ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶರತ್‍ಚಂದ್ರ


 ಶರತ್‍ಚಂದ್ರ ಚಟ್ಟೋಪಾಧ್ಯಾಯ


ಶರತ್‍ಚಂದ್ರ ಚಟ್ಟೋಪಾಧ್ಯಾಯ ಮಹಾನ್ ಕಾದಂಬರಿಕಾರರು.  ಇವರು ರಾಷ್ಟ್ರೀಯ ಕಾಂಗ್ರೆಸ್ಸಿನ ಚಟುವಟಿಕೆಯಲ್ಲೂ ಪ್ರಮುಖ ಪಾತ್ರವಹಿಸಿದವರು. 

ಶರತ್‌ಚಂದ್ರರು 1876ರ ಸೆಪ್ಟೆಂಬರ್ 15ರಂದು ಜನಿಸಿದರು.  ಶರಚ್ಚಂದ್ರರ ತಂದೆ ಮತಿಲಾಲ ಚಟ್ಟೋಪಾಧ್ಯಾಯ ಸಾಹಿತಿಯಾಗಬೇಕೆಂಬ ಚಪಲದವರು. ಕಥೆ ಕಾದಂಬರಿ ಪದ್ಯ ನಾಟಕವೆಲ್ಲಕ್ಕೂ ಕೈಹಾಕಿ ಏನೊಂದನ್ನೂ ಮುಗಿಸದ, ಪ್ರಕಟಿಸದ ಅಸ್ತಿಮಿತತೆ ಹೊಂದಿದ್ದ ವ್ಯಕ್ತಿ. ಆತ ತನ್ನ ಲೇಖನಚಟ, ಅಸ್ಥಿರ ಬುದ್ಧಿ ಎರಡನ್ನೂ ಮಗನಿಗೆ ದತ್ತಿ ಬಿಟ್ಟುಹೋದರು. 

ಶರತ್‍ಚಂದ್ರನ ತಾಯಿ ಭಾಗಲ್ಪುರದ ಪ್ರಸಿದ್ಧ ಗಂಗೂಲಿ ಮನೆತನಕ್ಕೆ ಸೇರಿದವರು. ಆಕೆ ತನ್ನ ಸಹೋದರರ ಉಸ್ತುವಾರಿಯಲ್ಲಿ ಓದಿ ಮುಂದಕ್ಕೆ ಬರಲೆಂದು ಹತ್ತು ವರ್ಷದ ತನ್ನ ಮಗನನ್ನು ಭಾಗಲ್ಪುರಕ್ಕೆ ಕಳಿಸಿದರು. ಆದರೆ ಮಗ ಅಲ್ಲಿ ವ್ಯಾಸಂಗದ ಕಡೆಗೆ ಶ್ರದ್ಧೆ ತೋರಿಸದೆ ಅಲೆಮಾರಿಯಾಗಿ, ಕಾಲ ತಳ್ಳುವುದರಲ್ಲಿ ನಿಪುಣನಾದ. ಹೇಗೋ ಪ್ರವೇಶ ಪರೀಕ್ಷೆಯನ್ನು ದಾಟಿ ಎಫ್.ಎ.ಗೆ ಅರ್ಹತೆ ಪಡೆಯಲು ಯತ್ನಿಸುವಾಗಲೇ ವಿದ್ಯಾಭ್ಯಾಸ ಅವನಿಗೆ ಸಾಕುಸಾಕಾಗಿ ಹೋಯಿತು. ಆನಂತರ ಶ್ರೀಮಂತರಲ್ಲಿ ಗುಮಾಸ್ತನಾಗಿ, ಸಾಧುವಿನ ವೇಷದಲ್ಲಿ ಸಂಚರಿಸುತ್ತ, ಕೊನೆಗೆ ಬಿಹಾರದ ಒಬ್ಬ ಭೂಮಾಲೀಕನ ಬಳಿ ಕೆಲಸ ಮಾಡುತ್ತ ಬೆಳೆದರು. ಏತನ್ಮಧ್ಯೆ ಬಿಭೂತಿ ಭೂಷಣ ಭಟ್ಟ ಎಂಬ ಗೆಳೆಯನೊಂದಿಗೆ ಸೇರಿ ಒಂದು ಸಾಹಿತ್ಯ ಸಂಘವನ್ನು ಮಾಡಿ, ಛಾಯಾ ಎಂಬ ಕೈ ಬರಹದ ಪತ್ರಿಕೆಯನ್ನೂ ಸ್ಥಾಪಿಸಿದರು. ಬಂಕಿಮಚಂದ್ರ ಮೊದಲಾದವರ ಕೃತಿಗಳನ್ನು ಪಠಿಸುವುದೆಂದರೆ ಇವರಿಗೆ ವಿಶೇಷ ಉತ್ಸಾಹ. ಸಾಹಿತಿಯಾಗಿದ್ದ ಸೋದರಮಾವ ಉಪೇಂದ್ರನಾಥ ಗಂಗೂಲಿಯಿಂದಾಗಿ ಇವರಿಗೂ ಸಾಹಿತ್ಯದ ಆಕರ್ಷಣೆ ತಟ್ಟಿತು.

1903ರಲ್ಲಿ ತಂದೆ ಮತಿಲಾಲ ದೈವಾದೀನರಾದರು. ಕೂಡಲೆ ಶರತ್‍ಚಂದ್ರ ಕೊಲ್ಕತ್ತೆಗೆ ಪ್ರಯಾಣ ಮಾಡಿ, ಮಾರನೆಯ ವರ್ಷ ರಂಗೂನಿಗೆ ವಲಸೆ ಹೋದರು. ಈತನ ಸೋದರತ್ತೆ ಮತ್ತು ಆಕೆಯ ಪತಿ ಈತನಿಗೆ ನೆರವು ನೀಡಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ದೊರಕಿಸಿಕೊಟ್ಟರು. ರೈಲ್ವೆಯಲ್ಲೊ ಸರ್ಕಾರದ ಲೋಕೋಪಯೋಗಿ ಶಾಖೆಯಲ್ಲೊ ಚಾಕರಿ ಮಾಡುತ್ತ ಒಟ್ಟು 12 ವರ್ಷ ಬರ್ಮಾದಲ್ಲಿ ನೆಲೆಸಿದ್ದರು. ಅಂಕೆಗಿಂಕೆಯಿಲ್ಲದೆ ಸ್ವೇಚ್ಛಾಚಾರ ಇವರ ದಿನಚರಿಯಾಗಿದ್ದರೂ ನಾನಾ ವಿಷಯಗಳ ಮೇಲಣ ಗ್ರಂಥಗಳನ್ನು ಮನಸ್ಸಿಟ್ಟು ಅಧ್ಯಯನ ಮಾಡಿ ಜ್ಞಾನಾರ್ಜನೆ ಮಾಡಿಕೊಂಡರಲ್ಲದೆ ಪ್ರಬಂಧ ಇತ್ಯಾದಿಗಳನ್ನು ರಚಿಸಿ ಕೊಲ್ಕತ್ತೆಗೆ ರವಾನಿಸುತ್ತಿದ್ದರು; ಅವನ್ನು ಭಾರತಿ, ಯಮುನಾ, ಬಂಗಭಾಷಿ ಮುಂತಾದ ಪತ್ರಿಕೆಗಳು ಪ್ರಕಟಿಸುತ್ತಿದ್ದುವು. ಶರತ್‍ಚಂದ್ರರು ಕೆಲವೊಮ್ಮೆ ಸುರೇಂದ್ರನಾಥ ಗಂಗೂಲಿ ಅನಿಲಾದೇವಿ ಮುಂತಾದ ಕಾವ್ಯನಾಮಗಳನ್ನು ಇಟ್ಟುಕೊಳ್ಳುತ್ತಿದ್ದರು. 1912ರಲ್ಲಿ ಕೊಲ್ಕತ್ತೆಗೆ ಬಂದಿದ್ದಾಗ ಶಾಂತಿದೇವಿ ಎಂಬ ಕನ್ಯೆಯನ್ನು ಮದುವೆಯಾದರು. ಆಕೆ ಅಸುನೀಗಿದರು.  ರಂಗೂನಿಗೆ ಹಿಂತಿರುಗಿ 1913ರಲ್ಲಿ ಹಿರಣ್ಮಯೀ ದೇವಿ ಎಂಬಾಕೆಯನ್ನು ಕೈಹಿಡಿದರು. 1916ರಲ್ಲಿ ಬರ್ಮವನ್ನು ತ್ಯಜಿಸಿ ಕೊಲ್ಕತ್ತಕ್ಕೆ ಬಂದು ಅಲ್ಲಿಯೆ ಬೀಡುಬಿಟ್ಟರು. ಸಾಹಿತ್ಯವನ್ನೇ ವೃತ್ತಿಯನ್ನಾಗಿಸಿಕೊಂಡು ಅದರ ವರಮಾನದಿಂದ ಸುಖಸೌಕರ್ಯದ ಜೀವನ ನಡೆಸಿದ ಗ್ರಂಥಕರ್ತರಲ್ಲಿ ಇವರೇ ಮೊದಲಿಗರೆಂದು ಎಣಿಸಲಾಗಿದೆ. 1934ರಲ್ಲಿ ಪತ್ನಿಯ ಬಯಕೆ ಸಲ್ಲಿಸಲು ಇನ್ನೊಂದು ಭವನವನ್ನು ಕಟ್ಟಿಸಿದರು. ಮುಂದೆ 1938ರಲ್ಲಿ ಜನವರಿ 16ರಂದು ತೀರಿಕೊಂಡರು.

ಕೊಲ್ಕತ್ತೆಗೆ ಬಂದದ್ದೇ ತಡ ಶರತ್ ಚಂದ್ರರು ರಾಜಕೀಯದ ಸೆಳೆತಕ್ಕೆ ಸಿಕ್ಕಿದರು. 1917ರಲ್ಲಿ ಚಿತ್ರರಂಜನ ದಾಸರನ್ನು ತನ್ನ ಗುರುವಾಗಿ ಸ್ವೀಕರಿಸಿದರು. 1921ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾಗಿ ಹೌರ ಜಿಲ್ಲಾಸಮಿತಿಗೆ ಅಧ್ಯಕ್ಷರಾಗಿ, ಹೆಂಗಸರ ಕಾರ್ಯಕಲಾಪಗಳಿಗಾಗಿ ನಾರೀಕರ್ಮ ಮಂದಿರ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಹಲವು ನಾಯಕರಿಗೆ ಹತ್ತಿರದವರಾಗಿ ಮಹಾತ್ಮ ಗಾಂಧೀಜಿಯವರ ಬೆಂಬಲಿಗರಾಗಿ ಬಹಳಷ್ಟು ಸಮಾಜಸೇವೆ ಸಲ್ಲಿಸಿದರು. ಗಾಂಧೀಜಿಗೆ ಒಮ್ಮೆ ಈತ ಹೀಗೆಂದರಂತೆ: 'ನೂಲುವುದನ್ನು ನಾನು ಕಲಿತೆ, ಚರಕದ ಒಲುಮೆಯಿಂದಲ್ಲ, ನಿಮ್ಮ ಕುರಿತು ಒಲುಮೆಗೋಸ್ಕರ.' ಶಾಲಾ ಕಾಲೇಜು ಬಹಿಷ್ಕರಿಸಿ ಬನ್ನಿ ಎಂಬ ಕರೆ ಗಾಂಧೀಜಿಯಿಂದ ಘೋಷಿತವಾದಾಗ ರವೀಂದ್ರನಾಥ ಠಾಕೂರರು ಅದಕ್ಕೆ ಆಕ್ಷೇಪ ಎತ್ತಿದರಂತೆ; ತತ್‍ಕ್ಷಣ ಶರತ್‍ಚಂದ್ರರು ತನಗೆ ಸಾಹಿತ್ಯಿಕ ದಾರಿ ತೋರುಗರಲ್ಲಿ ಒಬ್ಬರಾಗಿದ್ದರೂ ಠಾಕೂರರನ್ನು ಖಂಡಿಸಿದರು. ಕ್ರಾಂತಿಕಾರೀ ಗುಂಪನ್ನು ಕಂಡರೂ ಶರತ್‍ಚಂದ್ರರಿಗೆ ಸಹಾನುಭೂತಿ ಇತ್ತು. ಅವರಲ್ಲಿ ಕೆಲವರು 1927ರಂದು ಜೈಲಿನಿಂದ ಹೊರಬಂದಾಗ ಅವರಿಗೆ ಹಾರ್ದಿಕ ಸತ್ಕಾರ ಏರ್ಪಡಿಸಿದರು. ಅಸ್ಪೃಶ್ಯತೆ ಇರಕೂಡದೆಂದೇ ಇವರ ತೀವ್ರವಾದ; ದೀನ ದಲಿತರ ವಿಷಯವಾಗಿ ಇವರ ಎದೆ ಸದಾ ಕರಗುತ್ತಿತ್ತು. ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳನ್ನು ಚರ್ಚಿಸಿ ನಾರೀರ್ ಮೂಲ್ಯ (1923), ತರುಣರ್ ವಿದ್ರೋಹ (1929), ಸ್ವದೇಶ್ ಒ ಸಾಹಿತ್ಯ (1932) ಎಂಬ ಮೂರು ಪುಸ್ತಕ ಬರೆದರು. ಅಲ್ಲದೆ ತಮ್ಮ ಕೆಲವು ಪ್ರಬಂಧಗಳಲ್ಲೂ ಕುಶಲ ಪತ್ರಗಳಲ್ಲೂ ಆ ಪ್ರಶ್ನೆಗಳನ್ನು ಪ್ರಸ್ತಾವಿಸಿದರು.

ಶರತ್‍ಚಂದರರ ಒಟ್ಟು ಕೃತಿಗಳ ಸಂಖ್ಯೆ 44. 1903ರಲ್ಲಿ ಬಂದ ಮೊಟ್ಟ ಮೊದಲ ಕಥೆ 'ಮಂದಿರ್'.  ಅದಕ್ಕೆ ಕುಂತಳ ಬಹುಮಾನ ಸಿಕ್ಕಿತು. ಎರಡನೆಯ ಕಥೆ ಬಡಾದೀದಿ (1907). ಮುಂದೆ ರಾಮೆರ್ ಸುಮತಿ (1914), ಪಥನಿರ್ದೇಶ, ಬಿಂದೂರ್ ಚೇಲೆ (1913) ಎಂಬ ಮೂರು ಕಥೆಗಳು ಮೆಚ್ಚಿಕೆ ಪಡೆದವು. ಇವರ ಅತ್ಯುತ್ತಮ ಕಾದಂಬರಿ ಚರಿತ್ರಹೀನ; ಅದರಲ್ಲಿ ಸುಶಿಕ್ಷಿತನೂ ಕುಲೀನನೂ ಆದ ಒಬ್ಬ ಯುವಕನಿಗೆ ಊಟದ ಹೋಟೆಲಿನಲ್ಲಿ ದಾಸಿಯಾಗಿರುವ ಒಬ್ಬ ವಿಧವೆಯ ಮೇಲೆ ಪ್ರೇಮ ಉಂಟಾಗುತ್ತದೆ. ಅದು ಫಲಿಸದ ಪ್ರಣಯ, ಇದರ ಹಸ್ತಪ್ರತಿಯನ್ನು ಶರತ್‍ಚಂದ್ರ ಮೊದಲು ಭಾರತವರ್ಷ ಎಂಬ ಖ್ಯಾತ ಪ್ರತಿಕೆಗೆ ಕಳಿಸಿದರು; ಸಂಪಾದಕ ದ್ವಿಜೇಂದ್ರಲಾಲ ರಾಯ್ ಅದನ್ನು ಪ್ರಕಟಿಸಲು ನಿರಾಕರಿಸಿದರು. ಕಾಲಾನಂತರ ಶರತ್‍ಚಂದ್ರ ಯಮುನಾ ಪತ್ರಿಕೆಗೆ ಸಹಸಂಪಾದಕರಾದಾಗ ಅದು ಮುದ್ರಣಗೊಂಡಿತು. ಅಷ್ಟೇಕೆ, ರಮಾನಂದ ಚಟರ್ಜಿ ಸಂಪಾದಿತ ಪ್ರವಾಸೀ ಆ ಸಮಯದಲ್ಲಿ ಹೆಸರಾಂತ ಪತ್ರಿಕೆಯಾಗಿತ್ತು. ಅದರಲ್ಲಿ ಠಾಕೂರರ ಕೃತಿಗಳು ಪ್ರಕಟವಾದುವೇ ವಿನಾ ಶರತ್‍ಚಂದ್ರರ ಒಂದು ಕೃತಿಯೂ ಪ್ರಕಟವಾಗಲಿಲ್ಲ, ಇದೊಂದು ಸೋಜಿಗದ ಸಂಗತಿ.

ಶರತ್‍ಚಂದ್ರ ದೊಡ್ಡ, ಮಧ್ಯಮ, ಚಿಕ್ಕ ಗಾತ್ರದ ಹಲವು ಕಾದಂಬರಿಗಳನ್ನು ಬರೆದರು. ಪಂಡಿತ ಮಹಾಶಯ (1914), ಹಳ್ಳಿ ಸಮಾಜ (1916), ಗೃಹದಾಹ (1920), ಶ್ರೀಕಾಂತ I, II, III (1922 ಮುಂದೆ), ನಾನು ಮಾಧವಿ, ಶೇಷಪ್ರಶ್ನೆ (1931), ಭೈರವಿ, ವಿಪ್ರದಾಸ್, ವಿರಾಜ್ ಬಹೂ, ಚಂದ್ರನಾಥ್, ಅರಕ್ಷಣೀಯ, ಮಹೇಶ, ನವ ವಿಧಾನ್, ನಿಷ್ಕಂತಿ ಇತ್ಯಾದಿ ಅಲ್ಲದೆ ನಾಲ್ಕೈದು ಪ್ರಬಂಧಗಳೂ ಪತ್ರಗಳೂ ಇವರಿಂದ ರಚಿತವಾದುವು. ಹೆಣ್ಣಿನ ಸ್ಥಾನಮಾನದ ಸಮಸ್ಯೆ ಇವರ ಚಿತ್ತದಲ್ಲಿ ಸದಾ ಮಿಡಿದಾಡುತ್ತಿತ್ತು. ಅದನ್ನು ಕುರಿತು ಇವರು ತಯಾರಿಸಿದ ಪ್ರಬಂಧ ಗಮನಾರ್ಹ. ಇಲ್ಲಿ ತೀವ್ರ ರಾಗದಿಂದ ಪೂರಿತರಾಗಿದ್ದರೂ ಶರತ್‍ಚಂದ್ರರ ತರ್ಕವಿಚಕ್ಷಣೆಗೂ ಸ್ವಂತ ಆಲೋಚನೆಗೂ ಧಕ್ಕೆ ತಟ್ಟಿಲ್ಲ.

1923ರಲ್ಲಿ ಸೃಜನಸಾಹಿತ್ಯಕ್ಕೆ ಮೀಸಲಾಗಿದ್ದ ಜಗತ್ತಾರಿಣಿ ಸ್ವರ್ಣಪದಕವನ್ನು ಕಲ್ಕತ್ತ ವಿಶ್ವವಿದ್ಯಾಲಯ ಶರತ್‍ಚಂದ್ರರಿಗೆ ಕೊಡಲು ತೀರ್ಮಾನಿಸಿತು. 1934ರಲ್ಲಿ ವಂಗೀಯ ಸಾಹಿತ್ಯ ಪರಿಷತ್ತು ವಿಶೇಷ ಸದಸ್ಯರಾಗಲು ಆಹ್ವಾನಿಸಿತು. 1936ರಲ್ಲಿ ಇವರ ಹುಟ್ಟಿದ ಹಬ್ಬದ ದಿವಸ ರವೀಂದ್ರನಾಥ ಠಾಕೂರರು  ಅಭಿನಂದಿಸಿ ಕಾಗದ ಬರೆದರು. ಅದೇ ವರ್ಷ ಢಾಕ ವಿಶ್ವವಿದ್ಯಾಲಯದ ಡಿ.ಲಿಟ್. ಪ್ರಶಸ್ತಿ ಲಭಿಸಿತು.

ನಾನಾ ವರ್ಗದ ನಾನಾ ಸ್ಥಿತಿಗತಿಯ ನಾನಾ ಜಾಯಮಾನದ ಪಾತ್ರಗಳ ನಿರ್ಮಾಣ ಶರತ್ ಚಂದ್ರರ ಮುಖ್ಯ ಲಕ್ಷಣ; ಅವುಗಳ ಅಂತರ್ಯದಲ್ಲಿ ಎದ್ದು ಕುದಿಯುವ ತುಯ್ತ ತಿಕ್ಕಾಟ ಆಶೆ ನಿರಾಸೆ ಸಂತೋಷ ಅಸಂತೋಷಗಳ ಜಾಲವನ್ನು ಅವರು ಮನವೊಪ್ಪುವಂತೆಯೂ ಹೃದಯಸ್ಪರ್ಶಿಯಾಗಿಯೂ ಚಿತ್ರಿಸಬಲ್ಲವರಾಗಿದ್ದು, ಸ್ತ್ರೀಪಾತ್ರ ಸೃಷ್ಟಿಯಲ್ಲಿ ಪ್ರವೀಣರೆಂಬ ಕೀರ್ತಿ ಅವರಿಗೆ ಸಂದಿದೆ. ಆತ ಸೃಜಿಸಿದ ಸ್ತ್ರೀಪಾತ್ರಗಳು ಜೀವಂತವಾದವು; ಅನುಕಂಪೆ ಅಚ್ಚರಿ ಕೊನೆಗೆ ಅನುರಾಗ-ಇವನ್ನು ಪ್ರಚೋದಿಸತಕ್ಕವು.

ಶರತ್‍ಚಂದ್ರರ ಬಹುಪಾಲು ಕಥೆ ಕಾದಂಬರಿಗಳು ಕನ್ನಡ ಮತ್ತು ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ.

On the birth anniversary of great novelist Sharatchandra Chattopadhyay

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ