ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರುಕ್ಮಾಬಾಯಿ


 ರುಕ್ಮಾಬಾಯಿ


ರುಕ್ಮಾಬಾಯಿ ಮಹಾನ್ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಪ್ರಥಮ ವೈದ್ಯೆಯರಲ್ಲಿ ಒಬ್ಬರು ಮತ್ತು ಸಮಾಜಸೇವಕಿ. 

ಮಹಿಳೆಯರ ಹಕ್ಕುಗಳ ಬಗ್ಗೆ ಭಾರತದಲ್ಲಿ ಜಾಗೃತಿಯೇ ಇಲ್ಲದ ದಿನಗಳಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ರುಕ್ಮಾಬಾಯಿ ಅವರು ನಡೆಸಿದ ಹೋರಾಟ ಇಂದಿಗೂ ಒಂದು ಅಚ್ಚರಿಯಂತಿದೆ. ಮಹಿಳೆಯರ ಹಕ್ಕುಗಳ ಬಗೆಗಿನ ಚರ್ಚೆ ಮತ್ತು ಸಂವಾದದಲ್ಲಿ ‘ಸಮ್ಮತಿ’ ಎಂಬ ಪದದ ಬಳಕೆಯನ್ನು ಆರಂಭಿಸಿರುವುದರ ಕೀರ್ತಿ ರುಕ್ಮಾಬಾಯಿ ಅವರದು. ಮಹಿಳಾ ಹಕ್ಕುಗಳ ಚರ್ಚೆಯಲ್ಲಿ ‘ಸಮ್ಮತಿ’ ಪದ ಜಗತ್ತಿನಾದ್ಯಂತ ಇಂದಿಗೂ ಬಳಕೆಯಾಗುತ್ತಿದೆ.

ರುಕ್ಮಾಬಾಯಿ 1864ರ ನವೆಂಬರ್‌ 22ರಂದು ರುಕ್ಮಾಬಾಯಿ ಮುಂಬೈನಲ್ಲಿ  ಜನಿಸಿದರು. ತಂದೆ ಜನಾರ್ಧನ್ ಪಾಂಡುರಂಗ್. ತಾಯಿ ಜಯಂತಿಬಾಯಿ. ರುಕ್ಮಾಬಾಯಿ ಎರಡು ವರ್ಷದ ಮಗುವಾಗಿದ್ದಾಗ ತಂದೆ ನಿಧನರಾದರು.  ಆಗ ತಾಯಿಗೆ ಇನ್ನೂ 17 ವರ್ಷ.  ಇದಾದ ಆರು ವರ್ಷಗಳ ನಂತರ ತಾಯಿ ಜಯಂತಿಬಾಯಿಯನ್ನು ಡಾ. ಸಖಾರಾಮ್ ಅರ್ಜುನ್ ಎಂಬ ವೈದ್ಯ ಮತ್ತು ಸಮಾಜಸುಧಾರಕರು ಪುನರ್ವಿವಾಹವಾದರು.

ಬಾಲ್ಯ ವಿವಾಹ ವ್ಯಾಪಕವಾಗಿದ್ದ ಆ ದಿನಗಳಲ್ಲಿ ರುಕ್ಮಾಬಾಯಿ ಅವರ ಮದುವೆ ಅವರ 11ನೇ ವಯಸ್ಸಿನಲ್ಲಿ 19 ವಯಸ್ಸಿನ ದಾದಾಜಿ ಭಿಕಜಿ ಎಂಬುವನೊಂದಿಗೆ ಆಯ್ತು. ಆತ ಶಾಲೆಗೆ ಹೋಗಿ ಓದಿ ಉತ್ತಮನಾಗಬೇಕು ಅವನನ್ನು  ಮನೆ ಅಳಿಯ ಮಾಡಿಕೊಳ್ಳುವುದು ಎಂಬ ಒಪ್ಪಂದವಾಗಿತ್ತು. ಆದರೆ ಇಪ್ಪತ್ತು ತಲುಪಿದ್ದ ದಾದಜಿ ಭಿಕಜಿಗೆ ಶಾಲೆಗೆ ಮಕ್ಕಳೊಡನೆ ಹೋಗಿ ಓದುವುದು ಹಿಂಸೆಯಾಗಿತ್ತು.  ಅದೇ ಸಮಯದಲ್ಲಿ ಆತನ ತಾಯಿ ತೀರಿಕೊಂಡು ಬಂಧುವೊಬ್ಬರ ಮನೆಯಲ್ಲಿ ನೆಲೆಸಿದ್ದ.  ಹೆಂಡತಿಗೆ ಹನ್ನೆರಡಾಯಿತು ಕೂಡಿಕೆ ಆಗಬೇಕು ಎಂದು ದುಂಬಾಲುಬಿದ್ದ.  ಸಾಲ ಮಾಡಿಕೊಂಡಿದ್ದ ಅವನಿಗೆ ರುಕ್ಮಾಬಾಯಿಗೆ ಬರುವ ಆಸ್ತಿಯ ಮೇಲೆ ಆತನ ಕಣ್ಣಿತ್ತು.  ರುಕ್ಮಾಬಾಯಿಯ ತಂದೆ ಡಾ. ಸಖರಾಮ್ ಅವರಿಗೆ ಹೀಗೆ ದಾದಜಿ ಭಿಕಜಿಯ ಹಿಂದೆ ರುಕ್ಮಾಬಾಯಿಯನ್ನು ಓದು ನಿಲ್ಲಿಸಿ ಆತ ನೆಲೆಸಿದ್ದ ವಾತಾವರಣ ಸರಿಯಿಲ್ಲದ ಮನೆಗೆ ಕಳುಹಿಸುವುದು ಇಷ್ಟವಾಗಲಿಲ್ಲ.  ರುಕ್ಮಾಬಾಯಿಗೂ ಓದುವುದಕ್ಕೆ ಅಪಾರ ಒಲವಿತ್ತು.

ಹೀಗೆ ಮದುವೆಯ ಬಳಿಕ ರುಕ್ಮಾಬಾಯಿ ಗಂಡನ ಮನೆಗೆ ಹೋಗಲಿಲ್ಲ. ತವರಿನಲ್ಲಿಯೇ ಉಳಿದ ಆಕೆಯನ್ನು ಮಲತಂದೆ ಓದುವಂತೆ ಹುರಿದುಂಬಿಸಿದರು. ಆದರೆ ರುಕ್ಮಾಬಾಯಿ ಓದುವುದು ಗಂಡನಿಗೆ ಇಷ್ಟವಿರಲಿಲ್ಲ. ಓದು ಬಿಡಲು ಮನಸಿಲ್ಲದ ರುಕ್ಮಾಬಾಯಿ ಗಂಡನನ್ನೇ ಬಿಡುವ ದಿಟ್ಟ ನಿರ್ಧಾರಕ್ಕೆ ಬಂದರು.

ಹೆಂಡತಿ ತಮ್ಮ ಜತೆಗೆ ಬಂದು ನೆಲೆಸಬೇಕು ಎಂದು ದಾದಾಜಿ 1884ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದ. ‘ಗಂಡನ ಜತೆಗೆ ಹೋಗಬೇಕು ಇಲ್ಲವಾದರೆ ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಹೈಕೋರ್ಟ್‌ ಹೇಳಿದರೂ ಗಂಡನ ಜತೆಗೆ ಹೋಗಲು ರುಕ್ಮಾಬಾಯಿ ಒಪ್ಪಲಿಲ್ಲ. ಜೈಲಿಗೆ ಹೋದರೂ ಗಂಡನೊಡನೆ ಹೋಗಲಾರೆ ಎಂದಳು. ಮದುವೆಯ ಸಂದರ್ಭದಲ್ಲಿ ತಮಗೆ ‘ಒಪ್ಪಿಗೆ’ ನೀಡುವ ವಯಸ್ಸು ಆಗಿರಲಿಲ್ಲ. ಹಾಗಾಗಿ ಆ ಮದುವೆಯಲ್ಲಿ ಮುಂದುವರಿಯುವಂತೆ ತಮ್ಮನ್ನು ಬಲವಂತ ಮಾಡುವಂತಿಲ್ಲ ಎಂದು ರುಕ್ಮಾಬಾಯಿ ವಾದಿಸಿದರು. ಇಂತಹ ವಾದವನ್ನು ಅದುವರೆಗೆ ಯಾವ ನ್ಯಾಯಾಲಯವೂ ಕೇಳಿಯೇ ಇರಲಿಲ್ಲ. ಈ ವಾದ 1980ರ ದಶಕದಲ್ಲಿ ಮಾಧ್ಯಮದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಯಿತು. ಕೇವಲ ಭಾರತ ಮಾತ್ರವಲ್ಲದೇ ಈ ಪ್ರಕರಣ ಇಂಗ್ಲೆಂಡ್‌ಗೂ ಹಬ್ಬಿತ್ತು.

ಈ ವಾದ ಸರಣಿ ಆಗಿನ ಪ್ರಮುಖ ಸಮಾಜ ಸುಧಾರಕರಾದ ರಮಾಬಾಯಿ ರಾನಡೆ ಮತ್ತು ಬೆಹರಾಮ್‌ಜಿ ಮಲಬಾರಿ ಅವರ ಗಮನಕ್ಕೂ ಬಂತು. ಕೊನೆಗೆ, ಹಣದ ಪರಿಹಾರ ಪಡೆದು ವಿವಾಹವನ್ನು ಕೊನೆಗೊಳಿಸಲು ದಾದಜಿ ಭಿಕಜಿ ಒಪ್ಪಿಕೊಂಡ.

ಈ ಪ್ರಕರಣದ ಹಿನ್ನೆಲೆಯಲ್ಲಿ  ‘ವೈವಾಹಿಕ ಸಂಬಂಧಕ್ಕೆ ಒಪ್ಪಿಗೆಯ ವಯಸ್ಸು ಕಾಯ್ದೆ1891 ’ (Age of Consent Act) ಜಾರಿಗೆ ಬಂತು ಎಂಬುದು ಗಮನಾರ್ಹ ಸಂಗತಿ.  ಒಪ್ಪಿಗೆ ಇಲ್ಲದ ವಿವಾಹ ಬಂಧನ ಅಸಿಂಧು ಎಂಬ ಕಾನೂನು ಮೂಡಿತು.

ಈ ದಾವೆ ಬಗೆಹರಿದ ಬಳಿಕ ರುಕ್ಮಾಬಾಯಿ ವೈದ್ಯ ವೃತ್ತಿ ಕಲಿಯಲು ನಿರ್ಧರಿಸಿದರು.  ಡಾ.ಎಡಿತ್ ಪೆಚಿ ಅವರ ಬೆಂಬಲ ಮತ್ತು ಸಾರ್ವಜನಿಕ ಬೆಂಬಲದೊಂದಿಗೆ 1889ರಲ್ಲಿ ಇಂಗ್ಲೆಂಡಿಗೆ ಹೋದ ರುಕ್ಮಾಬಾಯಿ 1894ರಲ್ಲಿ ಲಂಡನ್ ಸ್ಕೂಲ್ ಆಫ್ ಮೆಡಿಸನ್ ಫಾರ್ ವುಮನ್ ಇಂದ ಡಾಕ್ಟರ್ ಆಫ್ ಮೆಡಿಸನ್ ಪದವಿ ಗಳಿಸಿದರು. ಕದಂಬಿನಿ ಗಂಗೂಲಿ ಮತ್ತು ಆನಂದಿ ಗೋಪಾಲ ಜೋಷಿ ಇದಕ್ಕೆ ಮಂಚೆ 1886ರಲ್ಲಿ ವೈದ್ಯಪದವಿ ಗಳಿಸಿದ್ದರು.

1895ರಲ್ಲಿ ಭಾರತಕ್ಕೆ ಹಿಂದಿರುಗಿದ ರುಕ್ಮಾಬಾಯಿ ಯಶಸ್ವಿ ವೈದ್ಯರಾಗಿ ಸುರತ್ ಮಹಿಳಾ ಆಸ್ಪತ್ರೆಯಲ್ಲಿ ಚೀಫ್ ಮಡಿಕಲ್ ಆಫೀಸರ್ ಆಗಿ ಕೆಲಸ ಮಾಡಿದರು. ಮುಂದೆ ರಾಜ್‍ಕೋಟ್ ಆಸ್ಪತ್ರೆಯಲ್ಲಿ ಕೆಲಸ ಮಾಡಿ 1929ರಲ್ಲಿ ನಿವೃತ್ತರಾದರು.  ಅವರು ವೈದ್ಯ ವೃತ್ತಿಗೆ ಮಾತ್ರಾ ಸೀಮಿತಗೊಳ್ಳಲಿಲ್ಲ. ಬಾಲ್ಯ ವಿವಾಹ ಮತ್ತು ಪರ್ದಾ ಪದ್ಧತಿಯ ವಿರುದ್ಧ ನಿರಂತರವಾಗಿ ಬರೆಯುವ ಮೂಲಕ ಸಮಾಜ ಸುಧಾರಕಿಯೂ ಆದರು. ಅವರು 1955ರ ಸೆಪ್ಟೆಂಬರ್‌ 25ರಂದು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾಗುವ ತನಕ ಸಮಾಜ ಸುಧಾರಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.

ಈ ಧೀರಮಹಿಳೆಗೆ ನಮನ.

On the birth anniversary of one of the first practicing Doctor Rukmabai, Rukhmabai

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ