ಪದ್ಮಪ್ರಿಯ
ಪದ್ಮಪ್ರಿಯ
ಪದ್ಮಪ್ರಿಯ ಕನ್ನಡ ಚಲನಚಿತ್ರಗಳಲ್ಲಿ ಮಿಂಚಿದ್ದ ಸುಂದರ ನಟಿ. ಕೇವಲ 36 ವರ್ಷ ಬಾಳಿದ ಪದ್ಮಪ್ರಿಯ ಹೇಮಮಾಲಿನಿಯಂತೆ ಅಂದ ಚಂದ ಉಳ್ಳಾಕೆ ಎಂದು ಪ್ರಸಿದ್ಧಿ ಪಡೆದಿದ್ದರು.
ಪದ್ಮಪ್ರಿಯ 1961ರ ಆಗಸ್ಟ್ 12ರಂದು ಜನಿಸಿದರು. ಇವರ ತಾತ ಟಿ.ನರಸೀಪುರದ ಹುಂಡಿ ಸಾಹುಕಾರ್ ಕೃಷ್ಣಮಾಚಾರ್ಯರು. ಅವರ ಕುಟುಂಬದ ವಂಶಸ್ಥರು ಸೋಮನಾಥಪುರದ ಬಳಿಯ ಶ್ರೀರಂಗರಾಜಪುರಕ್ಕೆ ಸೇರಿದವರಾಗಿದ್ದರು.
ಪದ್ಮಪ್ರಿಯ 1974ರಲ್ಲು 'ಅಡಪಿಲ್ಲಲ ತಂಡ್ರಿ' ಎಂಬ ತೆಲುಗು ಚಿತ್ರದಲ್ಲಿ ನಟಿಸಿದರು. 1976ರಲ್ಲಿ ಅವರು ವಿಷ್ಣುವರ್ಧನ್, ಮಂಜುಳಾ ಅಭಿನಯದ 'ಬಂಗಾರದ ಗುಡಿ' ಚಿತ್ರದಲ್ಲಿ ನಟಿಸಿದ್ದರು. ಮುಂದೆ ಅವರು ರಾಜ್ಕುಮಾರ್ ಜೊತೆಯಲ್ಲಿ ಆಪರೇಷನ್ ಡೈಮಂಡ್ ರಾಕೆಟ್, ತಾಯಿಗೆ ತಕ್ಕ ಮಗ, ಶಂಕರ್ ಗುರು ಚಿತ್ರಗಳಲ್ಲಿ; ಅನಂತ ನಾಗ್ ಅವರೊಂದಿಗೆ ಬಾಡದ ಹೂ, ನಾರದ ವಿಜಯ; ವಿಷ್ಣುವರ್ಧನ್ ಅವರೊಂದಿಗೆ ಮಧುರ ಸಂಗಮ, ಅಸಾಧ್ಯ ಅಳಿಯ, ರಹಸ್ಯ ರಾತ್ರಿ, ನನ್ನ ರೋಷ ನೂರು ವರುಷ, ಕಲ್ಲು ವೀಣೆ ನುಡಿಯಿತು, ಊರಿಗೆ ಉಪಕಾರಿ; ಶ್ರೀನಾಥ್ ಅವರೊಂದಿಗೆ ಪ್ರೀತಿ ಮಾಡು ತಮಾಷೆ ನೋಡು, ಮಂಕುತಿಮ್ಮ; ಲೋಕೇಶ್ ಜೊತೆಯಲ್ಲಿ ಪಟ್ಟಣಕ್ಕೆ ಬಂದ ಪತ್ನಿಯರು ಮುಂತಾದ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು.
ತಮಿಳಿನಲ್ಲೂ ಶಿವಾಜಿ ಗಣೇಶನ್ ಅವರೊಂದಿಗೆ ವೈರ ನೆಂಜಂ, ಮೋಹನ ಪುನ್ನಗೈ ಮತ್ತು ಎಂ. ಜಿ. ರಾಮಚಂದ್ರನ್ ಅವರೊಂದಿಗೆ ರಾಣಿಯಾಗಿ ಮಧುರೈ ಮೀಟ್ಟ ಸುಂದರ ಪಾಂಡಿಯನ್ ಚಿತ್ರಗಳಲ್ಲದೆ, ವಾಳನ್ದು ಕಾಟ್ಟುಗಿರೇನ್, ಕುಪ್ಪತ್ತು ರೋಜಾ, ಆಯಿರಮ್ ಜನ್ಮಂಗಳ್, ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದರು.
ಕೆಲವು ತೆಲುಗು ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದ ಪದ್ಮಪ್ರಿಯ ಸುಮಾರು 80 ಚಿತ್ರಗಳಲ್ಲಿ ನಟಿಸಿದ್ದರು.
1983ರಲ್ಲಿ ಶ್ರೀನಿವಾಸನ್ ಎಂಬುವರನ್ನು ವಿವಾಹವಾದ ಪದ್ಮಪ್ರಿಯ ಅವರಿಗೆ ವಸುಮತಿ ಎಂಬ ಪುತ್ರಿ ಜನಿಸಿದರು. ಆದರೆ ಈ ವಿವಾಹ ಒಂದೇ ವರ್ಷದಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು.
ಪದ್ಮಪ್ರಿಯ ಅವರು ಇನ್ನೂ 36ರ ಹರೆಯದಲ್ಲಿ 1997ರ ನವೆಂಬರ್ 16ರಂದು ಅನಾರೋಗ್ಯದಿಂದ ನಿಧನರಾದರು. ಹಲವಾರು ಚಿತ್ರಗಳಲ್ಲಿನ ಸೌಂದರ್ಯಯುತ ಕಲಾಭಿವ್ಯಕ್ತಿಯಿಂದ ಅವರು ನೆನಪಲ್ಲಿ ಉಳಿದಂತವರಾಗಿದ್ದಾರೆ.
ಕಾಮೆಂಟ್ಗಳು