ಎಂ. ಜಿ. ವೆಂಕಟೇಶಯ್ಯ
ಎಂ. ಜಿ. ವೆಂಕಟೇಶಯ್ಯ
ಎಂ.ಜಿ. ವೆಂಕಟೇಶಯ್ಯನವರು ಕನ್ನಡ ಸಾಹಿತ್ಯಲೋಕದಲ್ಲಿ ಪ್ರಬಂಧ ಸಾಹಿತ್ಯವನ್ನು ಮೊಟ್ಟಮೊದಲಿಗೆ ಪ್ರಕಟಿಸಿದವರೆಂದು ಖ್ಯಾತರಾದವರು. ಇವರ 'ಪುಲ್ಲಯ್ಯನ ಪ್ರಬಂಧಗಳು’ ಕನ್ನಡದ ಪ್ರಥಮ ಪ್ರಬಂಧ ಸಂಕಲನವೆಂದು ಎಂ. ವಿ. ಸೀತಾರಾಮಯ್ಯನವರು ದಾಖಲಿಸಿದ್ದಾರೆ. ವೆಂಕಟೇಶಯ್ಯನವರದು ಕಾದಂಬರಿ, ಸಣ್ಣಕತೆ, ಭಾಷಾಶಾಸ್ತ್ರ, ಸಂಶೋಧನೆ, ಗ್ರಂಥಸಂಪಾದನೆ, ಮುಂತಾದವುಗಳಲ್ಲಿ ಸಹಾ ಮಹತ್ವದ ಸಾಧನೆ.
ಎಂ.ಜಿ. ವೆಂಕಟೇಶಯ್ಯನವರು 1900ರ ಜನವರಿ 19ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿಗೆ ಸೇರಿದ ಬೋಯಿಲ ಹಳ್ಳಿಯಲ್ಲಿ ಜನಿಸಿದರು. ತಂದೆ ಮಾಲೂರು ಗುಂಡಪ್ಪನವರು ಮದರಾಸು ವಿಶ್ವವಿದ್ಯಾಲಯದ ಪದವೀಧರರಾಗಿ ಸೆಕ್ರೆಟರಿಯೇಟಿನಲ್ಲಿ ಕನ್ನಡ ಭಾಷಾಂತರಕಾರರಾಗಿ ಕಾರ‍್ಯ ನಿರ್ವಹಿಸಿದರು. ಅವರು ಸಾಹಿತ್ಯದಲ್ಲಿ ಹಾಗೂ ಆಯುರ್ವೇದದಲ್ಲಿ ಆಸಕ್ತರಾಗಿದ್ದು ‘ಸೂರ‍್ಯ ಭೇಧನ ವ್ಯಾಯಾಮ’ ಎಂಬ ಮರಾಠಿ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ್ದರು.
ವೆಂಕಟೇಶಯ್ಯ ಅವರ ಓದು ಬೆಂಗಳೂರಿನ ಚಾಮರಾಜಪೇಟೆಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭವಾಯಿತು. ಮುಂದೆ ಲಂಡನ್ ಮಿಷನ್ ಹ್ಯೆಸ್ಕೂಲಿನಲ್ಲಿ ಎಸ್. ಎಸ್. ಎಲ್. ಸಿ. ಯಲ್ಲಿ ತೇರ್ಗಡೆಯಾಗಿ ಸೆಂಟ್ರಲ್ ಕಾಲೇಜಿನಿಂದ ವಿಜ್ಞಾನ ಹಾಗೂ ಗಣಿತ ಶಾಸ್ತ್ರದಲ್ಲಿ ಪದವಿ ಪಡೆದರಲ್ಲದೆ ಮೈಸೂರು ವಿಶ್ವವಿದ್ಯಾಲಯದ ಬಿ. ಟಿ., ಕಲ್ಕತ್ತ ವಿಶ್ವವಿದ್ಯಾಲಯದಿಂದ ಎಂ. ಎ. (ಸಾಹಿತ್ಯ) ಹಾಗೂ ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದರು.
ವೆಂಕಟೇಶಯ್ಯನವರು ಉದ್ಯೋಗಕ್ಕಾಗಿ ಸೇರಿದ್ದು ಬೆಂಗಳೂರಿನ ಲಂಡನ್ ಮಿಷನ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ. ನಂತರ ಬಳ್ಳಾರಿ ಮುನಿಸಿಪಲ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ ಸೇರಿ ಅದೇ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದರು. ನಿವೃತ್ತಿಯ ನಂತರ ಪುನ: ಬೆಂಗಳೂರಿನ ನಿವಾಸಿಯಾಗಿ ಮಹಿಳಾ ಸಮಾಜದ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿಯೂ ಕೆಲಕಾಲ ಕಾರ‍್ಯ ನಿರ್ವಹಿಸಿದರು.
ವೆಂಕಟೇಶಯ್ಯನವರ ಹವ್ಯಾಸಗಳು ಹಲವಾರು. ಸಂಗೀತದಲ್ಲಿ ಅಭಿರುಚಿಯಿದ್ದು ಅನಂತಶಾಸ್ತ್ರಿ ಎಂಬುವರಲ್ಲಿ ಸಂಗೀತಾಭ್ಯಾಸ ಮಾಡಿದ್ದರು.ಸಂಗೀತ ಪ್ರಧಾನ ನಾಟಕಗಳನ್ನು ನೋಡುತ್ತಿದ್ದರಲ್ಲದೆ, ‘ವಿರಾಟಪರ್ವ’ ನಾಟಕದಲ್ಲಿ ಭೀಮನ ಪಾತ್ರವನ್ನು ವಹಿಸಿದ್ದು ತುಳಸೀತೋಟ (ಈಗಿನ ಚಿಕ್ಕ ಲಾಲ್ ಬಾಗ್) ಪ್ರದೇಶದಲ್ಲಿದ್ದ ಥೀಯೇಟರಿನಲ್ಲಿ ಹಲವಾರು ಪ್ರದರ್ಶನ ಕಂಡ ನಾಟಕವಾಗಿತ್ತು. ಗಮಕ ಕಲೆಯಲ್ಲಿಯೂ ಹೆಚ್ಚಿನ ಒಲವಿದ್ದು ರನ್ನನ ಗದಾಯುದ್ಧದ ಪ್ರಸಂಗವನ್ನು ಕೇಳುಗರ ಮನಮುಟ್ಟುವಂತೆ ವಾಚನ ಮತ್ತು ವ್ಯಾಖ್ಯಾನ ಮಾಡುತ್ತಿದ್ದರು. ಹೋಮಿಯೋಪತಿ ವೈದ್ಯ ಶಾಸ್ತ್ರವನ್ನು ಅಭ್ಯಸಿಸಿ, ಹೋಮಿಯೋಪತಿ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದ್ದರು. ಇವರ ಮತ್ತೊಂದು ಆಸಕ್ತಿಯ ವಿಷಯವೆಂದರೆ ಜ್ಯೋತಿಷಶಾಸ್ತ್ರ. ಇದಕ್ಕಾಗಿ ಹಲವಾರು ಇಂಗ್ಲಿಷ್ ಗ್ರಂಥಗಳನ್ನು ವಿದೇಶದಿಂದ ತರಿಸಿಕೊಂಡು ಅಭ್ಯಾಸಮಾಡಿ ಕೇಳಿದವರಿಗೆ ಜ್ಯೋತಿಷಶಾಸ್ತ್ರವನ್ನು ಹೇಳುತ್ತಿದ್ದರು. ಸಂಖ್ಯಾಶಾಸ್ತ್ರದಲ್ಲೂ ಇವರಿಗೆ ಆಸಕ್ತಿ ಇತ್ತು. ಪದವಿ ತರಗತಿಯಲ್ಲಿ ಗಣಿತಶಾಸ್ತ್ರವನ್ನು ಅಭ್ಯಾಸ ಮಾಡಿದ್ದರು. ಇವರು ಭಾಷಾಶಾಸ್ತ್ರದಲ್ಲಿ ಪಿಎಚ್. ಡಿ. ಮಹಾ ಪ್ರಬಂಧವನ್ನು ರಚಿಸಿ ಪುಣೆ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದುದನ್ನು ಮತ್ತಾರೊ ಲಪಟಾಯಿಸಿ ಪಿಎಚ್. ಡಿ. ಪಡೆದುಕೊಂಡು, ಇವರಿಗೆ ಪಿಎಚ್.ಡಿ ಪದವಿ ದೊರೆಯಲಿಲ್ಲ.
ಗ್ರಂಥಸಂಪಾದನೆ, ಭಾಷಾಶಾಸ್ತ್ರ, ಸಂಶೋಧನೆ ಇವುಗಳಲ್ಲಿ ತೊಡಗಿಕೊಂಡಿದ್ದ ವೆಂಕಟೇಶಯ್ಯನವರಿಗೆ ಸೃಜನಶೀಲ ಸಾಹಿತ್ಯದಲ್ಲಿ ಒಲವಿದ್ದು ಹಲವಾರು ಕತೆ, ಕಾದಂಬರಿ, ಪ್ರಬಂಧಗಳನ್ನು ರಚಿಸಿದ್ದು ಇವು ಕೊರವಂಜಿ, ಸಂಯುಕ್ತ ಕರ್ನಾಟಕ, ಸುಬೋಧ, ವಿಕಟ ವಿನೋದಿನಿ, ಪ್ರಬುದ್ಧ ಕರ್ನಾಟಕ, ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಅವರು ಬರೆದ ಹಲವಾರು ಪ್ರಬಂಧಗಳನ್ನು ಒಟ್ಟುಗೂಡಿಸಿ 1931ರಲ್ಲಿ 'ಪುಲ್ಲಯ್ಯನ ಪ್ರಬಂಧಗಳು’ ಎಂದು ಪ್ರಕಟಿಸಿದ್ದು ಪ್ರಬಂಧ ಪ್ರಕಾರದಲ್ಲಿ ಪ್ರಕಟವಾದ ಮೊಟ್ಟಮೊದಲ ಪ್ರಬಂಧ ಸಂಕಲನವೆಂಬ ಖ್ಯಾತಿಯನ್ನು ಪಡೆದಿದೆ. ಇದಕ್ಕಿಂತ ಹಿಂದೆ 1898 ರಲ್ಲಿ ಬಿ. ವೆಂಕಟಾಚಾರ್ಯರು ಬಂಕಿಮ ಚಂದ್ರರ ‘ಲೋಕರಹಸ್ಯ’ ಎಂಬ ಪ್ರಬಂಧ ಸಂಕಲನವನ್ನು ಅನುವಾದಿಸಿದ್ದು, ಸ್ವತಂತ್ರ ಪ್ರಬಂಧ ‘ದಾಡಿಯ ಹೇಳಿಕೆ’ ಯನ್ನು ಪ್ರಕಟಿಸಿದ್ದರೂ ಎಂ. ಜಿ. ವೆಂಕಟೇಶಯ್ಯನವರು ಪ್ರಕಟಿಸಿದ ‘ಪುಲ್ಲಯ್ಯನ ಪ್ರಬಂಧಗಳು’ ಪ್ರಥಮ ಪ್ರಬಂಧ ಸಂಕಲನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವೆಂಕಟೇಶಯ್ಯನವರು ಕಾದಂಬರಿ ಕ್ಷೇತ್ರವನ್ನು ಪ್ರವೇಶಿಸಿ ಬರೆದ ಸ್ವತಂತ್ರ ಸಾಮಾಜಿಕ ಕಾದಂಬರಿ ‘ಮಾಧವಲೀಲೆ’. ಇದು ಪ್ರತಿಭಾಗ್ರಂಥ ಮಾಲೆಯಿಂದ ಪ್ರಕಟವಾಗಿದೆ. ಇದರಲ್ಲಿ ಸ್ವಾತಂತ್ಯ್ರ ಪೂರ್ವದ ಕಥೆಯನ್ನು ನವಿರಾದ ಹಾಸ್ಯ ಪ್ರಸಂಗಗಳ ಮೂಲಕ, ಚುರುಕು ಸಂಭಾಷಣಾ ಶೈಲಿಯಲ್ಲಿ ನಿರೂಪಿಸಿದ್ದಾರೆ.
ವೆಂಕಟೇಶಯ್ಯನವರು 1971ರಲ್ಲಿ ಪ್ರಕಟಿಸಿದ ಸಂಶೋಧನ ಗ್ರಂಥ ‘ಶಬ್ದಾವರ್ತ ನಿರುಕ್ತ’ ಜಾರ್ಜ್ ಕ್ಲಿಂಗ್ ಸ್ಲೆ ಅವರ 'ಸೈಕೊ ಬಯಾಲಜಿ ಆಫ್ ಲಾಂಗ್ವೇಜಸ್', ಫಿಲಿಪ್ ಬೋಸ್ ವುಡ್ ಅವರ 'ಥಾಟ್ಸ್ ಅಂಡ್ ಲಾಂಗ್ವೇಜ್' ಮತ್ತು ಆರ್. ಎ. ಫಿಶರ್ ಅವರ 'ಸ್ಟ್ಯಾಟಿಸ್ಟಿಕಲ್ ಮೆಥೆಡ್ ಫಾರ್ ರಿಸರ್ಚ್ ವರ್ಕ್ಸ್' ಮುಂತಾದವುಗಳ ಮಾದರಿಗಳನ್ನುನುಸರಿಸಿ ಭಾಷಾಶಾಸ್ತ್ರ, ಸಂಖ್ಯಾಶಾಸ್ತ್ರ ಆಸಕ್ತರಿಗಾಗಿ ರಚಿಸಿದ ಗ್ರಂಥಗಳು.
ವೆಂಕಟೇಶಯ್ಯನವರು ಪುರಾಣಕ್ಕೆ ಸಂಬಂಧಿಸಿದ 12ಕತೆಗಳ ಸಂಕಲನ ‘ಪುರಾಣದ ಕೆಲವು ಕಥೆಗಳು’, ನಾಟಕ ರಂಗದ ಆಗುಹೋಗುಗಳು, ನಟರ ಆತಂಕಗಳು, ವಿಮರ್ಶಕನ ಹೊಣೆಗಾರಿಕೆ, ಪ್ರೇಕ್ಷಕರ ಪ್ರತಿಕ್ರಿಯೆಗಳು ಮುಂತಾದವುಗಳ ವರ್ಣನೆಯಿಂದ ಕೂಡಿರುವ ಕೃತಿ ‘ಜಾರಿದ ಗಂಟು’ ಮುಂತಾದವುಗಳಲ್ಲದೆ ಹರಿಶ್ಚಂದ್ರ ಕಾವ್ಯ, ರನ್ನನ ಗದಾಯುದ್ಧ ಮುಂತಾದವುಗಳನ್ನು ಸಂಪಾದಿಸಿ (ಇತರರೊಡನೆ) ಪ್ರಕಟಿಸಿದ್ದಾರೆ. ಇವರ ಇತರ ಕೃತಿಗಳೆಂದರೆ ಕಾಸಿನ ಸರ (ಸಣ್ಣ ಕಥೆಗಳು), ಮಾನವ ಶಾಸ್ತ್ರದ ಮಾತು, ಪಚ್ಚೆಯುಂಗುರ (ಕಥೆಗಳು), ಮನ್ನೂ ಮದುವೆ (ಕಥೆಗಳು), ಕನ್ನಡ ಧ್ವನಿಮಾ (ಭಾಷಾಶಾಸ್ತ್ರ), ಕನ್ನಡ ಸಾಹಿತ್ಯ ಪ್ರಪಂಚ (ಸಂಕ್ಷಿಪ್ತ ಸಾಹಿತ್ಯ ಚರಿತ್ರೆ), ಅಮಾವಸು (ಚಂದ್ರ ವಂಶದ ರಾಜ ಪುರೂರವ-ಊರ್ವಶಿಯರಿಗೆ ಜನಿಸಿದವನು-ನಾಟಕ) ಮುಂತಾದವುಗಳಲ್ಲದೆ ಆಧುನಿಕ ಕವನಾಂಶ ಗಣಚಿಂತನ, ಚಿತ್ರದುರ್ಗದ ಪಾಳೇಗಾರರು, ನೆನಪಿನ ಕುಸುಮಗಳು (ಆತ್ಮ ಕಥೆ), ರನ್ನನ ಗದಾಯುದ್ಧ ವ್ಯಾಖ್ಯಾನ, ಗಮಕ ವ್ಯಾಖ್ಯಾನ ಮುಂತಾದವು.
ಎಂ. ಜಿ. ವೆಂಕಟೇಶಯ್ಯನವರು 1984ರ ಡಿಸೆಂಬರ್ 4 ರಂದು ಅನಂತಪುರದಲ್ಲಿದ್ದ ತಮ್ಮ ಮಗನ ಮನೆಯಲ್ಲಿ ನಿಧನರಾದರು.
On the birth anniversary of great scholar M.G. Venkateshaiah
ಕಾಮೆಂಟ್‌ಗಳು