಡಿದವಳು ಹೆಣ್ಣಲ್ಲವೆ? ಹೀಗಿರುವಾಗ ಹೆಣ್ಣು ಹೆಣ್ಣು ಎಂದು ಯಾಕೆ ನಿಕೃಷ್ಟರಾಗಿ ಕಾಣುತ್ತಾರೋ ಕಣ್ಣು ಕಾಣದ ಈ ಮೂರ್ಖರು, ಎಂಬ ಮಾತಿನಲ್ಲಿ ಹೊನ್ನಮ್ಮ ಮುಖ್ಯವಾಗಿ ಗಂಡಸರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಅಷ್ಟೇ ಅಲ್ಲ, ಪರಂಪರಾಗತವಾಗಿ ಹೆಣ್ಣಿನ ಬಗ್ಗೆ ಒಂದು ಬಗೆಯ ಕೀಳು ಭಾವನೆಯನ್ನು ಬೆಳೆಯಿಸಿದ ಮನೋಧರ್ಮವನ್ನು ಹೊನ್ನಮ್ಮ ಖಂಡಿಸಿದ ಈ ಮಾತು ಹೊಸತಾಗಿದೆ.

ಉಳಿದಂತೆ ‘ಹದಿಬದೆಯ ಧರ್ಮ’  ಕಾವ್ಯವು ಉತ್ತಮ ಗೃಹಿಣಿಯಾಗಿ ಹೆಣ್ಣು ಹೇಗೆ ಬಾಳಬೇಕೆಂಬುದನ್ನು ಹೇಳಿಕೊಂಡು ಹೋಗುತ್ತದೆ. 

'ಹದಿಬದೆಯ ಧರ್ಮ’ದ ವಿಚಾರ ಇಂದಿನ ಆಧುನಿಕ ವಿಚಾರಧಾರೆಗೆ ಎಷ್ಟು ಸರಿಹೋಗುತ್ತದೆ ಎಂಬುಕ್ಕಿಂತ,  ಅರಮನೆಯ ಊಳಿಗದ ಹೆಣ್ಣೊಬ್ಬಳು, ಅಂದಿನ ಪರಿಸರದಲ್ಲಿ ಕವಯಿತ್ರಿಯಾಗಿ ರೂಪುಗೊಂಡದ್ದು ಮಹತ್ವವಾದ ವಿಚಯವಾಗಿ ವಿದ್ವಜ್ಜನರ ಮನಸೆಳೆದಿದೆ.  ಹೊನ್ನಮ್ಮನ ಬರವಣಿಗೆ ತನ್ನ ಅಚ್ಚಗನ್ನಡದ ಸೊಗಸಿನಿಂದ, ಹೃದ್ಯವಾಗಿದೆ.

Great poetess of 17th Century Sanchiya Honnamma

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ