ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕನಕದಾಸರು


 ಕನಕದಾಸರ ಜಯಂತಿಯಂದು


ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೃತಿಗಳಿಂದ ಮೂಡಿದ ಶೋಭೆ ವಿಶಿಷ್ಟವಾದದ್ದು.

ಕನಕದಾಸರೆಂದರೆ ನೆನಪಾಗುವುದು ಸಂಗೀತದ ಮೂಲಕ ಕರ್ಣಾಮೃತ ಒದಗಿಸುವ ಅವರ ನೂರಾರು ರಚನೆಗಳು. ಕನಕದಾಸರು ಹದಿನೈದು – ಹದಿನಾರನೇ ಶತಮಾನಗಳಲ್ಲಿದ್ದ ಜನಪ್ರಿಯವಾದ ಭಕ್ತಿ ಪಂಥದ ಪ್ರಮುಖ ಹರಿದಾಸರಲ್ಲಿ ಒಬ್ಬರು. ಪುರಂದರದಾಸರ ಸಮಕಾಲೀನರಾಗಿದ್ದು  ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಅಮೂಲ್ಯ ಕಾಣಿಕೆಗಳನ್ನಿತ್ತವರು.

ಕನಕದಾಸರು ಜನಿಸಿದ್ದು ಧಾರವಾಡ ಜಿಲ್ಲೆಯ ಬಾಡ ಎಂಬಲ್ಲಿ.  ನಂತರ ಕಾಗಿನೆಲೆಯಲ್ಲಿ ನೆಲೆಸಿದಂತೆ ತೋರುತ್ತದೆ.  ಅದು ಈಗ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿದೆ.  ಕನಕದಾಸರ ಕೀರ್ತನೆಗಳೆಲ್ಲವೂ ಕಾಗಿನೆಲೆಯ ಕೇಶವನ ಅಡಿದಾವಾರೆಗಳಿಗೇ ಅರ್ಪಿತ.  ಅವರು ತಮಗೆ ದೊರೆತ ನಿಧಿಯಿಂದ ಕಾಗಿನೆಲೆಯ ನರಸಿಂಹ ದೇವಾಲಯವನ್ನು ಜೀರ್ಣೋದ್ದಾರ ಮಾಡಿದರು.  ಬಾಡ ಗ್ರಾಮದಲ್ಲಿದ್ದ ಆದಿಕೇಶವ ಮೂರ್ತಿಯನ್ನು ತಂದು ಕಾಗಿನೆಲೆಯಲ್ಲಿ ಪ್ರತಿಷ್ಠೆ ಮಾಡಿದರೆಂದು ತಿಳಿದು ಬರುತ್ತದೆ.  ಈ ರೀತಿ ತಿಮ್ಮಪ್ಪ ನಾಯಕನಾಗಿದ್ದವರು ತಮಗೆ ದೊರೆತ ನಿಧಿಯಿಂದ ಕನಕನಾಯಕರೆಂಬ ಹೆಸರನ್ನು ಪಡೆದು ಮುಂದೆ ಕನಕದಾಸರಾಗಿ ಕಂಗೊಳಿಸಿದರು.  ಕನಕರು  ‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ’ ಎಂದು ಎಲ್ಲ ಜಾತಿ ಪದ್ಧತಿಗಳ ಮೂಲವನ್ನೇ ಪ್ರಶ್ನಿಸಿದವರು.   ಕನಕದಾಸರು ವ್ಯಾಸರಾಯರ ನೆಚ್ಚಿನ ಶಿಷ್ಯರೂ ಹೌದು.  

ಕನಕದಾಸರು ರಚಿಸಿರುವ ನೂರಾರು ಕೀರ್ತನೆಗಳು ಮತ್ತು ಅವರ ಕಾವ್ಯಕೃತಿಗಳಾದ  ‘ಮೋಹನತರಂಗಿಣಿ’, ‘ನಳಚರಿತ್ರೆ’, ‘ರಾಮಧಾನ್ಯಚರಿತ್ರೆ ಮತ್ತು ‘ಹರಿಭಕ್ತಿಸಾರ’  ಇವುಗಳು ಅಂದಿನಿಂದ ಇಂದಿನವರೆಗೆ ಜನಮಾನಸದಲ್ಲಿ ನಿರಂತರ ಗಂಗೆಯಾಗಿ ಹರಿದು ಬಂದಿದೆ.  ಅವರ ಮತ್ತೊಂದು ಕಾವ್ಯಕೃತಿ ‘ನೃಸಿಂಹಸ್ತವ’ ಈಗ ಉಪಲಬ್ಧವಿಲ್ಲ.

ಕನಕದಾಸರ ಈ ಸುಂದರ ರಚನೆ ಅವರ ಅಗಾಧ ಪಾಂಡಿತ್ಯ ಮತ್ತು  ಕೃತಿ ಸೌಂದರ್ಯಕ್ಕೊಂದು ಶ್ರೇಷ್ಠ  ಉದಾಹರಣೆ.

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೊ

ಬಯಲು ಆಲಯದೊಳಗೊ, ಆಲಯವು ಬಯಲೊಳೊಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ

ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ

ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ

ಕನಕದಾಸರ ಭಕ್ತಿ ಪ್ರೀತಿಗಳಿಂದ ಕಂಗೊಳಿಸುವ ಹಲವಾರು ಹಾಡುಗಳಲ್ಲಿ ಅತಿ ಜನಪ್ರಿಯವಾದ ಹಾಡು ‘ತಲ್ಲಣಿಸದಿರು ಕಂಡ್ಯ ತಾಳು ಮನವೆ’. ಈ ಹಾಡು ನೀಡುವ ಸಂದೇಶ ಹೃದಯದ ಕದವನ್ನು ತಟ್ಟುವಂತದ್ದು.

ತಲ್ಲಣಸಿದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆ
ಗಟ್ಯಾಗಿ ಸಲಹುವನು ಇದಕೆ ಸಂಶಯ ಬೇಡ

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗಡಿಗೆ ಆಹಾರವಿತ್ತವರು ಯಾರೊ
ಹಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ

ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲಿಗೆ ಆಹಾರವಿತ್ತವರು ಯಾರೊ
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

ಹೀಗೆ ಶ್ರೇಷ್ಠ  ಭಕ್ತಪಂಥದ ಹಿರಿಮೆಯಲ್ಲಿ  ಶಾಶ್ವತವಾಗಿ ನಿಲ್ಲುವಂತಹ ಕೀರ್ತನೆಗಳನ್ನು ನೀಡಿರುವ ಪೂಜ್ಯ ಕನಕದಾಸರು ನಮ್ಮ ಹೃದಯಗಳಲ್ಲೂ ಶಾಶ್ವತ ಸ್ಥಾನ ಪಡೆದವರಾಗಿದ್ದಾರೆ.

ವಚನಸಾಹಿತ್ಯದಲ್ಲಿ ಕಂಡುಬರುವ ಬೆಡಗಿನ ವಚನಗಳಂತೆ ಕನಕದಾಸರ ಮುಂಡಿಗೆಗಳು ಇಂದಿಗೂ ಬಿಡಿಸಲಾರದ ಕಗ್ಗಂಟಿನಂತಿವೆ.
ಕನಕದಾಸರ ಬರೆದಿರುವ ಕಾವ್ಯಗಳೂ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ. 42 ಸಂಧಿಗಳುಳ್ಳ ಸಾಂಗತ್ಯ ಕೃತಿಯಾದ ಮೋಹನತರಂಗಿಣಿಯಲ್ಲಿ ಶಂಬರಾಸುರ ಮತ್ತು ಬಾಣಾಸುರರ ವಧೆಗಳು ನಿರೂಪಿತವಾಗಿವೆ. ಈ ಎರಡು ಪ್ರಸಂಗಗಳನ್ನೂ ಒಂದೇ ಕಾವ್ಯದಲ್ಲಿ ಅಳವಡಿಸಿರುವ ಕನಕದಾಸರ ಕೌಶಲ ಮೆಚ್ಚುವಂಥದೆನಿಸಿದೆ. ಕಾವ್ಯದ ಪುರ್ವಾರ್ಧದಲ್ಲಿ ಪ್ರದ್ಯುಮ್ನ ಪ್ರಧಾನ ಪಾತ್ರ ವಹಿಸಿದರೆ ಉತ್ತರಾರ್ಧದಲ್ಲಿ ಶ್ರೀಕೃಷ್ಣನ ಪ್ರಭಾವ ಮಿಗಿಲಾಗಿ ಕಾಣುತ್ತದೆ. ಉಷಾ-ಅನಿರುದ್ಧರ ಪ್ರಣಯವೃತ್ತಾಂತ ಇಲ್ಲಿನ ಬಿರುಸು ಕಾಳಗಗಳ ಮಧ್ಯೆ ಒಂದು ರಮಣೀಯ ಪ್ರಪಂಚವನ್ನೇ ಸೃಷ್ಟಿಸುತ್ತದೆ. ಕನಕದಾಸನ ಯುದ್ಧಾನುಭವ ಮತ್ತು ಸಾಹಿತ್ಯ ಪರಿಶ್ರಮಗಳು ಈ ಕೃತಿಯಲ್ಲಿ ಮೂರ್ತಿಭವಿಸಿವೆ. ಹರಿಭಕ್ತಿಯ ಹಿರಿಮೆಯನ್ನೂ ಹರಿಭಕ್ತಿಯ ನಿಲುವನ್ನೂ ಇಲ್ಲಿ ಸಂದರ್ಭೋಚಿತವಾಗಿ ಕಾಣಬಹುದು. ಇಲ್ಲಿನ ಅನೇಕ ವರ್ಣನೆಗಳಲ್ಲಿ ಸಮಕಾಲೀನ ಜೀವನದ ಪ್ರತಿಬಿಂಬಗಳಿವೆ. ಒಟ್ಟಿನಲ್ಲಿ ಈ ಸಾಂಗತ್ಯಕೃತಿ ಕನಕದಾಸರೇ ಹೇಳಿರುವಂತೆ ‘ಹರಿಶರಣರಚ್ಚು’ ಬುಧ ಜನರಿಗೆ ಪೆಚ್ಚು, ದುರಿತವನಕೆ ಕಾಳ್ಕಿಚ್ಚು, ವಿರಹಿಗಳಿಗೆ ಪುಚ್ಚು, ವೀರರ್ಗೆ ನುಚ್ಚು, ಕೇಳ್ವರಿಗಿದು ತನಿಬೆಲ್ಲದಚ್ಚು. 

ಹರಿಭಕ್ತಿಸಾರದಲ್ಲಿ ಕನಕರ ಹರಿಭಕ್ತಿಯ ತುಂಬುವೊನಲನ್ನು ಕಾಣಬಹುದು. 'ರಕ್ಷಿಸು ನಮ್ಮನನವರತ' ಎಂದು ಪ್ರತಿ ಪದ್ಯದಲ್ಲಿಯೂ ಬರುವ ಈ ಚರಣವಂತೂ ಕನ್ನಡಿಗರಿಗೆ ಚಿರಪರಿಚಿತವಾದ ನುಡಿಯಾಗಿದೆ. ಭಾಮಿನೀಷಟ್ಪದಿಯ ಧಾಟಿಯಲ್ಲಿ ಬರೆದಿರುವ ಇಲ್ಲಿನ ಅನೇಕ ಪದ್ಯಗಳು ಪಂಡಿತ, ಪಾಮರರ ಆದರಕ್ಕೆ ಪಾತ್ರವಾಗಿವೆ. ಕನಕರ ತತ್ತ್ವಜ್ಞಾನ, ಜೀವನಾದರ್ಶ, ಲೋಕನೀತಿಗಳು ಇಲ್ಲಿ ತಿಳಿಯಾದ ಕನ್ನಡ ನುಡಿಗಳಲ್ಲಿ ಸರ್ವರಿಗೂ ಸುಲಭಗ್ರಾಹ್ಯವಾಗುವಂತೆ ಪ್ರತಿಪಾದಿತವಾಗಿವೆ.

ನಳಚರಿತ್ರೆಯಂತೂ ಆಬಾಲವೃದ್ಧರಿಗೆ ಆಪ್ಯಾಯಮಾನವೆನ್ನಿಸಿದೆ. ಮಹಾಭಾರತದಲ್ಲಿ ಉಕ್ತವಾಗಿರುವ ನಳೋಪಾಖ್ಯಾನವನ್ನು ಕವಿ ಭಾಮಿನೀಷಟ್ಟದಿಯಲ್ಲಿ ಬಹಳ ಮನಕರಗುವಂತೆ ಕನಕರು ನಿರೂಪಿಸಿದ್ದಾರೆ. ಸುಲಭ ಶೈಲಿ, ಘನವಾದ ವಸ್ತು, ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ನಳಚರಿತ್ರೆ ಕನ್ನಡಕ್ಕೆ ಅಪುರ್ವ ಕೊಡುಗೆಯಾಗಿದೆ.

ರಾಮಧಾನ್ಯಚರಿತ್ರೆ ಎಂಬ ಇನ್ನೊಂದು ಕೃತಿ, 
ಗಾತ್ರದಲ್ಲಿ ಕಿರಿದಾದರೂ ಗುಣದಲ್ಲಿ ಅದ್ವಿತೀಯವೆನ್ನಿಸಿದೆ. ರಾಗಿ ಮತ್ತು ಅಕ್ಕಿಗಳ ಕಲಹವೇ ಈ ಕೃತಿಯ ವಸ್ತುವಾದರೂ ಕವಿ ಇದಕ್ಕೆ ಒಂದು ಪೌರಾಣಿಕ ಹಿನ್ನೆಲೆಯನ್ನು ಕಲ್ಪಿಸಿರುವುದು ನವೀನವಾಗಿದೆ. ಶ್ರೀರಾಮನ ಸಾನ್ನಿಧ್ಯದಲ್ಲಿ ರಾಗಿ-ಅಕ್ಕಿಗಳಲ್ಲಿ (ನರೆದಲೆಗ ಮತ್ತು ವ್ರೀಹಿ) ಯಾರು ಮೇಲು ಎಂಬ ವಾಗ್ವಾದವುಂಟಾಗಲು ರಾಮ ಅಯೋಧ್ಯೆಗೆ ಹಿಂತಿರುಗಿದ ಮೇಲೆ, ಕಾಲಾನಂತರದಲ್ಲಿ ಸೆರೆಯಲ್ಲಿದ್ದ ಈ ಧಾನ್ಯಗಳನ್ನು ಕರೆತರಿಸಲು, ಅಕ್ಕಿ ಮುಗ್ಗಿ ಹೋಗಿರುವುದನ್ನು ರಾಗಿ ದೃಢವಾಗಿರುವುದನ್ನೂ ಕಂಡು, ದೇವಾನು ದೇವತೆಗಳ ಸಮ್ಮುಖದಲ್ಲಿ ರಾಗಿಗೆ ರಾಘವಧಾನ್ಯ ಎಂಬ ಹೆಸರನ್ನಿತ್ತು ಗೌರವಿಸುತ್ತಾನೆ. ಇಷ್ಟೇ ಇಲ್ಲಿನ ತಿರುಳು. ಆದರೆ ಕುಶಲ ಕವಿಯಾದ ಕನಕದಾಸರು ಈ ಪ್ರಸಂಗವನ್ನು ಬಹು ಸ್ವಾರಸ್ಯವಾಗಿ ಚಿತ್ರಿಸಿದ್ದಾರೆ. ಬಡವರ ಆಧಾರವಾದ ರಾಗಿಗೂ ಭಾಗ್ಯವಂತರ ಬಂಧುವಾದ ಅಕ್ಕಿಗೂ ಇರುವ ತಾರತಮ್ಯವನ್ನು ನಿರೂಪಿಸುವಲ್ಲಿ, ಇಂದಿನಂತೆಯೇ ಅಂದಿನ ಸಮಾಜದಲ್ಲಿಯೂ ನೆಲೆಸಿದ್ದ ದೀನ ಧನಿಕರ ಅಂತರವನ್ನು ಬಹಳ ಅರ್ಥವತ್ತಾಗಿ ಎತ್ತಿ ತೋರಿಸಿದ್ದಾರೆ. ಇದೊಂದು ವ್ಯಂಗ್ಯ ಕಾವ್ಯ. ಕನ್ನಡದಲ್ಲಿ ಅಂದಿಗೆ ಇಂಥ ಪ್ರಯತ್ನ ತುಂಬ ಅಪೂರ್ವವಾದುದು. 

ನೃಸಿಂಹಸ್ತವ ಎಂಬ ಕನಕದಾಸರ ಮತ್ತೊಂದು ಕೃತಿಯನ್ನು ಕವಿಚರಿತೆಕಾರರು ಪ್ರಸ್ತಾಪಿಸಿದ್ದಾರೆ. ಅದು ಒಂದು ಸಾಂಗತ್ಯಕೃತಿಯೆಂದು ತಿಳಿದುಬರುತ್ತದೆ.

ಕನಕದಾಸರು ತಮ್ಮ ಕೃತಿಗಳಲ್ಲಿ ವ್ಯಕ್ತಪಡಿಸಿರುವ ರಾಮಾಯಣ, ಮಹಾಭಾರತ ಮತ್ತು ಭಾಗವತಗಳ ಜ್ಞಾನ, ಕೀರ್ತನೆಗಳಲ್ಲಿ ನಿರೂಪಿಸಿರುವ ಭಕ್ತಿ, ಜ್ಞಾನ, ವೈರಾಗ್ಯಗಳ ಪ್ರಜ್ಞೆ, ತಿಳಿಗನ್ನಡದ ಒಲವು ಇವೇ ಮೊದಲಾದುವು ಹರಿದಾಸ ಪ್ರಪಂಚದಲ್ಲಿ ಮತ್ತು ಕನ್ನಡ ಕಾವ್ಯಕ್ಷೇತ್ರದಲ್ಲಿ ಅವರ ಸ್ಥಾನವೆಷ್ಟು ಹಿರಿದಾದುದು ಎಂಬುದನ್ನು ದೃಢಪಡಿಸುತ್ತವೆ. 

On Kankadasa Jayanthi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ