ಪಾತಾಳ ವೆಂಕಟರಮಣ ಭಟ್
ಸ್ತ್ರೀ ಪಾತ್ರಗಳಿಗೆ ಹೊಸ ಸ್ವರೂಪ ನೀಡಿದ ಪಾತಾಳ ವೆಂಕಟರಮಣ ಭಟ್ ಇನ್ನಿಲ್ಲ🌷🙏🌷
Respects to departed soul Great Yakshagana Artiste Paatala Venkataramana Bhat 🌷🙏🌷
ತೆಂಕು - ಬಡಗು ತಿಟ್ಟಿನ ಸುಪ್ರಸಿದ್ಧ ಸ್ತ್ರೀ ಪಾತ್ರಧಾರಿಯಾಗಿದ್ದ ಪಾತಾಳ ವೆಂಕಟ್ರಮಣ ಭಟ್ ರವರು 19.07.2025ರಂದು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು . ಸುಮಾರು ಮೂರು ದಶಕಗಳ ಕಾಲ ಯಕ್ಷರಂಗದಲ್ಲಿ ಅಪ್ರತಿಮ ಸ್ತ್ರೀ ಪಾತ್ರಧಾರಿಯಾಗಿ ಅಪಾರ ಪ್ರೇಕ್ಷಕರನ್ನು ರಂಜಿಸಿದ್ದ ಪಾತಾಳರು ಯಕ್ಷಗಾನದ ಸ್ತ್ರೀ ಪಾತ್ರಕ್ಕೆ ಘನತೆ ಮತ್ತು ನವೀನ ಸ್ಪರ್ಶ ನೀಡಿದ ಮಹಾನ್ ಕಲಾವಿದರು . ದೈವ ಭಕ್ತರಾಗಿದ್ದ ಪಾತಾಳರು ದಿನಂಪ್ರತಿ ಎರಡು ಬಾರಿ ಸ್ನಾನ, ಧ್ಯಾನ, ಒಂದು ಸಾವಿರ ಗಾಯತ್ರಿ ಮಂತ್ರ ಜಪಿಸುತ್ತಿದ್ದು, ನಿನ್ನೆಯೂ ಒಂದು ಬಾರಿ ಸ್ನಾನ ಹಾಗೂ ಗಾಯತ್ರಿ ಮಂತ್ರ ಜಪಿಸಿದ ನಂತರ ಬೆಳಗ್ಗಿನ ಉಪಾಹಾರ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು ಎನ್ನಲಾಗಿದೆ.
ಪಾತಾಳ ವೆಂಕಟರಮಣ ಭಟ್ಟರು 1933ರ ನವೆಂಬರ್ 16ರಂದು ಪುತ್ತೂರು ಸಮೀಪದ ಬೈಪದವು ಎಂಬಲ್ಲಿ ರಾಮ ಭಟ್ಟ - ಹೇಮಾವತಿ ದಂಪತಿಯ ಏಕಮಾತ್ರ ಸುಪುತ್ರರಾಗಿ ಜನಿಸಿದರು. ನಂತರದಲ್ಲಿ ರಾಮಭಟ್ಟರು, ಬೆಳ್ತಂಗಡಿ ಸಮೀಪದ ಉಳಿಯ ಎಂಬಲ್ಲಿ ನೆಲೆಸಿದರು. ಪಾತಾಳರು ಬೊಳ್ಳಾವಿನಲ್ಲೇ ತಮ್ಮ ದೊಡ್ಡಮ್ಮನ ಮನೆಯಲ್ಲಿ ಬೆಳೆದರು . ಉಪ್ಪಿನಂಗಡಿಯಲ್ಲಿ 8 ನೇ ತರಗತಿ ತನಕ ವಿದ್ಯಾಭ್ಯಾಸ ಪೂರೈಸಿದರು. ಈ ಸಂದರ್ಭದಲ್ಲಿ ತಮ್ಮ ತಂದೆಯವರನ್ನು ಕಳೆದುಕೊಳ್ಳಬೇಕಾಯಿತು. ಆಗ ತಾಯಿಯಾದ ಹೇಮಾವತಿ ಅಮ್ಮನವರು ಉಳಿಯದ ಜಾಗವನ್ನು ಮಾರಿ, ತಮ್ಮ ಸಾಲಗಳನ್ನೆಲ್ಲಾ ತೀರಿಸಿ , ಜೀವನೋಪಾಯಕ್ಕಾಗಿ ಏನು ಮಾಡುವುದು ಎಂಬ ತುಮುಲದಲ್ಲಿದ್ದಾಗ, ಆಗಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಮಂಜಯ್ಯ ಹೆಗ್ಗಡೆಯವರು ಉಪ್ಪಿನಂಗಡಿ ಸಮೀಪದ ಪಾತಾಳ ಎಂಬ ಊರಿನಲ್ಲಿ ಗೇಣಿಗೆ ಜಾಗ ನೀಡಿದರು. ಹೀಗೆ ಬೈಪದವು ವೆಂಕಟರಮಣ ಭಟ್ಟರಾಗಬೇಕಾದ ವೆಂಕಟರಮಣರು ಖಾವಂದರ ಕೃಪೆಯಿಂದಾಗಿ ಪಾತಾಳ ವೆಂಕಟರಮಣ ಭಟ್ ಆಗಿ ಪ್ರಸಿದ್ಧರಾದರು. ರಾಮಭಟ್ಟರು ಆ ಕಾಲದಲ್ಲಿ ಹವ್ಯಾಸಿ ಯಕ್ಷಗಾನ ಅರ್ಥಧಾರಿಗಳಾಗಿದ್ದರಲ್ಲದೆ, ಹೇಮಾವತಿ ಅಮ್ಮನವರು ಯಕ್ಷಗಾನದ ಅಪ್ರತಿಮ ಅಭಿಮಾನಿಯಾಗಿದ್ದರು. ಹೀಗಾಗಿ ಕಲೆಯು ರಕ್ತಗತವಾಗಿ ಬಂದಿದ್ದ ವೆಂಕಟರಮಣ ಭಟ್ಟರು, ತಮ್ಮ ದೊಡ್ಡಮ್ಮನ ಮಗಳ ಗಂಡನಾದ, ಅಂದಿನ ಕಾಲದ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದ ಮಾಣಂಗಾಯಿ ಕೃಷ್ಣ ಭಟ್ಟರಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಯನ್ನು ಕಲಿತರು. ಕೃಷ್ಣ ಭಟ್ಟರ ಆಣತಿಯಂತೆ ಕಾಂಚನ ಸುಬ್ರಹ್ಮಣ್ಯ ಅಯ್ಯರ್ ಅವರಲ್ಲಿ ಸಂಗೀತ ಅಭ್ಯಾಸ ಮಾಡಿದರು. 1952 ರಲ್ಲಿ ಅಯ್ಯರ್ ಅವರು ಮಾಣಂಗಾಯಿ ಕೃಷ್ಣ ಭಟ್ಟರ ನೇತೃತ್ವದಲ್ಲಿ "ಲಕ್ಷ್ಮೀನಾರಾಯಣ ಯಕ್ಷಗಾನ ನಾಟಕ ಸಭಾ" ಎಂಬ ಮೇಳ ಹೊರಡಿಸಿದಾಗ, ಪಾತಾಳರು, ಅಡುಗೆ ಭಟರಾಗಿ ಕಾಂಚನ ಮೇಳ ಸೇರಿದರು. ಒಮ್ಮೆ ಪುಣಚದಲ್ಲಿ
"ವಿಶ್ವಾಮಿತ್ರ ಮೇನಕೆ " ಯಕ್ಷಗಾನ ಪ್ರದರ್ಶನ. ಆದರೆ, ಮುಖ್ಯ ಸ್ತ್ರೀ ಪಾತ್ರಧಾರಿಗಳಾಗಿದ್ದ ಇಬ್ಬರೂ ಅವರವರೇ ಏನೋ ಜಗಳ ಮಾಡಿ ಪ್ರದರ್ಶನಕ್ಕೆ ಗೈರಾದರು. ಆಗ ಕಾಂಚನ ಮೇಳದಲ್ಲಿ , ವಿಶ್ವಾಮಿತ್ರನ ಪಾತ್ರಕ್ಕೆ ಆಗಿನ ಕಾಲದ ಸುಪ್ರಸಿದ್ಧ ಕಲಾವಿದರಾಗಿದ್ದ ಮರವಂತೆ ವಿಶ್ವೇಶ್ವರಯ್ಯರಿದ್ದರು. ಮರವಂತೆಯವರು, ಪಾತಾಳರ ಸ್ಫರದ್ರೂಪವನ್ನು ಕಂಡು, ಈ ಮಾಣಿಯಿಂದ ಮೇನಕೆ ಮಾಡಿಸುವಾ ಎಂದು ಕೃಷ್ಣ ಭಟ್ಟರಲ್ಲಿ ತಿಳಿಸಿದಾಗ, ಕೃಷ್ಣ ಭಟ್ಟರು, ಪಾತಾಳದವರನ್ನು ಒಪ್ಪಿಸಿದರು. ಪಾತಾಳರಿಗೂ ತುಂಬಾ ಸಂತೋಷವಾಯಿತು. ಹೀಗೆ ಅಡುಗೆ ಭಟರಾಗಿದ್ದ ಪಾತಾಳರು ಸ್ತ್ರೀ ಪಾತ್ರಧಾರಿಯಾಗಿ ಗುರುತಿಸಿಕೊಂಡು ಮೆರೆದರು. ನಂತರದಲ್ಲಿ ಮೇನಕೆಯ ಪಾತ್ರವು ಪಾತಾಳರಿಗೆ ಅಪಾರ ಪ್ರಸಿದ್ಧಿ ತಂದಿತು. ಉ.ಕ.ಜಿಲ್ಲೆಯ ಭಾಗಗಳಲ್ಲಿ ಅವರನ್ನು ಈಗಲೂ ಪಾತಾಳದ ನಾಗಕನ್ಯೆ ಮೇನಕೆ ಎಂದೇ ಕರೆಯುತ್ತಿದ್ದರು. ಮರವಂತೆಯವರ ವಿಶ್ವಾಮಿತ್ರ, ಪಾತಾಳರ ಮೇನಕೆ, ಈಶ್ವರ - ದಾಕ್ಷಾಯಿಣಿ ಪಾತ್ರಗಳು ತುಂಬಾ ಪ್ರಸಿದ್ದಿ ಗಳಿಸಿತ್ತು. 1955 ರಲ್ಲಿ ಬಡಗು ತಿಟ್ಟಿನ ಸೌಕೂರು ಮೇಳವನ್ನು ಸೇರಿದರು. ಸೌಕೂರು ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿದ್ದ ಉಳ್ತೂರು ಸೀತಾರಾಮರವರಲ್ಲಿ ಬಡಗಿನ ನಾಟ್ಯದ ಹೆಜ್ಜೆಗಳನ್ನು ಕಲಿತರು. ನಂತರ ತೆಂಕಿನ ಮೂಲ್ಕಿ ಮೇಳಕ್ಕೆ ಸೇರ್ಪಡೆಗೊಂಡರು. ಆಗ ಮೂಲ್ಕಿ ಮೇಳದ ಸಂಚಾಲಕರಾಗಿದ್ದವರು ಸುಪ್ರಸಿದ್ಧ ಹಾಸ್ಯ ಕಲಾವಿದರಾಗಿದ್ದ ಪೆರುವೋಡಿ ನಾರಾಯಣ ಭಟ್ಟರು ಹಾಗೂ ಅವರ ಅಣ್ಣ ಪೆರುವೊಡಿ ಕೃಷ್ಣ ಭಟ್ಟರು. ಪೆರುವೊಡಿ ನಾರಾಯಣ ಭಟ್ಟರು ಹಾಗೂ ಕಡಾರು ನಾರಾಯಣ ಭಟ್ಟರು, ಪಾತಾಳರಿಗೆ ತೆಂಕಿನ ನಾಟ್ಯಗಳ ಹೆಚ್ಚಿನ ಹೆಜ್ಜೆಗಳನ್ನು ಕಲಿಸಿದರು. ಪೆರುವೊಡಿ - ಪಾತಾಳರ ಪಾಪಣ್ಣ - ಗುಣಸುಂದರಿ ಪಾತ್ರವು ತುಂಬಾ ಪ್ರಸಿದ್ಧಿ ಗಳಿಸಿತ್ತು. ನಂತರದಲ್ಲಿ ಮಾಸ್ಟರ್ ವಿಠಲ್ ರವರಲ್ಲಿ ಭರತ ನಾಟ್ಯವನ್ನೂ ಕಲಿತರು. 1960 ರಲ್ಲಿ ಕಸ್ತೂರಿ ಪೈ ಸೋದರರ ಸಂಚಾಲಕತ್ವದ ಸುರತ್ಕಲ್ ಮೇಳ ಸೇರಿದರು. ಈ ಮೇಳದಲ್ಲಿ ಅಗರಿ ಶ್ರೀನಿವಾಸ ಭಾಗವತರು, ಅಗರಿ ರಘರಾಮ ಭಾಗವತರು, ಮಲ್ಪೆ ಶಂಕರನಾರಾಯಣ ಸಾಮಗ , ಶೇಣಿ ಗೋಪಾಲಕೃಷ್ಣ ಭಟ್ , ತೆಕ್ಕಟ್ಟೆ ಆನಂದ ಮಾಸ್ತರ್ , ಬಾಬು ಕುಡ್ತಡ್ಕ, ಶಿವರಾಮ ಜೋಗಿ, ವೇಣೂರು ಸುಂದರ ಆಚಾರ್ಯ, ಕೊಕ್ಕಡ ಈಶ್ವರ ಭಟ್ ಮುಂತಾದ ಕಲಾವಿದರ ಒಡನಾಟದಲ್ಲಿ ತುಳು - ಕನ್ನಡ ಪ್ರಸಂಗಗಳಲ್ಲಿ ಪಾತಾಳರು ಪಳಗಿದರು. " ಬಪ್ಪನಾಡು ಕ್ಷೇತ್ರ ಮಹಾತ್ಮೆ" ಪ್ರಸಂಗದ ಶ್ರೀದೇವಿಯ ಪಾತ್ರವು ಪಾತಾಳರಿಗೆ ತುಂಬಾ ಪ್ರಸಿದ್ಧಿ ತಂದಿತು. 1963ರಲ್ಲಿ ಗಜ ಮೇಳ ಎನಿಸಿದ ಧರ್ಮಸ್ಥಳ ಮೇಳದ ನೇತೃತ್ವ ವಹಿಸಿದ್ದ ಕುರಿಯ ವಿಠಲ ಶಾಸ್ತ್ರಿಗಳು ಅನಾರೋಗ್ಯ ಪೀಡಿತರಾದಾಗ, ಅಂದಿನ ಧರ್ಮಾಧಿಕಾರಿಗಳಾದ ರತ್ನವರ್ಮ ಹೆಗ್ಗಡೆಯವರು ಶ್ರೀ ಕ್ಷೇತ್ರದ ವತಿಯಿಂದಲೇ ಮೇಳ ಹೊರಡಿಸಲು ನಿರ್ಧರಿಸಿ ಪಾತಾಳರನ್ನು ಧರ್ಮಸ್ಥಳ ಮೇಳಕ್ಕೆ ಕರೆದಾಗ ಧರ್ಮಸ್ಥಳ ಮೇಳ ಸೇರಿದರು. ಧರ್ಮಸ್ಥಳ ಮೇಳದ ತಿರುಗಾಟವು ಪಾತಾಳ ವೆಂಕಟರಮಣ ಭಟ್ಟರ ಪ್ರತಿಭೆಯನ್ನು ಒರೆಗಲ್ಲಿಗೆ ಹಚ್ಚುವ ವೇದಿಕೆಯಾಯಿತು. ತಮ್ಮ ಅದ್ಭುತ ಪ್ರತಿಭೆಯಿಂದ ಪಾತಾಳರು ಮಿಂಚಿದರು. ಕಡತೋಕ, ಚಿಪ್ಪಾರು, ಕುಂಬ್ಳೆ ಸುಂದರ ರಾವ್, ಗೋವಿಂದ ಭಟ್, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ, ಚಂದ್ರಗಿರಿ ಅಂಬು, ವಿಟ್ಲ ಜೋಷಿ, ಶ್ರೀಧರ ಭಂಡಾರಿ, ಕುಂಬ್ಳೆ ಶ್ರೀಧರ್ ರಾವ್ ಮುಂತಾದ ದಿಗ್ಗಜರೊಂದಿನ ತಿರುಗಾಟವು ಪಾತಾಳರನ್ನು ಪ್ರಸಿದ್ಧಿಯ ತುತ್ತ ತುದಿಗೆ ಏರಿಸಿತು. ಉತ್ತಮ ನಿರ್ದೇಶಕ ಹಾಗೂ ಭಾಗವತರಾದ ಕಡತೋಕರು ಪಾತಾಳರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತಮ ಅವಕಾಶ ನೀಡಿ ಪಾತ್ರ ವಿಜೃಂಭಿಸಲು ಕಾರಣರಾದರು. ದಮಯಂತಿ, ಅಂಬೆ, ದ್ರೌಪದಿ, ಅಮ್ಮು ಬಲ್ಲಾಳ್ತಿ, ರಂಬೆ, ಊರ್ವಶೀ , ಕೈಕೇಯಿ, ಗುಣಸುಂದರಿ, ಚಂದ್ರಮತಿ, ಪ್ರಮೀಳೆ, ಮಂಡೋದರಿ, ಸೀತೆ, ಮೇನಕೆ, ದಾಕ್ಷಾಯಿಣಿ, ತಾರೆ, ಕಯಾದು, ಮೀನಾಕ್ಷಿ, ಮಾಯಾ ಪೂತನೀ, ಮಾಯಾ ಶೂರ್ಪನಖೀ ಮುಂತಾದ ಪಾತ್ರಗಳಲ್ಲಿ ಪಾತಾಳರು ತಮ್ಮದೇ ಛಾಪನ್ನು ಮೂಡಿಸುವಲ್ಲಿ ಸಫಲರಾದರು. ಉತ್ತಮ ನಾಟ್ಯ, ಆಕರ್ಷಕ ರೂಪ, ತಮ್ಮದೇ ಕಲ್ಪನೆಯ ಆಹಾರ್ಯ ಹಾಗೂ ಪ್ರಬುದ್ಧ ಮಾತುಗಾರಿಕೆ ಪಾತಾಳರ ಪಾತ್ರಗಳು ಎತ್ತರಕ್ಕೆ ಏರಲು ಕಾರಣವಾಯಿತು. ಶ್ರೀರಾಮ, ಶ್ರೀಕೃಷ್ಣ, ಧರ್ಮರಾಯ, ಅಕ್ರೂರ, ವಿಷ್ಣು ಮುಂತಾದ ಪುರುಷ ವೇಷಗಳಲ್ಲೂ ಪಾತಾಳರು ಸಿದ್ಧಿಯನ್ನು ಹೊಂದಿದ್ದರು.
ಪಾತಾಳರು ಸ್ತ್ರೀ ಪಾತ್ರದ ಆಹಾರ್ಯ, ತೊಡುವ ಆಭರಣಗಳ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದರು. ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸ್ತ್ರೀ ಪಾತ್ರಗಳ ವೇಷಭೂಷಣಗಳಿಗೆ ನಾವೀನ್ಯತೆಯನ್ನು ತಂದರು. ಆಗಿನ ಕಾಲದಲ್ಲಿ ಸ್ತ್ರೀ ಪಾತ್ರಗಳಿಗೆ ಸಾಮಾನ್ಯ ಸೀರೆ, ಮೂರ್ನಾಲ್ಕು ಮಣಿಹಾರ, ತಲೆಗೆ ಹೂದಂಡೆ, ಕೈಬಳೆ ಹಾಗೂ ಪುಂಡುವೇಷಗಳಿಗೆ ತೊಡುವ ಮೈ ಕಟ್ಟು, ರಾಣಿಯ ಪಾತ್ರವಾದರೆ ತುರಾಯಿ - ಇಷ್ಟೇ ಧರಿಸುವ ಕ್ರಮವಿತ್ತು. ಇದಕ್ಕೆ ಹೊಸ ಕ್ರಾಂತಿ ತಂದದ್ದೇ ಪಾತಾಳರು. ಇವರು ಮೂಲ್ಕಿ ಮೇಳದಲ್ಲಿ ಇದ್ದಾಗ , ಜಿ.ಎಸ್.ಬಿ.ಸಮಾಜದ ಯಕ್ಷಗಾನ ಅಭಿಮಾನಿಯೊಬ್ಬರು ಪಾತಾಳರಿಗೆ ಜಿ.ಎಸ್.ಬಿ. ಸಮಾಜದ ಮಹಿಳೆಯರು ಸಾಂಪ್ರದಾಯಿಕವಾಗಿ ತೊಡುವ ಹದಿನೆಂಟು ಮೊಳದ ಸೀರೆಯನ್ನು ಬಹುಮಾನವಾಗಿ ನೀಡಿದ್ದರು. ಪಾತಾಳರು ಆ ಹದಿನೆಂಟು ಮೊಳದ ಸೀರೆಯಲ್ಲಿ ಯಕ್ಷಗಾನದಲ್ಲೇ ಪ್ರಥಮವಾಗಿ ಕಚ್ಚೆ ಹಾಕಿಯೇ ಸ್ತ್ರೀ ಪಾತ್ರ ಮಾಡಲಾರಂಭಿಸಿದರು. ಯಕ್ಷಗಾನದ ಸ್ತ್ರೀ ಪಾತ್ರಗಳಿಗೆ ಒಂದು ಹೊಸ ರೂಪ ಕೊಡಲು ಪಾತಾಳರಿಗೆ ಈ ಘಟನೆ ಪ್ರೇರಣೆಯಾಯಿತು. ಖ್ಯಾತ ಕವಿಗಳಾದ
ಡಿ.ವಿ.ಜಿ.ಯವರು ಬೇಲೂರಿನ 80 ಶಿಲಾಬಾಲಿಕೆಯ ಕುರಿತಾಗಿ ಬರೆದಿರುವ
"ಅಂತಃಪುರ ಗೀತೆಗಳು" ಕೃತಿಯು ಪಾತಾಳರ ಮೇಲೆ ಅಪಾರ ಪ್ರಭಾವ ಬೀರಿತ್ತು. ಹತ್ತಾರು ಬಾರಿ ಆ ಕೃತಿಯನ್ನು ಓದಿದ ಪಾತಾಳರು, ಆ ಅದ್ಭುತ ಶಿಲಾಬಾಲಿಕೆಯರ ಶಿಲ್ಪಗಳ ಮೂರ್ತಸ್ವರೂಪವನ್ನು ಯಕ್ಷಗಾನದ ಸ್ತ್ರೀ ಪಾತ್ರಗಳಲ್ಲಿ ತರಲು ಯೋಚಿಸಿದರು. ಅದಕ್ಕಾಗಿಯೇ ಶಿಲಾಬಾಲಿಕೆಗಳ ಬಗ್ಗೆ ಅಧ್ಯಯನ ನಡೆಸಲು ಬೇಲೂರಿಗೆ ಹೋದರು. ಬೇಲೂರಿನಲ್ಲಿ ನೆಲೆಸಿದ್ದ ಕಾರ್ಕಳ ಮೇಳದ ಮದ್ದಲೆ ವಾದಕರಾಗಿದ್ದ ಲಕ್ಷ್ಮಣ ಆಚಾರ್ ಅವರನ್ನು ವೇಣೂರು ವೆಂಕಟರಮಣ ಭಟ್ಟರ ಮೂಲಕ ಸಂಪರ್ಕಿಸಿ ಬೇಲೂರಿನಲ್ಲಿ ಕೆಲಕಾಲ ವಾಸ್ತವ್ಯ ಹೂಡಿದರು. ಬೇಲೂರಿನ ಶಿಲಾಬಾಲಿಕೆಗಳನ್ನು ಚೆನ್ನಾಗಿ ಪರಿಶೀಲಿಸಿದರು. ಆ ಶಿಲ್ಪಗಳಿಗೆ ಶಿಲ್ಪಿಗಳು ಕೆತ್ತಿದ ಆಭರಣ, ಕಾಲ್ಗೆಜ್ಜೆ, ಕಾಲುಂಗರಗಳ ಸೂಕ್ಷ್ಮತೆಯನ್ನು ಗಮನಿಸಿ, ತಮ್ಮದೇ ಕಲ್ಪನೆಯಲ್ಲಿ ಸ್ತ್ರೀ ಪಾತ್ರಗಳಿಗೆ ಬೇಕಾದ ಡಾಬು, ತೋಳುಕಟ್ಟು, ಕೊರಳ ಆಭರಣಗಳು, ಶಿರೋಭೂಷಣಗಳು ಮೊದಲಾದುವನ್ನು ಬ್ರಹ್ಮಾವರದ ಸುಬ್ಬಣ್ಣ ಭಟ್ಟರಲ್ಲಿ ಮಾಡಿಸಿದರು. ಇದರ ಮೌಲ್ಯವನ್ನು ರತ್ನವರ್ಮ ಹೆಗ್ಗಡೆಯವರೇ ನೀಡಿದ್ದರು ಮಾತ್ರವಲ್ಲ, ಹೆಗ್ಗಡೆಯವರು ಮದ್ರಾಸಿಗೆ ಹೋಗಿದ್ದಾಗ ಸ್ತ್ರೀ ಪಾತ್ರಗಳಿಗೆ ಒಪ್ಪುವ ಪರಿಕರಗಳನ್ನು ಪಾತಾಳರಿಗೆ ನೀಡಿ, ಪ್ರೋತ್ಸಾಹಿಸಿದ್ದರು. ಮುಖ ವರ್ಣಿಕೆಯ ಬಗ್ಗೆಯೂ, ಅಂದಿನ ಸುಪ್ರಸಿದ್ಧ ಪರದೆ ವಿನ್ಯಾಸ ಚಿತ್ರಕಾರರಾದ ವಿಟ್ಲ ಬಾಬು ಮಾಸ್ತರ್ ರಲ್ಲಿ ದುಂಬಾಲು ಬಿದ್ದು, ಬಣ್ಣಗಾರಿಕೆಯ ಹಲವಾರು ಅಂಶಗಳನ್ನು ಕರಗತಗೊಳಿಸಿ, ಅದನ್ನು ಯಕ್ಷಗಾನ ರಂಗದಲ್ಲಿ ಪ್ರಯೋಗಕ್ಕೆ ತಂದ ಕೀರ್ತಿ ಪಾತಾಳರಿಗೇ ಸಲ್ಲಬೇಕು. ಒಂದು ಕಾಲದಲ್ಲಿ, ನಾಯಕ ಪಾತ್ರಗಳ ಎದುರು ಪೇಲವವಾಗಿ ಕಾಣಿಸುತ್ತಿದ್ದ ಯಕ್ಷಗಾನದ ಸ್ತ್ರೀ ಪಾತ್ರಗಳು ವಿಜೃಂಭಿಸಲು ಪಾತಾಳರ ಕೊಡುಗೆಯನ್ನು ಉಲೇಖಿಸದಿದ್ದರೆ, ಯಕ್ಷಗಾನದ ಇತಿಹಾಸಕ್ಕೆ ದ್ರೋಹ ಬಗೆದಂತಾದೀತು. ಪಾತಾಳರು ತಾವು ತೊಡುವ ಸೀರೆಯ ಬಗ್ಗೆ ಅಪಾರ ಜಾಗ್ರತೆ ಹೊಂದಿದ್ದರು. ಮೇಳದ ಯಜಮಾನರು ಕೊಟ್ಟ ಸೀರೆಯನ್ನು ಮೂರು ವರ್ಷಗಳ ಕಾಲ ಉಪಯೋಗಿಸುತ್ತಿದ್ದರು. ಸೀರೆಯು ಹಾಳಾಗಬಾರದು ಎಂಬ ಕಾರಣಕ್ಕಾಗಿ ಸೀರೆಯ ಸೆರಗು ಜಾರದಂತೆ ಸೆರಗಿಗೆ ಪಿನ್ ಹಾಕುತ್ತಿರಲಿಲ್ಲ. ನಾಟ್ಯ ಮಾಡುವಾಗ ಸೆರಗು ಜಾರದಂತೆ ಅಷ್ಟು ಕರಾರುವಾಕ್ಕಾಗಿ ಸೀರೆ ತೊಡುವ ನೈಪುಣ್ಯತೆ ಪಾತಾಳರದ್ದು. ತಮ್ಮ ಪಾತ್ರ ಸಿದ್ಧತೆಗಾಗಿ ಚೌಕಿಯಲ್ಲಿ ಮೂರ್ನಾಲ್ಕು ಗಂಟೆಗಳಷ್ಟು ಕಾಲ ಬಳಸುತ್ತಿದ್ದ ಪಾತಾಳರ ಬಗ್ಗೆ ಅವರ ತಿರುಗಾಟದ ಒಡನಾಡಿ, ಸುಪ್ರಸಿದ್ಧ ಕಲಾವಿದರಾದ ಕುಂಬ್ಳೆ ಸುಂದರರಾಯರು, "ಓರ್ವ ಬಣ್ಣದ ವೇಷಧಾರಿಯು ಸಿದ್ಧಗೊಳ್ಳುವಷ್ಟು ಕಾಲ, ಪಾತಾಳರ ಸ್ತ್ರೀ ಪಾತ್ರದ ಸಿದ್ಧತೆಗೆ ಬೇಕು" ಎಂದು ವಿನೋದವಾಗಿ ಹೇಳುತ್ತಿದ್ದರು . ಕರ್ನಾಟಕದಲ್ಲಿ ಭೂ ಮಸೂದೆ ಕಾಯ್ದೆ ಬಂದಾಗ, ಧರ್ಮಸ್ಥಳದ ಈಗಿನ ಧರ್ಮಾಧಿಕಾರಿಯಾದ ಡಾ.ವೀರೇಂದ್ರ ಹೆಗ್ಗಡೆಯವರು , ಹಿಂದೆ ಮಂಜಯ್ಯ ಹೆಗ್ಗಡೆಯವರು ಪಾತಾಳರಿಗೆ ನೀಡಿದ್ದ ಗೇಣಿಯ ಜಾಗಕ್ಕೆ ಡಿಕ್ಲರೇಷನ್ ನೀಡಲು ತಾವೇ ಸ್ವತಃ ಸೂಚಿಸಿ, ಆ ಜಾಗವನ್ನು ಪಾತಾಳರ ಹೆಸರಿನಲ್ಲಿ ಮಾಡಿಸಿದ್ದರು . ಪಾತಾಳರು ಧರ್ಮಸ್ಥಳದ ಮೂವರೂ ಧರ್ಮಾಧಿಕಾರಿಗಳಿಂದ ಅಪಾರವಾದ ಮನ್ನಣೆ, ಗೌರವ ಪಡೆದವರಾಗಿದ್ದರು .
ಪಾತಾಳರ ಪ್ರತಿಭೆಯನ್ನು ಪರಿಗಣಿಸಿ ಅವರಿಗೆ ಹಲವಾರು ಸಂಮಾನ, ಪ್ರಶಸ್ತಿಗಳು ಸಂದಿದ್ದವು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಜೋಷಿ ಪ್ರತಿಷ್ಠಾನ ಪ್ರಶಸ್ತಿ , ವಿದ್ಯಾಮಾನ್ಯ ಪ್ರಶಸ್ತಿ, ಯಕ್ಷ ಕಲಾನಿಧಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಡೋಗ್ರಾ ಪೂಜಾರಿ ಪ್ರಶಸ್ತಿ ಲ, ಕೀಲಾರು ಗೋಪಾಲಕೃಷ್ಣ ಭಟ್ ಪ್ರಶಸ್ತಿ, ಬಿ.ಬಿ.ಶೆಟ್ಟಿ ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ಚೆನೈನ ಹಿಂದೂ ಸಂಘದವರು "ಮಣಿವಿಳಾ" ಬಿರುದಿನಿಂದ ನೀಡಿದ ಪ್ರಶಸ್ತಿ ಸಹಿತ ನೂರಾರು ಸಂಮಾನಗಳು, ಮತ್ತು ಹಲವಾರು ಸಂಘ-ಸಂಸ್ಥೆಗಳು ಪಾತಾಳರನ್ನು ಗೌರವಿಸಿದ್ದವು. 1960 ರಲ್ಲಿ ಶ್ರೀಮತಿ ಪರಮೇಶ್ವರಿಯವರನ್ನು ವಿವಾಹವಾದ ಪಾತಾಳರು ಇಬ್ಬರು ಗಂಡು ಮಕ್ಕಳು ಹಾಗೂ ನಾಲ್ವರು ಹೆಣ್ಣುಮಕ್ಕಳನ್ನು ಪಡೆದಿದ್ದಾರೆ. ಇವರ ಹಿರಿಯ ಮಗ ಪಾತಾಳ ಅಂಬಾಪ್ರಸಾದ್ ರು ಯಕ್ಷಗಾನದ ಪ್ರಸಿದ್ಧ ಸ್ತ್ರೀ ಪಾತ್ರಧಾರಿಯಾಗಿ ಈಗಲೂ ಸೇವೆ ಸಲ್ಲಿಸುತ್ತಿದ್ದು ಉತ್ತಮ ಕಲಾವಿದರಾಗಿದ್ದಾರೆ. ತಂದೆಯವರ ಪರಂಪರೆಯನ್ನು ಅಂಬಾಪ್ರಸಾದರಲ್ಲಿ ಗಮನಿಸಬಹುದು. ಇವರು ಯಕ್ಷಗಾನದ ಗುರುಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕಿರಿಯ ಮಗ ಶ್ರೀರಾಮ ಭಟ್ ರವರು ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ನ ನಿರ್ದೇಶಕರಾಗಿದ್ದಾರೆ. ಪಾತಾಳರು
ಯಕ್ಷರಂಗದ ಶಿಲಾಬಾಲಿಕೆಎಂದೇ ಖ್ಯಾತರಾಗಿದ್ದರು. ಪಾತಾಳರ ಕುರಿತಾಗಿ
ಶ್ರೀ ಪಾತಾಳ ಅಭಿನಂದನ - ಕೃತಿ ಪ್ರಕಾಶನ ಸಮಿತಿ , ಪುತ್ತೂರು ಇವರು 2005 ರಲ್ಲಿ ಮುಳಿಯ ಶಂಕರ ಭಟ್ಟರ ಸಂಪಾದಕತ್ವದಲ್ಲಿ
'ಯಕ್ಷಶಾಂತಲಾ - ಪಾತಾಳ' ಎಂಬ 258 ಪುಟಗಳ ಅಭಿನಂದನಾ ಕೃತಿಯನ್ನು ಪ್ರಕಟಿಸಿದ್ದು , ಪಾತಾಳರ ಜೀವನದ ಸಮಗ್ರ ಮಾಹಿತಿ ಈ ಕೃತಿಯಲ್ಲಿದೆ. ಪಾತಾಳರು 1981 ರಲ್ಲಿ ಧರ್ಮಸ್ಥಳ ಮೇಳದಲ್ಲಿರುವಾಗಲೇ ಖಾವಂದರ ಅಪ್ಪಣೆ ಪಡೆದು ಯಕ್ಷರಂಗದಿಂದ ನಿವೃತ್ತರಾದರು. ನಿವೃತ್ತರಾಗುವ ಕಾಲಕ್ಕೆ ಪಾತಾಳರಿಗೆ 48 ವರ್ಷ ಪ್ರಾಯವಷ್ಟೇ, ಇದು ಖಂಡಿತವಾಗಿಯೂ ನಿವೃತ್ತರಾಗುವ ಪ್ರಾಯವಲ್ಲ. ಆದರೂ , ಪಾತಾಳರೇ ಹೇಳಿದಂತೆ, "ಸ್ತ್ರೀ ಪಾತ್ರ ಮಾಡುವವರಿಗೆ ಶಾರೀರಿಕ ರೂಪ ಬಲು ಮುಖ್ಯ.
ವಯಸ್ಸಾದಂತೆ, ಶರೀರ ಸೌಂದರ್ಯ ಮಸುಕಾಗಿ, ಜನಾಕರ್ಷಣೆ ಕಡಿಮೆಯಾಗುತ್ತದೆ ಲ. ಇತರರು ನಮ್ಮ ನಿವೃತ್ತಿ ಬಯಸುವುದರ ಮೊದಲೇ, ನಾವೇ ನಿವೃತ್ತಿ ಪಡೆದರೆ ಒಳ್ಳೆಯದು". ನಿವೃತ್ತಿಯ ನಂತರ ಪಾತಾಳರು ಕೆಲವೊಂದು ಆಯ್ದ ಕಾರ್ಯಕ್ರಮಗಳಲ್ಲಿ ಸ್ತ್ರೀ ಪಾತ್ರ ಮಾಡಿದ್ದಾರೆ. 2015 ರಲ್ಲಿ ತಮ್ಮ 82 ನೇ ವಯಸ್ಸಿನಲ್ಲಿ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಮಂಗಳೂರು ಪುರಭವನದಲ್ಲಿ ಕಯಾದುವಿನ ಪಾತ್ರ ಮಾಡಿದ್ದರು. ಬಹುಶಃ ಸಂಪಾಜೆಯ ಯಕ್ಷೋತ್ಸವದಲ್ಲಿ ತ್ರಿವಳಿ ರಂಗಸ್ಥಳದಲ್ಲಿ ಪ್ರದರ್ಶನಗೊಂಡ "ಶ್ರೀದೇವಿ ಮಹಾತ್ಮೆ " ಯ ಒಂದು ರಂಗಸ್ಥಳದಲ್ಲಿ ನಿರ್ವಹಿಸಿದ ದಿತಿದೇವಿಯ ಪಾತ್ರವು ಅವರ ಯಕ್ಷಗಾನದ ಕೊನೆಯ ವೇಷವಾಗಿರಬಹುದು. ನಿವೃತ್ತಿಯ ನಂತರ ತಾಳಮದ್ದಳೆ ಕೂಟಗಳಲ್ಲೂ ಭಾಗವಹಿಸುತ್ತಿದ್ದರು. ಪಾತಾಳ ವೆಂಕಟರಮಣ ಭಟ್ಟರ ಕುರಿತಾಗಿ ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಒಂದು ಸಾಕ್ಷ್ಯ ಚಿತ್ರ ನಿರ್ಮಿಸಿದ್ದಾರೆ.
ಪಾತಾಳ ವೆಂಕಟರಮಣ ಭಟ್ಟರು ಸಾವಿರಾರು ಅಭಿಮಾನಿಗಳು ಹಾಗೂ ಪುತ್ರಂದಿರು , ಪುತ್ರಿಯರು , ಮೊಮ್ಮಕ್ಕಳು ಸಹಿತ ಹಲವಾರು ಮಂದಿಗಳನ್ನು ಅಗಲಿದ್ದಾರೆ .ಅವರ ಆತ್ಮಕ್ಕೆ ವಿಷ್ಣು ಸಾಯುಜ್ಯ ದೊರಕಲಿ ಎಂದು *ಯಕ್ಷಸಂಗಮ - ಮೂಡುಬಿದಿರೆ* ಹಾಗೂ ಸಮಸ್ತ ಅಭಿಮಾನಿಗಳ ಪರವಾಗಿ ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇನೆ .
ಲೇಖಕರು: ಎಂ.ಶಾಂತರಾಮ ಕುಡ್ವ, ಮೂಡುಬಿದಿರೆ🌷🙏🌷
ಕೃತಜ್ಞತೆ:. Rohini Subbarathnam 🌷🙏🌷
ಕಾಮೆಂಟ್‌ಗಳು