ಶಾಂತಿ ದೇವಿ
ಪೂರ್ವಜನ್ಮ ಸ್ಮೃತಿಯ ಶಾಂತಿ ದೇವಿ
ಒಂದು ರೀತಿಯಲ್ಲಿ ಹೇಳುವುದಾದರೆ ಪತಂಜಲಿ ಮಹರ್ಷಿಗಳು ಹೇಳುವ ಮನಸ್ಸಿನ ಹೊಯ್ದಾಟಗಳಿಂದ ಮುಕ್ತವಾದ 'ಚಿತ್ತವೃತ್ತಿ ಪ್ರವತ್ತಿ ನಿರೋಧ'ವೇ ಒಳಿತೇನೊ! ಆದರೆ ಅದು ಎಲ್ಲರಿಗೂ ಸಾಧ್ಯವಿಲ್ಲ. "ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ, ಹೂಡಿ ಬರದಿರು ಮತ್ತೆ ಹಳೆಯ ನೆನಪೆ" ಎಂದು ಹಾಡಿದಷ್ಟೂ, ನೆನಪು ಮರುಕಳಿಸುತ್ತಿರುತ್ತದೆ. ಮರೆವೆಂಬುದು ನಿಜಕ್ಕೂ ವರ. ಆದರೆ ಪರೀಕ್ಷೆಗೆ ಎಂದು ಓದಿದ್ದು ನಮಗೆ ಮರೆಯುತ್ತದೆಯೇ ವಿನಃ, ಬೇಡವೆನಿಸಿದ್ದು ಮರೆಯಾಗದು.
ನಮಗೆ ನೆನಪುಗಳು ಬೇಡ ಎಂದು ಡೋಂಗಿ ಹೊಡೆಯುವ ನಾವು, ಸದಾ ಅದೂ ಇದೂ ನಮ್ಮದಲ್ಲದ್ದನ್ನು ಚಿಂತಿಸುತ್ತಾ ಮತ್ತೊಬ್ಬರ ಕುರಿತು ಗಾಸಿಫ್ ಮಾಡುತ್ತಾ ಬದುಕುತ್ತೇವೆ. ನಮಗೆ ಈ ಕ್ಷಣದಲ್ಲಿ ಬದಕುವುದೇ ಗೊತ್ತಿಲ್ಲ. ನಾಳೆ ಹೇಗಪ್ಪ ಎಂಬ ಚಿಂತೆಯಲ್ಲಿ ಬಸವಳಿದು, 'ವರ್ತಮಾನ ಪತ್ರಿಕೆಯ ತುಂಬ ಭೂತದ ಸುದ್ದಿ' ಎಂಬ ಅಡಿಗರ ಮಾತಿನಂತ ವರ್ತಮಾನ ನಮ್ಮದು.
ಇದರ ಜೊತೆಗೆ ಪೂರ್ವಜನ್ಮ ಇದೆಯೇ ಎಂಬ ಬುದ್ಧಿವಂತಿಕೆ ಬೇರೆ!
ಆಧ್ಯಾತ್ಮ ಲೋಕದಲ್ಲಿ ಹೆಸರಾದ ನಮ್ಮ ಗುರು ಒಮ್ಮೆ ಹೇಳ್ತಿದ್ರು. "ನನಗೆ ಪೂರ್ವಜನ್ಮದ ಬಗ್ಗೆ ಗೊತ್ತಿದ್ಯಾ ಅಂತ ಜನ ಕೇಳ್ತಾರೆ. ನನಗೆ ಪ್ರಯತ್ನ ಪಟ್ಟರೆ ಗೊತ್ತಾಗುತ್ತೇನೊ. ಅದನ್ನು ಕಟ್ಕೊಂಡು ನನಗೇನಾಗ್ಬೇಕು. ಉದಾಹರಣೆಗೆ ನಾನು ಪೂರ್ವ ಜನ್ಮದಲ್ಲಿ ಜಿರಳೆ ಆಗಿದ್ದೆ ಅಂತ ಗೊತ್ತಾದ್ರೆ ಅದರಿಂದ ನನಗೆ ಆಗುವ ಉಪಯೋಗವಾದರೂ ಏನು" ಅಂತ.
ಇಂದು ಜನಿಸಿದವರ ಕುರಿತಾದ ಮಾಹಿತಿ ಅರಸುವ ಹಾದಿಯಲ್ಲಿ ಕಂಡ ವ್ಯಕ್ತಿ ಶಾಂತಿ ದೇವಿ. ಈಕೆಯ ಪುನರ್ಜನ್ಮದ ಕುರಿತಾದ ಹೇಳಿಕೆಗಳು ಭಾರತ ದೇಶದಲ್ಲಿ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಸಂಚಲನ ಮೂಡಿಸಿತ್ತು.
ಶಾಂತಿ ದೇವಿ 1926ರ ಡಿಸೆಂಬರ್ 11ರಂದು ದೆಹಲಿಯಲ್ಲಿ ಜನಿಸಿದರು. ಚಿಕ್ಕ ಹುಡುಗಿಯಾಗಿದ್ದಾಗಲೇ, ಆಕೆಯಲ್ಲಿ ಹಿಂದಿನ ಜನ್ಮದ ವಿವರಗಳನ್ನು ಹೇಳುವ ಪರಿಪಾಠ ಆರಂಭವಾಯಿತು. ನಾಲ್ಕು ವರ್ಷದ ಹುಡುಗಿ ಶಾಂತಿ ದೇವಿ, ತನ್ನ ಪತಿ ವಾಸಿಸುತ್ತಿರುವ ಮಥುರಾದಲ್ಲಿ ತನ್ನ ನಿಜವಾದ ಮನೆ ಇದೆ ಎಂದು ತನ್ನ ಹೆತ್ತವರಿಗೆ ತಿಳಿಸಿದಳು.
ಶಾಂತಿ ದೇವಿ ತನ್ನ ಗಂಡನ ಬಗ್ಗೆ ಮೂರು ವಿಶಿಷ್ಟ ಲಕ್ಷಣಗಳನ್ನು ಹಂಚಿಕೊಂಡಳು. ಆತ ಲಕ್ಷಣವಂತ, ಕನ್ನಡಕವನ್ನು ಧರಿಸುತ್ತಾನೆ ಮತ್ತು ಆತನ ಎಡ ಕೆನ್ನೆಯ ಮೇಲೆ ದೊಡ್ಡ ಮಚ್ಛೆ ಇದೆ. ತನ್ನ ಗಂಡನ ಅಂಗಡಿಯು ಮಥುರಾದ ದ್ವಾರಕಾಧೀಶ ದೇವಸ್ಥಾನದ ಮುಂದೆ ಇದೆ ಎಂದೂ ಹೇಳಿದಳು.
ತನ್ನ ಪೋಷಕರ ಪ್ರತಿಕ್ರಿಯೆಗಳಿಂದ ನಿರುತ್ಸಾಹಗೊಂಡ ಶಾಂತಿ ದೇವಿ, ಆರನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗಿ ಮಥುರಾ ತಲುಪಲು ಪ್ರಯತ್ನಿಸಿದಳು. ಪುನಃ ಊರಿಗೆ ಹಿಂತಿರುಗಿ, ತಾನು ಹೋಗುತ್ತಿದ್ದ ಶಾಲೆಯಲ್ಲಿ ತನಗೆ ಮದುವೆ ಆಗಿತ್ತು, ಮಗುವಿಗೆ ಜನ್ಮ ನೀಡಿದ ಹತ್ತು ದಿನಗಳಲ್ಲಿ ತನ್ನ ಸಾವು ಸಂಭವಿಸಿತು ಎಂದಳು.
ಆಕೆಯ ಶಾಲೆಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾರು ಆಕೆಯನ್ನು ಈ ಕುರಿತಾಗಿ ಮಾತನಾಡಿಸಿದಾಗ, ಶಾಂತಿ ದೇವಿ ಮಥುರೆಯಲ್ಲಿ ಜಾರಿ ಇರುವ ಉಪಭಾಷೆಯನ್ನು ಬಳಸಿದ್ದೇ ಅಲ್ಲದೆ ತನ್ನ ಪತಿಯ ಹೆಸರು ಕೇದಾರ ನಾಥ್ ಎಂದು ಹೇಳಿದಳು.
ಒಂಬತ್ತು ವರ್ಷಗಳ ಹಿಂದೆ, ಒಬ್ಬ ಮಗನಿಗೆ ಜನ್ಮ ನೀಡಿದ ಹತ್ತು ದಿನಗಳ ನಂತರ ತನ್ನ ಹೆಂಡತಿ ಲುಗ್ಡಿ ದೇವಿಯನ್ನು ಕಳೆದುಕೊಂಡಿದ್ದ ಮಥುರಾದಲ್ಲಿದ್ದ ಕೇದಾರ ನಾಥ್ ಎಂಬ ಹೆಸರಿನ ವ್ಯಾಪಾರಿಯನ್ನು ಮುಖ್ಯೋಪಾಧ್ಯಾಯರು ಪತ್ತೆ ಮಾಡಿದರು.
ಕೇದಾರ್ ನಾಥ್ ತನ್ನ ಸ್ವಂತ ಸಹೋದರನಂತೆ ನಟಿಸುತ್ತಾ ದೆಹಲಿಗೆ ಬಂದನು. ಆದರೆ ಶಾಂತಿ ದೇವಿ ತಕ್ಷಣವೇ ಅವನನ್ನು ಮತ್ತು ಲುಗ್ಡಿ ದೇವಿಯ ಮಗನನ್ನು ಗುರುತಿಸಿದಳು. ಕೇದಾರ್ ನಾಥ್ ಮತ್ತು ಲುಗ್ಡಿದೇವಿ ದಾಂಪತ್ಯ ಜೀವನದ ಹಲವಾರು ವಿವರಗಳನ್ನು ಶಾಂತಿ ದೇವಿ ಹೇಳಿದಳು. ಹೀಗೆ ಶಾಂತಿ ದೇವಿಯು ನಿಜವಾಗಿಯೂ ಲುಗ್ಡಿ ದೇವಿಯ ಪುನರ್ಜನ್ಮ ಎಂದು ಅವನಿಗೆ ಶೀಘ್ರದಲ್ಲೇ ಮನವರಿಕೆಯಾಯಿತು.
ಪ್ರಕರಣವನ್ನು ಮಹಾತ್ಮ ಗಾಂಧಿಯವರ ಗಮನಕ್ಕೆ ತರಲಾಯಿತು, ಅವರು ತನಿಖೆಗಾಗಿ ಆಯೋಗವನ್ನು ರಚಿಸಿದರು. ಆಯೋಗವು ಶಾಂತಿ ದೇವಿಯವರೊಂದಿಗೆ ಮಥುರಾಗೆ 1935ರ ನವೆಂಬರ್ 15ರಂದು ಆಗಮಿಸಿತು. ಅಲ್ಲಿ ಅವರು ಲುಗ್ಡಿ ದೇವಿಯ ಅಜ್ಜ ಸೇರಿದಂತೆ ಹಲವಾರು ಕುಟುಂಬ ಸದಸ್ಯರನ್ನು ಗುರುತಿಸಿದರು. ಲುಗ್ಡಿ ದೇವಿ ಮರಣಶಯ್ಯೆಯಲ್ಲಿದ್ದಾಗ ನೀಡಿದ್ದ ಹಲವಾರು ಭರವಸೆಗಳನ್ನು ಈಡೇರಿಸಲು ಕೇದಾರ್ ನಾಥ್ ಉಪೇಕ್ಷಿಸಿದ್ದಾರೆ ಎಂದು ಶಾಂತಿ ದೇವಿ ಕಂಡುಕೊಂಡಳು.
ಶಾಂತಿ ದೇವಿ ತನ್ನ ಹೆತ್ತವರೊಂದಿಗೆ ಮನೆಗೆ ಪ್ರಯಾಣ ಬೆಳೆಸಿದಳು. 1936ರಲ್ಲಿ ಪ್ರಕಟವಾದ ಆಯೋಗದ ವರದಿಯು ಶಾಂತಿ ದೇವಿಯು ನಿಜವಾಗಿಯೂ ಲುಗ್ಡಿ ದೇವಿಯ ಪುನರ್ಜನ್ಮ ಎಂದು ತೀರ್ಮಾನಿಸಿತು.
ಆ ಸಮಯದಲ್ಲಿ ಇನ್ನೂ ಎರಡು ವರದಿಗಳು ಬಂದವು. ಬಾಲ್ ಚಂದ್ ನಹತಾ ಅವರ ವರದಿ 'ಪುನರ್ಜನ್ಮ ಕಿ ಪರ್ಯಾಯಲೋಚನಾ' ಎಂಬ ಹೆಸರಿನ ಹಿಂದಿ ಕಿರುಪುಸ್ತಕವಾಗಿ ಪ್ರಕಟಗೊಂಡಿತು. ಇದರಲ್ಲಿ, "ನಮ್ಮ ಮುಂದೆ ಬಂದಿರುವ ಯಾವುದೇ ವಸ್ತುವಿಚಾರವೂ ಶಾಂತಿ ದೇವಿಗೆ ಹಿಂದಿನ ಜೀವನದ ನೆನಪುಗಳು ಇದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದಾಗಲೀ, ಅಥವಾ ಈ ಪ್ರಕರಣವು ಪುನರ್ಜನ್ಮವನ್ನು ಸಮರ್ಥಿಸುತ್ತದೆ ಎಂದಾಗಲೀ ನಮಗನ್ನಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ. ಶ್ರೀ ಅರವಿಂದರ ಪ್ರಸಿದ್ಧ ಭಕ್ತರಾದ ಇಂದ್ರ ಸೇನ್ ಇದಕ್ಕೆ ಉತ್ತರರೂಪವಾದ ಪ್ರತಿವಾದದ ಲೇಖನ ಮಂಡಿಸಿದ್ದರು. 1936ರಲ್ಲಿ ನಡೆಸಿದ ಸಂದರ್ಶನಗಳ ಆಧಾರದ ಮೇಲೆ ಹೆಚ್ಚಿನ ವರದಿ 1952ರಲ್ಲಿ ಪ್ರಕಟಗೊಂಡಿತು.
ಶಾಂತಿ ದೇವಿ ಮದುವೆಯಾಗಲಿಲ್ಲ. ಅವರು 1950ರ ದಶಕದ ಕೊನೆಯಲ್ಲಿ ಮತ್ತೊಮ್ಮೆ ತಮ್ಮ ಕಥೆಯನ್ನು ಹೇಳಿದರು. 1986ರಲ್ಲಿ ಇಯಾನ್ ಸ್ಟೀವನ್ಸನ್ ಮತ್ತು ಕೆ.ಎಸ್. ರಾವತ್ ಅವರಿಗೆ ನೀಡಿದ ಸಂದರ್ಶನದಲ್ಲಿ ಲುಗ್ಡಿ ದೇವಿ ನಿಧನರಾದಾಗ ಆಕೆಯ ಸಾವಿನ ಸನಿಹದ ಅನುಭವಗಳನ್ನು ಸಹ ಹೇಳಿದ್ದಾರೆ.
ಕೆ.ಎಸ್. ರಾವತ್ 1987ರಲ್ಲಿ ತಮ್ಮ ತನಿಖೆಯನ್ನು ಮುಂದುವರೆಸಿದರು ಆಕೆಯೊಡನೆ ಕೊನೆಯ ಸಂದರ್ಶನವು 1987ರ ಡಿಸೆಂಬರ್ 27ರಂದು ಆಕೆಯ ಸಾವಿಗೆ ಕೇವಲ ನಾಲ್ಕು ದಿನಗಳ ಮೊದಲು ನಡೆಯಿತು. ಅವಳನ್ನು ಎರಡು ಬಾರಿ ಭೇಟಿ ಮಾಡಿದ ಸ್ವೀಡಿಷ್ ಲೇಖಕ ಸ್ಟೂರ್ ಲೋನ್ಹರ್‍ಸ್ಟ್ಂಡ್ 1994ರಲ್ಲಿ ತಮ್ಮ ಭಾಷೆಯಲ್ಲಿ ಆಕೆಯ ಪುನರ್ಜನ್ಮ ವೃತ್ತಾಂತದ ಪುಸ್ತಕವನ್ನು ಪ್ರಕಟಿಸಿದರು. ಅದರ ಇಂಗ್ಲಿಷ್ ಅನುವಾದವು 1998ರಲ್ಲಿ ಪ್ರಕಟಗೊಂಡಿತು.
ಶಾಂತಿ ದೇವಿ 1987ರ ಡಿಸೆಂಬರ್ 27ರಂದು ನಿಧನರಾದರು. ಆಕೆ ತನ್ನ ಪೂರ್ವಜನ್ಮದ ಕುರಿತಾಗಿ ಹೇಳಿದ್ದು ನಿಜ ಅಥವಾ ಕಾಕತಾಳೀಯ ಎಂದು ಹೇಗೇ ಭಾವಿಸುವುದಾದರೂ ಭಾರತೀಯ ಸಮಾಜದ ಭಾಗವಾದ ಆಕೆ ಒಂಟಿಯಾಗಿ ವಿವಾಹವಾಗದೆ ಬದುಕುವ ಹಾಗಾಯಿತು. ಆಕೆಯ ಪೂರ್ವಜನ್ಮದ ಕಲ್ಪನೆ ನಿಜವಾದ್ದು ಎಂದು ಭಾವಿಸಿದ ಪಕ್ಷದಲ್ಲಿ ಆಕೆಯ ಪತಿಯಾಗಿದ್ದವ ಆಕೆಯ ಹಿಂದಿನ ಬದುಕಿನ ಅಂತಿಮ ಕ್ಷಣಗಳಲ್ಲಿನ ತನ್ನ ಅನಿಸಿಕೆಗಳನ್ನು ನಿರ್ಲಕ್ಷಿಸಿದ್ದ ಭಾವಗಳು ಆಕೆಯನ್ನು ಹೇಗೆ ಕಾಡಿರಬಹುದು ಅನಿಸುತ್ತೆ.
ಹೀಗೆ ಯಾವುದೇ ನಿಟ್ಟಿನಲ್ಲೂ ಶಾಂತಿ ದೇವಿಯ ಬದುಕು ಉಪೇಕ್ಷಿಸುವಂತಹ ಘಟನೆ ಅಲ್ಲ.
On the birth anniversary of Shanti Devi
ಕಾಮೆಂಟ್‌ಗಳು