ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾಮಿ ಪ್ರಭುಪಾದರು


 ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು


ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಸಂಸ್ಥಾಪನಾ  ಆಚಾರ್ಯರಾಗಿ ಲೋಕಪೂಜ್ಯರಾದವರು.

ಪ್ರಭುಪಾದರು 1896ರ  ಸೆಪ್ಟೆಂಬರ್ 1ರಂದು ಕೋಲ್ಕೊತ್ತಾದಲ್ಲಿ ಜನಿಸಿದರು. ಅವರ ತಂದೆ ಗೌರ ಮೋಹನ್ ದೇ ಮತ್ತು ತಾಯಿ ರಜನಿ ದೇವಿಯವರು ವೈಷ್ಣವರಾಗಿದ್ದರು. ಇವರ ಮನೆತನವು ಕೋಲ್ಕೊತ್ತಾದ ಅತ್ಯಂತ ಪ್ರತಿಷ್ಠಿತ ಚಿನ್ನದ ವ್ಯಾಪಾರಿಗಳ ಶ್ರೀಮಂತ ಮನೆತನಗಳಲ್ಲಿ ಒಂದಾಗಿತ್ತು. ಗೌರ ಮೋಹನ್ ಅವರು ತಮ್ಮ ಮಗನಿಗೆ ಅಭಯ ಚರಣ ಎಂದು ಹೆಸರಿಟ್ಟರು. ಅವರಿಗಿದ್ದ ಒಂದೇ ಒಂದು ಆಸೆಯೆಂದರೆ, ಅವರ ಮಗ ಶ್ರೀಮತಿ ರಾಧಾರಾಣಿಯ ಭಕ್ತನಾಗಬೇಕೆಂದು.
  
ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಸಮಯದಲ್ಲಿ ಅಭಯ ಚರಣರು ಸ್ಕಾಟಿಷ್ ಚರ್ಚಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ವಿಶ್ವವಿದ್ಯಾಲಯದಲ್ಲಿದ್ದಾಗ ಮಹಾತ್ಮ ಗಾಂಧೀಜಿಯವರ ಆದರ್ಶಗಳಿಂದ ಆಕರ್ಷಿತರಾದ ಪ್ರಭುಪಾದರು ಸ್ವಾತಂತ್ರ್ಯ ಚಳುವಳಿಗೆ ಇಳಿದು ತಾವು ವಿದ್ಯಾಭ್ಯಾಸ ನಡೆಸುತ್ತಿದ್ದ ವಿಶ್ವವಿದ್ಯಾಲಯವು ಬ್ರಿಟಿಷರ ನಿಯಂತ್ರಣದಲ್ಲಿದ್ದುದರಿಂದ ಅಲ್ಲಿನ ಪದವಿಯನ್ನು ತಿರಸ್ಕರಿಸಿದರು. 

ಶ್ರೀಲ ಪ್ರಭುಪಾದರು 1918ರಲ್ಲಿ, ಇನ್ನೂ ವಿದಾರ್ಥಿಯಾಗಿದ್ದಾಗಲೇ ಅಭಯ ರಾಧಾರಾಣಿ ದೇವಿಯವರನ್ನು ಮದುವೆಯಾದರು. ತಮ್ಮ ಕುಟುಂಬದ ಜೀವನೋಪಾಯಕ್ಕಾಗಿ ಅವರು ಒಂದು ಸಣ್ಣ ಔಷಧ ಘಟಕದೊಂದಿಗೆ ವ್ಯಾಪಾರ ಪ್ರಾರಂಭಿಸಿದರು. ಅವರು ತಮ್ಮ ಆಧ್ಯಾತ್ಮಿಕ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರನ್ನು ಮೊದಲ ಬಾರಿಗೆ 1922 ರಲ್ಲಿ ಕೋಲ್ಕೊತ್ತಾದಲ್ಲಿ ಭೇಟಿಯಾದರು. ಭಕ್ತಿಸಿದ್ದಾಂತ ಸರಸ್ವತಿಯವರು ಜೀವನವನ್ನು ಚೈತನ್ಯ ಮಹಾಪ್ರಭುಗಳ ಸಂದೇಶವನ್ನು ಮತ್ತು ವೈದಿಕ ವಿಜ್ಞಾನವನ್ನು ಆಂಗ್ಲ ಜಗತ್ತಿಗೆ ಬೋಧಿಸಲು ಮುಡಿಪಾಗಿಡುವಂತೆ ಪ್ರಭುಪಾದರಿಗೆ ಹೇಳಿದರು. ಪ್ರಭುಪಾದರು ಅಭಯ ಶ್ರೀಲ ಭಕ್ತಿಸಿದ್ಧಾಂತರನ್ನು ತಮ್ಮ ಆಧ್ಯಾತ್ಮಿಕ ಗುರುಗಳಾಗಿ ಒಪ್ಪಿಕೊಂಡರಾದರೂ, ದೀಕ್ಷೆ ತೆಗೆದುಕೊಂಡದ್ದು ಕ್ರಿ.ಶ. 1932ರಲ್ಲಿ.

1936ರಲ್ಲಿ, ಶ್ರೀಲ ಪ್ರಭುಪಾದರು ತಮ್ಮ ಆಧ್ಯಾತ್ಮಿಕ ಗುರುಗಳಿಗೆ ಬರೆದ ಪತ್ರದ ಮೂಲಕ ತಮ್ಮಿಂದ ಯಾವುದಾದರೂ ನಿರ್ದಿಷ್ಟ ಸೇವೆಯಾಗಬೇಕಿದ್ದರೆ ತಿಳಿಸಬೇಕೆಂದು ವಿನಂತಿಸಿಕೊಂಡರು. ಅವರ ಪತ್ರಕ್ಕೆ ಬಂದ ಉತ್ತರವು 1922ರಲ್ಲಿ ಅವರಿಗೆ ಸೂಚಿಲಾಗಿದ್ದ ಅದೇ ವಿಚಾರವಾಗಿತ್ತು: ’ಆಂಗ್ಲ ಜಗತ್ತಿಗೆ ಕೃಷ್ಣ ಪ್ರಜ್ಞೆಯನ್ನು ಬೋಧಿಸು’ ಎಂದು ಪತ್ರ ಬಂದು ತಲುಪಿದ ಎರಡು ವಾರಗಳ ನಂತರ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರು ದೈವಾಧೀನರಾದರು; ಜೊತೆಗೆ ತಮ್ಮ ಅಂತಿಮ ಸೂಚನೆಗಳನ್ನು ಶ್ರೀಲ ಪ್ರಭುಪಾದರ ಹೃದಯದಲ್ಲಿ ಕೆತ್ತಿ ಉಳಿಯುವಂತೆ ಮಾಡಿದರು. ಆ ಸೂಚನೆಗಳು ಪ್ರಭುಪಾದರ ಜೀವನಕ್ಕೆ ಒಂದು ಮಹತ್ವಪೂರ್ಣ ತಿರುವು ನೀಡಲಿದ್ದವು.

ಶ್ರೀಲ ಪ್ರಭುಪಾದರು ಭಗವದ್ಗೀತೆಯ ಕುರಿತು ಭಾಷ್ಯ ಬರೆದರು ಮತ್ತು ಗೌಡಿಯ ಮಠದ ಕಾರ್ಯಕಲಾಪಗಳಲ್ಲಿ ನೆರವಾದರು. ಕ್ರಿ.ಶ. 1944ರ  ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಕಾಗದದ ಕೊರತೆ ಮತ್ತು ಜನರ ಹತ್ತಿರ ಅಲ್ಪ ಸ್ವಲ್ಪವೇ ಹಣವಿದ್ದ ಸಮಯವದು. ಅಂತಹ ಪರಿಸ್ಥಿತಿಯಲ್ಲೂ ಶ್ರೀಲ ಪ್ರಭುಪಾದರು ’ಬ್ಯಾಕ್ ಟು ಗಾಡ್ ಹೆಡ್’ ಎಂಬ ನಿಯತಕಾಲಿಕವನ್ನು ಪ್ರಾರಂಭಿಸಿದರು. ಅದಕ್ಕಾಗಿ ಸ್ವತಃ ಬರೆದರು, ಪರಿಷ್ಕರಿಸಿದರು, ನಿಯತಕಾಲಿಕದ ವಿನ್ಯಾಸವನ್ನು ನಿರ್ಧರಿಸಿದರು, ಕರಡಚ್ಚು ಪ್ರತಿಯನ್ನು ನೋಡಿದರು ಮತ್ತು ಪ್ರತಿಗಳನ್ನು ತಾವೇ ಮಾರಿದರು. ಈ ನಿಯತಕಾಲಿಕವು ಇಂದಿಗೂ ಪ್ರಕಟಿಸಲ್ಪಡುತ್ತಿದೆ.

ಕ್ರಿ. ಶ. 1950ರಲ್ಲಿ, ಶ್ರೀಲ ಪ್ರಭುಪಾದರು ಆಧ್ಯಾತ್ಮಿಕ ಅಧ್ಯಯನದಲ್ಲಿ ಹೆಚ್ಚು ಸಮಯ ಕಳೆಯಲು ವಾನಪ್ರಸ್ಥ ಜೀವನ ಸ್ವೀಕರಿಸಿ ತಮ್ಮ ಮನೆ ಮತ್ತು ಕೌಟುಂಬಿಕ ಜೀವನದಿಂದ ನಿವೃತ್ತಿ ಪಡೆದರು. 1953ರಲ್ಲಿ ತಮ್ಮ ಅನುಯಾಯಿಗಳಿಂದ   ’ಭಕ್ತಿ ವೇದಾಂತ’ ಎಂಬ ಬಿರುದನ್ನು ಪಡೆದರು. ಅವರು ವೃಂದಾವನಕ್ಕೆ ಹೋಗಿ ರಾಧಾ-ದಾಮೋದರ ದೇವಸ್ಥಾನದಲ್ಲಿ ಸರಳ ಜೀವನ ನಡೆಸಿದರಲ್ಲದೆ, ಆಧ್ಯಾತ್ಮಿಕ ಗ್ರಂಥಗಳನ್ನು ಓದುತ್ತ ಮತ್ತು ಬರೆಯುತ್ತ ಅನೇಕ ವರ್ಷಗಳನ್ನು ಅಲ್ಲಿಯೇ ಕಳೆದರು.

ಶ್ರೀಲ ಪ್ರಭುಪಾದರು ಕ್ರಿ.ಶ. 1959 ರಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ಅವರು ರಾಧಾ-ದಾಮೋದರ ದೇವಸ್ಥಾನದಲ್ಲಿದ್ದಾಗಲೇ ತಮ್ಮ ಮೇರುಕೃತಿಯನ್ನು ಬರೆಯಲು ಪ್ರಾರಂಭಿಸಿದರು: ಶ್ರೀಮದ್ ಭಾಗವತವನ್ನು ಆಂಗ್ಲ ಭಾಷೆಗೆ ಅನುವಾದಿಸುವುದು ಮತ್ತು ಅದಕ್ಕೆ ಭಾಷ್ಯ ಬರೆಯುವುದು ಅವರ ದಿನನಿತ್ಯದ ಕಾರ್ಯವಾಗಿತ್ತು. ಅವರು ’ಈಸಿ ಜರ್ನಿ ಟು ಅದರ್ ಪ್ಲಾನೆಟ್ಸ್’ ಎಂಬ ಕೃತಿಯನ್ನು ಸಹ ರಚಿಸಿದರು. ಕೆಲವು ವರ್ಷಗಳ ಅವಧಿಯೊಳಗಾಗಿ, ಅವರು ಶ್ರೀಮದ್ ಭಾಗವತದ ಮೊದಲ ಅಧ್ಯಾಯದ ಆಂಗ್ಲ ಭಾಷೆಯಲ್ಲಿನ ಅನುವಾದ ಮತ್ತು ಭಾಷ್ಯವನ್ನೊಳಗೊಂಡ ಮೂರು ಸಂಪುಟಗಳನ್ನು ರಚಿಸಿದರು. ಮತ್ತೊಮ್ಮೆ ತಾವೊಬ್ಬರೇ ಪುಸ್ತಕಗಳ ಮುದ್ರಣಕ್ಕೆ ಬೇಕಾದ ಕಾಗದಗಳನ್ನು ಖರೀದಿಸಿದರು ಮತ್ತು ಹಣ ಸಂಗ್ರಹಿಸಿದರು. ಸ್ವತಃ ತಾವೇ ಪುಸ್ತಕಗಳನ್ನು ಮಾರಿದರು; ಈ ಸಲ ಪುಸ್ತಕ ಮಾರಾಟ ಮಾಡಲು ಭಾರತದ ದೊಡ್ಡ ದೊಡ್ಡ ನಗರಗಳ ಏಜೆಂಟರು ಸಹಾಯ ಮಾಡಿದರು.

ಇನ್ನು ತಮ್ಮ ಆಧ್ಯಾತ್ಮಿಕ ಗುರುಗಳ ಆಜ್ಞೆಗಳನ್ನು ಪಾಲಿಸಲು ತಾವು ಸಿದ್ಧರೆಂದು ಅಂದುಕೊಂಡರು. ಆಜ್ಞೆಗಳನ್ನು ಪಾಲಿಸುವ ನಿಟ್ಟಿನಲ್ಲಿ ಅವರ ಮೊದಲ ಹೆಜ್ಜೆ, ಕೃಷ್ಣ ಪ್ರಜ್ಞೆಯನ್ನು ಅಮೆರಿಕಕ್ಕೆ ತಲುಪಿಸುವುದಾಗಿತ್ತು. ಏಕೆಂದರೆ ಬೇರೆ ರಾಷ್ಟ್ರಗಳು ಅದನ್ನು ಅನುಸರಿಸುವರೆಂಬ ನಂಬಿಕೆ ಅವರಲ್ಲಿತ್ತು. ಜಲದೂತ ಎಂಬ ಸರಕು ಸಾಗಣಿಕೆಯ ಹಡಗಿನ ಮೂಲಕ ಕೊನೆಗೂ 1965ರಲ್ಲಿ ನ್ಯೂಯಾರ್ಕ್‍ಗೆ ಬಂದಿಳಿದರು. ಆಗ ಅವರಿಗೆ 69 ವರ್ಷ ವಯಸ್ಸು. ಅವರ ಹತ್ತಿರ ನಲವತ್ತು ರೂಪಾಯಿಗಳು ಮತ್ತು ಶ್ರೀಮದ್ ಭಾಗವತದ ಕೆಲವು ಪ್ರತಿಗಳನ್ನು ಬಿಟ್ಟರೆ ಬೇರೇನೂ ಇರಲಿಲ್ಲ.

ಅವರ ಸಮುದ್ರ ಪ್ರಯಾಣವು ಬಹಳ ಕಠಿಣವಾಗಿತ್ತು. ಏಕೆಂದರೆ ಪ್ರಯಾಣದ ಸಮಯದಲ್ಲಿಯೇ ಅವರು ಎರಡು ಬಾರಿ ಹೃದಯಾಘಾತದಿಂದ ಬಳಲಬೇಕಾಯಿತು. ನ್ಯೂಯಾರ್ಕಿಗೆ ಬಂದಿಳಿದ ನಂತರ ಅವರಿಗೆ ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದೇ  ತಿಳಿಯಲಿಲ್ಲ. ಅಲ್ಲಿ ಇಲ್ಲಿ ಬೋಧಿಸುತ್ತ ಆರು ತಿಂಗಳುಗಳವರೆಗೆ ಕಷ್ಟವನ್ನನುಭವಿಸಿದರು. ಅನಂತರ ಅವರ ಕೆಲವು ಅನುಯಾಯಿಗಳು ಮ್ಯಾನ್ ಹಟನ್ನಿನಲ್ಲಿ ಅವರಿಗಾಗಿ ಬಾಡಿಗೆಗೆ ತೆಗೆದುಕೊಂಡ ಅಂಗಡಿಯ ಮುಂಭಾಗದ ಕೊಠಡಿಯಲ್ಲಿ ಮತ್ತು ವಾಸದ ಮಹಡಿಯಲ್ಲಿ ನಿತ್ಯ ಬೋಧನೆ ನೀಡುತ್ತಿದ್ದರು, ಕೀರ್ತನೆಗಳನ್ನು ಏರ್ಪಡಿಸುತ್ತಿದ್ದರು ಮತ್ತು ಪ್ರಸಾದವನ್ನು ಹಂಚುತ್ತಿದ್ದರು.  ಹೀಗೆ ಬಂದ ಅನೇಕರು ’ಸ್ವಾಮೀಜಿ’ಯವರ ಅನುಯಾಯಿಗಳಾದರು.

ಈ ಅನುಯಾಯಿಗಳು ಉದ್ಯಾನಗಳಲ್ಲಿ ನಿತ್ಯ ಕೀರ್ತನೆಗಳನ್ನು ಹಮ್ಮಿಕೊಳ್ಳತೊಡಗಿದರು. ಬೋಧನೆಗಳು ಮತ್ತು ಭಾನುವಾರದ ಭೋಜನಕೂಟಗಳು ಹೆಸರುವಾಸಿಯಾದವು. ಕೊನೆಗೆ ಅನೇಕ ಯುವ ಅನುಯಾಯಿಗಳು ಶ್ರೀಲ ಪ್ರಭುಪಾದರಿಂದ ದೀಕ್ಷೆ ಪಡೆದು, ನಾಲ್ಕು ಪ್ರಮುಖ ಸಿದ್ಧಾಂತಗಳನ್ನು ಪಾಲಿಸುವ ಪ್ರಮಾಣ ತೆಗೆದುಕೊಂಡರು. ಆ ನಾಲ್ಕು ಪ್ರಮುಖ ಸಿದ್ಧಾಂತಗಳೆಂದರೆ, ಮಾಂಸ ಭಕ್ಷಿಸುವುದಿಲ್ಲ, ಜೂಜಾಟವಾಡುವುದಿಲ್ಲ, ಮದ್ಯ ಸೇವಿಸುವುದಿಲ್ಲ ಮತ್ತು ಅನೈತಿಕ ಲೈಂಗಿಕತೆಯಲ್ಲಿ ತೊಡಗುವುದಿಲ್ಲ. ಇಷ್ಟೇ ಅಲ್ಲದೆ, ಪ್ರತಿನಿತ್ಯ 16 ಸಲ ಹರೇ ಕೃಷ್ಣ ಮಂತ್ರವನ್ನು 108 ಪವಿತ್ರ ಬೀಜಗಳ ಜಪಮಾಲೆಯೊಂದಿಗೆ ಪಠಿಸುವ ಪ್ರಮಾಣವನ್ನೂ ಮಾಡಿದರು. ಶ್ರೀಲ ಪ್ರಭುಪಾದರು ತಮ್ಮ ’ಬ್ಯಾಕ್ ಟು ಗಾಡ್ ಹೆಡ್’ ನಿಯತಕಾಲಿಕವನ್ನು ಪುನಃ ಸ್ಥಾಪಿಸಿದರು.

ಶ್ರೀಲ ಪ್ರಭುಪಾದರು ಜುಲೈ 1966ರಲ್ಲಿ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ - ಇಸ್ಕಾನ್ ಸ್ಥಾಪಿಸಿದರು. ಈ ಸಂಘದ ಮೂಲಕ ಕೃಷ್ಣ ಪ್ರಜ್ಞೆಯನ್ನು ಜಗತ್ತಿನಾದ್ಯಂತ ಹರಡುವುದು ಅವರ ಉದ್ದೇಶವಾಗಿತ್ತು. ಕ್ರಿ.ಶ. 1967ರಲ್ಲಿ, ಸ್ಯಾನ್ ಫ್ರಾನ್ಸಿಸ್ಕೋಗೆ ಭೇಟಿ ನೀಡಿ ಇಸ್ಕಾನ್ ಕೇಂದ್ರವನ್ನು ಪ್ರಾರಂಭಿಸಿದರು. ಅನಂತರ ಚೈತನ್ಯ ಮಹಾಪ್ರಭುಗಳ ಸಂದೇಶವನ್ನು  ಹರಡಲು ಮಾಂಟ್ರಿಯಲ್, ಬಾಸ್ಟನ್, ಲಂಡನ್, ಬರ್ಲಿನ್, ಉತ್ತರ ಅಮೇರಿಕ ಮತ್ತು ಭಾರತದ ನಗರಗಳಲ್ಲಿ ಇಸ್ಕಾನ್ ಹೊಸ ಕೇಂದ್ರಗಳನ್ನು ತೆರೆಯಲು ತಮ್ಮ ಶಿಷ್ಯರನ್ನು ಜಗತ್ತಿನೆಲ್ಲೆಡೆ ಕಳುಹಿಸಿದರು. ಪ್ರಾರಂಭದಲ್ಲಿ ಭಾರತದಲ್ಲಿ ಮೂರು ಅದ್ಭುತ ದೇವಸ್ಥಾನಗಳ ಯೋಜನೆ ಹಾಕಲಾಯಿತು:  ಅವುಗಳೆಂದರೆ ಎಲ್ಲ ಪೂರಕ ಸೌಲಭ್ಯಗಳಿಂದ ಸುಸಜ್ಜಿತವಾದ ವೃಂದಾವನದ ಶ್ರೀ ಕೃಷ್ಣ-ಬಲರಾಮ ದೇವಸ್ಥಾನ; ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನೊಳಗೊಂಡ ಮುಂಬಯಿಯ ದೇವಸ್ಥಾನ ಮತ್ತು ವೈದಿಕ ಗ್ರಹಾಲಯವನ್ನು ಹೊಂದಿದ ಮಯಾಪುರದ ದೇವಸ್ಥಾನ.

ಅನಂತರದ 11 ವರ್ಷಗಳಲ್ಲಿ ಶ್ರೀಲ ಪ್ರಭುಪಾದರು ಭಾರತದಲ್ಲಿ ತಾವು ಮೊದಲು ಬರೆದ ಮೂರು ಪುಸ್ತಕಗಳನ್ನು ಹೊರತುಪಡಿಸಿದಂತೆ  ಇನ್ನುಳಿದ ಎಲ್ಲ ಪುಸ್ತಕಗಳನ್ನೂ ಪ್ರಕಟಿಸಿದರು. ಅವರು ಸ್ವಲ್ಪ ಹೊತ್ತು ಮಾತ್ರ ಮಲಗಿದ್ದು, ನಸುಕಿನ ಸಮಯವನ್ನು ಬರೆಯುವುದಕ್ಕಾಗಿಯೇ ಮೀಸಲಿಟ್ಟಿದ್ದರು. ಪ್ರತಿನಿತ್ಯ ಬೆಳಗ್ಗೆ 1.30 ರಿಂದ 4.30 ರವರೆಗೆ ಬರೆಯುತ್ತಿದ್ದರು. ಅವರು ಕೈಬರವಣಿಗೆಯನ್ನು ಓದಿ ಹೇಳುತ್ತಿದ್ದಂತೆಯೇ ಅವರ ಶಿಷ್ಯರು ಟೈಪ್ ಮಾಡಿ ಅನಂತರ ತಿದ್ದುತ್ತಿದ್ದರು.  ಶ್ರೀಲ ಪ್ರಭುಪಾದರು ಸಂಸ್ಕೃತ ಅಥವಾ ಬಂಗಾಳಿ ಭಾಷೆಯಲ್ಲಿದ್ದ ಮೂಲ ಬರವಣಿಗೆಗಳನ್ನು ಶಬ್ದಶಃ ಅನುವಾದಿಸಿದರು ಮತ್ತು ಸಂಪೂರ್ಣ ವಿವರಣೆ ನೀಡಿದರು.

ಶ್ರೀಲ ಪ್ರಭುಪಾದರು ರಚಿಸಿದ ಕೃತಿಗಳಲ್ಲಿ ಪ್ರಮುಖವೆಂದರೆ ’ಭಗವದ್ಗೀತಾ ಯಥಾರೂಪ’, ತದನಂತರ ಬಹು ಸಂಪುಟಗಳ ಶ್ರೀಮದ್ ಭಾಗವತ, ಬಹು ಸಂಪುಟಗಳ ಚೈತನ್ಯ ಚರಿತಾಮೃತ, ಭಕ್ತಿ ರಸಾಮೃತ ಸಿಂಧು, ಕೃಷ್ಣ: ದೇವೋತ್ತಮ ಪರಮ ಪುರುಷ, ಶ್ರೀ ಚೈತನ್ಯರ ಬೋಧನೆಗಳು, ಶ್ರೀ ಕಪಿಲರ ಬೋಧನೆಗಳು, ಮಹಾರಾಣಿ ಕುಂತಿಯ ಬೋಧನೆಗಳು, ಶ್ರೀ ಈಶೋಪನಿಷದ್, ರಕ್ಷಾಮೃತ ಮತ್ತು ಇತರ ಸಣ್ಣ ಪುಸ್ತಕಗಳು.

ಅವರ ಕೃತಿಗಳನ್ನು ಐವತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಿಸಲಾಗಿದೆ. ಶ್ರೀಲ ಪ್ರಭುಪಾದರ ಪುಸ್ತಕಗಳನ್ನು ಪ್ರಕಟಿಸುವುದಕ್ಕಾಗಿ ಕ್ರಿ.ಶ. 1972ರಲ್ಲಿ ಸ್ಥಾಪಿತವಾದ ಭಕ್ತಿವೇದಾಂತ ಬುಕ್ ಟ್ರಸ್ಟ್, ಇಂದು ಭಾರತೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಪುಸ್ತಕ ಪ್ರಕಟಿಸುವ ಜಗತ್ತಿನ ಅತಿ ದೊಡ್ಡ ಪ್ರಕಾಶನ ಸಂಸ್ಥೆಯಾಗಿ ಹೊರಹೊಮ್ಮಿದೆ.

ತಾವು ಬರೆಯುವುದರಲ್ಲಿ ಎಷ್ಟೇ ಮಗ್ನರಾಗಿದ್ದರೂ, ಶ್ರೀಲ ಪ್ರಭುಪಾದರು ಅದರಿಂದ ತಮ್ಮ ಬೋಧನಾ ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಅಡ್ಡಿಯುಂಟಾಗಲು ಬಿಡಲಿಲ್ಲ. ಮುಪ್ಪಾವಸ್ಥೆಯಲ್ಲಿದ್ದ ಅವರು ಕೇವಲ ಹನ್ನೆರಡು ವರ್ಷಗಳಲ್ಲಿ ಬೋಧನೆ ನೀಡುವುದಕ್ಕಾಗಿ ಇಡೀ ಜಗತ್ತನ್ನು 14ಬಾರಿ ಸುತ್ತಿದರು. ಇದರಿಂದ ಅವರು ಆರು ಖಂಡಗಳಿಗೆ ಹೋಗಿ ಬಂದರು. ಅವರನ್ನು ತಡೆಯುವುದು ಅಸಾಧ್ಯವಾಗಿತ್ತು.

ಬರವಣಿಗೆ, ಅನುಯಾಯಿಗಳಿಗೆ ಬೋಧನೆ, ಸಾರ್ವಜನಿಕರನ್ನು ಸಂಬೋಧಿಸುವುದು ಮೊದಲಾದವುಗಳು ಅವರ ಜೀವನದ ಕೊನೆಯ ದಿನದವರೆಗೆ ನಿರಂತರವಾಗಿ ಸಾಗಿದ್ದವು. ಶ್ರೀಲ ಪ್ರಭುಪಾದರು ತಾವು 1977ರ   ನವೆಂಬರ್ 14ರಂದು ಇಹಲೋಕದಿಂದ ನಿರ್ಗಮಿಸುವುದಕ್ಕೆ ಮುನ್ನ ತಾವು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವಂತೆ ಮತ್ತು ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಬೋಧಿಸಿ ಹರಡುವುದನ್ನು ಕುರಿತಂತೆ ತಮ್ಮ ಶಿಷ್ಯರಿಗೆ ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ಪಾಶ್ಚಾತ್ಯ ಜಗತ್ತಿನಲ್ಲಿ ಅವರು ಕಳೆದ ಸ್ವಲ್ಪ ಅವಧಿಯಲ್ಲೇ ಅವರು ನಿರಂತರ ಬೋಧಿಸಿದರು, 108 ದೇವಸ್ಥಾನಗಳನ್ನು ಕಟ್ಟಿದರು, ಅರವತ್ತಕ್ಕೂ ಹೆಚ್ಚು ಸಂಪುಟಗಳಲ್ಲಿ ಆಧ್ಯಾತ್ಮಿಕ ಸಾಹಿತ್ಯವನ್ನು ರಚಿಸಿದರು, ಐದು ಸಾವಿರ ಶಿಷ್ಯರಿಗೆ ದೀಕ್ಷೆ ನೀಡಿದರು, ಭಕ್ತಿ ವೇದಾಂತ ಬುಕ್ ಟ್ರಸ್ಟ್ ಸ್ಥಾಪಿಸಿದರು. ಅಲ್ಲದೆ ಒಂದು ವೈಜ್ಞಾನಿಕ ಶಿಕ್ಷಣಕೇಂದ್ರ (ಭಕ್ತಿ ವೇದಾಂತ ಸಂಸ್ಥೆ) ವನ್ನು ಮತ್ತು ಇಸ್ಕಾನ್ ಗೆ ಸಂಬಂಧಿಸಿದ ಇತರ ಟ್ರಸ್ಟ್ ಗಳನ್ನು ಪ್ರಾರಂಭಿಸಿದರು.

ಶ್ರೀಲ ಪ್ರಭುಪಾದರು ಅಸಾಮಾನ್ಯ ಲೇಖಕರು, ಬೋಧಕರು ಮತ್ತು ಸಾಧುಗಳಾಗಿದ್ದರು. ತಮ್ಮ ಬರವಣಿಗೆ ಮತ್ತು ಬೋಧನೆಯ ಮೂಲಕ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಹರಡಿ ತಮ್ಮ ಗುರುಗಳ ಕನಸನ್ನು ನನಸಾಗಿಸಿದರು. ಅನೇಕ ಸಂಪುಟಗಳನ್ನೊಳಗೊಂಡ ಅವರ ಬರವಣಿಗೆಗಳು ಅವರ ಶಿಷ್ಯರ ಮತ್ತು ಸಾರ್ವಜನಿಕರ ಪಾಲಿಗೆ ಕೃಷ್ಣಪ್ರಜ್ಞೆಯ ಅಡಿಪಾಯವಾಗಿವೆ. ಸಾಷ್ಟಾಂಗ ಪ್ರಣಾಮಗಳು.

On the birth anniversary of ISKCON founder Sri A.C. Bhaktivedanta Swami Prabhupada 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ