ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಿನೇಶ್


 ದಿನೇಶ್


ದಿನೇಶ್ ರಂಗಭೂಮಿಯ ಪ್ರಖ್ಯಾತ ನಟರಾಗಿ ಹಾಗೂ ಚಲನಚಿತ್ರರಂಗದ ಖಳ ಮತ್ತು  ಹಾಸ್ಯ ಪಾತ್ರಗಳ ಸೊಗಸಾದ  ಪಾತ್ರಧಾರಿಯಾಗಿ ಜನಪ್ರಿಯರು.

ದಿನೇಶ್ ಅವರು 1939ರ ಜನವರಿ 25ರಂದು ಬೆಂಗಳೂರಿನಲ್ಲಿ ಜನಿಸಿದರು.  ಓದಿನ ದಿನಗಳಲ್ಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ದಿನೇಶರು ಕೆಲಕಾಲ ಹೈಸ್ಕೂಲು ಉಪಾಧ್ಯಾಯರಾಗಿ ದುಡಿದರು.  

ಬಣ್ಣದ ಲೋಕದ ಸೆಳೆತದಿಂದ  1952ರಲ್ಲಿ ಜ್ಞಾನ ಜ್ಯೋತಿ ಕಲಾಮಂದಿರ, ಫ್ರೆಂಡ್ಸ್ ಯೂನಿಯನ್ ಮೊದಲಾದ ಹವ್ಯಾಸಿ ನಾಟಕರಂಗಗಳಲ್ಲಿ ನಟಿಸಲು ಪ್ರಾರಂಭಿಸಿದ ದಿನೇಶ್ ಕ್ರಮೇಣವಾಗಿ 1956ರ ವೇಳೆಗೆ ಗುಬ್ಬಿ ವೀರಣ್ಣನವರ ‘ಶ್ರೀ ಗುಬ್ಬಿ ಚನ್ನಬಸವೇಶ್ವರ ನಾಟ್ಯ ಸಂಘ’ವನ್ನು ಪ್ರವೇಶಿಸಿದರು.  ಸದಾರಮೆ, ಸಾಹುಕಾರ, ಅಣ್ಣ-ತಮ್ಮ, ಕುರುಕ್ಷೇತ್ರ ಮೊದಲಾದ ನಾಟಕಗಳಲ್ಲಿ ದೊರೆತ ವೈವಿಧ್ಯಮಯ ಪಾತ್ರಗಳಿಂದ ಪ್ರಸಿದ್ಧರಾದ ದಿನೇಶ್  ಗುಬ್ಬಿ ವೀರಣ್ಣ ಮತ್ತು ಜಯಮ್ಮ ದಂಪತಿಗಳ ಪ್ರೀತಿಪಾತ್ರ ಹುಡುಗನಾದರು.

ಮೈಸೂರಿನ ಲಕ್ಷ್ಮೀನರಸಿಂಹಸ್ವಾಮಿ ಥಿಯೇಟರ್ಸ್‌ನಲ್ಲೂ ಮಾಸ್ಟರ್ ಹಿರಣ್ಣಯ್ಯನವರೊಂದಿಗೆ ‘ಹೆಣ್ ಹರಾಜ್’, ‘ಲಂಚಾವತಾರ’, ‘ಮಕ್‌ಮಲ್ ಟೋಪಿ’, ‘ದೇವದಾಸಿ’ ಮುಂತಾದ ನಾಟಕಗಳಲ್ಲಿ ನಟಿಸಿ ದಿನೇಶ್ ಹೆಸರುವಾಸಿಯಾಗಿದ್ದರು.

ಉಮಾಮಹೇಶ್ವರ ನಾಟ್ಯ ಸಂಘದಲ್ಲಿ ಕೆಲಕಾಲ ಹೊನ್ನಪ್ಪ ಭಾಗವತರೊಂದಿಗೆ ‘ರಾಮಾಯಣ’, ‘ಬಸವೇಶ್ವರ’, ‘ಬ್ರೋಕರ್ ಭೀಷ್ಮಾಚಾರಿ’ ಮೊದಲಾದ ನಾಟಕಗಳಲ್ಲಿ ದಿನೇಶ್  ಪ್ರಮುಖ ಪಾತ್ರಧಾರಿಯಾಗಿದ್ದರು. ಬಳ್ಳಾರಿ ಲಲಿತಕಲಾ ಸಂಘದ ನಾಟಕ ಕಂಪನಿಯಲ್ಲಿ ‘ಮದುವೆ ಮಾರ್ಕೆಟ್’, ‘ಟಿಪ್ಪುಸುಲ್ತಾನ್’, ‘ಎಚ್ಚಮನಾಯಕ’ ಮುಂತಾದ ನಾಟಕಗಳು ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದವು.

1964ರಲ್ಲಿ ‘ನಾಂದಿ’ ಚಿತ್ರದಲ್ಲಿ ಉಪಾಧ್ಯಾಯನ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ  ದಿನೇಶ್ ‘ಸಿ.ಐ.ಡಿ. ರಾಜಣ್ಣ’ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡರು.  ಮುಂದೆ ಹಲವಾರು ಚಿತ್ರಗಳಲ್ಲಿ ಅಂತದ್ದೇ ಪಾತ್ರದಲ್ಲಿ ನಟಿಸಿದ ದಿನೇಶ್ ಮುಂದೆ ಹಾಸ್ಯಪಾತ್ರಗಳಲ್ಲಿ ಜನಪ್ರಿಯರಾಗತೊಡಗಿದರು.    ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲೂ ಅಭಿನಯಿಸಿದ ದಿನೇಶರು ತಾವು ನಟಿಸಿದ ಪಾತ್ರಗಳಲ್ಲೆಲ್ಲಾ ಅಪಾರವಾದ ಜನಮೆಚ್ಚುಗೆಯನ್ನು ಸಂಪಾದಿಸಿದರು.  ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿನ ಅವರ ಹಾಸ್ಯ ಪಾತ್ರವೂ ನೆನಪಲ್ಲಿ ಉಳಿಯುವಂತದ್ದು.

ವಿಮಲ ಕಲಾ ಸಂಘ, ದಿನೇಶ್ ಮಿತ್ರಮಂಡಲಿ ಎಂಬ ನಾಟಕ ಸಂಘಗಳನ್ನು ಕಟ್ಟಿ ರಾಜ್ಯಾದ್ಯಂತ ಸಂಚಾರ ನಡೆಸಿದ  ದಿನೇಶರ ‘ಲಕ್ಷಾಧೀಶ್ವರ’ ಚಿತ್ರ ಅಪಾರ ಜನಪ್ರಿಯತೆ ಗಳಿಸಿತು.

ಚಿತ್ರರಂಗದಲ್ಲಿ ಅಪಾರ ಬೇಡಿಕೆಯಲ್ಲಿದ್ದ ದಿನಗಳಲ್ಲೇ 1990ರ ಫೆಬ್ರವರಿ 20ರಂದು ನಿಧನರಾದ ದಿನೇಶ್ ಸುಮಾರು ಮೂರೂವರೆ ದಶಕಗಳ ಕಾಲ ಕನ್ನಡ ಚಿತ್ರರಸಿಕರ ಹೃದಯದಲ್ಲಿ ಜನಪ್ರಿಯರಾಗಿ ನೆಲೆನಿಂತಿದ್ದರು.

On the birth day of great actor Dinesh 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ