ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಟ್ಟಬೊಮ್ಮನ್


 ವೀರಪಾಂಡ್ಯ ಕಟ್ಟಬೊಮ್ಮನ್


ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆ ನೀಡಿದ ಮಹಾನ್ ಹೋರಾಟಗಾರರಲ್ಲಿ ಒಬ್ಬರಾದ ವೀರಪಾಂಡ್ಯ ಕಟ್ಟಬೊಮ್ಮನ್ 1760 ವರ್ಷದ ಜನವರಿ 3ರಂದು ಪಾಂಚಾಲಂಕುರುಚ್ಚಿ ಎಂಬಲ್ಲಿ ಜನಿಸಿದರು.

ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಆಗಮಿಸಿ ತನ್ನ ಬೇರು ಬಿಡಲು ಆರಂಭಿಸಿದ ದಿನಗಳಲ್ಲೇ ಅವರ ವಿರುದ್ಧ ಸಿಡಿದೆದ್ದು ಅವರಿಗೆ ಸೆಡ್ಡು ಹೊಡೆದು ನೇಣು ಶಿಕ್ಷೆಗೆ ಗುರಿಯಾದ ಅಪ್ರತಿಮ ಹೋರಾಟಗಾರ ವೀರಪಾಂಡ್ಯ ಕಟ್ಟಬೊಮ್ಮನ್. ಬ್ರಿಟಿಷರು ಭಾರತದಲ್ಲಿ ಭದ್ರವಾಗಿ ನೆಲೆಯೂರಿದ ತಕ್ಷಣ ತಮ್ಮ ದಬ್ಬಾಳಿಕೆಯನ್ನು ಆರಂಭಿಸಿದರು. ಸಣ್ಣ ಪುಟ್ಟ ರಾಜರುಗಳಿಗೆ ಕಿರುಕುಳ ನೀಡುತ್ತಾ ಅಧಿಕಾರ ಚಲಾಯಿಸಲು ಶುರುಮಾಡಿದರು. ಹೆಚ್ಚು ಹೆಚ್ಚು ತೆರಿಗೆ ವಿಧಿಸಿದರು. ಅವರ ಕಿರುಕುಳ ಸಹಿಸಲಾರದ ಬಹು ಮಂದಿ ರಾಜರುಗಳು ಅವರ ಅಡಿಯಾಳುಗಳಾದರು. ಆದರೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಾಂಚಾಲಂಕುರುಚ್ಚಿಯ ಪಾಳೆಯಗಾರರಾಗಿದ್ದ ವೀರಪಾಂಡ್ಯ ಕಟ್ಟಬೊಮ್ಮನ್ ಮಾತ್ರ ಅವರೆದುರು ಬಗ್ಗಲಿಲ್ಲ. 

ಪಾಂಚಾಲಂಕುರುಚ್ಚಿಯ ಸುತ್ತಮುತ್ತಲಿನ ಪ್ರದೇಶಕ್ಕೆ ಮ್ಯಾಕ್ಸ್ವೆಲ್ ಎಂಬಾತ ಆಗಿನ ಕಂಪೆನಿಯ ಅಧಿಕಾರಿಯಾಗಿದ್ದ. ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟಲು ಹಲವು ಬಾರಿ ನೋಟೀಸ್ ಕಳಿಸಿದರೂ ವೀರಪಾಂಡ್ಯ ಕಟ್ಟಬೊಮ್ಮನ್ ಮಾತ್ರಾ ಅದಕ್ಕೆ ಸೊಪ್ಪು ಹಾಕಲಿಲ್ಲ. ಇದನ್ನರಿತ ಮ್ಯಾಕ್ಸ್ವೆಲ್ ವೀರಪಾಂಡ್ಯ ಕಟ್ಟಬೊಮ್ಮನ್  ಅವರಿಗೆ ಹಲವಾರು ಬೆದರಿಕೆ ಪತ್ರಗಳನ್ನು ಬರೆದ. ‘ಕಪ್ಪ ಸಲ್ಲಿಸಿ, ಇಲ್ಲದಿದ್ದರೆ ಯುದ್ಧಕ್ಕೆ ಬರುತ್ತೇವೆ’ ಎಂದು ಹೆದರಿಸಿದ. “ನಾವೀ ಮಣ್ಣಿನ ಮಕ್ಕಳು. ಇದು ನಮ್ಮ ಭೂಮಿತಾಯಿ. ನಾವು ಘನತೆ ಗೌರವಗಳಿಂದ ಬಾಳುವವರು. ನಮ್ಮ ಭೂಮಿಯ ಮರ್ಯಾದೆಯ ಸಲುವಾಗಿ ನಾವು ಪ್ರಾಣನೀಡುವೆವೇ ಹೊರತು ವಿದೇಶಿ ಶತ್ರುಗಳಿಗೆ ತಲೆಬಾಗುವುದಿಲ್ಲ. ಬನ್ನಿ ಹೋರಾಡೋಣ” ಎಂದು ವೀರಪಾಂಡ್ಯ ಯುದ್ಧಕ್ಕೆ ಆಹ್ವಾನ ನೀಡಿದರು.

ಸಹಜವಾಗಿಯೇ ಎಲ್ಲವನ್ನೂ ತಮ್ಮದು ಎಂದು ದರ್ಪದಿಂದ ನಿರ್ಧರಿಸಿಕೊಂಡುಬಿಟ್ಟಿದ್ದ  ಕಂಪೆನಿಯವರಿಗೆ ವೀರಪಾಂಡ್ಯ ಕಟ್ಟಬೊಮ್ಮನ್ ಅವರ ರೀತಿ ಸರಿತೋರಲಿಲ್ಲ. 1792 ರಿಂದ 1798 ರ ವರೆಗೆ ಅವರು ಆರುವರ್ಷಗಳ ಕಾಲ  ವೀರಪಾಂಡ್ಯ ಕಟ್ಟಬೊಮ್ಮನ್  ಅವರ ಜತೆ ಸೆಣಸಾಡಿದರು.  ವೀರಪಾಂಡ್ಯ ಕಟ್ಟಬೊಮ್ಮನ್ ಅವರು ಮಾತ್ರ ಬಗ್ಗಲಿಲ್ಲ. ಹಲವರು ಅವನ ಮನವೊಲಿಸಲು ಪ್ರಯತ್ನ ಮಾಡಿದರೆ “ವ್ಯಾಪಾರಿಗಳ ವೇಷದಲ್ಲಿ ಬಂದು ನಮ್ಮನ್ನು ಹೀರುತ್ತಿರುವ ಹೇಡಿ ಆಂಗ್ಲರಿಗೆ ನಾವು ಗುಲಾಮರಾಗುವುದೇ? ಎಂದಿಗೂ ಇಲ್ಲ” ಎಂದು ಅವರಿಗೆ ಬುದ್ಧಿ ಹೇಳಿದರು ಬೊಮ್ಮನ್. 

ಯಾವುದೇ ಬೆದರಿಕೆಗೂ ವೀರಪಾಂಡ್ಯ ಕಟ್ಟಬೊಮ್ಮನ್ ಅವರು ಬಗ್ಗದೆ ಹೋದಾಗ ಬ್ರಿಟಿಷರು ಸಂಧಿಗೆ ಕರೆದರು. ಸಂಧಿಯ ನೆಪದಲ್ಲಿ ಬಂಧಿಸುವ ಬ್ರಿಟಿಷರ ಕುತಂತ್ರ ಅರಿತಿದ್ದ ವೀರಪಾಂಡ್ಯ ಅವರ ತಾಣಕ್ಕೇ ಹೋಗಿ ಬಂಧಿಸಲು ಬಂದ ಬ್ರಿಟಿಷರ ಅಧಿಕಾರಿಗಳ ತಲೆಕತ್ತರಿಸಿ ಉತ್ತರ ಕೊಟ್ಟು ಬಂದರು. 1799ರ ಸೆಪ್ಟೆಂಬರ್ 5ರಂದು ಬ್ರಿಟಿಷ್ ಸೈನ್ಯ ವೀರಪಾಂಡ್ಯ ಕಟ್ಟಬೊಮ್ಮನ್ ಅವರ ಪಾಂಚಾಲಂಕುರುಚ್ಚಿಯ ಮೇಲೆ ಆಕ್ರಮಣ ಮಾಡಿತು. ಬ್ರಿಟಿಷರ ಬಲಾಢ್ಯ ಪಡೆಯೆದುರು ವೀರಪಾಂಡ್ಯ ವೀರಾವೇಶದಿಂದ ಹೋರಾಡಿದರು. ಬ್ರಿಟಿಷರ ಸೈನ್ಯದೆದುರು ವೀರಪಾಂಡ್ಯರಿಗೆ ಸೋಲಾದರೂ ಆತ ಸಿಗದೇ ತಪ್ಪಿಸಿಕೊಂಡರು. 

ಪುದುಕೋಟೆಯ ರಾಜ ವಿಜಯ ರಘುನಾಥ ತೋಂಡೈಮಾನ್ ಬ್ರಿಟಿಷರ ಆಮಿಷಕ್ಕೊಳಗಾಗಿ ವೀರಪಾಂಡ್ಯ ಕಟ್ಟಬೊಮ್ಮನ್ ಅವರನ್ನು ಬಂಧಿಸಲು ಸಹಾಯ ಮಾಡಿದ. 1799ರ ಸೆಪ್ಟೆಂಬರ್ 24ರಂದು ಅವರನ್ನು ಬಂಧಿಸಲಾಯಿತು. 

ವಿಚಾರಣೆಯ ಸಮಯದಲ್ಲಿಯೂ ಮಹಾ ಪರಾಕ್ರಮಿಯಾದ  ವೀರಪಾಂಡ್ಯ ಕಟ್ಟಬೊಮ್ಮನ್ ಬ್ರಿಟಿಷರನ್ನು ಕುರಿತು "ನೀವು ಅನೈತಿಕವಾಗಿ, ಅನ್ಯಾಯವಾಗಿ ನಮ್ಮ ಭೂಮಿಯನ್ನು ಆಕ್ರಮಿಸಿದ್ದೀರಿ. ನೀವು ಇಲ್ಲಿಂದ ತೊಲಗಬೇಕು. ನಾನು ತಲೆಬಾಗಲಾರೆ. ಏನು ಬೇಕಾದರೂ ಮಾಡಿಕೊಳ್ಳಿರಿ" ಎಂದು ಗರ್ಜಿಸಿದ. ವಿದೇಶಿ ವೈರಿಗೆ ತಲೆಬಾಗದ ಆ ಸ್ವಾಭಿಮಾನಿ ದೇಶಭಕ್ತರನ್ನು ಕಯಾತ್ತಾರ್ನ ಎಂಬಲ್ಲಿ ಒಂದು ಹುಣಿಸೆಮರಕ್ಕೆ 1799ರ ಅಕ್ಟೋಬರ್ 16ರಂದು ಸಾರ್ವಜನಿಕರ ಮುಂದೆ ಬಹಿರಂಗವಾಗಿ ನೇಣು ಹಾಕಲಾಯಿತು.  

ವೀರಪಾಂಡ್ಯ ಕಟ್ಟಬೊಮ್ಮನ್ ಅವರು ಮುಂದಿನ ಸ್ವಾತಂತ್ರ್ಯದ ಕನಸಿನ ಚಿಗುರೊಡೆಯುವಿಕೆಗೆ ಹಾಕಿಕೊಟ್ಟ ಭದ್ರಬುನಾದಿಯು ಮರೆಯುವಂತದ್ದಲ್ಲ.

On the birth anniversary of unforgettable soul of Indian freedom dream, Veerapandia Kattabomman 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ