ರಾಜಾರಾಮಣ್ಣ
ರಾಜಾರಾಮಣ್ಣ
ಡಾ. ರಾಜಾರಾಮಣ್ಣ ಆಧುನಿಕ ಭಾರತದ ಅಪ್ರತಿಮ ವಿಜ್ಞಾನಿಗಳಲ್ಲೊಬ್ಬರು. 'ಭಾರತದ ಮೊದಲನೆ ಅಣು ಬಾಂಬ್ ಕಾರ್ಯಕ್ರಮದ ಹರಿಕಾರ'ರಾಗಿದ್ದ ರಾಜಾರಾಮಣ್ಣನವರು 1974ರಲ್ಲಿ 'ರಾಜಾಸ್ಥಾನದ ಪೊಕ್ರಾನ್' ನಲ್ಲಿ ಜರುಗಿದ 'ಭಾರತದ ಪ್ರಥಮ ಪರಮಾಣು ಪರೀಕ್ಷೆ'ಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. 'ಹೋಮಿ ಜಹಂಗೀರ್ ಭಾಬಾ'ರವರ ಆಪ್ತ ಶಿಷ್ಯರಾಗಿದ್ದ ರಾಜರಾಮಣ್ಣನವರದು ಬಹುಮುಖ ಪ್ರತಿಭೆ. ಅವರು 'ಶ್ರೇಷ್ಟ ಪರಮಾಣು ವಿಜ್ಞಾನಿ'ಯಲ್ಲದೆ 'ದಕ್ಷ ಆಡಳಿತಗಾರ', 'ಸಮರ್ಥ ಸಂಘಟಕ', 'ನುರಿತ ಪಿಯಾನೋ ವಾದಕ', 'ವೇದೊಪನಿಷದ್ ಪಾರಂಗತ', 'ಉಪಾಧ್ಯಾಯ', 'ದಾರ್ಶನಿಕ', 'ರಾಜ್ಯಸಭೆ ಸದಸ್ಯ', 'ರಕ್ಷಣಾ ರಾಜ್ಯ ಮಂತ್ರಿ' ಸಹಾ ಆಗಿದ್ದರು.
ರಾಜಾರಾಮಣ್ಣನವರು 1925ರ ಜನವರಿ 28ರಂದು ತುಮಕೂರಿನಲ್ಲಿ ಜನಿಸಿದರು. ಮದ್ರಾಸಿನಲ್ಲಿ ಬಿ.ಎಸ್ಸಿ (ಆನರ್ಸ್) ಪದವಿ ಪಡೆದ ನಂತರ 1945ರಲ್ಲಿ ಉನ್ನತ ವ್ಯಾಸಂಗಕ್ಕಾಗಿ 'ಲಂಡನ್ನಿ'ಗೆ ತೆರಳಿದರು. 'ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಪರಮಾಣು ವಿಜ್ಞಾನ' ಅಭ್ಯಸಿಸಿ 1949ರಲ್ಲಿ ಪಿಎಚ್.ಡಿ. ಪಡೆದರು. ತದನಂತರ ಭಾರತಕ್ಕೆ ಮರಳಿದ ರಾಜಾರಾಮಣ್ಣನವರು ಹೋಮಿ ಜಹಂಗೀರ್ ಭಾಬಾರವರೊಡನೆ ಕೆಲಸ ಮಾಡತೊಡಗಿದರು. ಭಾರತದಲ್ಲಿ ಭೌತವಿಜ್ಞಾನದ ಅಭಿವೃದ್ದಿಗಾಗಿ ಶ್ರಮಿಸಿದ ರಾಜಾರಾಮಣ್ಣನವರು, ‘ನ್ಯೂಕ್ಲಿಯರ್ ಫಿಜನ್’ ವಿಷಯದಲ್ಲಿ ಆಳವಾದ ಸಂಶೋಧನೆ ಕೈಗೊಂಡರು.
ರಾಜಾರಾಮಣ್ಣನವರು 1972-1978 ಹಾಗೂ 1981-83 ಅವಧಿಗಳಲ್ಲಿ 'ಭಾಬಾ ಅಣು ಸಂಶೋಧನಾ ಕೇಂದ್ರ'ದ ನಿರ್ದೇಶಕರಾಗಿದ್ದರು. ರಾಜಾರಾಮಣ್ಣನವರು ರಕ್ಷಣಾ ಮಂತ್ರಾಲಯದ ವೈಜ್ಞಾನಿಕ ಸಲಹೆಗಾರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಢಿ ಸಂಸ್ಥೆಯ (ಡಿ.ಆರ್.ಡಿ.ಒ) ಮಹಾ ನಿರ್ದೇಶಕರಾಗಿ ಹಾಗೂ ರಕ್ಷಣಾ ಸಂಶೋಧನ ಕಾರ್ಯದರ್ಶಿಗಳಾಗಿ ಹೀಗೆ 3 ಹುದ್ದೆಗಳನ್ನು ಏಕಕಾಲದಲ್ಲಿ ನಿರ್ವಹಿಸಿದ್ದರು. 1983ರಿಂದ ಪ್ರಾರಂಭಗೊಂಡಂತೆ ಅಣು ಶಕ್ತಿ ಆಯೋಗ (ಎ.ಇ.ಸಿ) ಹಾಗೂ ಭಾರತ ಸರ್ಕಾರದ ಅಣು ಶಕ್ತಿ ವಿಭಾಗದ(ಡಿ.ಎ.ಇ) ಕಾರ್ಯದರ್ಶಿ ಹುದ್ದೆಯನ್ನು ಸಹ ಅಲಂಕರಿಸಿ 1987ರಲ್ಲಿ ನಿವೃತ್ತರಾದರು.
ತಮ್ಮ ನಿವೃತ್ತಿಯ ನಂತರದಲ್ಲಿ ರಾಜಾರಾಮಣ್ಣನವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಪ್ರೌಢ ಅಧ್ಯಯನ ಸಂಸ್ಥೆಯ (ಎನ್.ಐ.ಎ.ಎಸ್) ಅಧ್ಯಕ್ಷರಾಗಿ 1987ರಿಂದ 1989ರ ವರೆಗೆ ದುಡಿದರು. ಅವರ ಅಂತಿಮ ದಿನಗಳವರೆಗೂ ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ಸಿ) ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು. ಈ ಮಧ್ಯೆ 1990ರಲ್ಲಿ ರಾಜಾರಾಮಣ್ಣನವರು ವಿ.ಪಿ ಸಿಂಗ್ ಅವರ ಸಂಪುಟದಲ್ಲಿ ಕೆಲಕಾಲ ರಕ್ಷಣಾ ರಾಜ್ಯ ಸಚಿವರೂ ಆಗಿದ್ದರು. 1997ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ರಾಜಾರಾಮಣ್ಣನವರು ಭಾಬಾ ಅಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಭಾರತದ ಪ್ರಥಮ ಅಣು ಬಾಂಬ್ ಪರೀಕ್ಷೆಯ ಕೀರ್ತಿಗೆ ಭಾಜನರಾಗಿದ್ದಾರೆ. ‘ಪೊಕ್ರಾನ್-೧’ ಅಥವಾ ‘ಆಪರೇಷನ್ ಸ್ಮೈಲಿಂಗ್ ಬುದ್ಧ’ ಎಂದು ಕರೆಯಲಾದ ಈ ಕಾರ್ಯಾಚರಣೆಯನ್ನು ಗೌಪ್ಯವಾಗಿ ಹಾಗೂ ಯಶಸ್ವಿಯಾಗಿ ನಡೆಸಿದ ಸಾಧನೆ ರಾಜಾರಾಮಣ್ಣನವರ ಶಕ್ತಿಸಾಮಾರ್ಥ್ಯಗಳ ಹಿರಿಮೆಗೆ ಸಾಕ್ಷಿಯೆನಿಸಿದೆ.
ಉತ್ತಮ ಬರಹಗಾರರೂ, ಸಂಗೀತಜ್ಞರೂ ಆಗಿದ್ದ ರಾಜಾರಾಮಣ್ಣನವರ ಬರಹಗಳಲ್ಲಿ ‘Structure of Music in Raaga And Western Systems’ ಹಾಗೂ ‘Years of Pilgrimage, an Autobiography' ಪ್ರಮುಖವಾಗಿವೆ.
‘ಶಾಂತಿ ಸ್ವರೂಪ ಭಟ್ನಾಗರ್ ಸ್ಮಾರಕ ಪ್ರಶಸ್ತಿ’, ‘ಪದ್ಮಶ್ರೀ’, ‘ಪದ್ಮಭೂಷಣ’, ‘ಪದ್ಮವಿಭೂಷಣ’, ‘ಮೇಘನಾದ್ ಸಹಾ ಪದಕ’, ‘ಓಂ ಪ್ರಕಾಶ್ ಭಾಸಿನ್ ಪ್ರಶಸ್ತಿ’ ಮುಂತಾದ ಅನೇಕ ಗೌರವಗಳು ರಾಜಾರಾಮಣ್ಣನವರಿಗೆ ಸಂದವು. ಈ ಮಹಾನ್ ಸಾಧಕರಾದ ರಾಜಾರಾಮಣ್ಣನವರು ಸೆಪ್ಟೆಂಬರ್ 24, 2004ರಂದು ಮುಂಬೈನಲ್ಲಿ ನಿಧನರಾದರು.
ಈ ಮಹಾನ್ ಸಾಧಕ, ವಿಜ್ಞಾನಿ, ವಿದ್ವಾಂಸ ರಾಜಾ ರಾಮಣ್ಣ ಎಂಬ ಮಹಾನ್ ಚೇತನಕ್ಕೆ ನಮ್ಮ ನಮನ.
ಚಿತ್ರಕೃಪೆ: www.kamat.com
On the birth anniversary of our great scientist Dr. Raja Ramanna
ಕಾಮೆಂಟ್‌ಗಳು