ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನರಕಚತುರ್ದಶಿ



ನರಕಚತುರ್ದಶಿ
ನರಕಚತುರ್ದಶಿಯ ಕಥೆ ಭಾಗವತದಲ್ಲಿ ಉಲ್ಲೇಖಗೊಂಡಿದೆ. ಈ ಕಥೆಯನ್ನು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಂದ ಕೇಳುವುದೇ ಒಂದು ಸೊಗಸು. ಒಮ್ಮೆ ದುಬೈನಲ್ಲಿ ಉಪನ್ಯಾಸ ನೀಡಲು ಆಗಮಿಸಿದ್ದ ಆಚಾರ್ಯರಿಂದ ಈ ವ್ಯಾಖ್ಯಾನವನ್ನು ಆಲಿಸುವ ಸೌಭಾಗ್ಯ ನನಗೆ ಲಭಿಸಿತ್ತು. ಶ್ರೀಕೃಷ್ಣಾವತಾರದ ಸಮಯದಲ್ಲಿ ಜರಾಸಂಧ ಮತ್ತು ನರಕಾಸುರರು ಅತ್ಯಧಿಕ ಸೈನ್ಯವನ್ನು ಕೂಡಿಹಾಕಿಕೊಂಡು ದಾಂಧಲೆ ನಡೆಸುತ್ತಿದ್ದ ಇಬ್ಬರು ಪುಂಡ ರಾಜರು. ಜರಾಸಂಧ ಎಲ್ಲಾ ರಾಜರನ್ನೂ ಸೋಲಿಸಿ ಅವರ ಗಂಡು ಮಕ್ಕಳನ್ನೆಲ್ಲಾ ಸೆರೆಯಾಗಿಸುತ್ತಿದ್ದನಂತೆ. ಆತ ಹೆಣ್ಣು ಮಕ್ಕಳ ತಂಟೆಗೆ ಬರುತ್ತಿರಲಿಲ್ಲ. ಆತನಿಗೆ ಹೆಣ್ಣುಮಕ್ಕಳ ತಂಟೆಗೆ ಹೋಗದ ನಿಯಮ ಪಾಲನೆ ಇತ್ತಂತೆ. ಜರಾಸಂಧ ಮಾಡದೆ ಬಿಟ್ಟಿದ್ದ ಕೆಲಸವನ್ನು ನರಕಾಸುರ ಮಾಡುತ್ತಿದ್ದ. ನರಕಾಸುರನದರೋ ಆಗಿನ ಕಾಲದ ರಾಜರ ಹೆಣ್ಣುಮಕ್ಕಳನ್ನೆಲ್ಲಾ ತಂದು ತನ್ನ ಸೆರೆಯಾಗಿಸಿ ಕೊಂಡಿದ್ದ. ಬ್ರಿಟಿಷರು ಕೂಡಾ ತಮ್ಮ ಆಡಳಿತಾವಧಿಯಲ್ಲಿ ರಾಜರ ಮಕ್ಕಳನ್ನೆಲ್ಲಾ ಸೆರೆಹಿಡಿದು ಆ ರಾಜ್ಯಗಳಿಗೆ ವಾರಸುದಾರರೇ ಇಲ್ಲದಂತೆ ಮಾಡಿ, ಆ ರಾಜ್ಯಗಳನ್ನು ತಮ್ಮ ಆಡಳಿತಕ್ಕೆ ತೆಗೆದುಕೊಳ್ಳುತ್ತಿದ್ದುದನ್ನು, ಪುರಾಣ ಕಾಲದಲ್ಲೇ ಜರಾಸಂಧ ಮತ್ತು ನರಕಾಸುರರು ಯಶಸ್ವಿಯಾಗಿ ಜಾರಿಗೆ ತಂದಿದ್ದರು. ಹೀಗೆ ಜರಾಸಂಧ ಮತ್ತು ನರಕಾಸುರರು ಅಂದಿನ ಎಲ್ಲಾ ರಾಜ್ಯಗಳನ್ನು ತಮ್ಮ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿದ್ದರು. ನರಕಾಸುರ ಈಗಿನ ಅಸ್ಸಾಂ ಪ್ರಾಂತ್ಯಕ್ಕೆ ಸೇರಿದ ಪ್ರಾಗ್ಜ್ಯೋತಿಷ್ಪುರದ ರಾಜನಾಗಿದ್ದ. ಆತ ಕೂಡಿಹಾಕಿದ್ದ ರಾಜಕುಮಾರಿಯರ ಸಂಖ್ಯೆ ಹದಿನಾರು ಸಾವಿರಕ್ಕೂ ಹೆಚ್ಚು. ಭೂಲೋಕವಲ್ಲದೆ ಸ್ವರ್ಗಲೋಕಕ್ಕೂ ಲಗ್ಗೆ ಇಟ್ಟು ಅಲ್ಲಿನ ದೇವತೆಗಳಿಗೂ ಕಿರುಕುಳ ಕೊಟ್ಟು, ವೇದಮಾತೆಯಾದ ಅದಿತಿದೇವಿಯ ಆಭರಣಗಳನ್ನೂ ಲೂಟಿ ಮಾಡಿಕೊಂಡು ಬಂದಿದ್ದನಂತೆ. ಎಲ್ಲಾ ದೇವತೆಗಳ ಪ್ರಾರ್ಥನೆ ಮತ್ತು ಅದಿತಿ ದೇವಿಯ ಶ್ರೇಯಾಕಾಂಕ್ಷಿಯಾಗಿದ್ದ ತನ್ನ ಪತ್ನಿ ಸತ್ಯಭಾಮೆಯ ಒತ್ತಾಸೆಯ ಮೇರೆಗೆ ಶ್ರೀಕೃಷ್ಣ ಸತ್ಯಭಾಮೆಯೊಡನೆ ಪ್ರಾಗ್ಜ್ಯೋತಿಷ್ಪುರದ ಮೇಲೆ ದಾಳಿ ನಡೆಸಿ ಸುದರ್ಶನ ಚಕ್ರದಿಂದ ನರಕಾಸುರನನ್ನು ಕೊಂದುಹಾಕಿದ. ಸಾಯುವ ಸಮಯದಲ್ಲಿ ತಾನು ಶ್ರೀಮನ್ನಾರಾಯಣ ಅವತಾರಿಯಾದ ಶ್ರೀಕೃಷ್ಣನಿಂದ ಮೋಕ್ಷ ಪಡೆಯುತ್ತಿರುವುದನ್ನು ಅರಿತ ನರಕಾಸುರ, ತನ್ನ ಪತನವನ್ನು ಲೋಕದ ಜನರು ಬಾಣ ಬಿರುಸುಗಳನ್ನು ಹರ್ಷದ ಮೂಲಕ ಆಚರಿಸುವ ವರಪ್ರಸಾದವನ್ನು ಬೇಡಿದನಂತೆ. ಅದರಂತೆ ನರಕಚತುರ್ದಶಿಯನ್ನು ಎಲ್ಲೆಡೆ ಬಾಣ ಬಿರುಸುಗಳ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಇದಕ್ಕೆ ಹೊಂದಿಕೊಂಡ ಕಥೆ ಶ್ರೀಕೃಷ್ಣ ಹದಿನಾರು ಸಾವಿರ ನಾರಿಯರನ್ನು ವರಿಸಿದ್ದ ಬಗ್ಗೆ. ಈ ಕುರಿತು ಲೋಕದಲ್ಲಿ ಅಪಕ್ವ ಕಲ್ಪನೆಯೇ ಹೆಚ್ಚಾಗಿದೆ. ಈ ಕುರಿತು ಬನ್ನಂಜೆ ಅವರ ವರ್ಣನೆ ಅತ್ಯಂತ ಸುಂದರವಾದದ್ದು ಮತ್ತು ಸಮಂಜಸವಾದದ್ದು. ನರಕಾಸುರನ ಜೀವನ ಅಂತ್ಯಗೊಂಡಾಗ ಶ್ರೀಕೃಷ್ಣ ರಾಜ್ಯದ ಅಧಿಕಾರವನ್ನು ನರಕಾಸುರನ ಮಗನಾದ ಭಗದತ್ತನಿಗೆ ವಹಿಸಿಕೊಟ್ಟು, ನರಕಾಸುರನ ಸೆರೆಮನೆಯಲ್ಲಿದ್ದ ಸ್ತ್ರೀಯರನ್ನೆಲ್ಲಾ ಬಿಡುಗಡೆ ಮಾಡುವಂತೆ ಆದೇಶಿಸಿದ. ಆ ಸ್ತ್ರೀಯರೆಲ್ಲಾ ಶ್ರೀಕೃಷ್ಣನ ದರ್ಶನಕ್ಕೆ ಬಂದು, ಪರಮಾತ್ಮ ನೀವು ನಮ್ಮನ್ನು ಬಿಡುಗಡೆಗೊಳಿಸಿದ್ದಕ್ಕೆ ವಂದನೆಗಳು ಆದರೆ, ನಮ್ಮನ್ನು ಈ ಸೆರೆಮನೆಯಲ್ಲೇ ಇರಲಿಕ್ಕೆ ಬಿಟ್ಟುಬಿಡು ಎಂದು ಬೇಡಿದರು. ಆಶ್ಚರ್ಯಚಕಿತನಾದ ಶ್ರೀಕೃಷ್ಣ ಕಾರಣ ಕೇಳಿದನಂತೆ. ಆ ಸ್ತ್ರೀಯರು ಇಂತು ನುಡಿದರು: “ಪರಮಾತ್ಮ, ಸೆರೆಯಲ್ಲಿದ್ದು ಬಂದ ನಮ್ಮನ್ನು ಈ ಸಮಾಜವಿರಲಿ, ನಮ್ಮ ಒಡಹುಟ್ಟಿದವರು ಮತ್ತು ಹೆತ್ತವರು ಕೂಡಾ ಶಂಕೆಯಿಂದ ನೋಡುತ್ತಾರೆ ಎಂಬುದು ನಿನಗೆ ತಿಳಿಯದ ವಿಚಾರವೇನಲ್ಲ. ಇಂತಹ ಕುಹಕ, ವಕ್ರದೃಷ್ಟಿಯ ಸಮಾಜದಲ್ಲಿ ಬದುಕುವುದಕ್ಕಿಂತ ನಮಗೆ ಸೆರೆಮನೆಯೇ ಲೇಸು ಎಂದುಕೊಂಡು ಬದುಕುತ್ತೇವೆ” ಎಂದು ಕಣ್ಣೀರು ಹಾಕಿದರು. ದಯಾಳುವಾದ ಶ್ರೀಕೃಷ್ಣ ಪರಮಾತ್ಮ ಆಶ್ವಾಸನೆಯಿತ್ತನು. “ನೀವು ಸೆರೆಯಾಳುಗಳಾಗಿ ಬದುಕುವುದು ಬೇಡ. ಶ್ರೀಕೃಷ್ಣನ ರಾಣಿಯರ ಹಾಗೆ ಬದುಕಿ” ಎಂದು. ಹೀಗೆ ಶ್ರೀಕೃಷ್ಣ ಪರಮಾತ್ಮ ಈ ಹದಿನಾರು ಸಾವಿರಕ್ಕೂ ಹೆಚ್ಚು ಸ್ತ್ರೀಯರಿಗೆ ಉತ್ತಮ ಬದುಕು ನೀಡಿ ಗೌರವದಿಂದ ಬಾಳು ನಡೆಸುವಂತೆ ನೋಡಿಕೊಂಡ. ಹೀಗಾಗಿ ಶ್ರೀಕೃಷ್ಣನಿಗೆ ಅಷ್ಟಮಹಿಶಿಯರೇ ಅಲ್ಲದೆ ಈ 16,100 ಮಂದಿ ರಾಜಕುಮಾರಿಯರೂ ಮಡದಿಯರಾದರು.

Story of Naraka Chaturdashi
 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ