ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗರ್ತಿಕೆರೆ ರಾಘಣ್ಣ


ಗರ್ತಿಕೆರೆ ರಾಘಣ್ಣ


ಸುಗಮ ಸಂಗೀತಲೋಕದಲ್ಲಿ  ಗರ್ತಿಕೆರೆ ರಾಘಣ್ಣ ಎಂದೇ ಪ್ರಸಿದ್ಧರಾದವರು ನಾಡಿನ ಹಿರಿಯರಾದ  ಹೊ. ನಾ. ರಾಘವೇಂದ್ರ ಅವರು.

ರಾಘಣ್ಣ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ 1935ರ ನವೆಂಬರ್ 3ರಂದು  ಜನಿಸಿದರು. ತಂದೆ ಕೆ. ನಾಗಪ್ಪಯ್ಯನವರು ಹೊಸನಗರದಲ್ಲಿ ಹೋಟೆಲ್‌ ಉದ್ಯಮ ನಡೆಸುತ್ತಿದ್ದರು. ತಾಯಿ ಮೂಕಾಂಬಿಕಮ್ಮನವರು  ಸಂಗೀತಾಸಕ್ತರು. ಈ ದಂಪತಿಗಳು ತಮ್ಮ ಮನೆಯ ಉಪ್ಪರಿಗೆಯಲ್ಲೇ ರಾಮಮಂದಿರವೊಂದನ್ನು ನಿರ್ಮಿಸಿದ್ದರು. ಅಲ್ಲಿ ನಿತ್ಯವೂ ಭಜನೆ, ಶನಿವಾರಗಳಂದು ವಿಶೇಷ ಭಜನಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇವರ ಮನೆ ಅನೇಕ ಮಹಾನ್ ಕಲಾವಿದರಿಗೆ ಆಶ್ರಯತಾಣವಾಗಿದ್ದು,  ಶ್ರೀರಾಮನವಮಿ ಹಾಗೂ ನವರಾತ್ರಿಗಳ ಸಂದರ್ಭದಲ್ಲಿ ಪ್ರತೀದಿನ ಉತ್ಸವ ಸಮಾರಂಭಗಳು ಏರ್ಪಡಾಗುತ್ತಿದ್ದವು.

ಬಾಲಕ ರಾಘಣ್ಣನಿಗೆ ಮನೆಯೇ ಸಂಗೀತ ಶಾಲೆಯಾಯಿತು. ಶಾಸ್ತ್ರೀಯವಾಗಿ ಸಂಗೀತಾಭ್ಯಾಸ ಮಾಡದಿದ್ದರೂ ರಾಘಣ್ಣನಿಗೆ ಶಾಸ್ತ್ರೋಕ್ತವಾದ ಸಂಗೀತ ಕೇಳುವ ಶ್ರದ್ಧೆ, ಹಾಡುವ ಸಂಸ್ಕಾರ ಬೆಳೆಯಿತು. ತಮ್ಮ ಮನೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ಕಲಾವಿದರ ಹಾಡುಗಾರಿಕೆಯ ಭಾವ, ಪದ ವಿಂಗಡನೆ, ಕೃತಿಗಳ ಆಯ್ಕೆ ಇವೆಲ್ಲವುಗಳ ಪ್ರಭಾವದಿಂದ ರಾಘಣ್ಣ ಕಲಾವಿದರಾಗಿ ರೂಪುಗೊಳ್ಳತೊಡಗಿದರು. ತಮ್ಮ ಹನ್ನೆರಡನೇ ವಯಸ್ಸಿನಿಂದಲೇ ಭಜನೆ ಕಾರ್ಯಕ್ರಮಗಳಲ್ಲಿ ಹಾರ್ಮೋನಿಯಂ ನುಡಿಸಲು ಪ್ರಾರಂಭಿಸಿದರು. ಹರಿಕಥೆ ದಾಸರಾಗಿದ್ದ ಸುರಳಿ ಸುಬ್ಬಯ್ಯನವರಿಗೆ ಹಾರ್ಮೋನಿಯಂ ನುಡಿಸಲು ಅಂದು ಆರಂಭಿಸಿದ ರಾಘಣ್ಣನವರ ಸಂಗೀತ ನಿರಂತರವಾಗಿ ಸಾಗಿ ಬಂದಿದೆ. ಹಾಡುವವರಿಗೆಲ್ಲ ಹಾರ್ಮೋನಿಯಂ ಜೊತೆ ನೀಡುತ್ತಿದ್ದ  ರಾಘಣ್ಣನವರಿಗೆ  ಉತ್ತರಾದಿ, ದಕ್ಷಣಾದಿ, ಜನಪದಾದಿ ಸಂಗೀತಗಳೆಲ್ಲಾ ಒಲಿದು ಬಂದಿವೆ.

ಉರುಳಿದ ಕಾಲಚಕ್ರದ ದೆಸೆಯಲಿ ರಾಘಣ್ಣನವರ ಶ್ರೀಮಂತ ತಂದೆ ನಾಗಪ್ಪಯ್ಯನವರು ವ್ಯವಹಾರದಲ್ಲಿ ಸೋಲುಂಡು ಹೀನದೆಸೆಗೆ ಬರುವಂತಾಯಿತು. ಹೀಗಾಗಿ ಅಂದಿನ ಫೋರ್ತ್‌ಫಾರಂಗೆ ಅಂದರೆ ಈಗಿನ ಒಂಬತ್ತನೆ ತರಗತಿಗೆ ರಾಘಣ್ಣನವರು ವಿದ್ಯಾಭ್ಯಾಸಕ್ಕೆ  ಮಂಗಳ ಹಾಡಬೇಕಾಯಿತು. ತಂದೆಯು ನಿಧನರಾದ ಸಂದರ್ಭದಲ್ಲಿ  ಸಂದರ್ಭದಲ್ಲಿ ರಾಘಣ್ಣ ಗರ್ತಿಕೆರೆಯಲ್ಲಿ ತಮ್ಮ ಸೋದರಮಾವನ ಆಶ್ರಯಕ್ಕೆ ಬಂದರು.  ಇಪ್ಪತ್ತನೆಯೆ ವಯಸ್ಸಿನಲ್ಲಿ ವಿವಾಹವಾದ ಅವರು ಬದುಕಲಿಕ್ಕಾಗಿ ಎಲ್ಲ ತರಹದ ಕಸುಬುಗಳನ್ನೂ ಮಾಡಿದರು.  ನಾಟಕಕ್ಕೆ ಸಂಗೀತ ನಿರ್ದೇಶನ, ಗೀತರಚನೆ, ಹಾರ್ಮೋನಿಯಂ ವಾದನ, ಮೇಕಪ್‌, ಹರಿಕಥೆ, ತಬಲಾವಾದನ, ಕೊಳಲು ವಾದನ ಹೀಗೆ ನಾನಾ ಕಾಯಕಮಾಡಿ  ಸುತ್ತಾಡಿ ಕೊನೆಗೆ ಸೈಕಲ್‌ ಶಾಪ್‌ ಇಟ್ಟದ್ದೂ ಉಂಟು.

ಕಾಲ್ನಡಿಗೆ, ಎತ್ತಿನಗಾಡಿ, ಬಸ್ಸುಗಳಲ್ಲಿ ಸಂಚರಿಸಿ, ಹೆಗಲಮೇಲೆ ಹಾರ್ಮೋನಿಯಂ ಪೆಟ್ಟಿಗೆ ಹೊತ್ತುಕೊಂಡು ಹಳ್ಳಿಗಳ ಮೂಲೆಮೂಲೆಗಳಲ್ಲೂ ಸುಗಮ ಸಂಗೀತ ಹಾಡಿದ ರಾಘಣ್ಣವನವರು ಕಳೆದ ಆರು ದಶಕಗಳಲ್ಲಿ  ಸದ್ದಿಲ್ಲದೆ ಸಾಂಸ್ಕೃತಿಕ  ಕ್ರಾಂತಿಯನ್ನು ಮಾಡುತ್ತ ಸಾಗಿದ್ದಾರೆ. ಅವರು 1972ರಲ್ಲಿ ಭಾರತ ಸರಕಾರದ ಸಂಗೀತ ನಾಟಕ ಅಕಾಡೆಮಿಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿದರು. ರಾಜ್ಯ ಸರ್ಕಾರದ ವಾರ್ತಾ ಇಲಾಖೆ, ಕುಟುಂಬ ಕಲ್ಯಾಣ, ವಯಸ್ಕರ ಶಿಕ್ಷಣ, ನೀರಾವರಿ ಮುಂತಾದ ಇಲಾಖಾ ಪ್ರಚಾರ ಕಾರ್ಯಗಳಲ್ಲಿ ಹಾಡುಗಾರರಾಗಿ ಇಪ್ಪತ್ತು ವರ್ಷಗಳ ಸತತ ಸೇವೆ ಸಲ್ಲಿಸಿದರು.

1952ರಲ್ಲಿ ರಾಘಣ್ಣನವರು  ಕಾರ್ಯಕ್ರಮ ಒಂದಕ್ಕೆ ಪಡೆಯುತ್ತಿದ್ದ ಸಂಭಾವನೆ ಒಂದು ರೂಪಾಯಿ. ಈಗಲೂ ಇವರು ಕಾರ್ಯಕ್ರಮಕ್ಕೆ ಇಂತಿಷ್ಟು ಸಂಭಾವನೆ ಎಂದು ನಿಗದಿಪಡಿಸುವುದಿಲ್ಲ. ಕೊಟ್ಟಷ್ಟನ್ನು ಸಂತೋಷದಿಂದ ಸ್ವೀಕರಿಸುವ ಹೃದಯವಂತಿಕೆ ರಾಘಣ್ಣನವರದ್ದು. 1993ರಲ್ಲಿ ರಾಘಣ್ಣನಿಗೆ ಲಘು ಹೃದಯಘಾತವಾಯಿತು. ಚೇತರಿಸಿಕೊಳ್ಳುವಷ್ಟರಲ್ಲೇ ದೃಷ್ಟಿ ಮಂಕಾಯಿತು. 1994ರಲ್ಲಿ ಅವರಿಗೆ ಎರಡೂ ಕಣ್ಣುಗಳ ಶಸ್ತ್ರಚಿಕಿತ್ಸೆಯಾಯಿತು.   ವಿಶ್ರಾಂತಿ ಎಂದು ರಾಘಣ್ಣ ತಮ್ಮ ಜೀವನದಲ್ಲಿ ಕಂಡಿದ್ದು ಈ ಎರಡು ವರ್ಷಗಳಲ್ಲೇ.

ಬೆಂಗಳೂರಿನ ಜನಕ್ಕೆ ರಾಘಣ್ಣನವರ ಪರಿಚಯವಾದದ್ದು 1993ರಲ್ಲಿ. ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸುಗಮಸಂಗೀತಗಾರರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಜಿ.ವಿ. ಅತ್ರಿ ಹಮ್ಮಿಕೊಂಡಿದ್ದರು. ಅನಿವಾರ್ಯ ಕಾರಣಗಳಿಂದ ರಾಘಣ್ಣ ಬರಲಾಗಲಿಲ್ಲ. ಅದೇ ವರ್ಷ ಸಂಗೀತ ಸಮ್ಮೇಳನ ನಡೆಸಿದ ಅತ್ರಿ ರಾಘಣ್ಣನವರನ್ನು ಆಹ್ವಾನಿಸಿ ಸುಮಾರು ಅರ್ಧ ತಾಸು ಹಾಡಲು ಅವಕಾಶ ಮಾಡಿಕೊಟ್ಟರು. ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್‌, ಜಿ.ಎಸ್‌. ಶಿವರುದ್ರಪ್ಪ ಮುಂತಾದ ದಿಗ್ಗಜರಿಗೆ ರಾಘಣ್ಣನವರ ಗಾಯನದ ಪರಿಚಯ ಆದದ್ದು ಆ ಸಂದರ್ಭದಲ್ಲಿ. ಅಂದು ಅನಂತಸ್ವಾಮಿಯವರು ಪ್ರಶಂಸಿಸಿದ ರಾಘಣ್ಣ ಎಂಬ ಈ ಕಲಾವಿದ ಹಾಡಿದ ಈ ಭಾವಗೀತೆಗಳನ್ನು ಕೇಳುವುದೇ ಒಂದು ವಿಶಿಷ್ಟ ಅನುಭವ.

1994ರಲ್ಲಿ  ಎನ್‌.ಎಸ್‌. ಲಕ್ಷ್ಮೀನಾರಾಯಣಭಟ್ಟರ ನೇತೃತ್ವದಲ್ಲಿ ಕಲಾವಿದರಾದ ಎಸ್‌. ಬಾಲಿ, ಎನ್‌.ಎಸ್‌. ಪ್ರಸಾದ್‌ ಮುಂತಾದವರೆಲ್ಲಾ ಸೇರಿ ರಾಘಣ್ಣನವರು  ರಾಗ ಸಂಯೋಜಿಸಿದ ಲಕ್ಷ್ಮೀನಾರಾಯಣಭಟ್ಟರ ಕವಿತೆಗಳನ್ನೊಳಗೊಂಡ ‘ಅಭಿನಂದನ’ ಎಂಬ ಧ್ವನಿಸುರುಳಿಯನ್ನು ಲಹರಿ ಸಂಸ್ಥೆಯಿಂದ ಹೊರತಂದರು. ಅನಂತಸ್ವಾಮಿ, ಸಿ. ಅಶ್ವಥ್‌, ನರಸಿಂಹ ನಾಯಕ್‌, ಶಿವಮೊಗ್ಗ ಸುಬ್ಬಣ್ಣ, ರತ್ನಮಾಲ ಪ್ರಕಾಶ್‌, ರಾಘಣ್ಣನ ಮಗಳು ಶ್ರೀದೇವಿ ಇದರಲ್ಲಿ ಹಾಡಿದ್ದಾರೆ. ರಮ್ಯ ಕಲ್ಚರಲ್‌ ಅಕಾಡೆಮಿ ಸಮಾರಂಭ ಏರ್ಪಡಿಸಿ, ಧ್ವನಿಸುರುಳಿ ಬಿಡುಗಡೆ ಮಾಡಿ, ರಾಘಣ್ಣನವರಿಗೆ ಸುಮಾರು 30 ಸಾವಿರ ರೂ.ಗಳ ನಿಧಿ ಸಂಗ್ರಹಿಸಿ ಸಮರ್ಪಿಸಿತು.

ರಾಘಣ್ಣನವರಿಗೆ ಹಾಡಲು ಅವರಿಗೆ ಪುಸ್ತಕದ ಅಗತ್ಯವೇ ಇರುವುದಿಲ್ಲ. ಕನ್ನಡ ಸಾಹಿತ್ಯಲೋಕದ ಸುಪ್ರಸಿದ್ಧರ ಸಹಸ್ರಾರು ಕವಿತೆಗಳು ಅವರ ನೆನಪಿನ ಭಂಡಾರದಲ್ಲೆ ಇದೆ. ರಾಘಣ್ಣ ಹಾಡಿರುವ, ರಾಗ ಸಂಯೋಜಿಸಿರುವ ಅನೇಕ ಧ್ವನಿಸುರುಳಿಗಳು ಹೊರಬಂದು ಅತ್ಯಂತ ಜನಪ್ರಿಯವಾಗಿವೆ.

ಗರ್ತಿಕೆರೆ ರಾಘಣ್ಣನವರಿಗೆ 1991ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ;  1993ರಲ್ಲಿ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ ಪ್ರಶಸ್ತಿ;  2001ರಲ್ಲಿ ಕರ್ನಾಟಕ ಗಾನಕಲಾ ಪರಿಷತ್ತಿನ ವಿದ್ವತ್‌ ಸದಸ್ಸಿನಲ್ಲಿ ಪುರಸ್ಕಾರ; 2003ರಲ್ಲಿ ಕರ್ನಾಟಕ ಸರ್ಕಾರ ನೀಡುವ ಸುಗಮಸಂಗೀತ ಕ್ಷೇತ್ರದ ಅತ್ಯುನ್ನತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ ಮುಂತಾದ ಪ್ರಮುಖ ಗೌರವಗಳಲ್ಲದೆ ಅನೇಕ ಸಂಘ ಸಂಸ್ಥೆಗಳ ಗೌರವಗಳು ಅವರಿಗೆ ಸಂದಿವೆ.

ಕನ್ನಡ ನಾದಲೋಕದ ಈ ಹಿರಿಯರಿಗೆ ಜನ್ಮದಿನದ ಸಂದರ್ಭದಲ್ಲಿ ಸಾಷ್ಟಾಂಗ ಪ್ರಣಾಮಗಳು ಮತ್ತು ಹುಟ್ಟುಹಬ್ಬದ ಶುಭ ಹಾರೈಕೆಗಳು.

On the birth day of our great singer Gartikere Raaghanna 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ