ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀನಾಥ್


ಶ್ರೀನಾಥ್


ಶ್ರೀನಾಥ್ ಕನ್ನಡ ಚಿತ್ರರಂಗದ ಮೇರುನಟರಲ್ಲಿ ಒಬ್ಬರು.

ಶ್ರೀನಾಥ್ 1943ರ ಡಿಸೆಂಬರ್ 28ರಂದು ಜನಿಸಿದರು.  ಅವರ ಮೂಲ ಹೆಸರು ನಾರಾಯಣ ಸ್ವಾಮಿ.  

ಶ್ರೀನಾಥರ ಅಣ್ಣ ಸಿ. ಆರ್. ಸಿಂಹ ರಂಗಭೂಮಿ, ಸಿನಿಮಾಗಳಲ್ಲಿ ದೊಡ್ಡ ಹೆಸರು.  ಮುಂದೆ ಶ್ರೀನಾಥ್ ಆದ  ಅಂದಿನ ನಾರಾಯಣಸ್ವಾಮಿ ಚಿಕ್ಕವನಿದ್ದಾಗ ಒಬ್ಬ ಹುಡುಗ ಸಿನಿಮಾ ಪೋಸ್ಟರ್ ಬಳಿಯುತ್ತಿದ್ದುದನ್ನು ನೋಡಿ ಅಲ್ಲಿನ ಚಿತ್ರಕ್ಕೆ ಮಾರು ಹೋಗಿ, ಇದೇನು ಇಲ್ಲಿರೋದು ಯಾರು ಅಂತ ಮುಗ್ಧಾಗಿ ಕೇಳಿದ.  ಇದು ಸಿನಿಮಾದ್ದು ಅಂದಾಗ, "ನೋಡ್ತಾ ಇರು, ಒಂದಿನ ನಾನೂ ಆ ಪೋಸ್ಟರಿನಲ್ಲಿ ಇರ್ತೇನೆ" ಅಂತ ಹೇಳಿ, ಅದನ್ನೇ ತನ್ನ ಕನಸನ್ನಾಗಿಯೂ ಮಾಡಿಕೊಂಡ.  ಮನೆಯಲ್ಲಿ ಸೌದೆ ತರಲು ಅಪ್ಪ ದುಡ್ಡು ಕೊಟ್ಟರೆ ಸೌದೆ ಕಡಿಮೆ ಕೊಂಡುತಂದು,  ಆ ಕಡಿತದ ಹಣದಲ್ಲಿ ಸಿನಿಮಾ ನೋಡುವ ಶೋಕಿ ಬೆಳೆಸಿಕೊಂಡ.  ಒಂದು ದಿನ ಹಿಂದಿ ನಟಿ ಆಶಾ ಪರೇಕ್ ನಟಿಸಿದ್ದ ಸಿನಿಮಾ ನೋಡುತ್ತಿದ್ದಾಗ, ಒಂದು ದೃಶ್ಯದಲ್ಲಿ ಆಕೆ ನಾಯಕನನ್ನು ಬಾ ಎಂದು ಕರೆದಾಗ, ಆಕೆ ತನ್ನನ್ನೇ ಕರೆದಳು ಎಂದು ಭ್ರಮಿಸಿ ಮನೆ ಬಿಟ್ಟು ಮುಂಬೈಗೆ ಹೊರಟುಬಿಟ್ಟ.  ಯಾವುದೋ ಕೂಲಿ ಮಾಡುತ್ತಿದ್ದವ ಈತನಿಗೆ ಬುದ್ಧಿ ಹೇಳಿ ಮನೆಗೆ ಹಿಂದಿರುಗಲು ಹಣ ಒದಗಿಸಿಕೊಟ್ಟ.  ಮನೆಗೆ ಬಂದ ಮಗನನ್ನು ಅತಿಯಾಗಿ ಪ್ರಶ್ನಿಸದ ಅಪ್ಪ ನಿನಗೆ ಓದಲಿಕ್ಕೆ ಇಷ್ಟ ಇಲ್ಲದಿದ್ದರೆ ಸಿನಿಮಾಗೆ ಸಂಬಂಧಪಟ್ಟದ್ದೇ ಯಾವುದಾದರೂ ಕೋರ್ಸ್ ಮಾಡು ಎಂದರು.  ಹೀಗಾಗಿ  ಸಿನಿಮಾ ಛಾಯಾಗ್ರಹಣದ ಶಿಕ್ಷಣ ಪಡೆದ.

ಶ್ರೀನಾಥ್ ಮೊದಲು ಅಭಿನಯಿಸಿದ್ದು  ‘ಲಗ್ನಪತ್ರಿಕೆ’ ಚಿತ್ರದಲ್ಲಿ.  ಹಲವಾರು ಪುಟ್ಟ ದೊಡ್ಡ ಪಾತ್ರಗಳ ಭೇದವಿಲ್ಲದೆ ನಟಿಸಲಾರಂಭಿಸಿದರು.  ಪುಟ್ಟಣ್ಣ ಕಣಗಾಲ್ ಅವರು ಕೆ.ಎಸ್.ಎಲ್ ಸ್ವಾಮಿ ಅವರ ಮಾತಿನ ಮೇರೆಗೆ ‘ಶುಭಮಂಗಳ’ದಲ್ಲಿ ನಾಯಕನ ಪಾತ್ರ ಕೊಟ್ಟರು.  ಆ ಚಿತ್ರದಲ್ಲಿ ಶ್ರೀನಾಥ್ ಕನ್ನಡಕ್ಕೊಬ್ಬ ಪ್ರಸಿದ್ಧ ನಾಯಕನಟರಾಗಿಬಿಟ್ಟರು.    ಬೆಸುಗೆ, ನಿನಗಾಗಿ ನಾನು, ಹುಡುಗಾಟದ ಹುಡುಗಿ, ಧರ್ಮಸೆರೆ, ಬದುಕು ಬಂಗಾರವಾಯ್ತು, ಪಾವನಗಂಗ, ಪ್ರೇಮಾನುಬಂಧ, ವಿಜಯವಾಣಿ, ಗುಣ ನೋಡಿ ಹೆಣ್ಣು ಕೊಡು, ಮಂಜಿನ ತೆರೆ, ಹೃದಯ ಪಲ್ಲವಿ, ಬಾಳೊಂದು ಭಾವಗೀತೆ,  ಮಾನಸ ಸರೋವರ, ಪಟ್ಟಣಕ್ಕೆ ಬಂದ ಪತ್ನಿಯರು, ಮುಗ್ದ ಮಾನವ,  ಕಿಲಾಡಿ ಜೋಡಿ, ಪ್ರೀತಿ ಮಾಡು ತಮಾಷೆ ನೋಡು, ಎರಡು ರೇಖೆಗಳು  ಹೀಗೆ ಅವರು ನಾಯಕನಟರಾಗಿ ಅಭಿನಯಿಸಿದ ಚಿತ್ರಗಳು 150ಕ್ಕೂ ಹೆಚ್ಚು.  ಅದೇ ಪಾತ್ರ ಇದೇ ಪಾತ್ರ ಎಂಬ ಅಹಂ ಇಲ್ಲದೆ ಅವರು ನಟಿಸಿದ ಒಟ್ಟಾರೆ ಚಿತ್ರಗಳು 400ಕ್ಕೂ ಹೆಚ್ಚು.  ‘ಶಿಕಾರಿ’ ಎಂಬ ಚಿತ್ರ ಸಹಾ ನಿರ್ಮಿಸಿದರು.  ‘ಮಾನಸ ಸರೋವರ’ ಚಿತ್ರಕ್ಕೆ ಪ್ರಮುಖ ಪಾಲುದಾರರಾಗಿದ್ದರು. ಶ್ರೀನಾಥರ ಅಭಿನಯದ ಹಲವಾರು ಹಾಡುಗಳು ಎಸ್. ಪಿ. ಬಾಲಸುಬ್ರಮಣ್ಯಂ ಅವರ ಧ್ವನಿಯಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದಿವೆ.  

ಚಿತ್ರರಂಗದಲ್ಲಿ ಅಷ್ಟೊಂದು ವರ್ಷ ಇದ್ದರೂ ನಾಯಕನಟನ ಯಾವುದೇ ಹಮ್ಮು ಬಿಮ್ಮು ಇಲ್ಲದ ಸರಳ, ಸುಂದರ, ಸಹೃದಯ ಮನೋಭಾವದವರು ಶ್ರೀನಾಥ್.  ಇಂದಿಗೂ ಆತ ಸುರದ್ರೂಪಿಯೇ.  ಪುಟ್ಟಣ್ಣ ಕಣಗಾಲರು ಕೆಲಸವಿಲ್ಲದೆ ಇದ್ದಾಗ ಅವರಿಗಾಗಿ ಚಿತ್ರ ನಿರ್ಮಿಸಿದ ಸಹೃದಯನೀತ.  ‘ಪ್ರಣಯರಾಜ’ ಎಂಬ ಬಿರುದು ಇವರಿಗೆ ಪ್ರಸಿದ್ಧಿ.  ಈತನೊಂದಿಗೆ  ಪ್ರಣಯಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದ ಪ್ರಸಿದ್ಧ ನಟಿ ಮಂಜುಳ ಈತನನ್ನು ಯಾವಾಗಲೂ ಅಣ್ಣ ಎಂದೇ ಸಂಬೋಧಿಸುತ್ತಿದ್ದರು. 

ಉದಯ ಟಿವಿ ವಾಹಿನಿಯಲ್ಲಿ ಉದಯ ಟಿವಿ ವಾಹಿನಿಯಲ್ಲಿ ಶ್ರೀನಾಥ್ ನಡೆಸಿಕೊಟ್ಟ ‘ಆದರ್ಶ ದಂಪತಿಗಳು’ ಕಾರ್ಯಕ್ರಮ ಮತ್ತು ಅದರಲ್ಲಿನ ಶ್ರೀನಾಥ್ ಅವರ ನಿರೂಪಣೆ ಕನ್ನಡ ನಾಡಿನ ಮನೆ ಮನೆಗಳಲ್ಲೂ ಪ್ರಸಿದ್ಧಿ.   

ಶ್ರೀನಾಥ್ ವಿಧಾನ ಪರಿಷತ್ ಸದಸ್ಯರೂ ಆದವರು.  ಚಿತ್ರರಂಗದಲ್ಲಿನ ಅವರ ಸಾಧನೆಗಳಿಗಾಗಿ ಅವರನ್ನು ಅನೇಕ ಗೌರವಗಳು ಅರಸಿ ಬಂದಿವೆ.  ಇನ್ನೂ ಹೆಚ್ಚಿನದು ಅವರಿಗೆ ಸಲ್ಲಲಿ.  ಅವರ ಬದುಕು ಸುಂದರವಾಗಿರಲಿ ಎಂದು ಈ ಹಿರಿಯ ಕಲಾವಿದರಿಗೆ ಶುಭ ಹಾರೈಸೋಣ.

On the birth day of our popular actor Srinath 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ