ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪುರಂದರದಾಸರು


 ಪುರಂದರದಾಸರು


ಕನ್ನಡ ಸಾಹಿತ್ಯ ಶ್ರೀಮಂತಿಕೆಯಲ್ಲಿ ದಾಸಸಾಹಿತ್ಯದ ಕೊಡುಗೆ ಅಪಾರವಾದದ್ದು.  ದಾಸಸಾಹಿತ್ಯ ಎಂದರೆ ಮೊದಲು ನೆನಾಗುವವರು ಶ್ರೀಪುರಂದರದಾಸರು.

ಕೀರ್ತನ ಸಾಹಿತ್ಯದಲ್ಲಿ ಪುರಂದರದಾಸರದು ಬಹು ದೊಡ್ಡ ಹೆಸರು.  ಗಾತ್ರ-ಗುಣ ಎರಡರಲ್ಲೂ ಅವರ ಕೃತಿಗಳದು ಗಿರಿತೂಕ.  ವಚನಕಾರರಲ್ಲಿ ಬಸವಣ್ಣನವರಿದ್ದಂತೆ ಹರಿದಾಸರಲ್ಲಿ ಪುರಂದರದಾಸರು.  ಶೂನ್ಯ ಸಿಂಹಾಸನಾಧ್ಯಕ್ಷರಾದ ಅಲ್ಲಮ ಪ್ರಭುಗಳು ಬಸವಣ್ಣನವರ ಗುಣಗಾನ ಮಾಡಿದಂತೆ ಯತಿವರ್ಯರಾದ ವ್ಯಾಸರಾಯರು ಪುರಂದರ ವ್ಯಕ್ತಿತ್ವಕ್ಕೆ ಮಾರು ಹೋಗಿ ‘ದಾಸರೆಂದರೆ ಪುರಂದರದಾಸರಯ್ಯ’ ಎಂದು ಪರಮ ತೃಪ್ತಿಯ ಉದ್ಗಾರವೆತ್ತಿದ್ದಾರೆ.  ಬಸವಣ್ಣನವರ ನಂತರದ ವಚನಕಾರರು ಅವರನ್ನು ಗೌರವದಿಂದ ಸ್ಮರಿಸಿದಂತೆ ಪುರಂದರದಾಸರನ್ನು ಅವರ ಮುಂದಿನ ಹರಿದಾಸರು ಗೌರವಾದರಗಳಿಂದ ಸ್ಮರಿಸಿದ್ದಾರೆ.  ಇಬ್ಬರ ಹೃದಯದಲ್ಲೂ ತುಂಬಿ ಸೂಸುವುದು ಭಕ್ತಿಯ ನಿರ್ಮಲಜಲ.  ತಮ್ಮ ತಮ್ಮ ದೈವದಲ್ಲಿ ಇಬ್ಬರಿಗೂ ಅನನ್ಯ ಶರಣಾಗತಿ, ನಿಷ್ಠೆ.  ಸಣ್ಣತನ, ವೈದಿಕ ಜಡತೆ, ಮೂಢ ನಂಬಿಕೆಗಳು, ಸಂಪ್ರದಾಯದ ಅರ್ಥಹೀನ ರೂಢಿಗಳೆಂದರೆ ಇಬ್ಬರಿಗೂ ಅಸಹ್ಯ, ಆಗ ಅವರ ಮಧುರವಾದ ಧ್ವನಿಯಲ್ಲಿ ಒಂದು ವಿಧದ ಗಡುಸು, ವ್ಯಂಗ್ಯ, ಕಾಠಿಣ್ಯ.  ವರ್ಣಾಶ್ರಮದ ಬಗ್ಗೆ ಇಬ್ಬರದೂ ಸಮಾನ ದೃಷ್ಟಿ.  ಉಪನಿಷತ್ತಿನ ದಾರ್ಶನಿಕರು ಕಂಡ ಸೂಕ್ಮಾತಿಸೂಕ್ಷ್ಮಗಳನ್ನು ಕನ್ನಡದಲ್ಲಿ ಜನಸಾಮಾನ್ಯಕ್ಕೆ ಸರಳವಾಗಿ ಒದಗಿಸಬೇಕೆಂದು ಇಬ್ಬರಿಗೂ ಅದಮ್ಯ ಆಸೆ.  ‘ಇವರಿಬ್ಬರೂ ಒಂದೇ ಗೊಂಚಲ ಎರಡು ಹೂಗಳು’.  ಸಮಾನ ಮನೋಧರ್ಮದವರಾದ ಪುರಂದರರ ಮೇಲೆ ಬಸವಣ್ಣನವರ ಪ್ರಭಾವ ಆಗಿರುವುದನ್ನು ಚಿದಾನಂದಮೂರ್ತಿಗಳು ತಮ್ಮ ಲೇಖನವೊಂದರಲ್ಲಿ ಸವಿವರವಾಗಿ ಗುರುತಿಸಿದ್ದಾರೆ.

ಪುರಂದರದಾಸರು ವ್ಯಾಸರಾಯರಿಂದ ದೀಕ್ಷೆಯನ್ನು ಪಡೆದು ಪುರಂದರ ವಿಠಲ ಎಂಬ ಅಂಕಿತವನ್ನು ಸ್ವೀಕರಿಸಿ ಮಧ್ವಮತಾನುಯಾಯಿಗಳಾಗಿದ್ದರೂ ವಿಶಾಲವಾದ ಭಾಗವತ ಮನೋಧರ್ಮವನ್ನು ಬೆಳೆಸಿಕೊಂಡವರು.  ಆದುದರಿಂದಲೇ ಪುರಂದರದಾಸರು ಅಲ್ಲಿ ಮಾತ್ರವಲ್ಲ, ಎಲ್ಲಿಯೂ ಸಲ್ಲುವ ಕನ್ನಡದ ಮಹಾಪುರುಷ.  ಸಂತ ತ್ಯಾಗರಾಜರಂತಹ ಮಹಾಮಹಿಮರಿಂದಲೂ ಪೂಜಿಸಲ್ಪಟ್ಟ ಶ್ರೇಷ್ಠರು.

ಪುರಂದರದಾಸರ (1484-1564) ಜನ್ಮಸ್ಥಳ ಜನಜನಿತವಾಗಿರುವಂತೆ ಪುರಂದರಗಡ.  ಹೆಸರಿನೊಂದಿಗೆ ಸಾಮ್ಯ ಒಂದಲ್ಲದೆ ಪುರಂದರ ಜನ್ಮಸ್ಥಳ ಪುರಂದರಗಡ ಎನ್ನುವುದಕ್ಕೆ ಐತಿಹಾಸಿಕ ಪುರಾವೆಗಳಿಲ್ಲವೆನ್ನುವ ಪಾಂಡುರಂಗರಾವ್ ದೇಸಾಯಿ ಅವರು, ಪುರಂದರ ಕೀರ್ತನೆಗಳ ಭಾಷೆಯ ಆಧಾರದಿಂದ ಅವರು ಉತ್ತರ ಕರ್ನಾಟಕದವರಿರಬಹುದೆಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ.  ಪುರಂದರರ ಹುಟ್ಟು ಹೆಸರಿನ ಬಗ್ಗೆಯೂ ಇದೇ ಬಗೆಯ ಗೊಂದಲಗಳಿದ್ದರೂ ಇದು ಅಂಥಹ ಮಹತ್ವದ ವಿಷಯವಲ್ಲವಾದುದರಿಂದ ಶ್ರೀನಿವಾಸನಾಯಕ ಎಂಬ ಜನಜನಿತ ಹೆಸರನ್ನೇ ಅನುಕೂಲಕ್ಕೆ ಗ್ರಹಿಸಬಹುದು.  ಪರಂಪರೆಯ ಮೂಲಕ ತಿಳಿದುಬರುವಂತೆ ಪುರಂದರರಿಗೆ ಐವರು ಮಕ್ಕಳು.  ಒಂದು ಹೆಣ್ಣು, ನಾಲ್ಕು ಗಂಡು ಮಕ್ಕಳು.  ದೊರೆತಿರುವ ಶಾಸನವೊಂದರಲ್ಲಿ ಪುರಂದರರ ಪ್ರೌಢ ವಯಸ್ಸಿನ ಮೂವರು ಗಂಡು ಮಕ್ಕಳ ಹೆಸರಿನ ಉಲ್ಲೇಖವಿದೆ.  ಲಕ್ಷ್ಮಣದಾಸ, ಹೇಬಣದಾಸ ಮತ್ತು ಮಧ್ವಪದಾಸ ಎಂದು.

ಸ್ವತಃ ಪುರಂದರದಾಸರ ಕೀರ್ತನೆಗಳಿಂದ ಮತ್ತು ಅವರನ್ನು ಕುರಿತ ದಾಸ ಪರಂಪರೆಯ ಇತರ ಕೃತಿಗಳಿಂದ ತಿಳಿದು ಬರುವಂತೆ ಪುರಂದರರು ಆಗರ್ಭ ಶ್ರೀಮಂತ ವಂಶದ ನವಕೋಟಿ ನಾರಾಯಣರು.  ತಂದೆ ವರದಪ್ಪನಾಯಕರಂತೆ ಚಿನಿವಾರ ಉದ್ಯಮದಲ್ಲಿದ್ದುಕೊಂಡು ಪುರಂದರರು ತಮ್ಮ ಕೃಪಣತೆಗೆ ಪ್ರಸಿದ್ಧರಾದವರು.  ಹೆಂಡತಿ ಸರಸ್ವತಿಯ ಔದಾರ್ಯ ಮತ್ತು ದೈವಭಕ್ತಿಯಿಂದ ‘ಯಾವುದೋ ಒಂದು ಸಂದರ್ಭದಲ್ಲಿ’ ಪುರಂದರರಿಗೆ ಲೌಕಿಕ ಭೋಗದಲ್ಲಿ ಜಿಜ್ಞಾಸೆ ಹುಟ್ಟಿ ವೈರಾಗ್ಯ ಉಂಟಾಯಿತು.  ಆದದ್ದೆಲ್ಲಾ ಒಳಿತೇ ಆಯಿತು ಎಂಬ ಕೀರ್ತನೆಯಲ್ಲಿ ತಮ್ಮ ಆಶ್ಚರ್ಯಕರ ತಿರುವಿಗೆ ಕಾರಣಳಾದ ಪತ್ನಿಯ ಬಗ್ಗೆ ದಾಸರು ತಮ್ಮ ಗೌರವಾದರಗಳನ್ನು ತುಂಬು ಹೃದಯದಿಂದ ವ್ಯಕ್ತಪಡಿಸಿದ್ದಾರೆ.

ದಾಸರು ಸ್ವಸ್ಥಳವನ್ನು ಬಿಟ್ಟು ತಮ್ಮ ಹೆಂಡತಿ ಮಕ್ಕಳೊಂದಿಗೆ ವಿಜಯನಗರಕ್ಕೆ ಬಂದಾಗ ಅವರಿಗೆ ಮಧ್ಯವಯಸ್ಸು.  ವಿಜಯನಗರದ ಯತಿವರ್ಯರಾದ ವ್ಯಾಸರಾಯರು ಪುರಂದರರ ಅಸಾಧಾರಣ ವ್ಯಕ್ತಿತ್ವವನ್ನು ಗುರುತಿಸಿ ದೀಕ್ಷೆ ಮತ್ತು ಅಂಕಿತವನ್ನು ಕರುಣಿಸಿದರು.

ಪುರಂದರದಾಸರ ಕೀರ್ತನೆಗಳಲ್ಲಿ ತಿರುಪತಿ, ಶ್ರೀರಂಗ, ಕಳಸ, ಬೇಲೂರು,  ನಂಜನಗೂಡು, ಶ್ರೀರಂಗಪಟ್ಟಣ, ಉಡುಪಿ, ಪಂಡರಾಪುರ ಕ್ಷೇತ್ರಗಳನ್ನು ತಾವು ಸಂದರ್ಶಿಸಿದ ಬಗ್ಗೆ ಪ್ರಸ್ತಾಪ ಬರುವುದರಿಂದ ಹರಿದಾಸ ದೀಕ್ಷೆಯನ್ನು ಪಡೆದನಂತರ ಸಂಪ್ರದಾಯದಂತೆ ಪುರಂದರದಾಸರು ದಕ್ಷಿಣ ಭಾರತದಾದ್ಯಂತ ಪ್ರವಾಸ ಮಾಡಿ ಲೋಕ ಜೀವನವನ್ನೂ, ಧರ್ಮ ಸಂಸ್ಕೃತಿಗಳನ್ನೂ ಸೂಕ್ಷ್ಮವಾಗಿ ಅಭ್ಯಾಸ ಮಾಡಿರಬೇಕೆಂದು ಸ್ಪಷ್ಟವಾಗುವುದು.

ದೀಕ್ಷಾ ಸ್ವೀಕಾರಕ್ಕೆ ಮೊದಲೇ ದಾಸರಿಗೆ ಸಂಗೀತಾದಿ ಕಲೆಗಳಲ್ಲಿ ಆಸಕ್ತಿಯಿದ್ದಿರಬೇಕು.  ಈಗ ಅವುಗಳ ಅರ್ಥಪೂರ್ಣ ಸಫಲತೆಗೆ ಹಾದಿ ಮೂಡಿತು.  ಭಕ್ತಿಯ ನಿರ್ಭರತೆ, ವಯಸ್ಸಿನ ಪಕ್ವತೆ, ಅನುಭವದ ಹಿರಿತನ ದಾಸರ ಕೃತಿಗಳಿಗೆ ಒಂದು ಅಪೂರ್ವವಾದ ಗಾಂಭೀರ್ಯವನ್ನೂ, ನಿಲುವನ್ನೂ, ತನ್ಮಯತೆಯನ್ನೂ ಒದಗಿಸುವುದು ಸಾಧ್ಯವಾಯಿತು.  ವ್ಯಾಸರಾಯರಂಥ ಹಿರಿಯರ ಮಾರ್ಗದರ್ಶನ, ಕನಕದಾಸ, ವಾದಿರಾಜ, ಕುಮಾರವ್ಯಾಸರಂಥ ಮಹಾವ್ಯಕ್ತಿಗಳ ಸಹವಾಸ, ಸದ್ಗೃಹಿಣಿಯ ಸಹಕಾರಗಳ ಫಲವಾಗಿ ಪುರಂದರದಾಸರ ಬದುಕು ಹಿರಿದಾಗುತ್ತಾ ಬಂತು.  ಮುಂದೆ ಅವರ ಗಂಡು ಮಕ್ಕಳೂ ದಾಸದೀಕ್ಷೆ ವಹಿಸಿದರೆಂಬುದು ಗಮನಿಸಬೇಕಾದ ಅಂಶ.

ಪುರಂದರದಾಸರು ಅಸಂಖ್ಯಾತ ಕೀರ್ತನೆ, ಸುಳಾದಿ, ಉಗಾಭೋಗಗಳನ್ನು ರಚಿಸಿದ್ದಾರೆ.  ಅವರ ಕೃತಿಗಳು ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ ಎಂಬ ಹೇಳಿಕೆಯುಂಟು.  ಈವರೆಗೆ ದೊರೆತು ಪ್ರಕಟವಾಗಿರುವ ಕೃತಿಗಳ ಸಂಖ್ಯೆಯೇ ಸಾವಿರಕ್ಕೆ ಮೀರುತ್ತದೆ.  ದಾಸರ ಕೃತಿಗಳನ್ನು ಗುರುಗಳಾದ ವ್ಯಾಸರಾಯರೇ ಪುರಂದರೋಪನಿಷತ್ತು ಎಂದು ಕರೆದರೆಂಬ ಮಾತು ಪ್ರಸಿದ್ಧವಾಗಿದೆ.

ಪುರಂದರದಾಸರ ಪ್ರಸನ್ನ ವಾಣಿ ದಾಸ ಸಾಹಿತ್ಯಕ್ಕೆ ಅಮರತ್ವವನ್ನೂ ವೈವಿಧ್ಯವನ್ನೂ, ವೈಶಿಷ್ಟ್ಯವನ್ನೂ, ವೈಶಾಲ್ಯವನ್ನೂ ದೊರಕಿಸಿಕೊಟ್ಟಿತು.  ಹಿರಿಯರಾದ ಶ್ರೀಪಾದರಾಯರು ಮತ್ತು ಶ್ರೀವ್ಯಾಸರಾಯರ ದಾರಿಯಲ್ಲೇ ಮುಂದುವರಿದು ಆತ್ಮಾನುಭವವನ್ನೂ, ಭಕ್ತಿವೈಭವವನ್ನೂ ವಿಶದಪಡಿಸಿದರಲ್ಲದೆ, ಜನ ಜೀವನದ ವಿವಿಧ ಮುಖಗಳನ್ನೂ ಪರಿಚಯಮಾಡಿಕೊಡುವ ಪುರಂದರದಾಸರ ಲೋಕಾನುಭವ ತುಂಬಾ ಅಸದೃಶವಾದದ್ದು.  ಪುರಂದರದಾಸರ ರಚನೆಗಳಲ್ಲಿ ಸಂಗೀತದ ಮಾಧುರ್ಯವೂ, ಸಾಹಿತ್ಯದ ಸ್ವಾರಸ್ಯವೂ, ಧರ್ಮದ ಸಂದೇಶವೂ ಸರಿಸಮನಾಗಿ ಬೆರೆತು ಎಲ್ಲರಿಗೂ ಪ್ರಿಯವಾದುವು.  ಹರಿದಾಸ ಸಾಹಿತ್ಯದ ಹೊನಲು ತುಂಬಿ ತುಳುಕಿ ಸುತ್ತಲೂ ಮೆರೆಯತೊಡಗಿತು.

ಪುರಂದರದಾಸರು ಜನ ಸಾಮಾನ್ಯರ ಭಾಷೆಯನ್ನು ಬಳಸಿದರು.  ಗಾಯನ ನರ್ತನಗಳ ಮೋಹಕ ಗುಣವನ್ನು ತಮ್ಮ ಕೃತಿಗಳನ್ನು ಜನತೆಗೆ ಮುಟ್ಟಿಸಲು ಸಮೂಹ ಮಾಧ್ಯಮಗಳಾಗಿ ರೂಢಿಸಿದರು.  ಉಪನಿಷತ್ತಿನ ಗಹನ ತತ್ವಗಳನ್ನು ಕನ್ನಡಿಸಿದ್ದು ಮಾತ್ರವಲ್ಲ, ಆ ತತ್ವಗಳನ್ನು ಸ್ವೀಕರಿಸಬಲ್ಲ ಒಂದು ಸಾಮಾಜಿಕ ಸ್ಥಿತಿಯನ್ನು ಸಿದ್ಧಮಾಡುವುದಕ್ಕಾಗಿ ಜನತೆಯ ಮೌಢ್ಯ, ಕುಂದು ಕೊರತೆ, ಲೋಪ, ದೋಷಗಳನ್ನು ಕಟೋಕ್ತಿಯಿಂದ ಖಂಡಿಸಿ, ತಿಳಿಹೇಳಿ ಅಸಾಮಾನ್ಯ ನೈತಿಕ ಧೈರ್ಯವನ್ನೂ ಸಾಮಾಜಿಕ ಪ್ರಜ್ಞೆಯನ್ನೂ ವ್ಯಕ್ತಪಡಿಸಿದರು.  ಇವರ ಭಕ್ತಿಗೀತೆಗಳಲ್ಲಿ ಭಾವಗೀತೆಯ ತೀವ್ರತೆಯೂ ವಿಚಾರಗೀತೆಗಳಲ್ಲಿ ವೈಚಾರಿಕತೆಯ ತೀಕ್ಷಣತೆಯೂ ಕಂಡುಬಂದವು.  ಇದು ಅವರ ಬದುಕಿನಲ್ಲಿ ವಿರೋಧಾಭಾಸವೆನಿಸಲಿಲ್ಲ.  ಏಕೆಂದರೆ ಜಿ. ಎಸ್. ಶಿವರುದ್ರಪ್ಪನವರು ಹೇಳುವಂತೆ ಪುರಂದರದಾಸರಂಥ ದಾಸರ ವ್ಯಕ್ತಿತ್ವಕ್ಕೆ ಎರಡು ರೇಖೆಯಿದೆ.  “ಒಂದು ತಮಗೂ ತಮ್ಮ ಭಗವಂತನಿಗೂ ಇರುವ ಸಂಬಂಧ.  ಇನ್ನೊಂದು ತಮಗೂ ತಮ್ಮ ಸುತ್ತಣಲೋಕಕ್ಕೂ ಇರುವ ಸಂಬಂಧ.  ಈ ಎರಡು ಸಂಬಂಧಗಳೂ ಹೊರಡುವ ಒಂದು ಬಿಂದುವಿನಲ್ಲಿದೆ ಇವರ ವ್ಯಕ್ತಿತ್ವ. ತಮ್ಮ ಮತ್ತು ಭಗವಂತನ ಸಂಬಂಧ ಕುರಿತ ಹಾಡುಗಳಲ್ಲಿ ಈ ಅನುಭಾವಿಗಳ ಕಾವ್ಯ ವ್ಯಕ್ತಿನಿಷ್ಟವೂ; ಸಮಾಜ ಮತ್ತು ತಮ್ಮ ನಡುವಿನ ಸಂಬಂಧದ ಪರಿಶೀಲನೆ ನಡೆದಾಗ ವಸ್ತುನಿಷ್ಟವೂ ಆಗುವುದು ಸಹಜವಾಯಿತು.  ಮಾರ್ಗನಿರ್ಮಾಣ ಮತ್ತು  ಮಾರ್ಗದರ್ಶನ ಈ ಎರಡೂ ಹಂತಗಳಲ್ಲಿ ದಾಸರ ಕ್ರಿಯಾಶಕ್ತಿ ಕಾರ್ಯಪ್ರವೃತ್ತವಾಯಿತು.

ಪುರಂದರದಾಸರ ವ್ಯಕ್ತಿನಿಷ್ಠ ಕವನಗಳಲ್ಲಿ ಆತ್ಮ ನಿವೇದನೆ, ಭಗವಂತನ ನಾಮಸ್ಮರಣೆ, ವರ್ಣನೆ, ಲೀಲಾವಿನೋದಗಳು ಹೃದ್ಯವಾಗಿ ಚಿತ್ರಿತವಾಗಿವೆ.  ಆತ್ಮ ನಿವೇದನೆಯ ಕಾವ್ಯದಲ್ಲಿ ಒಂದು ಆಳವಾದ ನೋವು, ವಿಷಾದ ಸ್ಥಾಯಿಯಾಗಿ ನಿಲ್ಲುತ್ತದೆ.  ಸಂಸಾರದಿಂದ ಬಿಡಿಸಿಕೊಳ್ಳಲೆಂದು ಜೀವ ಪಡುವ ತಹತಹ ಪ್ರಾಮಾಣಿಕವಾಗಿ ವ್ಯಕ್ತವಾಗುತ್ತದೆ.  ಮಾನವಸಹಜ ದೌರ್ಬಲ್ಯಗಳನ್ನು ಅರ್ಥಮಾಡಿಕೊಂಡು, ಅವುಗಳನ್ನು ಮಿಕ್ಕುನಿಲ್ಲಲು ವ್ಯಕ್ತಿತ್ವಪಡುವ ಪ್ರಯತ್ನದ ಒತ್ತಡ ಇಂಥ ಕವನಗಳಲ್ಲಿ ಭಾವಗೀತೆಗಳ ತೀವ್ರತೆಯಲ್ಲಿ ಮೈಪಡೆಯುತ್ತದೆ.  ಇಂಥ ಎಲ್ಲ ಹೊಯ್ದಾಟಗಳಲ್ಲಿ ದೈವನಿಷ್ಠೆ, ಅಚಲವಾದ ಜೀವನಶ್ರದ್ಧೆ, ಸುಸ್ಪಷ್ಟವಾದ ಬೆಳ್ಳಿಗೆರೆಯಾಗಿ ಉದ್ದಕ್ಕೂ ಕಂಡು ಬರುವುದು.  ಈ ಮಾದರಿಯ ಹಾಡುಗಳಲ್ಲಿ ಬಿನ್ನಹಕ್ಕೆ ಬಾಯಿಲ್ಲವಯ್ಯ, ನಂಬಿಕೆಟ್ಟವರಿಲ್ಲವೋ, ಕರುಣಾಕರನೀನೆಂಬುವುದೇತಕೋ – ಮೊದಲಾದವು ಗಮನೀಯ ಕೃತಿಗಳು.

ಕೃಷ್ಣನನ್ನು ನೆನೆದಾಗ ದಾಸರ ಹೃದಯ ಭಾವಾವೇಶದಿಂದ ತುಂಬಿ ಹೋಗುವುದು.  ಅದರಲ್ಲಿಯೂ ಬಾಲಕೃಷ್ಣನ ಲೀಲೆಗಳನ್ನು ಎಷ್ಟು ವರ್ಣಿಸಿದರೂ ಅವರಿಗೆ ತೃಪ್ತಿಯಿಲ್ಲ.  ಕೀರ್ತನಕಾರರಲ್ಲಿ ವಾತ್ಸಲ್ಯಭಾವದ ಶ್ರೇಷ್ಠಗೀತೆಗಳನ್ನು ಬರೆದವರಲ್ಲಿ ಪುರಂದರದಾಸರಿಗೆ ಮೊದಲ ಸ್ಥಾನ ಸಲ್ಲುತ್ತದೆ.  ಬಾಲಕೃಷ್ಣನ ಮುರಳೀವಾದನ, ಗೋ ಪಾಲನೆ, ರಾಸಲೀಲೆ, ಕಾಳಿಂಗ ಮರ್ಧನ, ಗೋಪೀ ಪ್ರಸಂಗಗಳು ದಾಸರ ಮನಸ್ಸನ್ನು ತುಂಬಿ ನಿಲ್ಲುವ ಘಟನಾವಳಿಗಳು.  ಕೃಷ್ಣನ ಬಾಲಲೀಲೆಗಳನ್ನು ಅವರು ನಾನಾ ಕೋನಗಳಿಂದ ವೀಕ್ಷಿಸುತ್ತಾ ಸಂತೋಷ ತುಂದಿಲರಾಗುವರು.  ಆಡಿದನೋ ರಂಗ ಅದ್ಭುತದಿಂದಲಿ, ಗುಮ್ಮನ ಕರೆಯದಿರೆ, ಗೋಪಿಯ ಭಾಗ್ಯವಿದು, ಹರಿಕುಣಿದ – ಈ ಕೀರ್ತನೆಗಳು ಈ ವಿಭಾಗದಲ್ಲಿ ಉಲ್ಲೇಖನೀಯವಾಗಿವೆ.

ಸಂಸಾರದ ನಿಸ್ಸಾರತೆಯನ್ನು, ಭೋಗಜೀವನದ ನಶ್ವರತೆಯನ್ನೂ ಸಾರುವ ಗೀತೆಗಳು ಪುರಂದರದಾಸರಲ್ಲಿ ಹೇರಳವಾಗಿವೆ.  ಬದುಕಿನ ಎಲ್ಲ ಭೋಗಗಳನ್ನೂ ಕೊಡವಿಬಂದಿದ್ದ ದಾಸರಿಗೆ ‘ಸಂಸಾರ ಹೇಯಸ್ಥಲ’ ನಿರಂತರವಾಗಿ ಸ್ಪಂದಿಸುವ ವಿಚಾರವಾಗಿದ್ದುದರಲ್ಲಿ ಆಶ್ಚರ್ಯವಿಲ್ಲ.  ಅನುಗಾಲವು ಚಿಂತೆ ಜೀವಕ್ಕೆ, ಆರೇನು ಮಾಡುವರು ಅವನಿಯೊಳಗೆ, ಆರು ಹಿತವರು ನಿನಗೆ, ಆರೇನು ಮಾಡುವರು ಆರಿಂದಲೇನಹುದು, ಯಾರಿಗೆ ಯಾರುಂಟು, ರೊಕ್ಕ ಎರಡಕ್ಕೂ ದುಃಖ ಕಾಣಕ್ಕ, ಸಾಕು ಸಾಕಿನ್ನು ಸಂಸಾರ ಸುಖವು – ಈ ಪದಗಳು ಸಂಸಾರ ನಿರಸನವನ್ನು ಬೋಧಿಸುತ್ತವೆ.

ಅಂದಮಾತ್ರಕ್ಕೆ ದಾಸರು ಸಂಸಾರತ್ಯಾಗದ ಪಲಾಯನವಾದವನ್ನು ಹೇಳುತ್ತಾರೆಂದಲ್ಲ.  ಸಂಸಾರದಲ್ಲಿ ತೊಡಗಬೇಕು;  ಆದರೆ ಮುಳುಗಬಾರದು.  ಇದು ದಾಸರ ಬೋಧೆ.  ‘ಮಾನವ ಜನ್ಮ ದೊಡ್ಡದು ಅದನು ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ’ ಎಂದು ಅವರ ಮೊರೆ.  ಈಸಬೇಕು, ಇದ್ದು ಜಯಿಸಬೇಕು.  ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನ್ನಬೇಕು.  ಬದುಕಿನ ಸುಖ ದುಃಖಗಳನ್ನೆಲ್ಲಾ ಹರಿಸಮರ್ಪಣೆ ಮಾಡಿ ನಿಶ್ಚಿಂತೆಯಿಂದಿರಬೇಕು.  ಅಂತಹ ನಿಶ್ಚಿಂತೆ ಪುರಂದರ ವಿಠಲನ ಬಿಡದೆ ಚಿಂತಿಸಿದರೆ ಒದಗುವುದು.

‘ನರಜನ್ಮ ಬಂದಾಗ’ ಎಂಬು ಹಾಡು ಪುರಂದರದಾಸರ ಜೀವನದರ್ಶನದ ಸಾರ ಸಂಗ್ರಹ.  ಪುರಂದರದರ್ಶನ ಈ ಹಾಡಿನಲ್ಲಿ ಮೂರ್ತಿಮತ್ತಾಗಿ ರೂಪ ತಾಳಿದೆ.

ರಾಗ: ಕಾಂಬೋದಿ; ಛಾಪುತಾಳ

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆ||ಪಲ್ಲವಿ||
ಕೃಷ್ಣಾ ಎಂದರೆ ಕಷ್ಟವು ಪರಿಹಾರ ಕೃಷ್ಣಾ ಎನಬಾರದೆ||ಅನುಪಲ್ಲವಿ||

ಮಲಗಿದ್ದು ಮೈಮುರಿದೇಳುತ್ತಲೊಮ್ಮೆ ಶ್ರೀಕೃಷ್ಣಾ ಎನಬಾರದೆ
ಸುಳಿದಾಡುವ ಮನೆಯೊಳಗಾದರು ಒಮ್ಮೆ ಕೃಷ್ಣಾ ಎನಬಾರದೆ

ಸ್ನಾನ ಪಾನ ಜಪ ತಪಗಳ ಮಾಡುತ ಕೃಷ್ಣಾ ಎನಬಾರದೆ
ಶಾಲ್ಯಾನ್ನ ಷಡುರಸ ತಿಂದು ತೃಪ್ತನಾಗಿ  ಕೃಷ್ಣಾ ಎನಬಾರದೆ

ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣಾ ಎನಬಾರದೆ
ಚೆಂದುಳ್ಳ ಹಾಸಿಗೆಯೊಳು ಕುಳಿತೊಮ್ಮೆ ಶ್ರೀಕೃಷ್ಣಾ ಎನಬಾರದೆ

ಕಂದನ್ನ ಬಿಗಿದಪ್ಪಿ ಮುದ್ದಾಡುತ ಕೃಷ್ಣಾ ಎನಬಾರದೆ
ಮಂದಗಾಮಿನಿಯೊಳು ಸರಸವಾಡುತಲೊಮ್ಮೆ ಕೃಷ್ಣಾ ಎನಬಾರದೆ

ಮೇರೆ ತಪ್ಪಿ ಮಾತನಾಡುತಲೊಮ್ಮೆ ಕೃಷ್ಣಾ ಎನಬಾರದೆ
ದಾರಿಯ ನಡೆವಾಗ ಭಾರವಹೊರುವಾಗ ಕೃಷ್ಣಾ ಎನಬಾರದೆ

ಪರಿಹಾಸ್ಯದ ಮಾತನಾಡುತಲೊಮ್ಮೆ ಶ್ರೀಕೃಷ್ಣಾ ಎನಬಾರದೆ
ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣಾ ಎನಬಾರದೆ

ದುರಿತ ರಾಸಿಗಳನು ತರಿದು ಬಿಸಾಡುವ ಕೃಷ್ಣಾ ಎನಬಾರದೆ
ಗರುಡ ಗಮನ ನಮ್ಮ ಪುರಂದರ ವಿಠಲನ ಕೃಷ್ಣಾ ಎನಬಾರದೆ

ಹಾಡಿನ ಪ್ರತಿಯೊಂದು ನುಡಿಯಲ್ಲೂ ದಾಸರು ಲೌಕಿಕ ಸುಖಜೀವನದ ಒಂದೊಂದು ಸ್ವಾರಸ್ಯಪೂರ್ಣ ಚಿತ್ರವನ್ನು ಕೊಡುತ್ತಾರೆ.  ಬದುಕನ್ನು ಸವಿಯಬೇಕು ಎನ್ನುತ್ತಾರೆ.  ತ್ಯಾಜ್ಯ ಎಂದು ಯಾವುದಕ್ಕೂ ಅನ್ನುವುದಿಲ್ಲ.  ಆದರೆ ಎಲ್ಲಾ ಕೃಷ್ಣಾರ್ಪಣವಾಗಬೇಕು ಎನ್ನುತ್ತಾರೆ.

ದಾಸರ ವ್ಯಕ್ತಿನಿಷ್ಠ ಕವನಗಳಲ್ಲಿ ಕದವ ಮುಚ್ಚಿದಳಿದಕೋ, ಗಿಳಿಯು ಪಂಜರದೊಳಿಲ್ಲ, ತಾರಕ್ಕ ಬಿಂದಿಗೆ, ನಾಡೊಂಕಾದರೆ, ಭಾಗ್ಯದ ಲಕ್ಷ್ಮೀ ಬಾರಮ್ಮ – ಮೊದಲಾದ ಗೀತೆಗಳು ತಮ್ಮ ಸಾಂಕೇತಿಕತೆ, ಪ್ರತಿಮಾನಿಷ್ಟತೆ ಮತ್ತು ಚಿತ್ರಣ ಸಾಮರ್ಥ್ಯದಿಂದ ಯಶಸ್ವಿಯಾದ ಕೀರ್ತನೆಗಳು.  ‘ಗಿಳಿಯು ಪಂಜರದೊಳಿಲ್ಲ’ ಎಂಬ ಕೃತಿಯಂತೂ ಮೊದಲಿನಿಂದ ಕಡೆಯವರೆಗೆ ಪೋಲಾಗದಂತೆ ಕಾಯ್ದಿಟ್ಟುಕೊಳ್ಳುವ ಭಾವನಿಬಿಡತೆಯಿಂದ, ಪ್ರತಿಮಾನಿರ್ಮಾಣದಿಂದ, ಅಪೂರ್ವವೆನಿಸುವ ಶೋಕಗೀತೆ.

ಪುರಂದರದಾಸರಲ್ಲಿ ಕಂಡುಬರುವ ಸಾಮಾಜಿಕ ಪ್ರಜ್ಞೆ ಕೀರ್ತನಕಾರರಲ್ಲಿ ಕನಕದಾಸರನ್ನು ಬಿಟ್ಟರೆ ಉಳಿದವರಲ್ಲಿ ಕಂಡುಬರುವುದಿಲ್ಲ.  ‘ಆಚಾರವಿಲ್ಲದ ನಾಲಗೆ’  ಎಂಬ ಹಾಡು ಮಾತಿನ ಬಗ್ಗೆ ದಾಸರಿಗಿದ್ದ ಎಚ್ಚರವನ್ನು ಸೂಚಿಸುವುದು.  ‘ಇಕ್ಕಲಾರದ ಕೈ ಎಂಜಲು’ ಗಾದೆಯ ಮಾತಾಗಿ ಪರಿಣಮಿಸಿದೆ.  ‘ಡೊಂಕು ಬಾಲದ ನಾಯಕರೆ’ ಎಂಬ ಇನ್ನೊಂದು ಹಾಡು ತನ್ನ ವ್ಯಂಗ್ಯದ ಚುರುಕಿನಿಂದ ಆಶ್ಚರ್ಯಕರವಾಗಿದೆ.  ನಗೆಯು ಬರುತಿದೆ, ನಿಂದಕರಿರಬೇಕು, ಮಡಿಮಡಿಯೆಂದಡಿಗಡಿಗ್ಹಾರುತಿ, ಮಾನಭಂಗವಮಾಡಿ, ರಮಣನಿಲ್ಲದನಾರಿ, ಹೊಲೆಯ ಹೊರಗಿಹನೆ, ಹೊಲೆಯ ಬಂದನೆಂದು – ಈ ಕೃತಿಗಳು ಕನ್ನಡಿಗರಿಗೆ ಚಿರಪರಿಚಿತವಾಗಿವೆ.

‘ರಮಣನಿಲ್ಲದ ನಾರಿ’ ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ತರುಣಿಯ ಸ್ಥಿತಿಯನ್ನು ಚಿತ್ರಿಸುವ ಹಾಡು.  ಈ ಗೀತೆಯಲ್ಲಿ ತರುಣಿಯ ಬಗ್ಗೆ ಅನುಕಂಪ, ಆಕೆಯ ಬದುಕನ್ನು ಅಸಹನೀಯವಾಗಿಸಿದ ಸುತ್ತಲ ಜನರ ಬಗ್ಗೆ ತೀವ್ರವಾದ ಅಸಮಾಧಾನ ಒಟ್ಟಿಗೆ ವ್ಯಕ್ತವಾಗಿವೆ.  ಹೊಲೆಯ ಹೊರಗಿಹನೆ, ಹೊಲೆಯ ಬಂದನೆಂದು ಎಂಬ ಕೃತಿಗಳಲ್ಲಿ ಜಾತಿವ್ಯವಸ್ಥೆಯ ಬಗ್ಗೆ ದಾಸರಿಗಿದ್ದ ಅಸಹನೆ ಸ್ಪಷ್ಟವಾಗುತ್ತದೆ.  ಮೊದಲ ಕೃತಿಯಲ್ಲಿ ಹೊಲೆತನ ಎಂಬುದು ಹುಟ್ಟಿನಿಂದಲ್ಲ, ಗುಣಕರ್ಮದಿಂದ ಎಂಬುದನ್ನು ಅನೇಕ ಹೋಲಿಕೆಗಳಿಂದ ಚಿತ್ರಿಸುತ್ತಾರೆ.  ಹೀಗೆ ನಡೆದವರು ಹೊಲೆಯ ಎಂದು ಪುರಂದರದಾಸರು  ಕೊಡುವ ಪಟ್ಟಿ ಅವರ ದೃಷ್ಟಿಯ ನೈತಿಕ ಮೌಲ್ಯಗಳನ್ನು ಸೂಚಿಸುತ್ತದೆ.

ಹೊಲೆಯ ಬಂದನೆಂದು ಎಂಬ ಉಗಾಭೋಗದಲ್ಲಿ ಕೀರ್ತನೆಯಲ್ಲಿ ಹೇಳಿದ್ದನ್ನೇ ಅಡಕವಾಗಿ ಮೂರು ಮಾತುಗಳಲ್ಲಿ ಸಂಗ್ರಹಿಸಿದ್ದಾರೆ.

ಹೊಲೆಯ ಬಂದನೆಂದು ಒಳಗೆ ದೇವರ ಮಾಡಿ
ಗಣ ಗಣ ಗಂಟೆಯ ಬಾರಿಸುವರಯ್ಯ
ತನುವಿನ ಕೋಪವು ಹೊಲೆಯಲ್ಲವೆ?
ಪರಧನ ಪರಸತಿ ಹೊಲೆಯಲ್ಲವೆ?
ಹೊರಗಿದ್ದ ಹೊಲೆಯನ ಒಳಗೆ ಬಚ್ಚಿಟ್ಟರೆ
ಇದಕೇನು ಮದ್ದೋ ಪುರಂದರ ವಿಠಲ||

ಬಸವೇಶ್ವರರ ‘ಕೊಲುವನೆ ಮಾದಿಗ’ ಎಂಬ ಪ್ರಸಿದ್ಧವಚನವೂ, ರಾಘವಾಂಕನ ‘ಅತಿಮುನಿವ ಯತಿಹೊಲೆಯ’ ಎಂಬ ಮಾತೂ ಈ ಉಗಾಭೋಗ ಓದುವಾಗ ನೆನಪಾಗುತ್ತವೆ.  ಆರೋಗ್ಯವಂತ ಮನಸ್ಸುಗಳು ಸಮಾಜದ ಹೊಲಸನ್ನು ತೊಳೆಯ ಹೊರಟಾಗ ಸಮಾನಧಾಟಿಯ ವಿಚಾರಗಳನ್ನು ವ್ಯಕ್ತಪಡಿಸುವುದು ಅನಿವಾರ್ಯವೆಂಬಂತೆ ತೋರುವುದು.  

ಪುರಂದರದಾಸರನ್ನು ಕುರಿತು ಈವರೆಗಿನ ವಿವೇಚನೆಯಿಂದ ಇಷ್ಟು ಸ್ಪಷ್ಟವಾಗಬೇಕು.  ದಾಸರು ಭಕ್ತ ಶ್ರೇಷ್ಠರು.  ಅವರದ್ದು ಕವಿಹೃದಯ.  ಭಕ್ತಿಯ ಆವೇಶ ವಿಚಾರದ ವಿವೇಕ ಒಂದು ಹದದಲ್ಲಿ ಸಮಬೆರೆತು ಅವರ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿವೆ.

ಪುರಂದರದಾಸರು ‘ದಾರಿ ಯಾವುದಯ್ಯಾ ವೈಕುಂಠಕೆ?’ ಎಂಬ ಪ್ರಶ್ನೆಯ ಉತ್ತರಕ್ಕಾಗಿ ತಮ್ಮ ಬದುಕನ್ನೇ ಅಗ್ನಿದಿವ್ಯಕ್ಕೊಡ್ಡಿ ದಾರಿ ಕಂಡುಕೊಂಡರು; ಕಂಡುಕೊಂಡ ದಾರಿಯನ್ನು ಜನ ಸಾಮಾನ್ಯಕ್ಕೆ ತೆರೆದು ತೋರಿದರು.  ಅವರು ನಿರ್ಮಾಪಕರೂ ಹೌದು.  ನಿರ್ದೇಶಕರೂ ಹೌದು.  

(ಆಧಾರ: ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರಿಂದ ರಚಿತವಾದ ‘ಪ್ರಮುಖ ಕೀರ್ತನಕಾರರು’)

Purandaradasaru

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ