ವಿನಯಾ ಪ್ರಸಾದ್
ವಿನಯಾ ಪ್ರಸಾದ್
ವಿನಯಾ ಪ್ರಸಾದ್ ಅಂದರೆ ಅರಳು ಹುರಿದಂತೆ ಸುಸ್ಪಷ್ಟವಾಗಿ ಕನ್ನಡ ಮಾತನಾಡುವ ನಗೆಮೊಗದ ಸುಲಕ್ಷಣವಂತೆಯ ವ್ಯಕ್ತಿತ್ವದ ಪರಿಕಲ್ಪನೆ ಮೂಡುತ್ತದೆ. ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಮತ್ತು ಕಾರ್ಯಕ್ರಮ ನಿರೂಪಣೆಗಳಲ್ಲಿ ಲವಲವಿಕೆಯಿಂದ ಕಂಗೊಳಿಸುವ ವಿನಯಾ ಪ್ರಸಾದ್ ಕಾಣಲು ಸಂತೋಷ ಮೂಡಿಸುವ ಆಕರ್ಷಕ ಸುಸಂಸ್ಕೃತ ಕಲಾವಿದೆ. ಅವರ ಪ್ರತಿಭೆಯನ್ನು ಕನ್ನಡದ ಕಲಾ ಉದ್ಯಮ ಬಳಸಿಕೊಂಡಿರುವುದಕ್ಕಿಂತ ಹೆಚ್ಚಾಗಿ ಮಲಯಾಳಂ ಚಲನಚಿತ್ರ ಉದ್ಯಮ ಬಳಸಿಕೊಂಡಿದೆ. ಅವರು ತಮಿಳು ಮತ್ತು ತೆಲುಗು ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಕೂಡಾ ಮಿಂಚುತ್ತಿದ್ದು ಎಲ್ಲೆಡೆ ಪ್ರಕಾಶಿಸಿದ್ದಾರೆ. ಹಾಗಾಗಿ ಅವರ ಹೆಸರು ಹಲವೆಡೆ ಮೂಡಿರುವ ಹಾಗೆ ವಿನಯ ಪ್ರಕಾಶಗಳ ಸಂಗಮವಾದ ‘ವಿನಯಾ ಪ್ರಕಾಶ’ವೂ ಹೌದು.
ವಿನಯಾ ಪ್ರಸಾದ್ ಅವರು ‘ವಿನಯಾ ಭಟ್’ ಆಗಿ 1966ರ ನವೆಂಬರ್ 22ರಂದು ಜನಿಸಿದರು. ತಂದೆ ಕೃಷ್ಣ ಭಟ್ ಮತ್ತು ತಾಯಿ ವತ್ಸಲ ಅವರು.
1988 ವರ್ಷದಲ್ಲಿ ಜಿ ವಿ ಅಯ್ಯರ್ ಅವರ ‘ಮಧ್ವಾಚಾರ್ಯ’ ಚಿತ್ರ ವಿನಯಾ ಅವರು ಚಿತ್ರರಂಗಕ್ಕೆ ಕಾಲಿರಿಸಿದ ಪ್ರಥಮ ಚಿತ್ರ. ‘ಗಣೇಶನ ಮದುವೆ’ ಚಿತ್ರದಲ್ಲಿ ಅನಂತನಾಗ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದು ಅವರ ಪ್ರಥಮ ಗಮನಾರ್ಹ ಪಾತ್ರ. ವಿಷ್ಣುವರ್ಧನ್ ಅವರೊಂದಿಗೆ ‘ನೀನು ನಕ್ಕರೆ ಹಾಲು ಸಕ್ಕರೆ’ ಚಿತ್ರದಲ್ಲಿನ ಅವರ ಪಾತ್ರವೂ ಆಕರ್ಷಕ ನಿರ್ವಹಣೆಯದು. ‘ನಿಮ್ಕಡೆ ಸಾಂಬಾರ್ ಅಂದ್ರೆ’ ಎಂದು ಹಾಡುತ್ತಾ ವಿಷ್ಣುವರ್ಧನ್ ಅವರೊಂದಿಗೆ ಸುಂದರ ‘ಕನ್ನಡ ಪ್ರೀತಿಯ’ ಹಾಡಿನಲ್ಲಿ ಅವರು ಜಾನಪದ ಕಲಾವಿದೆಯಾಗಿ ಕಾಣುವ ದೃಶ್ಯ ಆಪ್ತ ನೆನಪು ನೀಡುವಂತದ್ದು. ‘ಗೌರಿ ಗಣೇಶ’ ಅನಂತನಾಗ್ ಆವರೊಂದಿಗೆ ವಿನಯಾ ಪ್ರಸಾದ್ ಅವರು ನಟಿಸಿದ ಮತ್ತೊಂದು ಯಶಸ್ವೀ ಚಿತ್ರ. ‘ಆಪ್ತರಕ್ಷಕ’ ಚಿತ್ರದಲ್ಲಿ ಅಷ್ಟೊಂದು ನಟಿಯರಿದ್ದರೂ ವಿನಯಾ ಪ್ರಸಾದರ ಉಪಸ್ಥಿತಿ ಎದ್ದು ಕಾಣುವಂತದ್ದು. ಒಂದು ರೀತಿಯಲ್ಲಿ ಇದು ಅವರು ನಟಿಸಿದ ಬಹುತೇಕ ಚಿತ್ರಗಳಿಗೆ ಅನ್ವಯವಾಗುವ ಮಾತು.
ವಿನಯಾ ಪ್ರಸಾದ್ 1993 ವರ್ಷದಲ್ಲಿ ನಟಿಸಿದ ‘ಆತಂಕ’ ಮತ್ತು 2001 ವರ್ಷದಲ್ಲಿ ನಟಿಸಿದ ‘ಬಣ್ಣದ ಗೆಜ್ಜೆ’ ಚಿತ್ರಗಳಲ್ಲಿನ ಪಾತ್ರ ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದವರು. ಅನಂತನಾಗ್, ವಿಷ್ಣುವರ್ಧನ್ ಅವರಲ್ಲದೆ, ಚಿರಂಜೀವಿ, ರಜನೀಕಾಂತ್, ಮೋಹನ್ ಲಾಲ್ ಅಂಬರೀಶ್, ವೆಂಕಟೇಶ್, ನಾಗಾರ್ಜುನ, ರವಿಚಂದ್ರನ್ ಮುಂತಾದ ಎಲ್ಲ ಪ್ರಸಿದ್ಧ ನಟರುಗಳೊಂದಿಗೆ ಅವರು ಚಲನಚಿತ್ರಗಳಲ್ಲಿ ಕಂಡಿದ್ದಾರೆ.
ವಿನಯಾ ಪ್ರಸಾದ್ ಅವರು 1988 ರಿಂದ 2000 ವರ್ಷದ ವರೆಗೆ ಮಲಯಾಳಂನ ‘ಏಶಿಯಾ ನೆಟ್’ ವಾಹಿನಿಯಲ್ಲಿ ಪ್ರಸರಣಗೊಂಡ ಪ್ರಸಿದ್ಧ ಮೇಘಾ ಧಾರಾವಾಹಿ ‘ಸ್ತ್ರೀ’ಯಲ್ಲಿ ನಟಿಸಿ ಮಲೆಯಾಳಿಗಳ ಮನೆಮಾತಾದವರು. 2006 ವರ್ಷದಲ್ಲಿ ಅವರ ‘ಸ್ತ್ರೀ’ ಧಾರಾವಾಹಿಯ ಮುಂದುವರಿಕೆಯ ಎರಡನೇ ಅವತರಣಿಕೆ ಪ್ರಸಾರಗೊಂಡಿತು. ಅದೇ ಧಾರಾವಾಹಿ ಕನ್ನಡದಲ್ಲಿಯೂ ಮೂಡಿಬಂತು. ಕನ್ನಡದ ಪ್ರಸಿದ್ಧ ಚಿತ್ರಗಳಲ್ಲಿ ಒಂದಾದ ‘ಆಪ್ತಮಿತ್ರ’ದ ಮೂಲವಾದ ಮಲಯಾಳಂನ ‘ಮಣಿಚಿತ್ರತ್ತಾಯು’ನಲ್ಲಿ ಅವರು ಪೋಷಕ ಪಾತ್ರದಲ್ಲಿ ಗಮನಾರ್ಹ ಪಾತ್ರ ನಿರ್ವಹಣೆ ಮಾಡಿದ್ದರು. ತಮಿಳಿನಲ್ಲಿ ಯಶಸ್ವಿಯಾದ ‘ತಾಯ್ ಕುಲಮೆ’ ಚಿತ್ರದಲ್ಲಿ ಅಭಿನಯಿಸಿದ್ದರು. ತೆಲುಗಿನಲ್ಲಿ ‘ಇಂದ್ರ’, ‘ದೊಂಗ ದೊಂಗಡಿ’ ಮತ್ತು ‘ಆಂಧ್ರುಡು’ ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯ ಮೆಚ್ಚುಗೆ ಗಳಿಸಿದವು.
ನಾಯಕಿಯ ಪಾತ್ರಗಳಿಗೆ ಮಾತ್ರವೇ ಅವಲಂಬಿಸದೆ ಎಲ್ಲ ಪಾತ್ರಗಳಲ್ಲಿ ಅಭಿನಯಿಸುತ್ತಾ ತಾವು ಹೋದ ಭಾಷಾ ರಂಗಗಳಲ್ಲೆಲ್ಲ ಒಳ್ಳೆಯ ಹೆಸರು ಪಡೆದಿರುವ ವಿನಯಾ ಪ್ರಸಾದರು ಹಲವು ಕಿರುತೆರೆಯ ಕಾರ್ಯಕ್ರಮಗಳ ಸಂಯೋಜಕರಾಗಿ ಮತ್ತು ನಿರೂಪಕರಾಗಿ ಸಹಾ ಪ್ರಸಿದ್ಧಿ ಪಡೆದವರು. ಗಾಯನಕ್ಕೆ ಸೂಕ್ತವಾಗಿ ಇನಿಧ್ವನಿ ಕೂಡಾ ಅವರಲ್ಲಿದ್ದು, ಅದು ಕೂಡಾ ಆಗಾಗ ಬೆಳಕು ಕಂಡಿದೆ. ಅವರ ಕನ್ನಡದ ಮಾತಿನ ರೀತಿಯಂತೂ ಸುಸ್ಪಷ್ಟತೆಯಿಂದ ತುಂಬಿದ್ದು ಅದಕ್ಕೆ ಸೂಕ್ತವಾದ ಹಾವಭಾವ ಮುಖಚರ್ಯೆ, ಪ್ರತಿಭೆ, ಗಾಂಭೀರ್ಯತೆ, ಆತ್ಮವಿಶ್ವಾಸ ಇವೆಲ್ಲವೂ ಒಂದಕ್ಕೊಂದು ಪೋಣಿಸಿದಂತೆ ಪಕ್ವಗೊಂಡಿದೆ.
ವಿನಯಾ ಪ್ರಸಾದ್ ಅವರು ಕ್ಯಾಮರಾ ಮುಂದೆ ಮಾತ್ರವಲ್ಲದೆ ಕ್ಯಾಮರಾ ಹಿಂದೆ ಕೂಡಾ ಕೆಲಸ ಮಾಡುವ ಪ್ರತಿಭೆ ಹೊಂದಿದ್ದಾರೆ. ಚಿತ್ರವೊಂದರ ಸಹನಿರ್ಮಾಣದಲ್ಲೂ ಅವರ ಹೆಸರು ಈಗಾಗಲೇ ಕಂಡುಬಂದಿದ್ದು, ನಿರ್ಮಾಪಕರು ಮತ್ತು ಬೆಂಬಲ ಸಿಕ್ಕಲ್ಲಿ, ಉತ್ತಮ ಚಿತ್ರಕತೆಗಳು ತಮ್ಮಲ್ಲಿ ಇದ್ದು ಅವುಗಳನ್ನು ತೆರೆಗೆ ತರುವ ಉತ್ಸಾಹ ತಮ್ಮಲ್ಲಿದೆ ಎನ್ನುತ್ತಾರೆ.
ಬಹುಮುಖಿ ಪ್ರತಿಭಾವಂತೆ ವಿನಯಾ ಪ್ರಸಾದ್ ಅವರ ಸಾಧನೆಯ ಬದುಕು ನಿರಂತರ ಬೆಳಗುತ್ತಿರಲಿ, ಅವರ ಬದುಕು ಸುಂದರವಾಗಿರಲಿ ಎಂದು ಹಾರೈಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.
On the birth day of our our talented artiste Vinaya Prasad
ಕಾಮೆಂಟ್‌ಗಳು