ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೇತಾಜಿ


 ನೇತಾಜಿ ಸುಭಾಷ್ ಚಂದ್ರ ಬೋಸ್


ಭಾರತೀಯರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದರೆ ಮೈನವಿರೇಳುವಂತಹ ದೇಶಪ್ರೇಮದ ಕಿಚ್ಚು ಹೃದಯ ತುಂಬುತ್ತದೆ.

ನೇತಾಜಿ ಸುಭಾಷ್ ಚಂದ್ರ ಭೋಸರು 1897ರ  ಜನವರಿ 23ರಂದು ಜನಿಸಿದರು.  ಸುಭಾಷ್ ಚಂದ್ರಬೋಸರು ಭಾರತೀಯ ಇತಿಹಾಸದಲ್ಲಿ ಹಲವು ರೀತಿ ಬಿರುಗಾಳಿ ಬೀಸಿ, ಕಡೆಗೆ ಅವರು ಏನಾದರೂ ಎಂಬ ಬಗ್ಗೆ ಕೂಡ ಹಲವು ಸುದ್ಧಿಗಳು ನಿರಂತರವಾಗಿ ಗಾಳಿಯಲ್ಲೇ ಉಳಿಯುವ ಹಾಗೆ ಕಣ್ಮರೆಯಾದರು. 

ನೇತಾಜಿ ಸುಭಾಷ್ ಚಂದ್ರ ಬೋಸರ ಬಗ್ಗೆ ಹಲವು ಕತೆಗಳಿವೆ.  ಭಾರತೀಯರಿಗೆ ದೇಶಾಭಿಮಾನ ಕಡಿಮೆ ಎಂಬ ಮಾತು ಪ್ರಶ್ನೆ ಪತ್ರಿಕೆಯಲ್ಲಿತ್ತೆಂದು ಕೋಪಗೊಂಡು ಪ್ರಶ್ನೆ ಪತ್ರಿಕೆ ಹರಿದೆಸೆದು ಹೊರಟ ವಿದ್ಯಾರ್ಥಿ ಎಂದು ಒಂದು ಕಥೆ, ಒಬ್ಬ  ಬ್ರಿಟಿಷ್ ಅಧ್ಯಾಪಕ ಭಾರತೀಯರನ್ನು ಅವಮಾನಿಸಿ ಮಾತನಾಡಿದ ಎಂದು ಅವನನ್ನು ತಳಿಸಿದರು ಎಂದು ಮತ್ತೊಂದು ಹೀಗೆ ಹಲವು.  

ನೇತಾಜಿಯವರು ಮಹಾನ್ ಬುದ್ಧಿವಂತರಾಗಿ ಇಂಡಿಯನ್ ಸಿವಿಲ್ ಸರ್ವೀಸಸ್ ಸೇವೆ ತಲುಪಿದ್ದಂತೂ ನಿಜ.  ಅದನ್ನು ಕಿತ್ತೊಗೆದು ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಇಳಿದು ಇನ್ನಿಲ್ಲದಂತೆ ಸೇವೆ ಸಲ್ಲಿಸಿದ್ದೂ ನಿಜ.  ಅದೆಷ್ಟೋ ಬಾರಿ ಗಡೀಪಾರಾಗಿ ಪುನಃ ಪುನಃ ಭಾರತಕ್ಕೆ ಬಂದು ಬಂಧನಕ್ಕೆ ಒಳಗಾಗುತ್ತಿದ್ದುದೂ ನಿಜ.  ಭಾರತದ ಸ್ವಾತಂತ್ರಕ್ಕೆ ಕಂಕಣ ಕಟ್ಟಿ ದುಡಿದದ್ದು ಅಪ್ಪಟ ನಿಜ.  

ಗಾಂಧೀಜಿ ಮತ್ತು ನೇತಾಜಿ ಇಬ್ಬರೂ ವಿಭಿನ್ನ ಮನೋಧರ್ಮದವರು.  ಗಾಂಧೀಜಿ ಆಶಯಕ್ಕೆ ವಿರುದ್ಧವಾಗಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ನಾಯಕತ್ವಕ್ಕೆ ಆಯ್ಕೆ ಆಗಿದ್ದು ಕೊನೆಗೆ ಅದನ್ನು ಬಿಟ್ಟುಕೊಟ್ಟು ಹೊರಗೂ ನಡೆದು ಬಿಟ್ಟರು.  

ಸುಭಾಷರು ನಾಜೀಗಳ ಜೊತೆ, ಜಪಾನಿನವರ ಜೊತೆ, ಹೀಗೆ ಬ್ರಿಟಿಷರ ವಿರೋಧಿಗಳ ಜೊತೆ ಯಾರೆಂದರೂ ಸರಿ, ಸಲ್ಲಾಪ ನಡೆಸಿ ಮಲಯ, ಸಿಂಗಪುರ ಮುಂತಾದೆಡೆಗಳಲ್ಲಿ ಇದ್ದ ಯುದ್ಧ ಖೈದಿಗಳು, ಪ್ಲಾಂಟೇಶನ್ ಕೆಲಸಗಾರರನ್ನು ಒಟ್ಟುಗೂಡಿಸಿ ಆಜಾದ್ ಹಿಂದ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಒಗ್ಗೂಡಿಸಿದ ಶಕ್ತಿವಂತ.   ನಾವು ‘ಜೈ ಹಿಂದ್’ ಎಂದು ಕೇಳಿದಾಗ ಮೊದಲು ಕಣ್ಣಿಗೆ ಬೀಳುವ ಚಿತ್ರ ಸುಭಾಷರದ್ದು.

ಸ್ವಾಮಿ ವಿವೇಕಾನಂದರ ನಿಷ್ಠ ಭಕ್ತರಾದ ನೇತಾಜಿ  ವಿಶ್ವದೆಲ್ಲೆಡೆ ಭಾರತದ ಸ್ವಾತಂತ್ರ್ಯದ ಕಹಳೆಯನ್ನು ಕೂಗಿ ಜನಮನವನ್ನು ಬಡಿದೆಬ್ಬಿಸಿ ಬ್ರಿಟಿಷರನ್ನು ದಿಗ್ಬ್ರಾಂತರನ್ನಾಗಿ ಮಾಡಿದ್ದು ಚರಿತ್ರೆಯ ಪುಟಗಳಲ್ಲಿ ನಿಚ್ಚಳವಾಗಿ ಮೂಡಿದೆ.   

ನಮ್ಮ ದೇಶಕ್ಕಾಗಿ ನಿರಂತರ ಯೋಚಿಸಿ, ತನ್ನ ಬುದ್ಧಿವಂತಿಕೆ, ಸಾಧ್ಯವಿದ್ದ ಶ್ರೀಮಂತ ಬದುಕು, ಮತ್ತೊಂದು ಹೌದಪ್ಪ ಆಗಿದ್ದರೆ ಭವಿಷ್ಯದ ರಾಜಕಾರಣಿಯ ಹಿರಿತನದ ಬದುಕು ಮುಂತಾದ ಸಣ್ಣತನದ ಚಿಂತನೆಗಳನ್ನೆಲ್ಲಾ ಬದಿಗೊತ್ತಿ, ಯಾವುದನ್ನೂ ಸ್ವಾರ್ಥದಿಂದ ಯೋಚಿಸದೆ ಜೀವಮಾನವಿಡೀ ಕಷ್ಟಗಳನ್ನು ಎದುರಿಸಿ ಹೋರಾಟಮಯ ಬದುಕನ್ನು ಬಾಳಿದ ಈ ಧೀಮಂತ ನಾಯಕರ ಕುರಿತು ಎಷ್ಟು ಹೇಳಿದರೂ ಕಡಿಮೆಯೇ.     

ನೇತಾಜಿ ಅವರು ಈ ಲೋಕವನ್ನು ಬಿಟ್ಟು ಹೋದರು ಎಂಬ ಬಗ್ಗೆ ಇರುವ ಊಹೆಯ ದಿನ ಆಗಸ್ಟ್ 18, 1945.

ಈ ಮಹಾನ್ ದೇಶಭಕ್ತನ ಶಕ್ತಿ, ಆಶೀರ್ವಾದಗಳ ಚಹರೆ ಈ ದೇಶದ ಮೇಲೆ ಮತ್ತೊಮ್ಮೆ ಬೀಸಿ ಇಲ್ಲಿ ಕವಿದಿರುವ ಅಂಧಕಾರವನ್ನು ಹೋಗಲಾಡಿಸಲಿ ಎಂದು ಹಾರೈಸಿ ಈ ಮಹಾತ್ಮರ  ಅಡಿದಾವರೆಗಳಿಗೆ ಭಕ್ತಿಯಿಂದ ನಮಿಸೋಣ.

On the birth anniversary of Netaji Subash Chandra Bose


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ