ಟಿ. ಎಸ್. ಗೋಪಾಲ್
ಟಿ. ಎಸ್. ಗೋಪಾಲ್
ಕನ್ನಡ ಪ್ರಾಧ್ಯಾಪನ, ನಿಸರ್ಗ ಪ್ರೇಮ, ಕಲಾ ದರ್ಶನ, ವ್ಯಾಕರಣ, ಸಾಹಿತ್ಯ, ಉಪನ್ಯಾಸ ಹೀಗೆ ಹತ್ತು ಹಲವು ವಿಧಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವವರು ನನ್ನ ಹೆಮ್ಮೆಯ, ಪ್ರೀತಿಯ ಅಣ್ಣ ಟಿ. ಎಸ್. ಗೋಪಾಲ್.
ಗೋಪಾಲ್ 1955ರ ಡಿಸೆಂಬರ್ 1ರಂದು ಹಾಸನದಲ್ಲಿ ಜನಿಸಿದರು.
ಶಿಶುವಿಹಾರ, ಎಲ್.ಕೆ.ಜಿ, ಯು.ಕೆ.ಜಿಗಳ ವಿದ್ಯಾಭ್ಯಾಸ ಪದ್ಧತಿಗಳು ಇನ್ನೂ ಚಾಲ್ತಿಯಲ್ಲಿರದಿದ್ದ ಆ ದಿನಗಳಲ್ಲಿ ಮಕ್ಕಳು ಮೊದಲನೇ ತರಗತಿಗೆ ಹೋಗಲು ಐದು ವರ್ಷ ಕಾಯಬೇಕಿತ್ತು. ಇನ್ನೂ ಐದು ವರ್ಷ ತುಂಬಿಲ್ಲದಿದ್ದಲ್ಲಿ ಹುಟ್ಟಿದ ದಿನಾಂಕವನ್ನೇ ಐದು ವರ್ಷಕ್ಕೆ ತಕ್ಕಂತೆ ಹೊಂದಿಸಿ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವುದು ಅಂದಿನ ರೂಢಿ. ಇನ್ನೂ ಐದು ತುಂಬದಿದ್ದ ಮಗ ಗೋಪಾಲನನ್ನು ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯರು ಮತ್ತು ತಾಯಿ ಸೀತಮ್ಮನವರು ವಿದ್ಯಾಧಿಕಾರಿಗಳ ಬಳಿ ಕರೆದೊಯ್ದು, “ನಮ್ಮ ಮಗನಿಗೆ ಎಲ್ಲಾ ಚೆನ್ನಾಗಿ ಬರುತ್ತೆ, ಈಗಲೇ ಶಾಲೆಗೆ ಸೇರಿಸಲು ಅನುಮತಿ ಕೊಡಿ” ಅಂದಾಗ, ಈತನನ್ನು ಹಲವಾರು ರೀತಿ ಪ್ರಶ್ನಿಸಿ ಉತ್ತರ ಪಡೆದು ಅಚ್ಚರಿಯಿಂದ ಸಂತೋಷಿಸಿದ ವಿದ್ಯಾಧಿಕಾರಿಗಳು ಹುಟ್ಟಿದ ದಿನಾಂಕದಲ್ಲಿ ಯಾವುದೇ ಬದಲಾವಣೆಯ ಅವಶ್ಯಕತೆಯೇ ಇಲ್ಲದೆ, ಗೋಪಾಲನು ನೇರ ಎರಡನೇ ತರಗತಿಗೆ ಸೇರಲು ಅನುಮತಿ ನೀಡಿದರು.
ಈ ಗೋಪಾಲ ತನ್ನ ಬಾಲ್ಯದಲ್ಲಿ ಕೇವಲ ಶಾಲೆಯ ಪಾಠದ ಓದಿನಲ್ಲಿ ಮಾತ್ರ ಮುಂದಿದ್ದಲ್ಲದೆ, ತನ್ನ ಮನೆ ಅಕ್ಕಪಕ್ಕದ ಮನೆ ಎಂಬ ಭೇದವಿಲ್ಲದೆ ಸಿಕ್ಕ ಸಿಕ್ಕದ್ದೆಲ್ಲವನ್ನೂ ಓದುತ್ತಿದ್ದ, ಎಲ್ಲರೊಡನೆ ಬೆರೆತು ಆಡುತ್ತಿದ್ದ, ಹಾಡುತ್ತಿದ್ದ, ಹರಿಕಥೆ ಮಾಡುತ್ತಿದ್ದ, ಚಿತ್ರ ಬರೆಯುತ್ತಿದ್ದ, ರಂಗೋಲಿ ಹಾಕುತ್ತಿದ್ದ, ತನಗಿಂತ ಹಿರಿಯ ಮಕ್ಕಳಿಗೂ ಪಾಠ ಹೇಳಿಕೊಡುತ್ತಿದ್ದ, ಭಿಕ್ಷದವರಂತೆ ಹಾಡು ಹೇಳಿ ಗಲಿಬಿಲಿಗೊಳಿಸುತ್ತಿದ್ದ, ನಾನು ಹೋಟೆಲ್ ಮಾಣಿ ಆಗುತ್ತೇನೆ ಎಂದು ಪುಟಾಣಿ ಪೆನ್ಸಿಲ್ ಕಿವಿಗೆ ಸಿಗಿಸಿಕೊಳ್ಳುತ್ತಿದ್ದ.... ಹೀಗೆ ಆತ ಮಾಡದ್ದು ಎಂಬುದೇ ಇರಲಿಲ್ಲ. ಕುಳ್ಳಗೆ ಸಣ್ಣಗೆ ಸದಾ ವಿನೋದದಿಂದಿರುತ್ತಿದ್ದ ಗೋಪಾಲನ ಜೊತೆಗೂಡಲು ಹಿರಿಯ ಕಿರಿಯರ ಭೇಧವಿಲ್ಲದೆ ಎಲ್ಲರಿಗೂ ಆನಂದವಿರುತ್ತಿತ್ತು. ಗೋಪಾಲ ಏಳನೇ ತರಗತಿಯಲ್ಲಿ ಹಾಸನ ಜಿಲ್ಲೆಗೇ ಪ್ರಥಮನಾಗಿ ರ‍್ಯಾಂಕ್ ಪಡೆದಾಗ ಇಡೀ ಹಾಸನವೇ ಸಂಭ್ರಮಿಸಿತ್ತು.
ಮುಂದೆ ಮೈಸೂರಿನಲ್ಲಿ ತನ್ನ ಓದನ್ನು ಮುಂದುವರೆಸಿದ ಟಿ. ಎಸ್. ಗೋಪಾಲ್, ಹೈಸ್ಕೂಲು ವಿದ್ಯಾಭ್ಯಾಸವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಹಾಗೂ ಪಿ.ಯು ವಿದ್ಯಾಭ್ಯ್ಯಾಸವನ್ನು ವಿಜ್ಞಾನ ವಿಷಯದಲ್ಲಿ ನಡೆಸಿದರೂ ಈತನಲ್ಲಿ ಕನ್ನಡದ ಕುರಿತಾಗಿ ಅಪಾರವಾದ ಆಸ್ತೆ ಮನೆಮಾಡಿಕೊಂಡಿತ್ತು. ಅಂದಿನ ದಿನಗಳಲ್ಲೇ ಅವರ ಅನೇಕ ಕಥೆ, ಕವನ, ಲಲಿತ ಬರಹಗಳು ಎಲ್ಲ ಪ್ರಸಿದ್ಧ ಪತ್ರಿಕೆಗಳಲ್ಲಿ ಆಗ್ಗಿಂದಾಗ್ಗೆ ಪ್ರಕಟಗೊಳ್ಳುತ್ತಿತ್ತು. ಇವರ ಕನ್ನಡದಲ್ಲಿನ ಆಸ್ತೆಯನ್ನು ಅರಿತಿದ್ದ, ಅಂದಿನ ದಿನಗಳಲ್ಲಿ ವಿದ್ಯಾರ್ಥಿ ದೆಸೆಯಲ್ಲಿದ್ದ ದೇವನೂರ ಮಹಾದೇವ ಮತ್ತು ಸಂಗಡಿಗರು ಮನೆಗೆ ಬಂದು ನಿಮ್ಮ ಮಗನನ್ನು ಕನ್ನಡವನ್ನು ಓದಲಿಕ್ಕೆ ಸೇರಿಸಿ ಎಂದು ಅಪ್ಪ ಅಮ್ಮನ ಬಳಿ ಆತ್ಮೀಯ ಒತ್ತಾಸೆ ನೀಡಿದರು. ಹೀಗಾಗಿ ವಿಜ್ಞಾನದ ಪದವಿಗೆ ಯುವರಾಜಾ ಕಾಲೇಜಿಗೆ ಸೇರಿದ್ದ ಗೋಪಾಲ್ ಪಕ್ಕದ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಅಧ್ಯಯನಕ್ಕೆ ಬಂದಿಳಿದರು. ತಾವು ಮಹಾರಾಜಾ ಕಾಲೇಜಿಗೆ ಬರಲು ಇದ್ದ ಮತ್ತೊಂದು ಆಕರ್ಷಣೆ ಎಂದರೆ, ಮಹಾರಾಜಾ ಕಾಲೇಜಿನಲ್ಲಿ ಆಗಾಗ ವಿದ್ಯಾರ್ಥಿಗಳು ಮುಷ್ಕರ ಹೂಡಿ ಸಂತೋಷಿಸುತ್ತಿದ್ದುದು ಎಂದು ಕೂಡಾ ಗೋಪಾಲ್ ಒಂದು ಕಡೆ ವಿನೋದಪೂರ್ಣವಾಗಿ ಲಿಖಿಸಿದ್ದಾರೆ. ತಮ್ಮ ನಲ್ಮೆಯ ಕನ್ನಡಕ್ಕೆ ಬಂದ ಗೋಪಾಲ್ ಬಿ.ಎ ಮತ್ತು ಎಂ.ಎ ಪದವಿಗಳನ್ನು ಬಹಳಷ್ಟು ಚಿನ್ನದ ಪದಕಗಳ ಉತ್ತುಂಗ ಸಾಧನೆಯೊಂದಿಗೆ ಪೂರೈಸಿದರು.
ಇಪ್ಪತ್ತೂ ತುಂಬದ ಕಿರಿಯ ವಯಸ್ಸಿನಲ್ಲೇ ಕೊಡಗಿನ ಶ್ರೀಮಂಗಲದ ಕಾಲೇಜಿನಲ್ಲಿ ಅಧ್ಯಾಪಕರಾಗಿ ತಮ್ಮ ಸೇವೆಯನ್ನು ಆರಂಭಿಸಿದ ಟಿ. ಎಸ್. ಗೋಪಾಲ್ ಅದೇ ಕಾಲೇಜಿನಲ್ಲಿ ಹಲವಾರು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇನ್ನೂ ಸೇವಾವಧಿ ಉಳಿದಿರುವಂತೆಯೇ ಐಚ್ಚಿಕ ನಿವೃತ್ತಿ ಪಡೆದರಾದರೂ ಒಟ್ಟು 38 ವರ್ಷಗಳಷ್ಟು ಸುದೀರ್ಘ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾದರು. ತಮ್ಮ ಸೇವಾವಧಿಯಲ್ಲಿ ಗ್ರಾಮೀಣ ಪರಿಸರದಲ್ಲಿ ತಾವು ಕಾರ್ಯನಿರ್ವಹಿಸುತ್ತಿದ್ದ ಶ್ರೀಮಂಗಲಾ ವಿದ್ಯಾಸಂಸ್ಥೆಯ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ ಗೋಪಾಲ್, ತಾವು ಕಾರ್ಯನಿರ್ವಹಿಸಿದ ವಿದ್ಯಾಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿ, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ, ಅದರಲ್ಲೂ ಕಾಡು ಮತ್ತು ವನ್ಯಜೀವಿಗಳ ಕುರಿತಾದ ಪ್ರೇಮವನ್ನು ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಬಹಳಷ್ಟು ಶ್ರಮಿಸಿದರು. ಇದಲ್ಲದೆ ಕೊಡಗಿನ ತಮ್ಮ ಸುತ್ತ ಮುತ್ತಲ ಅಧ್ಯಾಪಕ ವೃಂದದಲ್ಲೂ ತಮ್ಮ ಆತ್ಮೀಯ ಹೃದ್ಭಾವವನ್ನು ವ್ಯಾಪಕವಾಗಿ ಪಸರಿಸಿದ್ದರು.
ಅಧ್ಯಾಪನ ಕ್ಷೇತ್ರದ ಆಚೆಯಲ್ಲಿ ಸಹಾ ಟಿ. ಎಸ್. ಗೋಪಾಲರ ಸೇವೆ ಹತ್ತು ಹಲವು ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಗ್ರಂಥ ರಚನೆ, ಆಕಾಶವಾಣಿಯಲ್ಲಿ ಉಪನ್ಯಾಸಗಳು, ಅರಣ್ಯ- ನಿಸರ್ಗ – ಪ್ರಕೃತಿಯ ಕುರಿತಾದ ಅಧ್ಯಯನ ಮತ್ತು ತರಬೇತಿ ಶಿಬಿರಗಳ ನಿರ್ವಹಣೆ , ಜೈವಿಕ ಇಂಧನದ ಮಹತ್ವದ ಕುರಿತಾದ ಕಾರ್ಯಗಳು, ನಾಡಿನಾದ್ಯಂತ ಸಂಚರಿಸಿ ಪ್ರಾಚೀನ ದೇಗುಲಗಳು, ಮತ್ತು ಸ್ಥಳ ವಿವರಗಳ ಕುರಿತಾದ ಪತ್ರಿಕಾ ಲೇಖನಗಳು, ಪತ್ರಿಕಾ ಸಂಪಾದನೆ ಹೀಗೆ ಅವರ ಕಾರ್ಯಗಳು ಬಹುಮುಖಿಯಾಗಿವೆ.
ಟಿ. ಎಸ್. ಗೋಪಾಲರು ಕನ್ನಡ ಭಾಷೆ, ವ್ಯಾಕರಣಗಳಿಗೆ ಸಂಬಂಧಿಸಿದಂತೆ ಹಲವಾರು ಮಹತ್ವದ ಗ್ರಂಥಗಳನ್ನು ರಚಿಸಿದ್ದು ಅವೆಲ್ಲಾ ಅನೇಕ ಮರುಮುದ್ರಣಗಳನ್ನು ಕಾಣುತ್ತಾ ಅಪಾರ ಜನಪ್ರಿಯತೆ ಕಂಡಿವೆ. ಎಪ್ಪತ್ತರ ದಶಕಕ್ಕೆ ಹಿಂದಿದ್ದ ತಲೆಮಾರನ್ನು ಹೊರತುಪಡಿಸಿದಲ್ಲಿ, ನಂತರದ ತಲೆಮಾರಿನಲ್ಲಿ ಮೂಡಿಬಂದ ಕನ್ನಡ ವ್ಯಾಕರಣ ಕುರಿತಾದ ವಿಷಯಗಳಲ್ಲಿ ಇವರು ನೀಡಿರುವ ಕೊಡುಗೆ ಅತ್ಯಂತ ಮಹತ್ವಪೂರ್ಣವಾದದ್ದು. ವಿದ್ಯಾರ್ಥಿಗಳಿಗೆ ತಮ್ಮ ಪಠ್ಯ ಅಧ್ಯಯನಕ್ಕೆ ಅನುಕೂಲವಾದ ‘ಆಯಾಸ್’ ನಾಟಕ ವಿಮರ್ಶೆ ಮುಂತಾದ ಕೃತಿಗಳು; ‘ಕನ್ನಡ ವ್ಯಾಕರಣ ಪ್ರವೇಶ’; ‘ಕನ್ನಡ ಕಲಿಕೆ’ ಮಾಲಿಕೆಯ ‘ಕನ್ನಡ ನುಡಿಗಟ್ಟುಗಳು’, ‘ಕನ್ನಡವನ್ನು ತಪ್ಪಿಲ್ಲದೆ ಓದಿ ಬರೆಯುವುದು ಹೇಗೆ?’, ‘ನಾಮಪದ’, ‘ಪತ್ರಲೇಖನ’, ‘ನಾನಾರ್ಥ ಪದಕೋಶ’, ‘ಕನ್ನಡ ವ್ಯಾಕರಣ ಪದಕೋಶ’, ‘ತತ್ಸಮ-ತದ್ಭವ ಪದಕೋಶ’, ‘ವಿರುದ್ಧಾರ್ಥ ಪದಕೋಶ’, ‘ಕ್ರಿಯಾಪದ’, ‘ಸಮಾನಾರ್ಥ ಪದಕೋಶ’, ‘ಲೇಖನ ಚಿಹ್ನೆಗಳು’, ‘ಕನ್ನಡ ಛಂದಸ್ಸು’, ‘ಕನ್ನಡ ಪದ ಸಂಪತ್ತು’, 'ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?', 'ಗಾದೆ ಮಾತು - ಅರ್ಥ ವಿಶ್ಲೇಷಣೆ', 'ಹೊಸಗನ್ನಡ ಕವಿ ಸೂಕ್ತಿಗಳು', ‘ಕನ್ನಡ ಓದು ಬರೆಹದ ಸಾಮಾನ್ಯ ತಪ್ಪುಗಳು', 'ಸಂಧಿ-ಸಮಾಸ', 'ಕನ್ನಡ ಕವಿಪರಿಚಯ ಕೋಶ', 'ಭಾರತೀಯ ಕಾವ್ಯ ಮೀಮಾಂಸೆ', 'ಉಕ್ತಲೇಖನ', ‘ಕನ್ನಡ ವ್ಯಾಕರಣ ಅಭ್ಯಾಸ ಮಾರ್ಗದರ್ಶಿ' ಮುಂತಾದವು; ‘ಕೊಡವ-ಕನ್ನಡ ಪದಕೋಶ’, ‘ಕನ್ನಡ ಕೌಶಲ’, ‘ಕನ್ನಡಕ್ಕೊಂದು ಕೈಪಿಡಿ’, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ' ಮುಂತಾದ ಅನೇಕ ಗೋಪಾಲ್ ಅವರ ಕೃತಿಗಳನ್ನು ಈ ನಿಟ್ಟಿನಲ್ಲಿ ಸ್ಮರಿಸಬಹುದಾಗಿದೆ.
ನಾವು ಕೊಡಗಿನ ಅರಣ್ಯ ಪ್ರದೇಶವಾದ ನಾಗರಹೊಳೆಯನ್ನು ನೆನೆಯುವಾಗ ಆ ಕಾಡು ಮತ್ತು ಆ ಕಾಡಿನಲ್ಲಿರುನ ಜೀವಿಗಳ ಸಂರಕ್ಷಣೆಗಾಗಿ ಶ್ರಮಿಸಿದ ಅಲ್ಲಿನ ಅರಣ್ಯಾಧಿಕಾರಿಗಳಾಗಿ ಪ್ರಸಿದ್ಧರಾದ ಕೆ. ಎಂ. ಚಿಣ್ಣಪ್ಪ ಹಾಗೂ ವನ್ಯಜೀವಿ ಸಂರಕ್ಷಣೆಯ ವಿಚಾರದಲ್ಲಿ ನಾಗರಹೊಳೆಯಲ್ಲಿ ಮಹತ್ವದ ಸಂಶೋಧನೆ ನಡೆಸಿ ಪ್ರಸಿದ್ಧರಾದ ಡಾ. ಉಲ್ಲಾಸ್ ಕಾರಂತ್ ಬಹಳ ನೆನಪಾಗುತ್ತಾರೆ. ಈ ಮಹನೀಯರ ಕಾರ್ಯದಿಂದ ಪ್ರಭಾವಿತರಾದ ಟಿ. ಎಸ್. ಗೋಪಾಲರು, ಕೆ. ಎಂ. ಚಿಣ್ಣಪ್ಪನವರೊಡನೆ ಅವರು ನಡೆಸುತ್ತಿದ್ದ ಅರಣ್ಯ ಸಂರಕ್ಷಣಾ ಶಿಬಿರಗಳಲ್ಲಿ ಸ್ವಯಂ ಅಭ್ಯರ್ಥಿಯಾಗಿ, ಸಹಾಯಕರಾಗಿ, ನಿಸರ್ಗದ ಅಧ್ಯಯನಕಾರರಾಗಿ, ತರಬೇತುದಾರರಾಗಿ ಹೀಗೆ ಹಲವು ರೀತಿಯಲ್ಲಿ ಭಾಗವಹಿಸತೊಡಗಿದ್ದಲ್ಲದೆ, ಚಿಣ್ಣಪ್ಪ, ಉಲ್ಲಾಸ್ ಕಾರಂತ್ ಹಾಗೂ ಇನ್ನಿತರ ಉತ್ಸಾಹಿಗಳ ಜೊತೆಗೆ ‘ನಾವಿಕೋಯೆಡ್’ ಸಂಘಟನೆಯ ಚಾಲನೆಯಲ್ಲಿ ಪಾತ್ರಧಾರಿಯಾಗಿ ಆ ಮೂಲಕ ವ್ಯಾಪಕವಾಗಿ ತರಬೇತಿ ಶಿಬಿರಗಳು, ‘ನಿಸರ್ಗ’ ಪತ್ರಿಕೆ ಮತ್ತು ಕಾಡಿನ ಸಂಪನ್ಮೂಲಗಳ ತಿಳುವಳಿಕೆ ನೀಡುವ ಪ್ರಕಟಣೆ ಮುಂತಾದ ಅನೇಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜೊತೆಗೆ ಕೆ. ಎಂ. ಚಿಣ್ಣಪ್ಪನವರ ಅಸಾಮಾನ್ಯ ಬದುಕು ಸಾಧನೆಗಳು ಈ ಲೋಕಕ್ಕೆ ತಿಳಿಯಬೇಕೆಂಬ ನಿಟ್ಟಿನಲ್ಲಿ ಕೆ. ಎಂ. ಚಿಣ್ಣಪ್ಪನವರೊಂದಿಗೆ ಹಲವಾರು ದಿನಗಳವರೆಗೆ ನಿರಂತರವಾಗಿ ಮಾತುಕತೆ ನಡೆಸಿ ‘ಕಾಡಿನೊಳಗೊಂಡು ಜೀವ’ ಎಂಬ ಮೂರು ಭಾಗಗಳ ಕೃತಿಯನ್ನು ರಚಿಸಿದರು. ಈ ಕೃತಿಯ ಪ್ರತಿಯನ್ನು ಓದಿ ಸಂತಸಗೊಂಡ ದಿವಂಗತ ಪೂರ್ಣಚಂದ್ರ ತೇಜಸ್ವಿಯವರು ಈ ಕೃತಿಗಳನ್ನು ತಮ್ಮ ಪುಸ್ತಕ ಪ್ರಕಾಶನದಲ್ಲಿ ಪ್ರಕಟಿಸಿದರು. ಮುಂದೆ ನವಕರ್ನಾಟಕ ಪ್ರಕಾಶನದಿಂದ ಏಕಗ್ರಂಥವಾಗಿ ಪ್ರಕಟವಾಗುತ್ತಿರುವ ಈ ಕೃತಿ ಅನೇಕ ಮರುಮುದ್ರಣಗಳನ್ನು ಕಾಣುತ್ತಾ ಬರುತ್ತಿದೆ. ಈ ನಂತರದಲ್ಲಿ ಟಿ. ಎಸ್. ಗೋಪಾಲ್ ಅವರು ಉಲ್ಲಾಸ್ ಕಾರಂತರ ಜೊತೆಗೆ ನಡೆಸಿದ ಮಾತುಕತೆಗಳ ಮೇರೆಗೆ ಕಾರಂತರ ಹುಲಿಯ ಸಂಶೋಧನಾ ಅಧ್ಯಯನದ ತಿರುಳನ್ನೂ ಹುಲಿಯ ಬದುಕನ್ನೂ ಅಪ್ಯಾಯಮಾನವಾಗಿಯೂ ನೈಸರ್ಗಿಕವಾಗಿಯೂ ಕಟ್ಟಿಕೊಡುವ ‘ಹುಲಿರಾಯನ ಆಕಾಶವಾಣಿ’ ಕೃತಿಯನ್ನು ರಚಿಸಿದರು. ಈ ಕೃತಿ ಸಹಾ ನವಕರ್ನಾಟಕ ಬಳಗದಿಂದ ಪ್ರಕಟಗೊಂಡು ಅಪಾರ ಜನಪ್ರಿಯತೆ ಗಳಿಸಿದೆ. ಈ ಕೃತಿಗಳೇ ಅಲ್ಲದೆ ಆಕಾಶವಾಣಿಯಲ್ಲಿ ನಡೆಸಿದ ಸಂಭಾಷಣೆಗಳನ್ನು ಸಮಗ್ರವಾಗಿಸಿ ‘ವನ್ಯ ಜೀವಿಗಳ ರಮ್ಯಲೋಕದಲ್ಲಿ’ ಹಾಗೂ ಕಾಡು ನಮಗೇನನ್ನು ಕಲಿಸುತ್ತದೆ ಎನ್ನುವ ನಿಟ್ಟಿನಲ್ಲಿ ‘ಕಾಡು ಕಲಿಸುವ ಪಾಠ’ ಮುಂತಾದ ಮಹತ್ವದ ಕೃತಿಗಳಿಗೂ ಗೋಪಾಲ್ ರೂಪ ಕೊಟ್ಟಿದ್ದಾರೆ. ‘ಕಾಡು ಕಲಿಸುವ ಪಾಠ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2013ನೇ ಸಾಲಿನ ವಿಜ್ಞಾನ ಸಾಹಿತ್ಯ ಪ್ರಕಾರದ ಬಹುಮಾನ ಸಂದಿದೆ.
ಟಿ. ಎಸ್. ಗೋಪಾಲರಲ್ಲಿ ಇರುವ ಪರಿಸರ ಪ್ರೇಮ ಹಾಗೂ ಗ್ರಂಥ ರಚನಾ ಪಾಂಡಿತ್ಯಗಳನ್ನು ಗಮನಿಸಿದ ಕರ್ನಾಟಕ ಸರ್ಕಾರ ಅವರನ್ನು ‘ಜೈವಿಕ ಇಂಧನ’ ಕುರಿತಾದ ವಿಚಾರ ಪ್ರಸರಣ ಕಾರ್ಯದಲ್ಲಿ ಮಹತ್ವದ ಲೇಖಕರನ್ನಾಗಿ ಬಳಸಿಕೊಂಡಿತು. ಈ ನಿಟ್ಟಿನಲ್ಲಿ ಅವರು ಜೈವಿಕ ಇಂಧನದ ಬಗ್ಗೆ ತಿಳುವಳಿಕೆ ನೀಡುವ ಬಹಳಷ್ಟು ಬರಹಗಳನ್ನು ಮೂಡಿಸಿದ್ದೇ ಅಲ್ಲದೆ ‘ಭವಿಷ್ಯದ ಭರವಸೆ ಹಸಿರು ಇಂಧನ’ ಎಂಬ ಮಹತ್ವದ ಕೃತಿಯನ್ನೂ ಮೂಡಿಸಿದ್ದಾರೆ.
ಟಿ. ಎಸ್. ಗೋಪಾಲರ ಮತ್ತೊಂದು ಮಹತ್ವದ ಕೊಡುಗೆ ಎಂದರೆ ನವಕರ್ನಾಟಕ ಪ್ರಕಾಶನವು ಡಾ. ನಾ. ಸೋಮೇಶ್ವರ ಅವರ ಸಂಪಾದಕತ್ವದಲ್ಲಿ ಮೂಡಿಸುತ್ತಿರುವ ವಿಶ್ವಮಾನ್ಯರು ಮಾಲಿಕೆಯಲ್ಲಿ ಮೂಡಿಬರುತ್ತಿರುವ ಕೃತಿಗಳು. ಈ ಮಾಲಿಕೆಯಲ್ಲಿ ಈಗಾಗಲೇ ಗೋಪಾಲರು ಬರೆದಿರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಬಿ.ಎಂ.ಶ್ರೀ, ಟಿ. ಎಸ್. ವೆಂಕಣ್ಣಯ್ಯ, ಪಂ. ಜೆ. ಮಂಗೇಶ ರಾವ್, ಎಂ. ಗೋವಿಂದ ಪೈ, ಎ. ಆರ್. ಕೃಷ್ಣಶಾಸ್ತ್ರಿ, ಕುವೆಂಪು, ಶಿವರಾಮ ಕಾರಂತ, ದ. ರಾ ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ, ಜಿ. ಪಿ. ರಾಜರತ್ನಂ, ಟಿ. ಪಿ. ಕೈಲಾಸಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಡಿ.ವಿ.ಜಿ. ಬಳಗಕ್ಕಾಗಿ ‘ಆಧುನಿಕ ಕನ್ನಡದ ಆದಿಪುರುಷ ಡಿ.ವಿ. ಗುಂಡಪ್ಪ, ಹೊಯ್ಸಳ ಕರ್ನಾಟಕ ಸಂಘದವರಿಗಾಗಿ ಶ್ರೀ ಬಿ. ಎಸ್. ಚಂದ್ರಶೇಖರ್ (ಬಾಕೂರು ಚಂದ್ರು) ಮುಂತಾದ ವ್ಯಕ್ತಿಚಿತ್ರಗಳನ್ನೂ ಗೋಪಾಲ್ ಲಿಖಿಸಿದ್ದಾರೆ. 'ಜ್ಞಾನಪೀಠಕೆ ಮೆರುಗು ಕನ್ನಡದ ಬೆಡಗು' ಎಂಬುದು ಇವರ ಮತ್ತೊಂದು ಕೃತಿ.
'ಅಧ್ಯಾಪನದ ಅವಾಂತರಗಳು', 'ಕೀರುತಿಯ ಬೆನ್ನು ಹತ್ತಿ', 'ಒಗಟುಗಳ ಗಂಟು ನಂಟು' ಮುಂತಾದ ಹಲವು ವೈವಿಧ್ಯಮಯ ಕೃತಿಗಳೂ ಗೋಪಾಲ್ ಅವರಿಂದ ಮೂಡಿಬಂದಿವೆ. ಅನಂತಕುಮಾರ್ ಪ್ರತಿಷ್ಠಾನದ 'ಅನಂತಪಥ' ಮಾಸಪತ್ರಿಕೆ, ಮಕ್ಕಳ ಪತ್ರಿಕೆ 'ಚಿಣ್ಣರ ಚೇತನ' ಮುಂತಾದವುಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅನಂತಕುಮಾರ್ ಅವರ ಬಾಳಿನ ಹೆಜ್ಜೆಗಳು ಮತ್ತು ಸಾಧನೆಗಳನ್ನು ಗುರುತಿಸಿರುವ 'ಅನಂತಯಾನ' ಮತ್ತು 'ಅನಂತ ಚೇತನ' ಕೂಡ ಮೂಡಿಸಿದ್ದಾರೆ.
ಅಧ್ಯಾಪನದ ನಿವೃತ್ತಿಯ ನಂತರದಲ್ಲಿ ಟಿ. ಎಸ್. ಗೋಪಾಲರನ್ನು ಸೆಳೆದಿರುವ ಮತ್ತೊಂದು ವಿಚಾರವೆಂದರೆ ವಿವಿಧ ಸ್ಥಳ ದರ್ಶನ - ಅದರಲ್ಲೂ ಪುರಾತನ ದೇಗುಲಗಳ ಅಧ್ಯಯನ. ಈ ನಿಟ್ಟಿನಲ್ಲಿ ಗೋಪಾಲರು ದೇಶ ವಿದೇಶಗಳಲ್ಲಿ ಹಲವಾರು ಯಾತ್ರೆಗಳನ್ನು ಕೈಗೊಂಡಿರುವುದರ ಜೊತೆಗೆ ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ಎಲ್ಲ ಪುರಾತನ ದೇಗುಲಗಳ ಅಧ್ಯಯನವನ್ನು ನಡೆಸಿ ಅವುಗಳ ಸಾರವನ್ನು ಓದುಗರಿಗೆ ಆಪ್ತವಾಗುವಂತೆ ವಿಜಯಕರ್ನಾಟಕದ ಬೋಧಿವೃಕ್ಷದಲ್ಲಿ ಹಲವಾರು ವಾರಗಳಿಂದ ‘ಪುರಾತನ ದೇಗುಲಗಳು’ ಎಂಬ ಅಂಕಣವಾಗಿ ನಿರೂಪಿಸುತ್ತಾ ಬಂದಿದ್ದಾರೆ. ಈ ಲೇಖನಗಳು ಹಲವಾರು ಕಣ್ಮನಸೆಳೆಯುವ ಚಿತ್ರಸಮೇತ ಹಲವು 'ಪುರಾತನ ದೇಗುಲಗಳು' ಸಂಪುಟಗಳಾಗಿ 'ಹಂಪಿ', ಝಾನ್ಸಿಯಿಂದ ಸಾಂಚಿಯವರೆಗೆ' ಮೊದಲಾದ ವಿಶಿಷ್ಟ ಗ್ರಂಥಗಳಾಗಿ ಓದುಗರ ಕೈ ಸೇರುತ್ತಾ ಬಂದಿವೆ. ಇದಲ್ಲದೆ ಟಿ. ಎಸ್. ಗೋಪಾಲರು ಈ ವಿಚಾರದಲ್ಲಿ ಸಮಾನಾಸಕ್ತ ಗೆಳೆಯರಾದ ಚಕ್ರಪಾಣಿ ಮುಂತಾದ ಗೆಳೆಯರೊಂದಿಗೆ ಹಲವು ಕೃತಿಗಳ ಪ್ರಕಟಣೆಗಳಲ್ಲಿ ಕೈಜೋಡಿಸಿರುವುರ ಜೊತೆಗೆ ಆ ತಂಡದ ಮುಖೇನ ಫೆಸ್ಬುಕ್ಕಿನ ಆವರಣದಲ್ಲಿ ‘Ancient Temples and Monuents of Karnataka’ ಎಂಬ ತಾಣದ ರೂಪದಲ್ಲಿ ವಿಶಿಷ್ಟ ವಿಷಯಗಳನ್ನು ಆಸಕ್ತರಿಗೆ ಹಂಚುತ್ತಿದ್ದಾರೆ. ದೇಶ ವಿದೇಶಗಳಿಗೆ ತಮ್ಮ ಸಾಂಸ್ಕೃತಿಕ ಆಸಕ್ತಿಗಳಿಗಾಗಿ ನಿರಂತರ ಪಾಯಣಿಸುವ ಹವ್ಯಾಸವುಳ್ಳ ಗೋಪಾಲ್ ಅವರ ಈ ಕುರಿತಾದ ಲೇಖನಗಳು ಕೂಡಾ ಪತ್ರಿಕೆಗಳಲ್ಲಿ ನಿರಂತರ ಮೂಡಿಬರುತ್ತಿವೆ. ಆಕಾಶವಾಣಿಯಲ್ಲೂ ಈ ಕುರಿತ ಅವರ ಉಪನ್ಯಾಸಗಳು ನಿರಂತರವಾಗಿ ಮೂಡಿಬರುತ್ತಿವೆ.
ನಿರಂತರವಾಗಿ ಕ್ರಿಯಾಶೀಲರಾದ ಗೋಪಾಲರ ಬಗ್ಗೆ ಎಷ್ಟು ಹೇಳಿದರೂ ಹೇಳದಿರುವಷ್ಟು ಬಹಳ ಉಳಿದಿರುತ್ತದೆ. ಕೆಲವು ವರ್ಷದ ಹಿಂದೆ ಮಗಳ ಮನೆಗೆ ಮುಂಬೈಗೆ ಹೋದವರು ಅಲ್ಲಿ ಒಂದು ತಿಂಗಳ ಕಾಲ ಚಿತ್ರತರಬೇತಿಗೆ ಹೋಗಿ ತಮ್ಮಲ್ಲಿದ್ದ ಚಿತ್ರಕಲಾ ಕೌಶಲ್ಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿಕೊಂಡು ಬಂದಿದ್ದಾರೆ. ಹೆಗ್ಗೋಡಿನಲ್ಲಿ ಜರುಗುವ ರಾಜಾರಾಮ್ ನೇತೃತ್ವದ ಛಾಯಾಗ್ರಹಣ ಶಿಬಿರಗಳಲ್ಲಿ ನಿರಂತರ ಪಾಲ್ಗೊಳ್ಳತ್ತ ಬಂದಿದ್ದಾರೆ. ಗೋಪಾಲರ ಪತ್ನಿ ಗೀತಾ ಅವರು ಗೋಪಾಲರ ಕನ್ನಡ ಎಂ.ಎ. ಓದುವಾಗಿನ ಸಹಪಾಠಿಗಳಾಗಿದ್ದವರು. ಅವರು ಅಧ್ಯಾಪನಕ್ಕಿಳಿಯದಿದ್ದರೂ ಸಾಹಿತ್ಯ ಸಂಸ್ಕೃತಿ ಕರಕುಶಲ ಚಟುವಟಿಕೆಗಳಲ್ಲಿ ನಿರಂತರ ಕ್ರಿಯಾಶೀಲರಾಗಿದ್ದು ಗೋಪಾಲರ ಕ್ರಿಯಾಶೀಲತೆಗೆ ನಿರಂತರವಾಗಿ ಪೂರಕವಾಗಿದ್ದಾರೆ. ಇವರ ಪುತ್ರಿ ಟಿ. ಜಿ. ಶ್ರೀಲತಾ ಚಾರ್ಟರ್ಡ್ ಅಕೌಂಟೆಂಟ್ – ಕಂಪೆನಿ ಸೆಕ್ರೆಟರಿ – ಎಲ್ ಎಲ್ ಬಿ ವಿದ್ಯಾರ್ಹತೆಗಳಲ್ಲಿ ಉನ್ನತ ಶ್ರೇಣಿಯ ಸಾಧನೆ ಮಾಡಿರುವುದರ ಜೊತೆಗೆ ಕಲೆಯಲ್ಲಿ ಅಸಾಧಾರಣ ಪ್ರತಿಭೆ ಹೊಂದಿದ್ದರೆ, ವೃತ್ತಿಯಿಂದ ತಂತ್ರಜ್ಞಾನಿಯಾದ ಮಗ ಟಿ. ಜಿ. ಶ್ರೀನಿಧಿ ಇಂದು ಕನ್ನಡದ ಪ್ರತಿಭಾವಂತ ಯುವ ವಿಜ್ಞಾನ ಬರಹಗಾರನಾಗಿ ಅಪಾರ ಹೆಸರು ಮಾಡುತ್ತಿದ್ದಾನೆ. ಕಿರಿಯ ವಯಸ್ಸಿನಲ್ಲೇ ಶ್ರೀನಿಧಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಬಹುಮಾನವನ್ನು ಕೂಡಾ ತನ್ನ ಮುಡಿಗೇರಿಸಿಕೊಂಡಿರುವುದಲ್ಲದೆ ತನ್ನ ಸೃಷ್ಟಿಯಾದ ಇಜ್ಞಾನ.ಕಾಂ ಮೂಲಕ ಕನ್ನಡ ವಿಜ್ಞಾನ ಪ್ರೇಮಿಗಳೆಲ್ಲರಲ್ಲಿ ಆಪ್ತನಾಗಿದ್ದಾನೆ. ಈ ನನ್ನ ಅಣ್ಣ ಗೋಪಾಲ್ ಮತ್ತು ಕುಟುಂಬ ನನ್ನ ಕನ್ನಡದ ಚಟುವಟಿಕೆಗಳು, ನನ್ನ ಫೆಸ್ಬುಕ್ಕಿನ ‘ಕನ್ನಡ ಸಂಪದ’ ಮತ್ತು ಅಂತರ್ಜಾಲದ www.sallapa.com ಮುಂತಾದ ಕಿರು ಪ್ರಯತ್ನಗಳಿಗೆ ಸದಾ ಸ್ಫೂರ್ತಿ ಬೆಂಬಲಗಳೂ ಆಗಿದ್ದಾರೆ. ಅಪ್ರತಿಮ ಪ್ರತಿಭಾವಂತರಾದ ಅಪ್ಪ-ಮಗ ಸೇರಿ ಇ-ಜ್ಞಾನ ಟ್ರಸ್ಟ್ ಆರಂಭಿಸಿ ಉತ್ತಮ ಪುಸ್ತಕಗಳ ಪ್ರಕಟಣೆ, ವಿತರಣೆ, ಉತ್ತಮ ಕಾರ್ಯಕ್ರಮ ನಡೆಸುವಿಕೆ, ಸೇವಾ ಮನೋಭಾವಗಳ ನಿರ್ವಹಣೆಗೆ ವ್ಯವಸ್ಥೆ ರೂಪಿಸಿದ್ದಾರೆ.
ಹೀಗೆ ತಮ್ಮ ವೈವಿಧ್ಯಮಯ ಸಾಧನೆಗಳಿಂದ ತಮ್ಮ ಬದುಕನ್ನು ಕ್ರಿಯಾಶೀಲರಾಗಿಸಿಕೊಂಡಿರುವ ನನ್ನ ಆತ್ಮೀಯ ಹಿರಿಯ ಸಹೋದರ ಟಿ. ಎಸ್. ಗೋಪಾಲ್ ಇಂದು ತಮ್ಮ ಹುಟ್ಟುಹಬ್ಬ ಆಚರಿಸುತ್ತಿರುವುದು ನಮಗೆಲ್ಲಾ ತುಂಬಾ ಸಂತೋಷ ತಂದಿದೆ. ಈ ನಮ್ಮ ಆತ್ಮೀಯ ಗೋಪಾಲರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಅಭಿವ್ಯಕ್ತಿಸುವುದರ ಜೊತೆಗೆ, ಅವರ ಬದುಕಿನ ದರ್ಶನದ ವಿವಿಧ ಹೊಳಹುಗಳು ನಮಗೆ ನಿರಂತರವಾಗಿ ಸಿಗುತ್ತಿರಲಿ ಎಂದು ಆಶಿಸುತ್ತೇನೆ.
On the birth day of my brother, scholar, writer Thiru Srinivasachar Gopal
T.S.Gopal
ಕಾಮೆಂಟ್‌ಗಳು