ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೊಡ್ಡಣ್ಣ


 ದೊಡ್ಡಣ್ಣ

ಕನ್ನಡ ಚಿತ್ರರಂಗದ ಮಹಾನ್ ಪ್ರತಿಭಾಶಾಲಿ ದೊಡ್ಡಣ್ಣಗಳ ಸಾಲಿನಲ್ಲಿ ಸದಾ ವಿರಾಜಮಾನರಾದವರಲ್ಲಿ ದೊಡ್ಡಣ್ಣ ಪ್ರಮುಖರು.  “ಯಾವತ್ತೂ ಪ್ಲೇಟ್ ಮೀಲ್ಸ್ ಇಲ್ಲ, ಯಾವಾಗಲೂ ಫುಲ್ ಮೀಲ್ಸ್” ಎಂಬುದು ಅವರು ತಮ್ಮ ಪೂರ್ಣ ತೃಪ್ತಿಯ ಆಹಾರ ಸೇವನೆಯ ಕುರಿತಾಗಿ ಹೇಳುವ ಹಾಸ್ಯದ ಮಾತು.  ಒಂದು ರೀತಿ ಇದು ಅವರ  ಕಾರ್ಯದಕ್ಷತೆಗೂ ಅನ್ವಯವಾಗುವಂತದ್ದು.  ಯಾವುದೇ ಪಾತ್ರದ ನಿರ್ವಹಣೆಯೇ ಇರಲಿ, ಅಲ್ಲಿ ದೊಡ್ಡಣ್ಣನವರ  ಅಭಿನಯ ಅಲ್ಪಮಟ್ಟದ್ದು ಎನ್ನುವಂತೆಯೇ ಇಲ್ಲ.  ಅವರು ತಮ್ಮ ಪಾತ್ರವನ್ನೆಲ್ಲಾ ಪೂರ್ಣ ಸಂತಸದ ಸಂತೃಪ್ತಿಯಲ್ಲಿ ನಿರ್ವಹಿಸುವಂತಹ ಅಪರೂಪದ ಅಸಾಮಾನ್ಯ ಪ್ರತಿಭೆ.

ಕಡಲೆ ದೊಡ್ಡಪ್ಪನವರ ಮೊಮ್ಮಗನಾಗಿ, ಸುಗುರಪ್ಪ ಮತ್ತು ನಂಜಮ್ಮ ದಂಪತಿಗಳ ಪುತ್ರರಾಗಿ, ದೊಡ್ಡಣ್ಣ 1949ರ  ನವೆಂಬರ್ 11ರಂದು  ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಜನಿಸಿದರು. ಬಡತನದ ಬವಣೆಯಲ್ಲಿ ಬೆಂದರೂ ಒಳ್ಳೆಯ ಸದ್ಗುಣಗಳ ವಾತಾವರಣದ ಕುಟುಂಬ.  ಇದ್ದ ಎರಡೆಮ್ಮೆ ನೀಡಿದ ಹಾಲು, ಬೆರಣಿ ಮತ್ತು ಎಲೆಗಳನ್ನು ಪೋಣಿಸಿ ಮಾರಾಟ ಮಾಡಿ ದೊಡ್ಡ ಸಂಸಾರ ನಿರ್ವಹಣೆ ನಡೆಯುತ್ತಿತ್ತು.  ತುಂಟ ದೊಡ್ಡಣ್ಣ ಅಮ್ಮನಿಂದ ದೊಣ್ಣೆ ಮತ್ತು  ಪೊರಕೆಗಳ ಏಟು ಪಡೆದದ್ದು ಅಸಂಖ್ಯಾತ.  ಅಪ್ಪನಾದರೋ ಮಕ್ಕಳು ತಪ್ಪು ಮಾಡಿದರೆ ಊಟ ಬಿಟ್ಟು ಸುಮ್ಮನಿರುವ ಶಾಂತಿ ಪ್ರತಿರೂಪ.  ತಪ್ಪು ಮಾಡಿದ ಮಕ್ಕಳು ಬಂದು ತಪ್ಪಾಯ್ತು “ಇನ್ನು ಮೇಲೆ ಮಾಡೋಲ್ಲ” ಎಂದ ಮೇಲೆ “ಮಕ್ಕಳು ಅಪ್ಪ ಅಮ್ಮನಿಗೆ ಕೆಟ್ಟ ಹೆಸರು ತರುವಂತಹ ಕೆಲಸ ಮಾಡಬಾರದು” ಎಂಬ ಮಾತು ಹೇಳಿ ಊಟಕ್ಕೆ ಬರುತ್ತಿದ್ದವರು.  

ಇಬ್ಬರು ಅಣ್ಣಂದಿರು ಚೆನ್ನಾಗಿ ಓದುತ್ತಿದ್ದರೆ, ದೊಡ್ಡಣ್ಣ,  ಆಟ ತುಂಟಾಟಗಳಲ್ಲಿ ಕಾಲಹರಣ ಮಾಡಿ ತಲೆಗೆ ವಿದ್ಯೆ ಹತ್ತಿಸಿಕೊಳ್ಳದ ಹುಡುಗನಾಗಿದ್ದ.  ಎಲ್ಲರೂ ಓದಿದರೆ, ಎಮ್ಮೆ ಕಾಯುವರಾರು ಎಂಬುದು ಅಮ್ಮನಿಗೆ ನೆಮ್ಮದಿ ತಂದ ವಿಷಯವಾಗಿತ್ತು.  ತಂದೆ ನಿಧನರಾಗಿ ಅಣ್ಣನ ಪೋಷಣೆಯಲ್ಲಿ ಬದುಕು ಪ್ರಾರಂಭವಾಯಿತು.  ಹಾಸನದಲ್ಲಿ ಹೈಸ್ಕೂಲು ಸೇರಿದರಾದರೂ ಎಸ್ ಎಸ್ ಎಲ್ ಸಿ ಯಲ್ಲಿ ಹಲವು ಬಾರಿ ಅನುತೀರ್ಣರಾದರು.  ನಾಟಕಗಳಲ್ಲಿ ಅಪಾರ ಆಸಕ್ತಿಯಿದ್ದು, ಎಸ್.ಎಸ್. ಎಲ್.ಸಿ ಪರೀಕ್ಷೆಯ ದಿನದಲ್ಲಿ ನಾಟಕ ರಂಗದ ಮೇಲೆ ನಿದ್ದೆ ಮಾಡಿದ್ದಂತ ಭೂಪನೀತ.   ಬಳಿಕ ಐ.ಟಿ.ಐ ಸೇರಿದ ದೊಡ್ಡಣ್ಣ ಮುಂದೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ವೆಲ್ಡರ್ ಕೆಲಸಕ್ಕೆ ಸೇರಿದರು.  

ಸಣ್ಣ ವಯಸ್ಸಿನಲ್ಲೆ ಅಣ್ಣನ ಪ್ರಭಾವದಿಂದ  ಅಭಿನಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ದೊಡ್ಡಣ್ಣನವರಿಗೆ ಭದ್ರಾವತಿಯಲ್ಲಿ ನಾಟಕಗಳಲ್ಲಿನ ಅಭಿನಯಕ್ಕೆ ಹೆಚ್ಚು ವಿಸ್ತಾರ ದೊರಕಿತು.  ಭದ್ರಾವತಿಯಲ್ಲಿ ಇದ್ದ ಹಲವು ಪ್ರಸಿದ್ಧ ನಾಟಕ ತಂಡಗಳಲ್ಲಿ ಒಂದಾದ ಇವರ ‘ನವೋದಯ ಕಲಾಸಂಘ’ದ ಮೂಲಕ ಭಾಗವಹಿಸುತ್ತಿದ್ದ ನಾಟಕ ಸ್ಪರ್ಧೆಗಳಲ್ಲಿ ದೊಡ್ಡಣ್ಣನವರಿಗೆ ಸದಾ ಬಹುಮಾನ ಬರುತ್ತಿತ್ತು.  ವಿಷಜ್ವಾಲೆ, ಲಂಕೇಶರ ಸಂಕ್ರಾಂತಿ, ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ಮುಂತಾದ ನಾಟಕಗಳಲ್ಲಿನ ಅಭಿನಯ ಅವರಿಗೆ ಅಚ್ಚುಮೆಚ್ಚಿನದಾಗಿತ್ತು.  

ದೊಡ್ಡಣ್ಣ ಅವರು, 1981ರ ಸಮಯದಲ್ಲಿ ತಮ್ಮ ಆತ್ಮೀಯ ಅಭಿಮಾನಿಗಳಾದ ವೆಂಕಟಪ್ಪನವರ ಮೂಲಕ ಮಹಾನ್ ಚಲನಚಿತ್ರ ನಿರ್ದೇಶಕ ಸಿದ್ಧಲಿಂಗಯ್ಯನವರನ್ನು ಭೇಟಿಯಾದರು.  ಅವರ ಮೆಚ್ಚುಗೆಗೆ ಪಾತ್ರರಾದ ದೊಡ್ಡಣ್ಣ ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಚಿತ್ರದಲ್ಲಿ ಖಳನಾಯಕನಾಗಿ ಮೊದಲು ಕಾಣಿಸಿಕೊಂಡರು.  ಮುಂದೆ ಹಲವಾರು ಚಿತ್ರಗಳಲ್ಲಿ ಖಳಪಾತ್ರಧಾರಿಗಳಾಗಿದ್ದ ಅವರಿಗೆ ಒಮ್ಮೆ ಖ್ಯಾತ ನಟ ಬಾಲಣ್ಣ ಒಂದಷ್ಟು ಹಾಸ್ಯವನ್ನು ಅಭಿನಯದಲ್ಲಿ ತರಲು ಪ್ರೇರಣೆ ನೀಡಿದರು.  ಹೀಗೆ ಹಾಸ್ಯ ನಟನೆಗೆ ಕಾಲಿಟ್ಟು,  ಹಲವು ಪೋಷಕ ಪಾತ್ರಗಳನ್ನೂ ನಿರ್ವಹಿಸಿದ ದೊಡ್ಡಣ್ಣನವರು ನಟಿಸಿದ ಕನ್ನಡ ಚಲನಚಿತ್ರಗಳ ಸಂಖ್ಯೆ 500ಕ್ಕೂ ಹೆಚ್ಚಿನದು.  ಜೊತೆಗೆ ಕೆಲವು ಕಿರುತೆರೆಯ ಧಾರಾವಾಹಿಗಳು, ಎರಡು ತಮಿಳು ಮತ್ತು ಒಂದು ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ.

ಅಪಾರ ಓದು ಮತ್ತು  ಏಕಾಗ್ರ ಶ್ರದ್ಧೆಯ ಕಾಯಕಕ್ಕೆ ಹೆಸರಾದ ದೊಡ್ಡಣ್ಣ ಅವರ  ಜ್ಞಾನದ ಆಳ ಸಂಸ್ಕೃತ ಶ್ಲೋಕ, ಹಳಗನ್ನಡ ಸಾಹಿತ್ಯ, ವಚನ ಸಾಹಿತ್ಯ ಹೀಗೆ ಎಲ್ಲ ರೀತಿಯ ಸಮೃದ್ಧಿ ಪಡೆದಿದ್ದು ಅವರ ಭಾವಪೂರ್ಣತೆಯೊಂದಿಗೆ ಹೊರಹೊಮ್ಮುವ ಅವರ ಅಭಿನಯದಲ್ಲಿ ಮೂಡಿಬರುವ ಭಾಷಾ ಬಳಕೆ, ಧ್ವನಿ ಮತ್ತು ಉಚ್ಚಾರಗಳು ಶ್ರೇಷ್ಠ ಮಟ್ಟದ್ದು.   

ದೊಡ್ಡಣ್ಣ ಅವರಿಗೆ ಕನ್ನಡ ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಲಭಿಸಿವೆ. ಅವರು ಚಲನಚಿತ್ರ ಕಲಾವಿದರ ಸಂಘದ ಪದಾಧಿಕಾರಿಗಳಾಗಿ ಅನೇಕ ಮಹತ್ವದ ಕೆಲಸ ಮಾಡಿದ್ದಾರೆ.  ಜೊತೆಗೆ ತಮ್ಮ ಅರಸೀಕೆರೆಯಲ್ಲಿನ ಹೊಯ್ಸಳರ ಕಾಲದ ದೇಗುಲ, ಗಣಪತಿ ಪೆಂಡಾಲ್ (ಸಮುದಾಯ ಭವನ), ಅರಸೀಕೆರೆ ಕ್ಲಬ್ ಇವುಗಳ ಉಳಿಕೆ ಮತ್ತು ಅಭಿವೃದ್ಧಿಗೆ ಹೋರಾಟ ಮಾಡಿ ಯಶಸ್ವಿಯಾಗಿ ತಮ್ಮ ಸಮುದಾಯಕ್ಕೆ ಬೆಂಬಲವಾಗಿ ನಿಂತಿದ್ದಾರೆ.    

ಹಿರಿಯ ಕಲಾವಿದರಾದ ದೊಡ್ಡಣ್ಣನವರು ಇತ್ತೀಚೆಗೆ ಹಲವು ಬಾರಿ ಅನಾರೋಗ್ಯಕ್ಕೆ ಒಳಗಾಗಿದ್ದ ವರದಿಗಳನ್ನು ಪತ್ರಿಕೆಗಳಲ್ಲಿ ಕಂಡಿದ್ದೇವೆ.  ಅವರ ಹಿರಿತನದ ಬದುಕು ಸುಗಮವಾಗಿರಲಿ ಎಂದು ಹಾರೈಸೋಣ.  ಜೊತೆಗೆ ಅವರಿಂದ ಇನ್ನೂ ಹೆಚ್ಚು ಕಾಲ ಒಳ್ಳೆಯ ಪಾತ್ರಾಭಿನಯ ಕಾಣುವ  ಸೌಭಾಗ್ಯ ಸಹಾ  ನಮಗೆ ದೊರಕುತ್ತಿರಲಿ ಎಂದು ಶುಭ ಹಾರೈಸೋಣ.

On the birthday of our great actor Doddanna

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ