ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಭಂಜನಾಚಾರ್ಯ


ವ್ಯಾಸನಕೆರೆ ಪ್ರಭಂಜನಾಚಾರ್ಯ


ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರು ಮಹಾನ್ ಸಂಸ್ಕೃತ ಭಾಷಾ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದಾರೆ.  ಆಚಾರ್ಯರು ಮಧ್ವ ತತ್ವಜ್ಞಾನಕ್ಕೆ ಜಾಗತಿಕ ಮಟ್ಟದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ.  ತಾಳೆಗರಿಗಳಲ್ಲಿ ಅಜ್ಞಾತವಾಗಿದ್ದ  ಸಾವಿರಾರು ಸ್ತೋತ್ರ ಮತ್ತು ಮಹತ್ವದ ವಿಚಾರಗಳು ಆಚಾರ್ಯರ ಮಹತ್ವದ ಸುದೀರ್ಘ ಸಂಶೋಧನೆಗಳಿಂದ ಬೆಳಕು ಕಂಡಿವೆ.  ಈಗಾಗಲೇ ಸುಮಾರು 200ರಷ್ಟು ಗ್ರಂಥಗಳ ರಚನೆ ಹಾಗೂ ಭಾಷಾಂತರಗಳನ್ನು ಆಚಾರ್ಯರು ಮಾಡಿದ್ದಾರೆ.  ವ್ಯಾಕರಣ, ಮೀಮಾಂಸೆ, ತರ್ಕ, ವೇದ, ವೇದಾಂತಗಳಲ್ಲಿ ಅಪಾರ ವಿದ್ವತ್ತನ್ನು ಹೊಂದಿರುವ ಆಚಾರ್ಯರು, ಆಚಾರ್ಯ ಮಧ್ವರ ಸರ್ವಮೂಲ ಗ್ರಂಥಗಳ ಮಹತ್ವಪೂರ್ಣ ಸಂಪಾದನೆಗಾಗಿ ಡಿ.ಲಿಟ್ ಪದವಿ ಗಳಿಸಿದ್ದಾರೆ.  ಬೆಂಗಳೂರಿನಲ್ಲಿ  ಸರ್ಕಾರಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸಹಾ ಸೇವೆ ಸಲ್ಲಿಸಿ ಅನೇಕ ಪ್ರತಿಭಾವಂತ  ವಿದ್ಯಾರ್ಥಿಗಳನ್ನು ತಯಾರುಮಾಡಿರುವ ಆಚಾರ್ಯರು,  ತಮ್ಮ ವಿದ್ವತ್ಪೂರ್ಣ ಸಂಶೋಧನಾ ಚಟುವಟಿಕೆಗಳಲ್ಲಿನ ಆಸಕ್ತಿಗಳಿಗೆ ಹೆಚ್ಚಿನ  ಸಮಯ ವಿನಿಯೋಗಿಸಲಿಕ್ಕಾಗಿ ಸ್ವಯಂ ನಿವೃತ್ತಿ ಪಡೆದವರು.    ಅವರ ಸಂಶೋಧನೆ ಮತ್ತು ಜ್ಞಾನ ಪ್ರಸರಣ ಕಾರ್ಯ ನಿರಂತರವಾಗಿ ಮುಂದುವರೆಯುತ್ತಿದೆ.

ಪ್ರಭಂಜನಾಚಾರ್ಯರ ಮಹತ್ವದ ಸಾಂಸ್ಥಿಕ ಕೊಡುಗೆಗಳಲ್ಲಿ  ಶ್ರೀ ಜಯತೀರ್ಥ ಹಸ್ತಲಿಪಿ ಗ್ರಂಥಾಲಯವು ಮಹತ್ವಪೂರ್ಣವೆನಿಸಿದ್ದು, ಈ ಸಂಸ್ಥೆಯು ಭಾರತೀಯ ತತ್ವಜ್ಞಾನದ ಅತ್ಯಪರೂಪದ ಮತ್ತು ಅಪ್ರಕಟಿತವಾದಂತ ವಿಷಯಗಳ ಸಂಶೋಧನೆಯತ್ತ ವಿಶೇಷವಾಗಿ ತನ್ನ ಗಮನವನ್ನು ಕೇಂದ್ರೀಕರಿಸಿದೆ.     ಆಚಾರ್ಯರ ಮತ್ತೊಂದು ಮಹತ್ವದ ಸಾಂಸ್ಥಿಕ ಕೊಡುಗೆಯೆಂದರೆ ಶ್ರೀ ವ್ಯಾಸ ಮಧ್ವ ಸಂಶೋಧನಾ ಪ್ರತಿಷ್ಠಾನ ಟ್ರಸ್ಟ್.  ಈ ಮಹಾನ್ ಸಂಸ್ಥೆಯು  ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳ ಕುರಿತಾದ ಮಹತ್ವದ ಚಿಂತನೆಗಳತ್ತ ನಿರಂತರವಾಗಿ ಕ್ರಿಯಾಶೀಲವಾಗಿದೆ.  ಈ ಸಂಸ್ಥೆ ನೂರಾರು ಮಹತ್ವದ ಕೃತಿಗಳನ್ನು ತನ್ನ ಶ್ರದ್ಧಾವಂತ ಭಾರತೀಯ ಸಮುದಾಯಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದೆ.  ಇವಷ್ಟೇ ಅಲ್ಲದೆ ಆಚಾರ್ಯರು ನಿವೃತ್ತ ಪಂಡಿತರು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಮಹತ್ವದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ.     

ಸಾಂಸ್ಕೃತಿಕ ಕ್ಷೇತ್ರದಲ್ಲಿನ ಅಪಾರ ಕೊಡುಗೆಗಾಗಿ 2005ರ ವರ್ಷದಲ್ಲಿ ಅಂದಿನ ಪ್ರಸಿದ್ಧ ರಾಷ್ಟ್ರಪತಿಗಳಾಗಿದ್ದ ದಿವಂಗತ ಭಾರತರತ್ನ ಡಾ.ಅಬ್ದುಲ್ ಕಲಾಂ ಅವರಿಂದ ಸ್ವಾತಂತ್ರ್ಯೋತ್ಸವ ಪ್ರಶಸ್ತಿ ಸ್ವೀಕರಿಸಿರುವ ಪ್ರಭಂಜನಾಚಾರ್ಯರಿಗೆ, 2002ರ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಪರ್ಯಾಯ ಪ್ರಶಸ್ತಿ ಮುಂತಾದ ಮಹಾನ್ ಗೌರವಗಳಲ್ಲದೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ  ಪ್ರಸಿದ್ಧ ಸಂಘ ಸಂಸ್ಥೆಗಳ ಪ್ರಶಸ್ತಿ ಗೌರವಗಳು ಸಂದಿವೆ.  1994ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಮಧ್ವ ತತ್ವಶಾಸ್ತ್ರ ಸಮ್ಮೇಳನದ ಅಧ್ಯಕ್ಷ ಸ್ಥಾನ ಪ್ರಭಂಜನಾಚಾರ್ಯರನ್ನು ಅರಸಿ ಬಂದಿತ್ತು.    

ಪ್ರಭಂಜನಾಚಾರ್ಯರ ಅಸಂಖ್ಯಾತ ಉಪನ್ಯಾಸ, ಸಂಶೋಧನೆ ಮತ್ತು ಕೃತಿಗಳಲ್ಲಿ ಅಪರಿಮಿತ ಮಧ್ವತತ್ವ ವಿಚಾರಗಳ ಜೊತೆಗೆ, ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ ಮತ್ತು ವೇದೋಪನಿಷತ್ತುಗಳ ಸಾಗರದ ಮಹಾಪೂರವೇ ತುಂಬಿಕೊಂಡಿವೆ.  ಈ ಎಲ್ಲ  ಮಹತ್ವದ ತಿರುಳನ್ನೂ ಇಂದಿನ ಯುವಜನತೆಗೆ  ಆಕರ್ಷಕವಾಗಿ ಉಣಬಡಿಸುತ್ತಿರುವ ಆಚಾರ್ಯರು ಸಾಮಾನ್ಯರಿಂದ ಪಂಡಿತೋತ್ತಮರವರೆವಿಗೆ ಎಂಬಂತೆ ಎಲ್ಲೆಡೆಯಲ್ಲಿ ತಮ್ಮ ಪಾಂಡಿತ್ಯವನ್ನು ಹದವಾಗಿ ಕೊಂಡೊಯ್ದಿದ್ದಾರೆ.  ವೇದ ಪುರಾಣ ಕಾಲದ ವಿಚಾರಗಳು ಇಂದಿನ ದಿನಕ್ಕೆ ಹೇಗೆ ಪ್ರಸ್ತುತ ಎಂಬುದನ್ನು ಮನದಟ್ಟು ಮಾಡಿಕೊಡುತ್ತಿರುವಲ್ಲಿ ಆಚಾರ್ಯರ ಕೊಡುಗೆ ಅತ್ಯಂತ ಶ್ಲಾಘನೀಯವೆನಿಸಿದೆ.  

ಭಾರತೀಯ ಅಧ್ಯಾತ್ಮಿಕ ಸಾಂಸ್ಕೃತಿಕ ಲೋಕದ ರಾಯಭಾರಿಗಳೂ, ಪೂಜನೀಯರೂ ಆದ  ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರಿಗೆ ನಮ್ಮ ಅನಂತ ಗೌರವಗಳು ಮತ್ತು ಸಾಷ್ಟಾಂಗ ಪ್ರಣಾಮಗಳು.  

Great scholar Vyasanakere Prabhanjanacharya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ