ಓ.ಪಿ ನಯ್ಯರ್
ಓ.ಪಿ ನಯ್ಯರ್
ಓಂಕಾರ್ ಪ್ರಸಾದ್ ನಯ್ಯರ್ ಹಿಂದಿ ಚಲನಚಿತ್ರೋದ್ಯಮದ ಲಯಬದ್ಧ ಮತ್ತು ಮಧುರ ಸಂಗೀತ ನಿರ್ದೇಶಕರಾಗಿ ಪ್ರಖ್ಯಾತರು.
ಓ.ಪಿ ನಯ್ಯರ್ 1926ರ ಜನವರಿ 16 ರಂದು ಲಾಹೋರ್‌ನಲ್ಲಿ ಜನಿಸಿದರು.
ನಯ್ಯರ್ ಬಾಲ್ಯದಿಂದಲೂ ಸಂಗೀತ ತರಬೇತಿ ಪಡೆದವರು. ಅವರು 1949ರಲ್ಲಿ 'ಕನೀಜ್'ಗೆ ಹಿನ್ನೆಲೆ ಸಂಗೀತ ಸಂಯೋಜಿಸಿದರು. ದಲ್ಸುಖ್ ಎಂ. ಪಾಂಚೋಲಿ ನಿರ್ಮಿಸಿದ 1952ರ 'ಆಸ್ಮಾನ್' ಸಂಗೀತ ನಿರ್ದೇಶಕರಾಗಿ ನಯ್ಯರ್ ಅವರ ಮೊದಲ ಚಿತ್ರ. ನಂತರ ಛಮ್ ಛಮಾ ಛಮ್ (1952) ಮತ್ತು ಬಾಜ್ (1953) ಚಿತ್ರಗಳಿಗೆ ಸಂಗೀತ ಸಂಯೋಜಿಸಿದರು.
ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ನಟ ಗುರುದತ್ ಅವರು ನಯ್ಯರ್ ಅವರಿಗೆ ಆರ್ ಪಾರ್ (1954), ಮಿಸ್ಟರ್ & ಮಿಸೆಸ್ 55' ಮತ್ತು ಸಿಐಡಿ ಚಿತ್ರಗಳಲ್ಲಿ ಸಂಗೀತ ಸಂಯೋಜಿಸಲು ಅವಕಾಶ ನೀಡಿದರು. ನಯ್ಯರ್ ಅವರ ಚಿತ್ರಗಳಲ್ಲಿ ಮೊದಮೊದಲು ಶಂಶಾದ್ ಬೇಗಂ, ಗೀತಾ ದತ್ ಮತ್ತು ಮೊಹಮ್ಮದ್ ರಫಿ ಹಾಡಿದರು. ಆಶಾ ಬೋಸ್ಲೆ ಅವರನ್ನು ಸಿಐಡಿ ಚಿತ್ರದಲ್ಲಿ ಪರಿಚಯಿಸಿದರು. ನಯ್ಯರ್ ಅವರು ಲತಾ ಮಂಗೇಶ್ಕರ್ ಅವರೊಂದಿಗೆ ಎಂದಿಗೂ ಕೆಲಸ ಮಾಡಲಿಲ್ಲ, ಆದರೂ ಅವರು ಸಂಗೀತ ನಿರ್ದೇಶಕರಾಗಿದ್ದ 1973ರ ಹಿಂದಿ ಚಲನಚಿತ್ರ ಟ್ಯಾಕ್ಸಿ ಡ್ರೈವರ್‌ನಲ್ಲಿ ಮತ್ತು 1958ರ ಚಲನಚಿತ್ರ ಅಜಿ ಬಾಸ್ ಶುಕ್ರಿಯಾವಾಸ್‌ನಲ್ಲಿನ ಅವರು ಹಾಡಿದ 'ಸಾರಿ ಸಾರಿ ರಾತ್ ತೇರಿ ಯಾದ್ ಸತಾಯೀಂ' ಹಾಡನ್ನು ಬಳಸಿದರು.
1957ರಲ್ಲಿ ಫಿಲ್ಮಾಲಯವು ನಾಸಿರ್ ಹುಸೇನ್ ಅವರನ್ನು ನಿರ್ದೇಶಕರಾಗಿ ಪರಿಚಯಿಸಿತು, ಅವರು ಹೊಸಬರಾದ ಶಮ್ಮಿ ಕಪೂರ್ ಮತ್ತು ಅಮೀತಾ ಅವರಿಗೆ ರೊಮ್ಯಾಂಟಿಕ್ ಹಾಡುಗಳನ್ನು ಆಶಿಸಿದ್ದರು. ನಯ್ಯರ್ ಅವರ ಸಂಯೋಜನೆಗಳು ಹುಸೇನ್ ಚಲನಚಿತ್ರಗಳಾದ ತುಮ್ಸಾ ನಹೀಂ ದೇಖಾ (1957) ಮತ್ತು ಫಿರ್ ವೋಹಿ ದಿಲ್ ಲಯಾ ಹೂನ್ (1964) ಚಿತ್ರಗಳಲ್ಲಿ ಮೂಡಿಬಂದವು. ಅಂದಿನ ದಶಕದಲ್ಲಿ, ಆಕಾಶವಾಣಿಯು ಹೊಸತನದ ನಯ್ಯರ್ ಅವರ ಬಹುತೇಕ ಹಾಡುಗಳನ್ನು ಮಡಿವಂತಿಕೆಯಿಂದ ನಿಷೇಧಿಸಿತ್ತು.
ಕಿಶೋರ್ ಕುಮಾರ್ ಜನಪ್ರಿಯ ಗಾಯಕನಾಗುವ ಮೊದಲೇ ನಯ್ಯರ್ ಅವರನ್ನು ಗುರುತಿಸಿದ್ದರು. 1958ರ ಬಾಪ್ ರೇ ಬಾಪ್ ಚಿತ್ರವು ಓ.ಪಿ ನಯ್ಯರ್ ನಿರ್ದೇಶನದಲ್ಲಿನ ಕಿಶೋರ್ ಹಿಟ್‌ಗಳಿಂದ ತುಂಬಿದೆ. ಆದರೆ ಇವರ ಸಂಬಂಧವು ಉಳಿಯಲಿಲ್ಲ.
ಮೊಹಮ್ಮದ್ ರಫಿ ಅವರೊಂದಿಗಿನ ಭಿನ್ನಾಭಿಪ್ರಾಯದ ನಂತರ, ನಯ್ಯರ್ ಗಾಯಕ ಮಹೇಂದ್ರ ಕಪೂರ್ ಅವರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಕಪೂರ್ ಬಹಾರೆನ್ ಫಿರ್ ಭಿ ಆಯೇಂಗಿಯಲ್ಲಿ ನಯ್ಯರ್ ಅವರ "ಬದಲ್ ಜಾಯೆ ಅಗರ್ ಮಾಲಿ, ಚಮನ್ ಹೋತಾ ನಹೀ ಖಾಲಿ" ಹಾಡನ್ನು ಹಾಡಿದರು. ರವೀಂದ್ರನಾಥ್ ಟ್ಯಾಗೋರ್ ಅವರ ಬಂಗಾಳಿ ಭಾಷೆಯ ಕೃತಿಯನ್ನು ಆಧರಿಸಿ, ನಯ್ಯರ್ "ಚಲ್ ಅಕೇಲಾ, ಚಲ್ ಅಕೇಲಾ" (1969 ರ ಸಂಬಂಧ್ ಚಲನಚಿತ್ರದಲ್ಲಿ ಮುಖೇಶ್ ಹಾಡಿದ್ದಾರೆ) ಅನ್ನು ರಚಿಸಿದ್ದಾರೆ.
ನಯ್ಯರ್ ಅವರು "ಕಜ್ರಾ ಮೊಹಬ್ಬತ್ವಾಲಾ" ಸೇರಿದಂತೆ ಶಂಶಾದ್ ಬೇಗಂ ಅವರೊಂದಿಗೆ ಹಾಡುಗಳನ್ನು ಸಹ-ನಿರ್ಮಾಣ ಮಾಡಿದರು. ಮಧುಬಾಲಾ ಅವರು 1969ರಲ್ಲಿ ನಿಧನರಾದ ನಂತರ ವೈಜಯಂತಿಮಾಲಾ, ಸಾಧನಾ, ಮಾಲಾ ಸಿನ್ಹಾ, ಪದ್ಮಿನಿ, ಆಶಾ ಪಾರೇಖ್ ಮತ್ತು ಶರ್ಮಿಳಾ ಟ್ಯಾಗೋರ್ ಮುಂತಾದವರಿಗೆ ಆಶಾ ಬೋಸ್ಲೆ ಅವರ ಗೀತಗಾಯನಗಳು ಸರಿ ಹೊಂದುವಂತೆ ಮಾಡಿದರು.
ನಯ್ಯರ್ ಮತ್ತು ಆಶಾ ಬೋಸ್ಲೆ 1974ರಲ್ಲಿ ಬೇರ್ಪಟ್ಟರು. ಮುಂದೆ ನಯ್ಯರ್ ಅವರು ದಿಲ್ರಾಜ್ ಕೌರ್, ಕೃಷ್ಣ ಕಲ್ಲೆ, ವಾಣಿ ಜಯರಾಮ್ ಮತ್ತು ಕವಿತಾ ಕೃಷ್ಣಮೂರ್ತಿ ಅವರೊಂದಿಗೆ ಕೆಲಸ ಮಾಡಿದರು.
ಮಜ್ರೂಹ್ ಸುಲ್ತಾನಪುರಿ ಮತ್ತು ಸಾಹಿರ್ ಲುಧಿಯಾನ್ವಿ ಅವರು "ನಯಾ ದೌರ್" ಸೇರಿದಂತೆ ನಯ್ಯರ್ ಅವರ ಹಿಂದಿನ ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದರು. ನಯ್ಯರ್ ಅವರು ಜನ್ ನಿಸಾರ್ ಅಖ್ತರ್, ಕಮರ್ ಜಲಲಾಬಾದಿ, ಎಸ್. ಎಚ್.ಬಿಹಾರಿ ಮತ್ತು ಅಹ್ಮದ್ ವಾಸಿ ಅವರಂತಹ ಪ್ರವರ್ಧಮಾನ ಸಾಹಿತಿಗಳೊಂದಿಗೂ ಕೆಲಸ ಮಾಡಿದರು.
ನಯ್ಯರ್ ಹಾಸ್ಯಗಾರರಿಗೆ ಪೂರ್ಣ, ಮೂರು ನಿಮಿಷಗಳ ಹಾಡುಗಳನ್ನು ನಿಯೋಜಿಸುವ ಸಂಪ್ರದಾಯವನ್ನು ಪ್ರಾರಂಭಿಸಿದರು. ಓಂ ಪ್ರಕಾಶ್ ಅವರು ಜಾಲಿ ನೋಟ್‌ನಲ್ಲಿ ನಯ್ಯರ್ ಅವರ 'ಚೂರಿ ಬನೆ ಕಾಂತಾ ಬಾನೆ' ಮತ್ತು ಹೌರಾ ಬ್ರಿಡ್ಜ್‌ನಲ್ಲಿ 'ಈಂಟ್ ಕಿ ದುಖಿ ಪಾನ್ ಕಾ ಇಕ್ಕಾ’ ಗೀತೆಗೆ ಅಭಿನಯಿಸಿದ್ದಾರೆ. ಜಾನಿ ವಾಕರ್ ಅವರು ಸಿಐಡಿಯಲ್ಲಿ 'ಏ ದಿಲ್ ಹೈ ಮುಷ್ಕಿಲ್ ಜೀನಾ ಯಹಾನ್', 'ಮಿಸ್ಟರ್ ಅಂಡ್ ಮಿಸಸ್ 55’ ಚಿತ್ರದಲ್ಲಿ "ಜಾನೆ ಕಹಾನ್ ಮೇರಾ ಜಿಗರ್ ಗಯಾ ಜೀ", ನಯಾ ದೌರ್‌ನಲ್ಲಿ "ಮೇನ್ ಬಾಂಬೈಕಾ ಬಾಬೂ, ನಾಮ್ ಮೇರಾ ಅಂಜಾನಾ" ಮತ್ತು ಬಸಂತ್‌ನಲ್ಲಿ "ಬಜೇವಾಲಾ" ಮುಂತಾದ ಗೀತೆಗಳಿಗೆ ಅಭಿನಯಿಸಿದ್ದಾರೆ.
ಆಶಾ ಬೋಸ್ಲೆ ಅವರ ಗಾಯನಕ್ಕಾಗಿ ಹಲವು ಗೀತಗಳು ಮತ್ತು ಗೀತಾ ದತ್ ಅವರಿಗೆ 'ಥಂಡಿ ಥಂಡಿ ಹವಾ' ಗೀತೆಗಳಲ್ಲದೆ ನಯ್ಯರ್ ಅವರು ನಯಾ ದೌರ್ (1957) ಗಾಗಿ ದಿಲೀಪ್ ಕುಮಾರ್ ಮತ್ತು ಅಜಿತ್ ಅವರನ್ನು ಒಳಗೊಂಡ "ಯೇ ದೇಶ್ ಹೈ ವೀರ್ ಜವಾನೋಂಕಾ" ಗೀತೆ ಬರೆದಿದ್ದರು. ಈ ಹಾಡು ಅವರಿಗೆ 1958ರ ಫಿಲ್ಮ್‌ಫೇರ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ತಂದುಕೊಟ್ಟಿತು. ನಯ್ಯರ್ ಸಂಯೋಜನೆಯಲ್ಲಿ ಬೋಸ್ಲೆಯವರು ಹಾಡಿದ ಕೊನೆಯ ಹಾಡು "ಚೈನ್ ಸೆ ಹಮ್ಕೋ ಕಭಿ". 'ಪ್ರಾಣ್ ಜಾಯೆ ಪರ್ ವಚನ ನಾ ಜಾಯೆ' (1973)ಗಾಗಿ ಈ ಗೀತೆ ಉದ್ದೇಶಿಸಲಾಗಿತ್ತು, ಚಿತ್ರದ ಅಂತಿಮ ಕಟ್‌ನಲ್ಲಿ ಕಣ್ಮರೆಯಾಯಿತಾದರೂ ಬೋಸ್ಲೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ 1975ರ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದರು.
ನಯ್ಯರ್ 1970 ರ ದಶಕದಲ್ಲಿ ಕಡಿಮೆ ಸಕ್ರಿಯರಾಗಿದ್ದರು. ಅವರು ರಾಜೇಶ್ ಖನ್ನಾ ಮತ್ತು ಅಮಿತಾಬ್ ಬಚ್ಚನ್ ಅವರಂತಹ ನಟರ ಚಿತ್ರಗಳಿಗೆ ಸಂಗೀತ ಸಂಯೋಜಿಸಲಿಲ್ಲ. ಅವರ ಗೀತೆಗಳಲ್ಲಿ ಅಭಿನಯಿಸಿದವರಲ್ಲಿ ದಿಲೀಪ್ ಕುಮಾರ್, ರಾಜ್ ಕಪೂರ್, ದೇವ್ ಆನಂದ್, ಗುರುದತ್, ಧರ್ಮೇಂದ್ರ, ಶಮ್ಮಿ ಕಪೂರ್, ಜಾಯ್ ಮುಖರ್ಜಿ, ಬಿಸ್ವಜಿತ್, ಫಿರೋಜ್ ಖಾನ್, ಭರತ್ ಭೂಷಣ್, ಮಧುಬಾಲಾ, ಆಶಾ ಪರೇಖ್, ಸಾಧನಾ, ಮುಮ್ತಾಜ್, ಶರ್ಮಿಳಾ ಟ್ಯಾಗೋರ್, ರಾಜಶ್ರೀ, ರೇಖಾ, ಅಮೀತಾ, ಶ್ಯಾಮ ಮುಂತಾದವರು ಸೇರಿದ್ದಾರೆ.
ಓ. ಪಿ. ನಯ್ಯರ್ ಅವರ ಸಂಯೋಜನೆಯ ಜನಪ್ರಿಯ ಗೀತೆಗಳಲ್ಲಿ ಗಿತಾದತ್ ಹಾಡಿರುವ 'ಜಾನೆ ಕಹಾ ಮೇರಾ, ಜಿಗರ್ ಗಯಾ ಜಿ', 'ಯೆ ಲೊ ಮೈನೆ ಹಾರಿ, ಪಿಯ', 'ಬಾಬೂಜಿ ಧೀರೆ ಚಲ್ನ', 'ಥಂಡಿ ಹವ', 'ಬೂಝ್ ಮೆರಾ ಕ್ಯಾ ಗಾವ್ ರೆ', 'ಮೇರಾ ನಾಮ್, ಛೀನ್ ಛೀನ್ ಛೂ'; ಮಹಮ್ಮದ್ ರಫಿ ಹಾಡಿರುವ
'ದೇಖೊ ಕಸಮ್ ಸೆ, ದೇಖೊ ಕಸಮ್ ಸೆ', 'ತುಮ್ಸಾ ನಹಿ ದೇಖ', 'ಯೆಹ್ ಚಾಂದ್ ಸ ರೊಶನ್ ಚೆಹರಾ'; ಆಶಾ ಬೋಸ್ಲೆ ಹಾಡಿರುವ 'ಆವೋ, ಹುಝೂರು ತುಮಕೊ', 'ಚೈನ್ ಸೆ ಹಮಕೊ ಕಭಿ', 'ಆಪ್ ನೆ ಜೀನೆ ನ ದಿಯ'; ರಫಿ ಮತ್ತು ಗೀತಾದತ್ ಹಾಡಿರುವ 'ಯೆಹ್ ಬಾಂಬೆ ಮೆರಿ ಜಾನ್'; ರಫಿ ಮತ್ತು ಆಶಾ ಹಾಡಿರುವ 'ಮಾಂಗ ಕೆ ಸಾಥ್ ತುಮ್ಹಾರಾ', 'ಉದೆ ಜಬ್ ಜಬ್ ಝುಲ್ಫೆ ತೆರಿ', 'ಯಹ್ ದೇಶ್ ಹೈ ವೀರ್ಜವಾನೋ ಕಾ', 'ಬಹುತ್ ಶುಕರಿಯ ಬಡಿ ಮೆಹರಬಾನಿ', 'ಇಶಾರೊಂ ಸೆ ಇಶಾರೊಂ ಮೆ', 'ಏಕ್ ಪರದೇಶಿ ಮೇರ ದಿಲ್ ಲೆಗಯಾ'- ಮುಂತಾದವು ಸೇರಿವೆ
ಹಿಂದಿ ಚಿತ್ರಗಳ ಜೊತೆಗೆ, ನಯ್ಯರ್ ತೆಲುಗಿನ ನೀರಜನಂ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. 1992 ರಲ್ಲಿ 'ಮಂಗ್ನಿ' ಮತ್ತು 'ನಿಶ್ಚಯ್ ' ಹಾಗೂ 1994 ರಲ್ಲಿ ಜಿದ್ ಚಿತ್ರಗಳಿಗೆ ಸಂಗೀತ ನೀಡಿದ್ದರು.
ಕಿರುತೆರೆಯ ಅನೇಕ ಗೀತಸ್ಪರ್ಧೆಗಳಲ್ಲಿ ಅವರ ಉಪಸ್ಥಿತಿಯಿತ್ತು. ಅವರ ಅನೇಕ ಆಲ್ಬಂಗಳು ಪ್ರಸಿದ್ಧಿಯಾಗಿವೆ.
ಓ. ಪಿ. ನಯ್ಯರ್ 2007ರ ಜನವರಿ 28ರಂದು ನಿಧನರಾದರು.
great music composer O. P. Nayyar
ಕಾಮೆಂಟ್‌ಗಳು