ಮಿರ್ಜಾ ಗಾಲಿಬ್
ಮಿರ್ಜಾ ಗಾಲಿಬ್
ಮಿರ್ಜಾ ಗಾಲಿಬ್ ಓರ್ವ ಮಹಾಕವಿ.
1797 ಡಿಸೆಂಬರ್ 27ರಂದು ಆಗ್ರಾದಲ್ಲಿ ಜನಿಸಿ 1869ರ ಫೆಬ್ರವರಿ 15ರಂದು ದಿಲ್ಲಿಯಲ್ಲಿ ಕೊನೆಯ ಉಸಿರೆಳೆದ ಮಿರ್ಜಾಗಾಲಿಬರು ಬದುಕಿದುದು ಭಾರತದ ಸಂಕಷ್ಟಮಯ ಸಂಕ್ರಮಣ ಕಾಲದಲ್ಲಿ! ಭಾರತದಲ್ಲಿ ಸ್ವಾತಂತ್ರ್ಯಯುಗ ಮುಗಿದು ಪಾರತಂತ್ರ್ಯಯುಗ ಪ್ರಾರಂಭವಾದ ಕಾಲವೂ ಆಗಿದ್ದಿತು; ಜಗತ್ತಿನಲ್ಲಿ ಕೃಷಿಯುಗ ಮುಗಿದು ಉದ್ಯಮಯುಗ, ಯಂತ್ರಯುಗ, ವಿಜ್ಞಾನಯುಗ ಪ್ರಾರಂಭವಾದ ಕಾಲವೂ ಆಗಿದ್ದಿತು. ಭಾರತೀಯನಾಗಿ ಪಾರತಂತ್ರ್ಯದ ಯಾತನೆಗಳನ್ನು ಅನುಭವಿಸಿದ ಗಾಲಿಬನೇ ವಿಶ್ವಮಾನವನಾಗಿ ವಿಜ್ಞಾನಯುಗವನ್ನು ಸ್ವಾಗತಿಸಿದುದು ಅವನ ಮುಂಗಾಣ್ಕೆಯ ಕುರುಹು. ಇದು ಅವನಲ್ಲಿ ಇದ್ದಿತೆಂದೇ ಈ ವಿಷಮ ಪರಿಸ್ಥಿತಿಯಲ್ಲಿಯೂ ಅವನು ಭಾರತೀಯ ಸಾಹಿತ್ಯದ ಮರುಹುಟ್ಟಿನ ಮೊದಲಿಗರಲ್ಲಿ ಒಬ್ಬನಾಗಿ ಮೆರೆದನು.
ಗಾಲಿಬ್ ಮೂಲತಃ ತೂರಾನ್ ದೇಶದ ಆಫ್ರಾಸಿಯಾಬನ ವಂಶದವನಾದರೂ ಅವನ ತಾತ ಈ ದೇಶಕ್ಕೆ ಬಂದುದು ಜೀವನೋಪಾಯಕ್ಕಾಗಿ. ಅವನು ದಿಲ್ಲಿಗೆ ಬಂದು ಎರಡನೆಯ ಷಾಹ್ ಆಲಮ್ ಅವರ ಸೈನ್ಯದಲ್ಲಿ ದೊಡ್ಡ ಅಧಿಕಾರಿಯಾಗಿ ಸೇರಿದ. ಅವರ ಮಗ-ಗಾಲಿಬರ ತಂದೆ ಮಿರ್ಜಾ ಅಬ್ದುಲ್ಲಾ ಬೇಗ್ ಖಾನರು ಮೊದಲು ಔದ್ ಸಂಸ್ಥಾನದ ನವಾಬರಲ್ಲಿಯೂ, ಆಮೇಲೆ ಹೈದರಾಬಾದಿನ ನಿಜಾಮರಲ್ಲಿಯೂ ಸೇವೆ ಸಲ್ಲಿಸಿ ಕೊನೆಗೆ ಆಲ್ವಾರ್ ಸಂಸ್ಥಾನಿಕನ ಸೇವೆ ಕೈಗೊಂಡರು. ಆ ಸಂಸ್ಥಾನದ ಅವಿಧೇಯ ಸಾಮಂತನೊಬ್ಬನನ್ನು ಬಗ್ಗು ಬಡಿಯಲು ಆಜ್ಞೆಯಾದುದರಿಂದ ಮಿರ್ಜಾ ಅಬ್ದುಲ್ಲಾ ಬೇಗ್ ಖಾನರು ಆ ಸಾಮಂತನ ಕೋಟೆಯ ಮೇಲೆ ಲಗ್ಗೆಯಿಟ್ಟರು. ಅದರಲ್ಲಿಯೇ ಅವರು 1802ರಲ್ಲಿ ಮಡಿದು ಹೋದರು. ಆಗ ಮಿರ್ಜಾ ಗಾಲಿಬ್ ಇನ್ನೂ ಐದು ವರ್ಷಗಳ ಬಾಲಕ! ತಂದೆಯು ತೀರಿದ ಮೇಲೆ ತಮ್ಮ ಚಿಕ್ಕಪ್ಪ ನಸರುಲ್ಲಾ ಬೇಗ್ ಖಾನರ ಪಾಲನೆಯಲ್ಲಿ ಬೆಳೆದ ಬಾಲಕ ಗಾಲಿಬ್; ಅವನು 9 ವರ್ಷದವನಿದ್ದಾಗ ಆ ಕಕ್ಕನೂ ಆನೆಯಿಂದ ಬಿದ್ದು ಅಸು ನೀಗಿದ. ಮಿರ್ಜಾ ಅಬ್ದುಲ್ಲಾ ಬೇಗ್ ಖಾನರ ಹೆಂಡತಿ ಆಗ್ರಾ ನಗರದ ಗೌರವಾನ್ವಿತ ಪೌರನೂ, ಸೈನ್ಯಾಧಿಕಾರಿಯೂ ಆಗಿದ್ದ ಖ್ವಾಜಾ ಗುಲಾಮ್ ಹುಸೇನ್ ಖಾನರ ಮಗಳು. ಈಗ ಅವರು ಮಿರ್ಜಾ ಗಾಲಿಬನ ಪಾಲನೆ ಪೋಷಣೆಗೆ ಮಂದಾದರು. ಗಾಲಿಬ್ ಆಗ್ರಾ ನಿವಾಸಿಯಾದ.
ಗಾಲಿಬನ ದಿನಗಳು ಆದಷ್ಟು ಸುಖಮಯ ವಾಗುವಂತೆ, ಅವನು ಆದಷ್ಟು ಕಲಿತು ಜಾಣನಾಗುವಂತೆ ಅವನ ಈ ಕರುಳಿನ ಅಜ್ಜ ಎಚ್ಚರಿಕೆ, ಆಸ್ಥೆ, ಮಮತೆಗಳೊಡನೆ ಅವನನ್ನು ಬೆಳೆಸಿದ. ಅವನ ಜೀವನದ ಈ ಅವಧಿಯೇ ಅವನ ವಸಂತಕಾಲವೆಂದು ಹೇಳಬಹುದು. ಅವನಿಗೆ ಆಗ ಆಗ್ರಾದ ಪ್ರಸಿದ್ಧ ವಿದ್ವಾಂಸರೆನಿಸಿದ್ದ ಷೇಖ ಮಅಜಮ್ ಅವರಲ್ಲಿ ವಿದ್ಯಾಭ್ಯಾಸವಾಯಿತೆಂದೂ, ಅವನು 14 ವರ್ಷದವನಾದಾಗ ಅವನಿಗೆ ಎರಡು ವರ್ಷಗಳವರೆಗೆ ಮುಲ್ಲಾ ಅಬ್ದುಲ್ ಸಮದ್ ಎಂಬ ಪ್ರಖ್ಯಾತ ಫಾರಸೀ ಅರಬ್ಬೀ ಪಂಡಿತರಿಂದ ಈ ಭಾಷೆಗಳಲ್ಲಿ, ವಿಶೇಷವಾಗಿ, ಫಾರಸೀ ಭಾಷೆಯಲ್ಲಿ ಪರಿಣತಿ ದೊರೆಯಿತೆಂದೂ ಹೇಳುತ್ತಾರೆ. ಈ ಕಾಲದಲ್ಲಿ ಅವನೇನನ್ನೂ ಕಲಿಯಲಿಲ್ಲ, ತಾನೇ ಹೆಮ್ಮೆಯಿಂದ ಹೇಳಿಕೊಂಡಿದ್ದ ತನ್ನ ನೂರು ತಲೆಮಾರುಗಳ ಸೈನಿಕ ವೃತ್ತಿಯನ್ನೂ ಕಲಿಯಲಿಲ್ಲ, ಭಾವೀ ಜೀವನಕ್ಕಾಗಿ ಯಾವ ಸಿದ್ಧತೆಯನ್ನೂ ಮಾಡಿಕೊಳ್ಳಲಿಲ್ಲ, ಬರಿಯ ವೈಭವ-ವಿಲಾಸ-ಪ್ರಿಯನಾಗಿ ಕಾಲ ಕಳೆದನೆಂದು ಹೇಳುವವರೂ ಇದ್ದಾರೆ. ಸುರದ್ರೂಪಿಯೂ ದೊಡ್ಡವರ ಮೊಮ್ಮಗನೂ, ದುಡ್ಡಿನ ಕೊರತೆಯಿಲ್ಲದವನೂ ಆಗಿದ್ದ ಅವನಾಗ ಸೊಗಸುಗಾರಿಕೆಯಲ್ಲಿ ಕಾಲ ಕಳೆದಿದ್ದರೂ ಆಶ್ಚರ್ಯವಿಲ್ಲ!
ಆದರೆ ಈ ಬಣ್ಣದ ಬದುಕು ಇತ್ತಾದರೂ ಎಷ್ಟು ದಿನ ಅವನ ಪಾಲಿಗೆ? 1810 ರವರೆಗೆ ಎಂದರೆ ಅವನಿಗೆ ಹದಿಮೂರು ವರ್ಷಗಳು ತುಂಬುವವರೆಗೆ. ಆಗ ಏನಾಯಿತು? ನಗೆಗಾರ ಗಾಲಿಬರ ಮಾತಿನಲ್ಲಿಯೇ ಹೇಳುವುದಾದರೆ ಅವರಿಗೆ ಅಂದು ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು- ಎಂದರೆ ಅವರ ಮದುವೆಯಾಯಿತು. ಯಾರೊಡನೆ? ಲೋಹಾರು ಪ್ರಾಂತದ ನವಾಬ ಫಖ್ರುದ್ದೌಲಾನ ತಮ್ಮ ನವಾಬ ಇಲಾಹಿ ಬಕ್ಷ್ ಖಾನನ ಮಗಳು ಉಮ್ರಾನ್ ಬೇಗಮಳೊಡನೆ. ಅಚ್ಛೆಯಿಂದ ಬೆಳೆಸಿದ್ದ ಮೊಮ್ಮಗನಿಗೆ ಇಚ್ಛೆ ಬಂದಾಗ ಮದುವೆ ಮಾಡಿಬಿಟ್ಟನು ಅಜ್ಜ. ತೀರಿತವನ ಕಜ್ಜ. ಮೊಮ್ಮಗ ಮುಂದೆ ಗೃಹಸ್ಥನಾಗಿ ಬದುಕುವ ಬಗೆ? ಯಾರು ಯೋಚಿಸಬೇಕಿದನ್ನು? ಅಜ್ಜ ನವಾಬ, ಮಾವ ನವಾಬ, ಮಾವನ ಅಣ್ಣ ನವಾಬ ಗಾಲಿಬನೂ ಬರಿಗೈ ನವಾಬ, 25 ವರ್ಷಗಳಾಗುವವರೆಗೆ ಚಿಕ್ಕಪ್ಪ ನವಾಬ ಅಹಮದ್ ಬಕ್ಷ್ ಖಾನರ ಆಶ್ರಯ ದೊರೆಯಿತು. ಅಲ್ಲದೆ ಲಾರ್ಡ್ ಲೇಕ್ ಮಂಜೂರು ಮಾಡಿದ್ದ ಹತ್ತುಸಾವಿರ ರೂಪಾಯಿಗಳ ವಾರ್ಷಿಕ ವೇತನದಲ್ಲಿ ಗಾಲಿಬರ ಮನೆತನಕ್ಕೆ ನೂರರಲ್ಲೊಂದು ಭಾಗ ಬರುತ್ತಿತ್ತು. ವೈಯುಕ್ತಿಕವಾಗಿ ಗಾಲಿಬರಿಗೆ ವರ್ಷಕ್ಕೆ 750 ರೂಪಾಯಿಗಳು ದೊರೆಯುತ್ತಿದ್ದವು. 25 ವರ್ಷಗಳವರೆಗೆ ಹೇಗೋ ಸಾಗಿತು ಜೀವನ ರಥ.
ಆಮೇಲೆ ಪ್ರಾರಂಭವಾಯಿತು ಮುಳ್ಳು ತುಂಬಿದ ಪಥ! ನವಾಬ ಅಹಮ್ಮದ್ ಬಕ್ಷ್ ತನ್ನ ಆಸ್ತಿಯನ್ನೆಲ್ಲ ಮಕ್ಕಳಿಗೆ ಹಂಚಿಬಿಟ್ಟ; ಗಾಲಿಬರಿಗೆ ಸಲ್ಲುತ್ತಿದ್ದ ಪಾಲವನ್ನು ಹಿರಿಯ ಮಗನಿಗೆ ಕೊಟ್ಟ! ಈ ಹಿರಿಯಮಗ ಕೆಲಕಾಲ ಗಾಲಿಬರಿಗೂ ಕೊಂಚ ಪಾಲುಕೊಟ್ಟ, ಆಮೇಲೆ ಹಠಾತ್ತಲೇ ಅದನ್ನೂ ನಿಲ್ಲಿಸಿಬಿಟ್ಟ! ಗಾಲಿಬರಾಗ ನಿರಾಧಾರರಾದರು! ಈ ಅಕ್ರಮದ ವಿರುದ್ಧ ಬ್ರಿಟಿಷ್ ಸರ್ಕಾರಕ್ಕೆ ಬರೆದು ಕೊಂಡರು. ಏನೂ ಉಪಯೋಗವಾಗಲಿಲ್ಲ. ಇವರ ಬಗ್ಗೆ ಕನಿಕರಿಸಿ, ಇವರ ಹಿರಿಮೆಯನ್ನು ಗುರುತಿಸಿ ಅವಧದ ನವಾಬ ವಾಜಿದ್ ಅಲಿ ಷಾಹರು ಇವರಿಗೆ 500 ರೂಪಾಯಿಗಳ ವರ್ಷಾಶನ ನೀಡಿದರು. ಎರಡು ವರ್ಷಗಳು ಉರುಳುತ್ತಲೇ ಅವಧ ಈಸ್ಟ್ ಇಂಡಿಯಾ ಕಂಪನಿಯ ವಶವಾಗಿ ಅದೂ ನಿಂತು ಹೋಯಿತು! ರಾಮಪುರದ ದರಬಾರಕ್ಕೆ ಭೇಟಿ ಕೊಟ್ಟುದರ ಫಲವಾಗಿ ಗಾಲಿಬರು ನೂರು ರೂಪಾಯಿಗಳ ವೇತನ ಪಡೆದರು. ಮೊಗಲ್ ಸಾಮ್ರಾಟ ಎರಡನೆಯ ಬಹಾದುರ ಷಾಹರು ತಿಂಗಳಿಗೆ 50 ರೂಪಾಯಿ ಮಂಜೂರು ಮಾಡಿದರು. ಈ ಸಣ್ಣ ಸಣ್ಣ ಆದಾಯಗಳಿಂದ ದಿಲ್ಲಿಯಲ್ಲಿ, ಸಾಮ್ರಾಜ್ಯವೈಭವದ ದಿಲ್ಲಿಯಲ್ಲಿ ಈ ಸೊಬಗಿನ, ಸೊಗಸಿನ ಸವಿಗಾರ ಬದುಕುವುದು ಹೇಗೆ? ಪಿಂಚಣಿಯ ಪುನರಾರಂಭಕ್ಕಾಗಿ ಎಷ್ಟೇ ಪ್ರಯತ್ನಿಸಿದರೂ ಸಫಲತೆ ದೊರಕಲಿಲ್ಲ. ಕ್ಲೇಶಮಯ ಜೀವನ ತಪ್ಪಲಿಲ್ಲ!
ಇಲ್ಲಿಗೂ ಮುಗಿಯಲಿಲ್ಲ ಅವರ ಅಗ್ನಿಪರೀಕ್ಷೆ! ಸತಿ ಸಾಧ್ವಿ, ಆದರೆ ಇವರ ಕುಡಿತವನ್ನು ಒಪ್ಪದ ಧರ್ಮ ಪರಾಯಣೆ. ಪತಿಗಾಗಿ ಬೇರೆ ಪಾತ್ರೆಗಳಲ್ಲಿ ಅಡುಗೆ ಮಾಡಿ, ತನಗೆ ಬೇರೆ ಪಾತ್ರೆಗಳಲ್ಲಿ ಅಡುಗೆ ಮಾಡಿಕೊಳ್ಳುತ್ತಲಿದ್ದ, ಪತಿಗಾಗಿ ಪ್ರತ್ಯೇಕವಾಗಿರಿಸಿದ್ದ ಪಾತ್ರೆಗಳಲ್ಲಿ ಬೇಯಿಸಿದುದನ್ನು ಒಮ್ಮೆಯೂ ಉಣ್ಣದಿದ್ದ ಛಲವಂತೆ! ಆದರೂ ಅದನ್ನು ನಗುನಗುತ್ತಲೇ ಸಹಿಸಿದ ಗಾಲಿಬರಿಗೆ ಸಂತಾನ ಸುಖವಾದರೂ ಸಿಕ್ಕಿತೇ? ಅದೂ ಇಲ್ಲ! ಅವರ ಏಳು ಜನ ಗಂಡು ಮಕ್ಕಳೂ ಚಿಕ್ಕವರಿರುವಾಗಲೇ ಮೃತ್ಯುವಿನ ಬಾಯಿಗೆ ತುತ್ತಾದರು. ಆಗ ಅವರು ತಮ್ಮ ಪತ್ನಿಯ ತಂಗಿಯ ಮಗ ಜೈನುರ್‌ಅಬಿಧೀನ್ ಖಾನ್ ಆರಿಫ್‌ನ್ನು ಸಾಕುಮಗನನ್ನಾಗಿ ಮಾಡಿಕೊಂಡರು. ಅವನೂ ನಡು ಹರೆಯ ದಲ್ಲಿಯೇ ಸಾವನ್ನಪ್ಪಿದ. ಗಾಲಿಬರಿಗೆ ಈ ಸಾಕು ಮಗನ ಮೇಲೆ ಅತಿಶಯವಾದ ಪ್ರೀತಿ. ಆರಿಫ್‌ನ ಸಾವು ಅವರಿಗೆ ಅಸಹನೀಯ ಆಘಾತವಾಯಿತು. ಶೋಕಗೀತೆ ಹೊರಹೊಮ್ಮಿತು-ಹೃದಯದಾಳದಿಂದ :
ಕಾಯಬೇಕಿತ್ತು ನನ್ನ ದಾರಿ ನೀನಿನ್ನೂ ಕೆಲವು ದಿವಸ;
ಏಕೆ ಒಬ್ಬನೇ ಹೋದೆ? ಇರು ಒಬ್ಬನೇ ಕೆಲವು ದಿವಸ!
ನಿನ್ನೆ ತಾನೆ ಬಂದೆ, ಇಂದೇ ಹೋಗುವೆನೆನ್ನುತಿರುವೆ
ಒಪ್ಪಿದೆ, ಚೆನ್ನಾಗಿಲ್ಲ ಇಂದಿಗಿಂತ ಬೇರೆ ದಿವಸ!
ಹಳೆಯ ಗಗನವೆ, ಎಳೆಯನಿದ್ದ ಆರಿಫನಿನ್ನೂ-
ನಿನ್ನದೇನು ಹೋಗುತ್ತಿತ್ತು ಬದುಕಿದವರನು ಇನ್ನು ಕೆಲವು ದಿವಸ?
’ಏಕೆ ಬದುಕಿಹೆ ಗಾಲಿಬ್’ ಎನ್ನುವವರೆಲ್ಲ ಅಜ್ಞರು
ಭಾಗ್ಯದಲಿ ಬರೆದಿಹುದು ಸಾಯಲಿಕೆ ಬೇರೊಂದು ದಿವಸ?
ಆರಿಫ್ ಸಾಯುವ ಮುನ್ನ ಎರಡು ಗಂಡು ಮಕ್ಕಳ ತಂದೆಯಾಗಿದ್ದ. ಆ ಇಬ್ಬರ ಮೇಲೆ ಗಾಲಿಬರ ವಾತ್ಸಲ್ಯ ಕೇಂದ್ರೀಕೃತವಾಯಿತು ಆಮೇಲೆ ಅಷ್ಟು ಹೊತ್ತಿಗೆ ‘ಡಮ್ನಿ’ ಎಂಬ ಪ್ರೇಯಸಿಯನ್ನೂ, ಏಳು ಜನ ಗಂಡು ಮಕ್ಕಳನ್ನೂ ಆರಿಫನನ್ನೂ ಅನೇಕ ಸಹೃದಯ ಸ್ನೇಹಿತರನ್ನೂ ಕಳೆದುಕೊಂಡಿದ್ದ ಗಾಲಿಬರು ಎಷ್ಟು ವಾತ್ಸಲ್ಯ ವಿರಹಿಯಾಗಿದ್ದರೆಂದರೆ ಈ ಮೊಮ್ಮಕ್ಕಳು ಮಾಡುತ್ತಿದ್ದ ಅತಿಯಾದ ತಂಟತನವನ್ನೂ, ನೀಡುತ್ತಿದ್ದ ಸಹಿಸಲ ಸಾಧ್ಯವಾದ ಕೀಟಲೆ ಕೋಟಲೆಗಳನ್ನೂ ತಾಳಿಕೊಂಡೇ ಬಾಳಿದವರು.
ಇಲ್ಲಿಗೂ ಮುಗಿಯುವುದಿಲ್ಲ ಅವರ ಬಾಳಿನ ಗೋಳು. ಅವರ ಬಾಳೇ ಗೋಳು! ಸುರೆ ಸೇವಿಸುವ ಚಟ ಅವರನ್ನು ಸಾಲಗಾರರನ್ನಾಗಿ ಮಾಡಿದುದಲ್ಲದೆ ಅವರನ್ನು ನ್ಯಾಯಾಲಯಕ್ಕೂ ಎಳೆಯಿತು. ಒಬ್ಬ ಸಾಲಗಾರ ಇವರನ್ನು ಮುಫ್ತಿ ಸದರುದ್ದೀನ್ ಅಜುರದಾಹ ಎಂಬ ನ್ಯಾಯಾಧೀಶ ರೆದುರಿಗೆ ಎಳೆದೊಯ್ದ. ಕವಿ ಎಲ್ಲಿದ್ದರೂ ಕವಿಯೇ! ಆಪಾದನೆಗೆ, ಗಾಲಿಬರ ಉತ್ತರವೂ ಕವಿತೆಯಾಗಿಯೇ ಹೊರಬಿದ್ದಿತು.
‘ಕುಡಿಯುತ್ತದೆ ಬಡತನದೊಳು ಉದ್ದರಿ ಮಾಡಿ ಗೊತ್ತಿತ್ತು ಬಿಡುವುದೆಂದಿದು ತೊಂದರೆಗೆ ಈಡು ಮಾಡಿ’
ಇದನ್ನು ಕೇಳಿದ ಕಾವ್ಯ ಪ್ರೇಮಿ ನ್ಯಾಯಾಧೀಶ ತನ್ನ ಬೊಕ್ಕಸದಿಂದ ವಾದಿಗೆ ಅವನ ಹಣ ಕೊಟ್ಟು ಗಾಲಿಬರ ಮಾನ ಕಾಯ್ದರಂತೆ!
ದಿಲ್ಲಿಯ ದಂಗೆಯ ಕಾಲದಲ್ಲಂತೂ ಗಾಲಿಬರ ಸ್ಥಿತಿ ಶೋಚನೀಯವಾಯಿತು. ಅವರ ಉಪಜೀವನಕ್ಕಾಗಿ ಇದ್ದ ಎರಡೇ ಆದಾಯ ಮೂಲಗಳೂ ಸರ್ಕಾರದ ಪೆನ್ಸನ್ ಮತ್ತು ಕೋಟೆಯಿಂದ ಬರುತ್ತಿದ್ದ ವೇತನ ಎರಡೂ ಬತ್ತಿಹೋದುವು. ದಂಗೆಯ ಪರಿಣಾಮ ಇವರ ಮೇಲೂ ಆಂಗ್ಲರ ಸಂಶಯದ ಕರಾಳ ಛಾಯೆ ಬಿದ್ದಿತು. ಆದರೂ ಅವರು ಅದರಿಂದ ಪಾರಾದರು! ಮೂರು ವರ್ಷಗಳು ಕಳೆದ ಮೇಲೆ ಅವರು ನಿರಪರಾಧಿಗಳೆಂಬುದು ಸಿದ್ಧವಾಯಿತು! ರಾಮಪುರದ ಸಂಸ್ಥಾನಿಕರ ಮಾನಸಿಕ ವೇತನ ತಿಂಗಳಿಗೆ ಒಂದು ನೂರು ರೂಪಾಯಿ ದೊರೆಯತೊಡಗಿತು; ಸರ್ಕಾರದ ಪಿಂಚಣಿಯೂ ಪ್ರಾರಂಭವಾಯಿತು.
ಆದರೆ ನೆಮ್ಮದಿ ಬಿಸಿಲುಗುದುರೆಯಾಗಿಯೇ ಉಳಿಯಿತು ಅವರ ಪಾಲಿಗೆ. ಇದು ಅವರ ದ್ವಿಪದಿಯೊಂದು:
ಓಡುತಿದೆ ಆಯುಷ್ಯದ ಅಶ್ವ: ಎಲ್ಲಿ ಹೋಗಿ ನಿಲ್ವುದೋ
ಕಡಿವಾಣ ಕೈಯೊಳಿಲ್ಲ, ಅಂಕವಣೆಯೊಳಿಲ್ಲ ಕಾಲು!’
ಇಂಥ ಅನಿಶ್ಚಿತತೆಯ ಅಸಹಾಯಕತೆಯ ಬದುಕಿನಲ್ಲಿ ನೆಮ್ಮದಿಯ ಮಾತೆತ್ತುವುದೂ ಮೌಢ್ಯವೆನಿಸೀತು! ಎಲ್ಲಿ ಹೋಗಲಿ, ಕವಿಯೆಂದು ದೊರೆಯಬೇಕಾಗಿದ್ದ ಮಾನ್ಯತೆಯೂ ದೊರೆಯಬಾರದೆ ಇವರಿಗೆ? ಆರಂಭದಲ್ಲಿ ’ಬೇದಿಲ್’ ಕವಿಯನ್ನು ಅನುಕರಿಸಿ ಕ್ಲಿಷ್ಟತೆಗೆ ಆಸ್ಪದವಿತ್ತುದೇ ಅಪರಾಧವಾಯಿತು. ಎಲ್ಲರೂ ಇವರ ’ಗಜಲು’ಗಳ ಗೇಲಿ ಮಾಡುವವರೇ! ಅಲ್ಲಲ್ಲಿ ಅಪವಾದಗಳಿದ್ದರೂ ಹೆಚ್ಚಿನವರು ಮೆಚ್ಚದವರೇ, ಮಚ್ಚರಿಗರೇ!
‘ಅರ್ಥವಾಗುವುದು ಮೀರರ ಕವಿತೆ;
ಅರ್ಥವಾಗುವುದು ಮಿರ್ಜಾರ ಕವಿತೆ;
ಇವರಿಗೆ ಅರ್ಥವಾಗಬೇಕು
ಇಲ್ಲವೆ ದೇವರಿಗೆ ಅರ್ಥವಾಗಬೇಕು ಗಾಲಿಬರ ಕವಿತೆ!’
ಈ ಪರಿಹಾಸೋಕ್ತಿ ಅವರ ಕವಿತೆಗಳ ಬಗ್ಗೆ ಅಂದಿನ ಅನೇಕರು ತಳೆದಿದ್ದ ತಪ್ಪು ತಿಳುವಳಿಕೆಗೆ ನಿದರ್ಶನವಾಗಿ ನಿಂತಿದೆ. ಇದಕ್ಕೆ ಉತ್ತರವಾಗಿಯೋ ಏನೋ ಗಾಲಿಬ್ ಸಾರಿದ: ‘ಸುಲಭ ಶೈಲಿಯಲ್ಲಿ ಬರೆಯಿರೆಂದು ಹೇಳುತ್ತಾರೆ: ಬರೆದರೂ ಕಷ್ಟ, ಬರೆಯದಿದ್ದರೂ ಕಷ್ಟ!’ “ರಹಸ್ಯರಕ್ಷಣೆ ಮೌನದಿಂದ ದೊರೆವ ಲಾಭ; ಆದುದರಿಂದ ನನ್ನ ಮಾತು ಇವರಿಗೆ ಅರ್ಥವಾಗದಿರುವುದು ಸಂತೋಷವೇ, ನನಗೆ’! ಬುದ್ಧಿಯು ಎಷ್ಟೇ ಬಲೆ ಬೀಸಲಿ, ನನ್ನ ಬರವಣಿಗೆಯ ಅರ್ಥ ಅಲಭ್ಯ!’ ‘ನನಗಿಲ್ಲ ಹೊಗಳಿಕೆಯ ಹೆಬ್ಬಯಕೆ, ಪುರಸ್ಕಾರದ ಅಭಿಪ್ಸೆ: ನನ್ನ ಕವಿತೆಗಳಲ್ಲಿ ಅರ್ಥವಿಲ್ಲದಿದ್ದರೂ ಸರಿಯೆ!’
ಇಷ್ಟಾದರೂ ಆಗದವರ ಕುಚೇಷ್ಟೆಗಳು ನಿಲ್ಲಲಿಲ್ಲ. ಅರ್ಥ ಸೌಂದರ್ಯವೇ ಕಾವ್ಯದ ಆತ್ಮವೆಂದು ಘೋಷಿಸಿದ್ದ ಗಾಲಿಬರ ಗಜಲುಗಳಲ್ಲಿಯೇ ಅರ್ಥವಿಲ್ಲವೆಂದು ವಾದಿಸಿದವರ ವ್ಯರ್ಥಾಲಾಪಗಳಿಗೆ ಈಗ ಬೆಲೆ ಉಳಿದಿಲ್ಲ ವಾದರೂ, ಆಗ ಅವುಗಳಿಂದ ಅವನಿಗಾದ ನೋವು ಅಷ್ಟಿಷ್ಟಲ್ಲ. ‘ನನ್ನ ಕವಿತೆಗಳಲ್ಲಿ ಬರುವ ಶಬ್ದಗಳೆಲ್ಲ ಅರ್ಥಭಂಡಾರಗಳೆಂದು ಅರಿಯಿರಿ’ ಎಂದು ಅವನು ಸಾರಿದರೂ ಇವರ ಕಿರುಕುಳ ತಪ್ಪಲಿಲ್ಲ.
ಕೊನೆಯವರೆಗೂ ಇವರ ಕೀಟಲೆ ತಪ್ಪಲಿಲ್ಲ. ಗಣ್ಯ ಕುಟುಂಬದಲ್ಲಿ ಜನಿಸಿ, ಚೆಲುವು, ಒಲವುಗಳ ಆರಾಧಕನಾಗಿ ಬೆಳೆದು ಜಗದ ಒಳ್ಳೆಯ ವಸ್ತುಗಳಲ್ಲಿ ಅನುರಕ್ತನಾಗಿದ್ದೂ, ಉರ್ದೂ ಕವಿಕುಲ ತಿಲಕನಾಗಿಯೂ ಗಾಲಿಬ್ ಎಲ್ಲ ರಂಗಗಳಲ್ಲಿಯೂ ಪಡೆದುದು ಸೋಲನ್ನೇ, ಗೋಳನ್ನೇ, ಬನ್ನವನ್ನೇ, ಮಾನವಜೀವನ ಇದಕ್ಕಿಂತ ದುಃಖವಾಗಿರುವುದು ಸಾಧ್ಯವಿಲ್ಲವೇನೂ! ಬಡತನದ ಬೇಗೆಯಲ್ಲಿ ಬೆಂದು ಸೋಲಿನ ಶೂಲಗಳಿಂದ ನೊಂದು, ಪ್ರತಿಕೂಲ ಪರಿಸ್ಥಿತಿಯ ಪೆಟ್ಟುಗಳನ್ನು ತಿಂದು, ಪ್ರಿಯರಾದವರ ದುರ್ಗತಿಯನ್ನು ದುರ್ಮರಣಗಳನ್ನು ಕಂಡು, ದೇಶಕ್ಕೊದಗಿದ ದುರ್ಘಟನೆಗಳನ್ನು, ದುರಂತಗಳನ್ನು ನೋಡಿ ನೋಡಿ ಬಿರುಗಾಳಿಗೆ ಸಿಕ್ಕ ತೆಪ್ಪದಂತೆ ತತ್ತರಿಸಿದರು. ತಿರ್ರನೆ ತಿರುಗಿತು ಅವರ ಬಾಳು! ‘ಮುಗಿದುವು ವಿಪತ್ತುಗಳೆಲ್ಲ ಗಾಲಿಬ್, ಈಗ ಆಕಸ್ಮಿಕ ಮರಣವೊಂದು ಉಳಿದಿದೆ!’ ಎಂದವರು ಉದ್ಗರಿಸಬೇಕಾಯಿತು.
ಅವರ ಕೊನೆಯ ದಿನಗಳ ಕರುಣಕಥೆ ಅವರ ಈ ಕೆಲವು ಪತ್ರಗಳಲ್ಲಿ ವರ್ಣಿತವಾಗಿದೆ. ಇದು 1867ರಲ್ಲಿ ಬರೆದ ಪತ್ರ: ‘ಇನ್ನೇನು ನಾನು ಇಷ್ಟರಲ್ಲಿಯೇ ಸಾಯಲಿದ್ದೇನೆ. ರೋಗಗಳು ನನ್ನ ಮೇಲೆ ದಾಳಿಯಿಟ್ಟಿವೆ’ ‘ನನಗೆ ಎಂದಾದರೂ ನೆನಪಿನ ಶಕ್ತಿ ಇದ್ದಿತೆ?’ ಎಂಬ ಸಂಶಯ ಬರುತ್ತಿದೆ. ಈಚೆಗೆ ಕಿವಿಗಳೂ ಕೇಳುವ ಶಕ್ತಿಯನ್ನು ಕಳೆದುಕೊಂಡಿವೆ. ಒಂದು ತಿಂಗಳಿಂದ ಎಂಥ ದುಃಸ್ಥಿತಿ ಒದಗಿದೆಯೆಂದರೆ ನನ್ನನ್ನು ಕಾಣಲು ಬರುವ ಗೆಳೆಯರು ನನ್ನ ಆರೋಗ್ಯವನ್ನುಳಿದು ಇನ್ನೇನನ್ನಾದರೂ ತಿಳಿಯ ಬಯಸಿದರೆ ಅದನ್ನು ಬರೆದೇ ನನಗೆ ತೋರಿಸುತ್ತಿದ್ದಾರೆ. ನಾನೀಗ ಹೆಚ್ಚು ಕಡಿಮೆ ನಿರಾಹಾರಿ. ಮುಂಜಾನೆ ಒಂದು ತುಂಡು ಕಲ್ಲುಸಕ್ಕರೆ ಇಲ್ಲವೆ ಬಾದಾಮಿ ಪುಡಿ ಸೇರಿಸಿದ ಪಾನಕವನ್ನು ಸೇವಿಸುತ್ತೇನೆ. ಮಧ್ಯಾಹ್ನದಲ್ಲಿ ಮಾಂಸದ ಗಂಜಿ, ಸಾಯಂಕಾಲ ನಾಲ್ಕು ಕರಿದ ಕಬಾಬುಗಳು ರಾತ್ರಿ ಮಲಗುವಾಗ ಐದು ತೊಲ ಮಧ್ಯದಲ್ಲಿ ಅಷ್ಟೇ ಗುಲಾಬಿ ನೀರು ಸೇರಿಸಿ ಸೇವಿಸುತ್ತೇನೆ, ನಾನು ಜರ್ಜರಿತನಾಗಿದ್ದೇನೆ; ನಾನು ತಿಳಿಗೇಡಿ, ತಪ್ಪುಗಾರ. . . . !’
ಆಗ ಅವರು ಪದೇ ಪದೇ ಹೇಳಿಕೊಳ್ಳುತ್ತಿದ್ದುದು ತಮ್ಮದೇ ಆದ ಈ ದ್ವಿಪದಿಯನ್ನು:
‘ನನ್ನ ಉಸಿರೀಗ ಹಿಡಿದಿದೆ ತನ್ನ ಹಾದಿ
ಗೆಳೆಯರೆ, ಈಗ ಅಲ್ಲಾಹನೇ ಅಲ್ಲಾಹ್’
ಕೊನೆಗೊಮ್ಮೆ ಕರಣೆ ತೋರಿತು ಮರಣ 1869ರ ಫೆಬ್ರವರಿ 15ರಂದು ಅವರಿಗಿದ್ದ ಎಲ್ಲ ಮತಗಳ ಸಾವಿರಾರು ಮಿತ್ರರು ಸೇರಿದ್ದರು. ಅವರ ಅಂತ್ಯ ಯಾತ್ರೆಯಲ್ಲಿ. ರಾಮಪುರದಲ್ಲಿ ತಮ್ಮ ಸಮಾಧಿಯಾಗ ಬೇಕೆಂಬುದು ಅವರ ಅಪೇಕ್ಷೆಯಾಗಿದ್ದಿತಾದರೂ ದಿಲ್ಲಿಯ, ವಲಿಷಾಹ್ ನಿಜಾಮುದ್ದೀನರ ಸ್ಮಾರಕದ ಹತ್ತಿರ ಅವರ ಗೋರಿಯಾಯಿತು.
ಆಧಾರ: ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಣಾ ಮಾಲಿಕೆಯಲ್ಲಿ ಡಾ. ಸಿದ್ಧಯ್ಯ ಪುರಾಣಿಕರು ಬರೆದ ಕೃತಿ.
On the birth anniversary of great poet Mirza Ghalib
https://www.facebook.com/sukunkasafar?mibextid=ZbWKwL
ಪ್ರತ್ಯುತ್ತರಅಳಿಸಿMirza Ghalib biography in hindi
ಪ್ರತ್ಯುತ್ತರಅಳಿಸಿ