ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ. ಕೆ. ವೆಂಕಟರಾಮಯ್ಯ

 

ಸಿ. ಕೆ. ವೆಂಕಟರಾಮಯ್ಯ

ಸಿ. ಕೆ. ವೆಂಕಟರಾಮಯ್ಯನವರು ಪ್ರಸಿದ್ಧ ವಾಗ್ಮಿಗಳು, ಗ್ರಂಥಕರ್ತರೂ ಮತ್ತು ಆಡಳಿತಗಾರರೂ ಆಗಿ ಪ್ರಸಿದ್ಧರು.

ಸಿ. ಕೆ. ವೆಂಕಟರಾಮಯ್ಯನವರು 1896ರ ಡಿಸೆಂಬರ್ 10ರಂದು ಜನಿಸಿದರು. ತಂದೆ ಕೃಷ್ಣಪ್ಪ. ತಾಯಿ ನಂಜಮ್ಮ.  ಸೋಲೂರು, ಕುಂದೂರು ಮಾಗಡಿ, ಚೆನ್ನಪಟ್ಟಣಗಳಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಬಿ.ಎ. ಪದವಿ ಗಳಿಸಿದರು.  ಮುಂಬೈಗೆ ಹೋಗಿ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ ಪಡೆದರು.

ವೆಂಕಟರಾಮಯ್ಯನವರು ಶ್ರೀರಂಗಪಟ್ಟಣದಲ್ಲಿ ವಕೀಲಿ ನಡೆಸಿದರು. 1924ರಲ್ಲಿ ಮೈಸೂರು ಸರ್ಕಾರದಲ್ಲಿ ಭಾಷಾಂತರಕಾರರಾಗಿ ಸೇರಿ 30 ವರ್ಷಗಳ ಕಾಲ ನಿಸ್ಪೃಹಸೇವೆ ಸಲ್ಲಿಸಿ ನಿವೃತ್ತರಾದರು.

ವೆಂಕಟರಾಮಯ್ಯನವರು ಮಾತಿನಲ್ಲಿ ಮೋಡಿ ಮಾಡಬಲ್ಲ ವಾಗ್ಮಿಗಳಾಗಿದ್ದರಲ್ಲದೆ, ಬರಹದಲ್ಲಿ ಸರಳವಾಗಿ ಜನಮೆಚ್ಚುಗೆ ಪಡೆಯುವ ಗ್ರಂಥಗಳನ್ನು  ರಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಸಿಕೆವೆಂ 1936-1937 ಮತ್ತು 1938-1940ರ ಅವಧಿಗಳಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದರು. 5 ವರ್ಷಗಳ ಕಾಲ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದರು.




ಇವರ ನಿಸ್ಪೃಹ ಸೇವೆಯನ್ನು ಗೌರವಿಸಿ ಮೈಸೂರು ಮಹಾರಾಜರು ರಾಜ ಸೇವಾ ಪ್ರಸಕ್ತ ಬಿರುದನ್ನು ಇತ್ತಿದ್ದರು. ಭಾರತ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತು. ರಾಜ್ಯ ಸಾಹಿತ್ಯ ಅಕಾಡೆಮಿ 1970ರಲ್ಲಿ ಇವರಿಗೆ ಗೌರವ ಪ್ರಶಸ್ತಿ ಸಲ್ಲಿಸಿತು. 1947ರಲ್ಲಿ ಹರಪನಹಳ್ಳಿಯಲ್ಲಿ 30ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1971ರಲ್ಲಿ ಬೆಂಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಯಾಗಿದ್ದರು.

ವಿಶ್ವಖ್ಯಾತಿಯ ವಿಜ್ಞಾನಿ ಪ್ರೊ. ಸಿ. ವಿ. ವಿಶ್ವೇಶ್ವರ ಅವರು ಸಿ. ಕೆ. ವೆಂಕಟರಾಮಯ್ಯನವರ ಪುತ್ರ.

ಭಾಷಣಗಳಿಂದ ಪ್ರಖ್ಯಾತರಾದ ಸಿ. ಕೆ. ವೆಂಕಟರಾಮಯ್ಯನವರು ಶ್ರೇಷ್ಠ ಬರಹಗಾರರೂ ಆಗಿದ್ದರು. ಅವರು ನಾಟಕ, ಸಣ್ಣಕತೆ, ಜೀವನಚರಿತ್ರೆಗಳಲ್ಲಿ ಸಿದ್ಧಹಸ್ತರಾಗಿದ್ದರು. ಅವರು ಬರೆದ ಕೃತಿಗಳು ಹೀಗಿವೆ: ಹಳ್ಳಿಯ ಕಥೆಗಳು, ಮಂಡೋದರಿ (ನಾಟಕ), ತುರಾಯಿ (ಕಥೆಗಳು), ನಚಿಕೇತ (ನಾಟಕ), ಬುದ್ಧ (ಜೀವನಚರಿತ್ರೆ), ಆಳಿದ ಮಹಾಸ್ವಾಮಿಯವರು (ಜೀವನ ಚರಿತ್ರೆ), ಪೈಗಂಬರ್ (ಜೀವನ ಚರಿತ್ರೆ), ಹರ್ಷವರ್ಧನ (ಜೀವನಚರಿತ್ರೆ) ಇತ್ಯಾದಿ.

On the birth anniversary of great scholar C.K. Venkataramaiah


ಸಿ. ಕೆ. ವೆಂಕಟರಾಮಯ್ಯನವರು 1973ರ ಏಪ್ರಿಲ್ 3ರಂದು ನಿಧನರಾದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.


(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ