ಶನಿಮಹಾದೇವಪ್ಪ
ಶನಿ ಮಹಾದೇವಪ್ಪ ನಮನ
ಕನ್ನಡದ ಹಿರಿಯ ನಟರಾದ ಶನಿ ಮಹಾದೇವಪ್ಪನವರು ನಿಧನರಾಗಿದ್ದಾರೆ. ಅವರಿಗೆ ಸುಮಾರು 90 ವಯಸ್ಸಾಗಿತ್ತು.
ಕವಿರತ್ನ ಕಾಳಿದಾಸ ಚಿತ್ರದಲ್ಲಿ 'ಕಮಲೇ ಕಮಲೋತ್ಪತ್ತಿಃ' ಸಮಸ್ಯೆ ಬಿಡಿಸಿ ಎಂದು ಹೇಳುವ ಋಷಿಯಾಗಿ, ಭಕ್ತಕುಂಬಾರದ ನಾಮದೇವರಾಗಿ ಹೀಗೆ ಅನೇಕ ಅದ್ಭುತ ಪಾತ್ರಗಳಿಗೆ ಜೀವ ತುಂಬಿದವರು ಶನಿ ಮಹಾದೇವಪ್ಪ. ಅವರು ನಟಿಸಿದ ಚಿತ್ರಗಳ ಸಂಖ್ಯೆ ಹಲವು ನೂರು.
ಇತರ ಭಾಷೆಗಳಲ್ಲಿ ಹೆಚ್ಚಿನ ಅವಕಾಶ ಬಂದಾಗ "ಕನ್ನಡ ನಾಡಲ್ಲಿ ತಿಳಿ ಗಂಜಿಯನ್ನಾದರೂ ಕುಡಿದು ಬದುಕಿಯೇನು, ತಮಿಳುನಾಡಿನ ಭೂರೀ ಭೋಜನ ಬೇಡ" ಎಂದು ಕನ್ನಡಕ್ಕೆ ಆದ್ಯತೆ ಕೊಟ್ಟವರು ಶನಿ ಮಹಾದೇವಪ್ಪ. ಬದುಕಿನ ಸ್ಥಿತಿಗತಿಯನ್ನು ಆ ನಿರ್ಧಾರ ಕೈಹಿಡಿದು ನಡೆಸಲಿಲ್ಲ. "ಅವರಿಗೆ ಇದಕ್ಕಾಗಿ ದುಃಖವಿಲ್ಲ, ಪಶ್ಚಾತ್ತಾಪವೂ ಇಲ್ಲ. ಕಣ್ಣು ಕಾಣಿಸುವುದಿಲ್ಲ, ಕಿವಿ ಕೇಳಿಸುವುದಿಲ್ಲ, ನಡೆದಾಡಲು ಸಾಧ್ಯವಿಲ್ಲ, ಹೊಟ್ಟೆ ತುಂಬಾ ಊಟ ಮಾಡಲು ಆರ್ಥಿಕ ಬಲವಿಲ್ಲ. ಈ ಎಲ್ಲಾ ‘ಇಲ್ಲ’ಗಳ ನಡುವೆ 90ರ ಹರೆಯದ ಶನಿ ಮಹಾದೇವಪ್ಪನವರು ಜೀವ ಹಿಡಿದುಕೊಂಡಿರುವುದೇ ಹೆಚ್ಚು” ಎಂದು ಒಂದೆರಡು ವರ್ಷದ ಹಿಂದೆ ಪತ್ರಿಕೆಯೊಂದು ಬರೆದಿತ್ತು .
ಶನಿ ಮಹಾದೇವಪ್ಪ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿಯವರು. ಕಳೆದ ಆರು ದಶಕಗಳಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದುಡಿದಿರುವ ಇವರದ್ದು ವಿಶ್ರಾಂತಿ ಜೀವನ. ನಾಟಕದಲ್ಲಿ ಸತತವಾಗಿ ಶನಿದೇವರ ಪಾತ್ರ ನಿರ್ವಹಿಸಿದ್ದರಿಂದಾಗಿ ‘ಶನಿ ಮಹದೇವಪ್ಪ’ ಎಂಬ ಹೆಸರು ಇವರಿಗೆ ಬಂತು. ದುರಾದೃಷ್ಟ ವಕ್ಕರಿಸಿಕೊಂಡಿದೆ ಎಂದು ಅವರು ತಮ್ಮ ಹೆಸರನ್ನು ‘ಶಿವಪ್ರಕಾಶ್’ ಎಂದು ಬದಲಾಯಿಸಿಕೊಂಡದ್ದೂ ಇತ್ತು. ಆದರೂ ಅದೃಷ್ಟ ಖುಲಾಯಿಸದಿದ್ದಾಗ ಮತ್ತೆ ಶನಿ ಮಹಾದೇವಪ್ಪ ಎಂದು ಹೆಸರಿಟ್ಟುಕೊಂಡರು.
‘ಕವಿರತ್ನ ಕಾಳಿದಾಸ’, ‘ಅದೇ ಕಣ್ಣು’, ‘ದೇವತಾ ಮನುಷ್ಯ’, ‘ಭಕ್ತ ಕುಂಬಾರ’, ‘ಭಕ್ತ ಪ್ರಹ್ಲಾದ’, ‘ಬಡವರ ಬಂಧು’ ಸೇರಿದಂತೆ ಹಲವು ನೂರಾರು ಪ್ರಮುಖ ಚಿತ್ರಗಳಲ್ಲಿ ಶನಿ ಮಹದೇವಪ್ಪ ಅಭಿನಯಿಸಿದ್ದರು.
ವಯಸ್ಸಾಗಿದ್ದಾಗ, ಅನಾರೋಗ್ಯವಿದ್ದಾಗ, ಬದುಕಲು ಕಷ್ಟವಿದ್ದಾಗ ಸಾವೆಂಬುದು ಬಿಡುಗಡೆ. ಬಹಳ ಬದುಕುಗಳು ಅವರು ಹೋದಾಗ ಉಂಟು ಮಾಡುವ ಸುದ್ಧಿ ಬದುಕಿರುವಾಗ ಲೋಕಕ್ಕೆ ಕಾಣುವುದಿಲ್ಲ, ಕೇಳುವುದಿಲ್ಲ. ಆ ಜೀವಗಳು ಉಳಿಸಿದ ಕೆಲವು ನೆನಪುಗಳಷ್ಟೇ ಶಾಶ್ವತ. ಶನಿ ಮಹಾದೇವಪ್ಪ ಹಲವು ಪಾತ್ರಗಳ ಮೂಲಕ ಜೀವಂತರಿದ್ದಾರೆ.
Respects to departed soul Shani Mahadevappa
ಕಾಮೆಂಟ್‌ಗಳು