ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೆಂಕಟಗಿರಿರಾವ್


ದೊಡ್ಡೇರಿ ವೆಂಕಟಗಿರಿರಾವ್


ದೊಡ್ಡೇರಿ ವೆಂಕಟಗಿರಿರಾವ್ ಕನ್ನಡದ ಪ್ರಸಿದ್ಧ ಬರಹಗಾರರಾಗಿ, ವೈದ್ಯರಾಗಿ ಮತ್ತು ಛಾಯಾಚಿತ್ರಗಾರರಾಗಿ ಹೆಸರಾದವರು.

ದೊಡ್ಡೇರಿ ವೆಂಕಟಗಿರಿರಾವ್ ಅವರು  1913ರ ಡಿಸೆಂಬರ್ 28ರಂದು ಸೊರಬ ತಾಲ್ಲೂಕಿನ ದೊಡ್ಡೇರಿ ಎಂಬಲ್ಲಿ  ಜನಿಸಿದರು.  ಇದು ರಾಯರ 103ನೇ ಜನ್ಮವರ್ಷವಾಗಿದೆ.  ತಂದೆ ತಿಮ್ಮಪ್ಪನವರು ಮತ್ತು  ತಾಯಿ ರುಕ್ಮಿಣಿಯವರು.  ವೆಂಕಟಗಿರಿರಾಯರು   ಪಂಡಿತ ತಾರಾನಾಥರ ಆಯುರ್ವೇದ ವಿದ್ಯಾಲಯದಲ್ಲಿ  ಎಲ್.ಐ.ಎಂ. ಡಿಪ್ಲೊಮ ಪಧವೀದರರಾದರು..

ವೈದ್ಯರಾಗಿ ಸಾಗರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ವೆಂಕಟಗಿರಿರಾಯರು ನಂತರದಲ್ಲಿ  ತಮ್ಮ ವೃತ್ತಿಯನ್ನು  ದೊಡ್ಡಬಳ್ಳಾಪುರದಲ್ಲಿ ಕೈಗೊಂಡರು. ತಮ್ಮ ಸುದೀರ್ಘಕಾಲದ ವೈದ್ಯಕೀಯ  ಸೇವೆಯಲ್ಲಿ,  ಬಂದ ರೋಗಿಗಳಿಗೆ ಉಚಿತ ವೈದ್ಯಕೀಯ ಸಲಹೆ ಮುಖಾಂತರ ಅವರು ಕೈಗೊಂಡ  ಸಮಾಜ ಸೇವೆ ಅನನ್ಯವಾದದ್ದು.  

ದೊಡ್ಡೇರಿ ವೆಂಕಟಗಿರಿರಾಯರು  ವೃತ್ತಿಯಲ್ಲಿ ವೈದ್ಯರಾದಂತೆ, ಛಾಯಾಗ್ರಹಣ ಪ್ರವೀಣರೂ ಆಗಿದ್ದು,  ಅಖಿಲ ಭಾರತ ಫೋಟೋಗ್ರಾಫಿ ಪರಿಷತ್ತಿನ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.

1932ರ ಸುಮಾರಿನಲ್ಲೇ ಕವಿತೆಯ ಮುಖಾಂತರ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ವೆಂಕಟಗಿರಿರಾಯರು ಕಾದಂಬರಿ, ಶಿಶುಸಾಹಿತ್ಯ, ಸಣ್ಣಕಥೆ, ಲೈಂಗಿಕ ಸಾಹಿತ್ಯ, ಪ್ರವಾಸಕಥನ ಮುಂತಾದ  ಎಲ್ಲ ಪ್ರಕಾರಗಳಲ್ಲೂ  ಕೃತಿ ರಚನೆ ಮಾಡಿದರು. ಆರೋಗ್ಯ, ಲೈಂಗಿಕ ವಿಜ್ಞಾನ ಮುಂತಾದ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ ‘ದಾಂಪತ್ಯ ಜೀವನ’ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಹಲವಾರು ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದರು.

ವೆಂಕಟಗಿರಿರಾಯರ ಕಥಾನಕಗಳು ಅಂದಿನ ವಾರಪತ್ರಿಕೆಗಳಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದವು.  ‘ರೋಹಿಣಿ’ , ‘ಚೆಲುವೆ’, ‘ದಾಳಿಂಬೆ’, ‘ಕರಿಗಡುಬು’  ‘ತುಂಬಿದ ಕೊಡ’ ಮುಂತಾದ ಕಥೆ ಕವಿತೆಗಳ  ಸಂಕಲನಗಳು; ‘ಅತ್ತಿಯ ಹೂವು’, ‘ದೃಷ್ಟಿದಾನ’, ‘ಸಂಪ್ರದಾನ’, ‘ಅವಧಾನ’,  'ಇಷ್ಟಕಾಮ್ಯ’ ಮುಂತಾದ ಕಾದಂಬರಿಗಳು; ‘ಸಂತಾನ ಸಂಯಮ’, ‘ಪ್ರಸವ ಜ್ಞಾನ’, ‘ವಿಕೃತ ಕಾಮ’, ‘ಕಾಮ ಶಿಕ್ಷಣ’  ಮುಂತಾದ ವೈಜ್ಞಾನಿಕ ಕೃತಿಗಳು; ‘ಕಂದನ ಹಾಡುಗಳು’ ಬಾಲಸಾಹಿತ್ಯ,  ಹೀಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡೇರಿ ವೆಂಕಟಗಿರಿ ರಾಯರ ಕೊಡುಗೆ ಅಪಾರವಾದುದು. 

ದೊಡ್ಡೇರಿ ವೆಂಕಟಗಿರಿರಾಯರ ‘ಅವಧಾನ’ ಕೃತಿ ಪುಟ್ಟಣ್ಣ ಕಣಗಾಲರ ‘ಅಮೃತ ಘಳಿಗೆ’ ಚಲನಚಿತ್ರವಾಗಿ ರೂಪುಗೊಂಡಿತ್ತು.  'ಇಷ್ಟಕಾಮ್ಯ' ಕೃತಿಯನ್ನು ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರವಾಗಿ ರೂಪಿಸಿದರು. 

ದೊಡ್ಡೇರಿ ವೆಂಕಟಗಿರಿರಾಯರ ಹವ್ಯಾಸಿ ಛಾಯಾಚಿತ್ರಗ್ರಹಣವಂತೂ  ಅಂತಾರಾಷ್ಟ್ರೀಯ ಪ್ರಖ್ಯಾತಿಯದು. ಪಿಕ್ಟೋರಿಯಲ್ ಫೋಟೋಗ್ರಫಿ ವಿಭಾಗದಲ್ಲಿ  ಅಪಾರ ಪರಿಣತಿ,  ಅಂತಾರಾಷ್ಟ್ರೀಯ ಮಾನ್ಯತೆಗಳು, ಇಂಡಿಯನ್ ಫೋಟೋಗ್ರಫಿ ಸೊಸೈಟಿಯ ಅಧ್ಯಕ್ಷತೆ ಹೀಗೆ ಅವರ ಪ್ರಖ್ಯಾತಿಗಳು ಅಪೂರ್ವವಾದದ್ದು. ಛಾಯಾಗ್ರಹಣದ ಬಗ್ಗೆ ವೆಂಕಟಗಿರಿರಾಯರು ಬರೆದ ಪುಸ್ತಕ ‘ಭಾವಾಭಿವ್ಯಂಜಕ ಛಾಯಾಚಿತ್ರಕಲೆ’ ಛಾಯಾಚಿತ್ರ ಕಲೆಯಲ್ಲಿ ಆಕರ ಗ್ರಂಥ.

ಛಾಯಾಚಿತ್ರ, ಸಾಹಿತ್ಯಕ್ಕೆ ಸಂಬಂದಿಸಿದಂತೆ ಅಂತಾರಾಷ್ಟ್ರೀಯ ಮಟ್ಟದ ಎಫ್.ಐ.ಎ.ಪಿ. ಪ್ರಶಸ್ತಿ, ಅಮೆರಿಕ ಫೋಟೋಗ್ರಫಿ ಸೊಸೈಟಿ ತ್ರೀ ಸ್ಟಾರ್ ಸರ್ಟಿಫಿಕೇಟ್, ಸಾಹಿತ್ಯ ಆಕಾಡಮಿ ಪ್ರಶಸ್ತಿ, ಲಲಿತಕಲಾ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ದೊಡ್ಡೇರಿ ವೆಂಕಟಗಿರಿರಾಯರನ್ನು ಅರಸಿ ಬಂದಿದ್ದವು.

ದೊಡ್ಡೇರಿ  ವೆಂಕಟಗಿರಿ ರಾವ್  ಅವರು 2000ದ ವರ್ಷದಲ್ಲಿ  ಮಲೆನಾಡಿನ ಛಾಯಾಚಿತ್ರ ಸಂಸ್ಥೆ 'ಸಾಗರ ಫೋಟೋಗ್ರಫಿಕ್ ಸೊಸೈಟಿ'ಯನ್ನು ಹುಟ್ಟುಹಾಕಿದರು.  ಈ ಸಂಸ್ಥೆಯು    ರಾಜ್ಯ - ರಾಷ್ಟ್ರಮಟ್ಟದ ಛಾಯಾಚಿತ್ರ ಸಲೋನ್, ರಾಯರ ಛಾಯಾಚಿತ್ರ ಪ್ರದರ್ಶನ, ಕಮ್ಮಟಗಳು, ಉಪನ್ಯಾಸಗಳು ಇತ್ಯಾದಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ..

ದೊಡ್ಡೇರಿ ವೆಂಕಟಗಿರಿರಾಯರು ಮೇ 2004ರ ವರ್ಷದಲ್ಲಿ ಲೋಕವನ್ನಗಲಿದರು.  ಈ ಮಹಾನ್ ಸಾಧಕರಿಗೆ ನಮ್ಮ ಸವಿನೆನಪಿನ ನಮನಗಳು. 

ಚಿತ್ರಕೃಪೆ: Rajaram Kilar Subbarao
Info Courtesy: Anuradha B Rao

On the birth anniversary of great writer, Photographer and Doctor with human face Dodderi Venkatagiri Rao 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ