ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೊಮೈನ್ ರೊಲಾಂಡ್


 ರೊಮೈನ್ ರೊಲಾಂಡ್ 

ರೊಮೈನ್ ರೊಲಾಂಡ್ ನೊಬಲ್ ಪುರಸ್ಕೃತ ಫ್ರೆಂಚ್ ಸಾಹಿತಿ.  ಇವರು ಸ್ವಾಮಿ ವಿವೇಕಾನಂದರು ಮತ್ತು ಮಹಾತ್ಮ ಗಾಂಧೀಜಿಯವರ ಕುರಿತು ಅಪಾರ ಗೌರವ ತುಂಬಿಕೊಂಡಿದ್ದವರು.  ಮೆಡಲಿನ್ ಸ್ಲೆಡ್ ಅವರು ಮೀರಾಬೆಹನ್ ಆಗಿ ಮಹಾತ್ಮ ಗಾಂಧೀಜಿಯವರ ಅನುಯಾಯಿಗಿದ್ದು ಇವರ ಬರಹ ಮತ್ತು ಮಾತುಗಳ ಪ್ರಭಾವದಿಂದ.

ರೊಮೈನ್ ರೊಲಾಂಡ್ 1866ರ ಜನವರಿ 29ರಂದು ಫ್ರಾನ್ಸಿನ ಕ್ಲೆಮೆನ್ಸಿ ಎಂಬಲ್ಲಿ ಜನಿಸಿದರು. ಇವರ ಕುಟುಂಬದ ಹಿರಿಯ ತಲೆಮಾರುಗಳಲ್ಲಿ ನಗರವಾಸಿ ಶ್ರೀಮಂತರು ಮತ್ತು ಹಳ್ಳಿಯಲ್ಲಿ ವಾಸಿಸುವ ರೈತರಂತಹ ಎರಡೂ ರೀತಿಯ ಜನ ಕಂಡುಬರುತ್ತಾರೆ. ತಮ್ಮ 'ವೋಯೇಜ್ ಇಂಟೆರಿಯೂರ್' ಎಂಬ ಅಂತಃಮಥನದ ಬರಹದಲ್ಲಿ ರೊಲಾಂಡ್   ತಮ್ಮನ್ನು 'ಪ್ರಾಚೀನ ಮಾದರಿ'ಯ ಪ್ರತಿನಿಧಿ (antique species) ಎಂದು ಕರೆದುಕೊಂಡಿದ್ದಾರೆ.  'ಕೊಲಾಸ್  ಬ್ರುಗ್ನೋನ್' ಎಂಬ ಕೃತಿಯಲ್ಲಿ  ಅವರು ತಮ್ಮ ಹಿರಿಯರ ಕುರಿತಾದ ಚಿತ್ರಣ ನೀಡಿದ್ದಾರೆ. 

1886ರಲ್ಲಿ ತತ್ವಶಾಸ್ತ್ರ ಕಲಿಯಲು ಪ್ರಾರಂಭಿಸಿದ ರೊಲಾಂಡ್ ಅವರಿಗೆ ಯೂವುದೋ ಒಂದು ರೀತಿಯ ಚಿಂತನೆಗೆ  ಕಟ್ಟು ಬೀಳಬಾರದು ಎಂಬ ಮುಕ್ತ ಮನೋಭಾವ ಮೂಡಿ,  ತಮ್ಮ ಓದನ್ನು ನಿಲ್ಲಿಸಿದರು. 1889ರಲ್ಲಿ ಇತಿಹಾಸದಲ್ಲಿ ಪದವಿ ಪಡೆದು ಎರಡು ವರ್ಷ ರೋಮ್ನಲ್ಲಿ ಇದ್ದರು. ಇಲ್ಲಿ ಮಾಲ್ವಿದ ವಾನ್ ಮೈಸೆನ್‍ಬಗ್ ಅವರ ಸಂಪರ್ಕ ದೊರೆತು ಇಟಾಲಿಯನ್ ಮೇರುಕೃತಿಗಳ ಅಧ್ಯಯನಕ್ಕೆ ಅನುವು ಮಾಡಿಕೊಟ್ಟಿತು. 

1895ರಲ್ಲಿ ಫ್ರಾನ್ಸಿಗೆ ಮರಳಿದ ಬಳಿಕ ರೊಮೈನ್ ರೊಲಾಂಡ್ 'ದಿ ಒರಿಜಿನ್ ಆಫ್ ಮಾಡರ್ನ್ ಲಿರಿಕ್ ಥಿಯೇಟರ್ ಮತ್ತು ಎ ಹಿಸ್ಟರಿ ಆಫ್ ಒಪೇರ ಇನ್ ಯುರೋಪ್ ಬಿಫೋರ್ ಲಲ್ಲಿ ಅಂಡ್ ಸ್ಕಾರ್ಲೆಟ್ಟಿ' ಎಂಬ ಪ್ರೌಢ ಪ್ರಬಂಧಗಳನ್ನು ಮಂಡಿಸಿ ಡಾಕ್ಟೊರೆಟ್ ಗಳಿಸಿದರು. ಮುಂದಿನ ಎರಡು ದಶಕಗಳಲ್ಲಿ ಇವರು ಪ್ಯಾರಿಸ್ಸಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ದುಡಿದರು.

1902ರಿಂದ 1911ರ ವರೆಗೆ ಎಕೊಲೆ ಡೆಸ್ ಹೌಟ್ಸ್ ಎಟ್ಯೂಡೆಸ್ ಸೊಶಿಯಾಲೆಸ್ ಎಂಬ ಸಂಗೀತ ಶಾಲೆಯ ನಿರ್ದೇಶಕರಾಗಿದ್ದರು. 1903ರಲ್ಲಿ ಇವರನ್ನು ಸೊರ್ಬೊನ್ನೆಯ ಮ್ಯೂಸಿಕ್ ಹಿಸ್ಟರಿಯ ಪ್ರಥಮ ಮುಖ್ಯಸ್ಥರನ್ನಾಗಿ  ಆಯ್ಕೆ ಮಾಡಲಾಯಿತು.

ರೊಮೈನ್ ರೊಲಾಂಡ್ ಅವರ ಮೊದಲ ಕೃತಿ 1902ರಲ್ಲಿ ಪ್ರಕಟವಾಯಿತು.  ರೊಲಾಂಡ್ ಅವರು ಜನರ ರಂಗಭೂಮಿಯ ಪ್ರತಿಪಾದಕರಾಗಿ ಅದರ  ಪ್ರಜಾಪ್ರಭುತ್ವೀಕರಣದಲ್ಲಿ  ಗಮನಾರ್ಹ ಕೊಡುಗೆ ನೀಡಿದವರೆನಿಸಿದ್ದಾರೆ.‍ ಮಾನವತಾವಾದಿಯಾದ ಇವರು ಭಾರತದ ತತ್ವಜ್ಞಾನದೆಡೆಗೆ ಆಕರ್ಷಿತರಾದರು. ರವೀಂದ್ರನಾಥ ಠಾಗೂರ್,  ಮಹಾತ್ಮ ಗಾಂಧಿಯವರ ಚಿಂತನೆ ಹಾಗೂ ಸ್ವಾಮಿ ವಿವೇಕಾನಂದರ ವೇದಾಂತ ತತ್ವಜ್ಞಾನದ ಪುಸ್ತಕಗಳಿಂದ ಬಹಳಷ್ಟು ಪ್ರಭಾವಿತರಾದರು. 

ರೊಮೈನ್ ರೊಲಾಂಡ್  ಅವರು ತಮ್ಮ ಬರವಣಿಗೆಯೇ ಜೀವನಕ್ಕೆ ಸಾಕಾಗುವಷ್ಟು ಸಂಪಾದನೆಯನ್ನು ತಂದು ಕೊಡಲು ಪ್ರಾರಂಭಿಸಿದಾಗ ತಮ್ಮ ವಿಶ್ವವಿದ್ಯಾಲಯದ ಬೋಧಕ ವೃತ್ತಿಯನ್ನು 1912ರಲ್ಲಿ ಬಿಟ್ಟರು. ಜೀವನಪೂರ್ತಿ ಶಾಂತಿಪ್ರಿಯರಾಗಿದ್ದ ಇವರು ಪ್ರಥಮ ಮಹಾಯುದ್ಧವನ್ನು ವಿರೋಧಿಸಿದರು. 1924ರಲ್ಲಿ ಮಹಾತ್ಮ ಗಾಂಧಿ ಅವರು ಕುರಿತು ಇವರು ಬರೆದ ಪುಸ್ತಕ ಗಾಂಧಿಯವರ ಖ್ಯಾತಿಯನ್ನು ಜಗತ್ತಿನೆಲ್ಲೆಡೆ ಪರಿಚಯಿಸುವಲ್ಲಿ ಮಹತ್ವದ ಪಾತ್ರವಹಿಸಿತು. ಗಾಂಧೀಜಿಯವರನ್ನು ಇವರು 1931ರಲ್ಲಿ ಸ್ವಿಟ್ಜರ್ಲ್ಯಾಂಡ್‍ನಲ್ಲಿ ಭೇಟಿಯಾದರು.

1928ರಲ್ಲಿ ರೊಮೈನ್ ರೊಲಾಂಡ್ ಅವರು  ಹಂಗೇರಿಯ ವಿದ್ವಾಂಸ ಮತ್ತು ತತ್ವಜ್ಞಾನಿ ಎಡ್ಮಂಡ್ ಬೋರ್ಡೆಕ್ಸ್ ಸ್ಜೆಕೆಲಿಯ ಅವರ ಜೊತೆಗೂಡಿ ಅಂತರರಾಷ್ಟ್ರೀಯ ಬೈಯೋಜಿನಿಕ್ ಸೊಸೈಟಿಯನ್ನು ಸ್ಥಾಪಿಸಿದರು. ಮನಸ್ಸು, ಶರೀರ ಮತ್ತು ಅತ್ಮಸಂಯೋಗದ ಬಗೆಗಿನ ಚಿಂತನೆಗಳ ವಿಸ್ತರಣೆ ಮತ್ತು ಪ್ರಚಾರ ಈ ಸಂಘಟನೆಯ ಉದ್ದೇಶವಾಗಿತ್ತು. 1932ರಲ್ಲಿ ಯುದ್ಧ ಮತ್ತು ಫ್ಯಾಸಿಸಂ ವಿರುದ್ಧ ಮೂಜೆನ್‍ಬರ್ಗ್ ಸ್ಥಾಪನೆ ಮಾಡಿದ ಸಮಿತಿಯ ಮೊದಲ ಸದಸ್ಯರಲ್ಲಿ ರೊಲಾಂಡ್ ಒಬ್ಬರಾಗಿದ್ದರು.

ರೊಮೈನ್ ರೊಲಾಂಡ್ ಬರವಣಿಗೆಗೆ ತಮ್ಮ ಪೂರ್ಣ ಗಮನ ನೀಡಲು ಜಿನೀವಾದ ವಿಲ್ಲಿನ್ಯೂವೆಗೆ ಸ್ಥಳಾಂತರಗೊಂಡರು. 1935ರಲ್ಲಿ ಮ್ಯಾಕ್ಸಿಂ ಗಾರ್ಕಿಯವರ ಆಹ್ವಾನದ ಮೇರೆಗೆ ಮಾಸ್ಕೋಗೆ ಭೇಟಿನೀಡಿದರು. ಈ ಭೇಟಿಯ ಸಮಯದಲ್ಲಿ ಜೋಸೆಫ್ ಸ್ಟಾಲಿನ್‍ ಅವರೊಡನೆ ಭೇಟಿಯಾಯಿತು. ರೋಲ್ಯಾಂಡ್ ಸೋವಿಯತ್ ರಷ್ಯಾದಲ್ಲಿ ಫ್ರಾನ್ಸಿನ ಕಲಾವಿದರ ಅನಧಿಕೃತ ರಾಯಭಾರಿಯಂತೆ  ಕಾರ್ಯನಿರ್ವಹಿಸಿದರು. ಶಾಂತಿಪ್ರಿಯ ವ್ಯಕ್ತಿಯಾಗಿ ಸ್ವಾಲಿನ್‍ರವರ ದಬ್ಬಾಳಿಕೆ ಧೋರಣೆಯ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಸ್ಟಾಲಿನ್ ತತ್ವ ವಿರೋಧಿ ಬರಹಗಾರ ವಿಕ್ಟರ್ ಸೆರ್ಗೆಯ ಬಂಧನ ಹಾಗೂ ನಿಕೊಲಾಯಿ ಬುಕಾರಿನ್ ಅವರ ಕ್ಷಮೆಯ ವಿಷಯದಲ್ಲಿ ಸ್ಟಾಲಿನ್‍ನೊಂದಿಗೆ ಪತ್ರವ್ಯವಹಾರ ಮಾಡಿ ಚರ್ಚಿಸಲು, ಪ್ರಭಾವ ಬೀರಲು ಯತ್ನಿಸಿದರು.

ಅವಿಶ್ರಾಂತ ಬರಹಗಾರರಾಗಿದ್ದ ರೊಮೈನ್ ರೊಲಾಂಡ್ 1940ರಲ್ಲಿ ತಮ್ಮ ಆತ್ಮ ಚರಿತ್ರೆಯನ್ನು ಬರೆದರು. ಖ್ಯಾತ ಸಂಗೀತಜ್ಞ ಲುಡ್ವಿಗ್ ವಾನ್ ಬೆಥೋವನ್ ಸಂಗೀತದ ಬಗ್ಗೆ ಸಂಶೋಧನಾತ್ಮಕ ಬರವಣಿಗೆಯನ್ನು ಮೂಡಿಸಿದ ರೊಲಾಂಡ್ ಧರ್ಮ ಮತ್ತು ಸಮಾಜವಾದ ಕುರಿತಾದ ತಮ್ಮ  ವಿಶ್ಲೇಷಣಾತ್ಮಕವಾದ  'ಪೇಗೆ' ಕೃತಿಯನ್ನು 1944ರಲ್ಲಿ ಬರೆದರು. 

ರೊಮೈನ್ ರೊಲಾಂಡ್ ಅವರು 1944ರ ಡಿಸೆಂಬರ್ 30ರಂದು ವೆಜೀಲೆ ಎಂಬಲ್ಲಿ ನಿಧನರಾದರು.


On the birth anniversary of Romain Rolland


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ