ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಡೆ ಮಂಜುನಾಥಪ್ಪ


 ಜಡೆ ಮಂಜುನಾಥಪ್ಪ


ಸುಂದರ ಮರದ ವಿಗ್ರಹಗಳ ಅಲಂಕಾರಿಕ ಕೆತ್ತನೆಗಳನ್ನು ಸ್ಮರಿಸುವಾಗ ನಮ್ಮ ಮನಗಳಲ್ಲಿ ಮೊದಲು ಕಂಗೊಳಿಸುವಂತದ್ದು ಶ್ರೀಕೃಷ್ಣ ಮತ್ತು ಅರ್ಜುನರ ನಡುವೆ ಏರ್ಪಟ್ಟ ಗೀತೋಪದೇಶ. ಇದನ್ನು ಸಾಕಾರಗೊಳಿಸಿದ ಮಹನೀಯರು ಶ್ರೀ ಜಡೆ ಮಂಜುನಾಥಪ್ಪ. 

ಗುಡಿಕಾರ ಕಲೆಯಲ್ಲಿ ಅದ್ವಿತೀಯ ಸಾಧನೆಗೈದ ಮಂಜುನಾಥಪ್ಪನವರು ಸೊರಬ ತಾಲ್ಲೂಕಿನ ಜಡೆಗ್ರಾಮದಲ್ಲಿ 1920ರ ಜನವರಿ 26ರಂದು ಜನಿಸಿದರು.   ತಂದೆ ಪಾಂಡಪ್ಪ, ತಾಯಿ ವರದಮ್ಮ. ಜಡೆ ಗ್ರಾಮದಲ್ಲೇ ಸಾಮಾನ್ಯ ಪ್ರಾರಂಭಿಕ ಶಿಕ್ಷಣವನ್ನು ನಡೆಸಿ ಮಾಧ್ಯಮಿಕ ಶಾಲೆಯ ಓದನ್ನು ಸೊರಬದಲ್ಲಿ ನಡೆಸಿದರು. ಓದಿಗಿಂತ ಕಲಾಭ್ಯಾಸದ ಕಡೆಗೇ ಮನಸ್ಸು ಹೊಂದಿದ್ದ ಅವರು ಶಾಲೆಯಲ್ಲಿದ್ದಾಗಲೇ ಮಣ್ಣಿನಿಂದ ಬೊಂಬೆ ರಚಿಸಿ ವಸ್ತುಪ್ರದರ್ಶನದಲ್ಲಿ ಬೆಳ್ಳಿಯ ಪದಕ ಪಡೆದಿದ್ದರು

ಕಲೆಯ ಬಗ್ಗೆ ಆಸ್ಥೆ ತಳೆದು ಮೈಸೂರಿನ ಜಯಚಾಮರಾಜೇಂದ್ರ ಕಲಾಶಾಲೆಗೆ ಸೇರಿ ಶಿಲ್ಪಿ ಸಿದ್ಧಲಿಂಗಾಚಾರ್ಯರಿಂದ  ಮಾರ್ಗದರ್ಶನ ಪಡೆದರು.  ಮುಂದೆ ಜೀವನೋಪಾಯಕ್ಕೆ ಅವರು ಆಯ್ದುಕೊಂಡದ್ದು ಗಂಧದ ಮರದ ಕೆತ್ತನೆ ಕೆಲಸ. ಇದಕ್ಕಾಗಿ ಶಿವಮೊಗ್ಗೆಯ ದುರ್ಗಿ ಗುಡಿ ಬಡಾವಣೆಯಲ್ಲಿ ಕಾರ್ಯಾಗಾರ ತೆರೆದರು.

ಮಂಜುನಾಥಪ್ಪನವರ ಸಾಧನೆಯ ಮೈಲುಗಲ್ಲುಗಳಲ್ಲಿ  ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯಿಂದ ಪ್ರೇರಿತರಾಗಿ ಗಾಂಧೀಜಿಯವರ ಗಂಧದ ಪ್ರತಿಮೆ ತಯಾರಿಸಿದುದು ಪ್ರಮುಖವಾದುದು. ಇದಕ್ಕಾಗಿ ಅವರಿಗೆ ರಾಷ್ಟ್ರಮಟ್ಟದ ನಾಯಕರಿಂದ ಪ್ರಶಂಸೆ ಬಂತು.  ಹೀಗಾಗಿ ಅವರಿಂದ ಹಲವಾರು ಶ್ರೀಗಂಧದ ಕೃತಿ ನಿರ್ಮಾಣ ಮಾಡಿಸಿ ವಿದೇಶಿ ರಾಯಭಾರಿಗಳಿಗೆ ನೀಡಿದ ಉಡುಗೊರೆ ನೀಡುವಂತಹ ಪರಿಪಾಟ ಮೊದಲ್ಗೊಂಡಿತು.  ಹೀಗಾಗಿ ಅವರ ಕೀರ್ತಿ ವಿದೇಶಗಳಲ್ಲೂ ವ್ಯಾಪಿಸಿತು

ಮುಂದೆ ಮಂಜುಥಪ್ಪನವರು ಸಾಗರ, ಸೊರಬ, ಶಿಕಾರಿಪುರ ತಾಲ್ಲೂಕುಗಳನ್ನೊಳಗೊಂಡ ಕೆತ್ತನೆ ಕೆಲಸದ ಕಮ್ಯೂನಿಟಿ ಪ್ರಾಜೆಕ್ಟ್ ಡಿಸೈನರ್ ಆಗಿ ನೇಮಕಗೊಂಡರು.  ಇದರಿಂದಾಗಿ ಹಲವಾರು ಶ್ರೀಗಂಧದ ಕೃತಿಗಳ  ನಿರ್ಮಾಣಕ್ಕೆ ಮೊದಲ್ಗೊಂಡಿತು.  ಇಂದು ವಿಶ್ವದಾದ್ಯಂತ ಪ್ರಸಿದ್ಧವಾಗಿರುವ ಗೀತೋಪದೇಶದ ಕೃತಿ ರಚನೆ 1949ರಲ್ಲಿ ನೆರವೇರಿತು.  ಇದಕ್ಕಾಗಿ  ಅಂತಾರಾಷ್ಟ್ರೀಯ ಮನ್ನಣೆ ದೊರಕಿತು.  ಈ ಕೃತಿಯು  ವಿಶ್ವಸಂಸ್ಥೆಯ ಸಭಾಭವನವನ್ನೂ ಅಲಂಕರಿಸಿತು.

ಮಂಜುನಾಥಪ್ಪನವರು ಮರದ ವಿಗ್ರಹಗಳೇ ಅಲ್ಲದೆ ಕಲ್ಲಿನ ವಿಗ್ರಹಗಳ ರಚನೆಯಲ್ಲೂ ವಿಕ್ರಮ ಸಾಧಿಸಿದರು. ದೇವಸ್ಥಾನಗಳಿಗಾಗಿ ಚಾಮುಂಡೇಶ್ವರಿ, ಶಕ್ತಿಗಣಪತಿ, ಮುರಳೀಧರ, ಲಕ್ಷ್ಮೀನಾರಾಯಣ, ಕನ್ನಿಕಾ ಪರಮೇಶ್ವರಿ ವಿಗ್ರಹಗಳ ನಿರ್ಮಾಣದ  ದಾಖಲೆ ಅವರದ್ದಾಯಿತು.

ಮಂಜುನಾಥಪ್ಪನವರಿಗೆ ಸಂದ ಪದಕ ಗೌರವಗಳು ಹಲವಾರು, ಅಖಿಲ ಭಾರತ ಲಲಿತ ಕಲಾ ಅಕಾಡಮಿಯಿಂದ ಚಿನ್ನದ ಪದಕ, ಧರ್ಮಸ್ಥಳದ ವಸ್ತು ಪ್ರದರ್ಶನದಿಂದ ಚಿನ್ನದ ಪದಕ, ರಾಮ್ಸೆ ಕಲಾ ಪ್ರತಿಷ್ಠಾನದಿಂದ ಶಿಲ್ಪಶ್ರೀ, ರಾಜ್ಯ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಮುಂತಾದುವು ಇವುಗಳಲ್ಲಿ ಪ್ರಮುಖವಾದವು.

On the birth anniversary of great artiste Jade Manjunathappa


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ