ಹೊನ್ನಪ್ಪ ಭಾಗವತರ್
ಹೊನ್ನಪ್ಪ ಭಾಗವತರ್
ಹೊನ್ನಪ್ಪ ಭಾಗವತರ್ ಅಂದರೆ ಅದೊಂದು ಸಾಂಸ್ಕೃತಿಕ ಶ್ರೇಷ್ಠತೆಯ ಶಿಖರ. ಸಂಗೀತ, ರಂಗಭೂಮಿ, ಸಿನಿಮಾ ಹೀಗೆ ಎಲ್ಲೆಡೆ ನಟನೆ ಮತ್ತು ಗಾಯನದಲ್ಲಿ ಅವರು ವ್ಯಾಪಿಸಿದ್ದ ರೀತಿ ಹಾಗೂ ಅದಕ್ಕೆ ಮೆರುಗು ನೀಡುವಂತೆ ಹೊಂದಿದ್ದ ಸುರದ್ರೂಪ ಇವೆಲ್ಲವೂ ಅಪ್ಯಾಯಮಾನತೆ ಹುಟ್ಟಿಸುವಂತದ್ದು. ಮಹಾಕವಿ ಕಾಳಿದಾಸ ಚಿತ್ರವನ್ನು ನೋಡುವಾಗ ‘ಚೆಲುವಯ್ ಚೆಲ್ವೋ ತಾನಿ ತಂದನಾ...’ ಗೀತೆಯಲ್ಲಿ ಅವರು ತೋರುವ ಮುಗ್ದತೆ, ಆಕರ್ಷಕ ನಿಲುವು, ಜನಪದೀಯ ಶೈಲಿಯ ಗಾಯನ ಒಂದೆಡೆಯಾದರೆ, ಮುಂದೆ ಪ್ರಬುದ್ಧ ಕಾಳಿದಾಸನಾಗಿ ಅವರು ಕಾಣುವ ರೀತಿ ಸಹಾ ಮನಸ್ಸಿನಲ್ಲಿ ನಿಲ್ಲುವಂತದ್ದು.
ಹೊನ್ನಪ್ಪ ಭಾಗವತರ್ 1915ರ ಜನವರಿ 14ರಂದು ನೆಲಮಂಗಲ ತಾಲ್ಲೂಕಿನ ಚೌಡಸಂದ್ರದಲ್ಲಿ ಜನಿಸಿದರು. ತಂದೆ ಚಿಕ್ಕಲಿಂಗಪ್ಪ ಮತ್ತು ತಾಯಿ ಕಲ್ಲಮ್ಮ. ಐದು ವರ್ಷದ ಬಾಲಕನಿದ್ದಾಗಲೇ ತಂದೆಯನ್ನು ಕಳೆದುಕೊಂಡ ಹೊನ್ನಪ್ಪನವರ ಬಾಲ್ಯ ಅವರ ತಾಯಿಯ ತವರಾದ ಮೋಟಗಾನಹಳ್ಳಿಯಲ್ಲಿ ಸಾಗಿತು. ಹಳ್ಳಿಯಲ್ಲಿ ಕಂಡ ನಾಟಕ, ಭಜನೆ, ಉತ್ಸವ, ಹಬ್ಬ ಹರಿದಿನಗಳು ಮುಂತಾದವು ಅವರ ಅಂತರಂಗವನ್ನು ಆಪ್ತವಾಗಿ ಮೀಟಿದ್ದವು. ಕಡು ಬಡತನದ ಬವಣೆಯಲ್ಲಿ ಅವರಿಗೆ ಶಿಕ್ಷಣಕ್ಕೆ ಅವಕಾಶ ದೊರಕಲಿಲ್ಲ. ಆದರೆ ಮಹತ್ವದ ಕಲಾವಿದರಾಗಿ ಹೊರಹೊಮ್ಮಿದ ಹೊನ್ನಪ್ಪ ಭಾಗವತರು ಮತ್ತು ಅಂದಿನ ಮಹತ್ವದ ಕಲಾವಿದರ ಬೆಳವಣಿಗೆಯನ್ನು ಗಮನಿಸುವಾಗ ಅಂದಿನ ಗ್ರಾಮಾಂತರ ಪ್ರದೇಶಗಳಲ್ಲಿದ್ದ ಸಂಗೀತ, ಭಜನೆ, ಬಯಲು ಸೀಮೆಯ ನಾಟಕಗಳು, ಹಬ್ಬ ಹರಿದಿನಗಳ ಆಚರಣೆ ಮುಂತಾದವು ಹೇಗೆ ಮನಸ್ಸುಗಳನ್ನು ರೂಪಿಸಿ, ಪೋಷಿಸಬಲ್ಲಷ್ಟು ಶಕ್ತಿಯುತವಾಗಿದ್ದವು ಎಂಬುದರ ಸೂಕ್ಷ್ಮ ಕಲ್ಪನೆ ನಮ್ಮ ಮನಸ್ಸುಗಳನ್ನು ತಟ್ಟುತ್ತದೆ.
1928ರಲ್ಲಿ ಬೆಂಗಳೂರಿಗೆ ಬಂದ ಹೊನ್ನಪ್ಪನವರು ಅಣ್ಣನೊಡನೆ ಮಗ್ಗದ ಕೆಲಸದಲ್ಲಿ ತೊಡಗಿಕೊಂಡರು. ಒಮ್ಮೆ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸಂಬಂಧ ಮೂರ್ತಿ ಭಾಗವತರು ಹೊನ್ನಪ್ಪನವರ ಕಂಠಸಿರಿ ಕೇಳಿ ಆಕರ್ಷಿತರಾದರು. ಅವರಿಗೆ ಸಂಗೀತ ಕಛೇರಿಯಲ್ಲಿ ಜೊತೆ ನೀಡುವ ಅವಕಾಶ ಹೊನ್ನಪ್ಪನವರಿಗೆ ದೊರಕಿತು. ಕ್ರಮೇಣ ಸ್ವತಂತ್ರ ಕಛೇರಿಯ ಅವಕಾಶಗಳೂ ದೊರಕಲು ಆರಂಭಿಸಿದವು.
1937ರಲ್ಲಿ ಸೇಲಂನಲ್ಲಿ ತ್ಯಾಗರಾಜರ ಆರಾಧನೆ ಜರುಗಿತು. ಅಲ್ಲಿ ಹೊನ್ನಪ್ಪನವರು ಸಂಗೀತ ಕಛೇರಿ ನೀಡಿದರು. ಇವರಿಗೆ ಪಾಲ್ಗಟ್ ಮಣಿ ಅಯ್ಯರ್ ಅವರು ಮೃದಂಗವನ್ನು ನುಡಿಸಿದ್ದರು. ಅವರು ಹೊನ್ನಪ್ಪನವರ ಹಾಡುಗಾರಿಕೆಯಿಂದ ಆಕರ್ಷಿತರಾಗಿದ್ದರು. ಮಣಿಯವರಿಗೆ ಚಿತ್ರರಂಗದ ಸಂಪರ್ಕ ಕೂಡ ಇತ್ತು. ಅವರ ಆಸಕ್ತಿಯ ಫಲವಾಗಿ ಮದರಾಸಿನ ಶಂಕರ್ ಫಿಲಂಸ್ ಅವರ ‘ಅಂಬಿಕಾ ಪತಿ’ ಚಿತ್ರದಲ್ಲಿ ಅವಕಾಶ ದೊರಕಿತು. ಇದರಲ್ಲಿ ತ್ಯಾಗರಾಜ ಭಾಗವತರ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಹೊನ್ನಪ್ಪನವರದು ಅವರಿಗೆ ಸರಿಸಮನಾದ ಪಾತ್ರ.
1944ರಲ್ಲಿ ಹೊನ್ನಪ್ಪನವರ ಜೀವನದಲ್ಲಿ ಇನ್ನೊಂದು ತಿರುವು ಲಭಿಸಿತು. ತ್ಯಾಗರಾಜ ಭಾಗವತರ್ ಅವರು ಲಕ್ಷ್ಮಿಕಾಂತನ್ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಮಾನವಾಗಿ ಜೈಲಿಗೆ ಕಳುಹಿಸಲ್ಪಟ್ಟರು. ಆಗ ಅವರು ಬಹು ಬೇಡಿಕೆಯ ಕಲಾವಿದರಾಗಿದ್ದರು. ಜೈಲಿಗೆ ತೆರಳುವಾಗ ಅವರ ಕೈಯಲ್ಲಿ 12 ಚಿತ್ರಗಳಿದ್ದವು. ತಮಿಳಿನಲ್ಲಿ ಅವರಂತೆ ಗಾಯನ ಮತ್ತು ಅಭಿನಯ ಎರಡನ್ನೂ ಬಲ್ಲ ಬೇರೆ ಕಲಾವಿದರಿರಲಿಲ್ಲ. ಹೀಗಾಗಿ ಆ ಎಲ್ಲಾ ಅವಕಾಶಗಳೂ ಹೊನ್ನಪ್ಪನವರಿಗೆ ದೊರೆತವು. ಹೀಗೆ ಆ ಚಿತ್ರಗಳನ್ನು ಒಪ್ಪಿಕೊಳ್ಳುವ ಮುಂಚೆ ತ್ಯಾಗರಾಜ ಭಾಗವತರ್ ಅವರ ಬಳಿಗೆ ನಮ್ರರಾಗಿ ಹೋಗಿ ನಾನು ಈ ಚಿತ್ರಗಳನ್ನು ಒಪ್ಪಿಕೊಳ್ಳಬಹುದೆ ಎಂದು ಕೇಳಿ, ಅವರ ಆಶೀರ್ವಾದ ಪಡೆದ ನಂತರ ಅವುಗಳಲ್ಲಿ ನಟಿಸಿದರು. ಹೀಗೆ ಅವರು ಹೊನ್ನಪ್ಪ ಭಾಗವತರ್ ಎಂದು ಪ್ರಸಿದ್ಧಿ ಪಡೆದರು. ಈ ಹೆಸರೇ ಮುಂದೆ ಖಾಯಂ ಆಗಿ ಬಿಟ್ಟಿತು.
ತಮಿಳಿನಲ್ಲಿ ಅಪಾರವಾದ ಬೇಡಿಕೆ ಇದ್ದಾಗಲೂ ಹೊನ್ನಪ್ಪನವರು ಕನ್ನಡದ ಮೇಲಿನ ಪ್ರೀತಿಯಿಂದ ಗುಬ್ಬಿ ವೀರಣ್ಣನವರ ‘ಸುಭದ್ರಾ’ ಚಿತ್ರದಲ್ಲಿ ಅರ್ಜುನನ ಪಾತ್ರ ವಹಿಸಿದರು. ಜಯಮ್ಮನವರು ಸುಭದ್ರೆಯ ಪಾತ್ರದಲ್ಲಿದ್ದರು. ಈ ಚಿತ್ರದಲ್ಲಿ ಪದ್ಮನಾಭ ಶಾಸ್ತ್ರಿಗಳ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ 22 ಗೀತೆಗಳು ಒಂದಕ್ಕಿಂತ ಒಂದು ಸೊಗಸಾಗಿದ್ದವು. ಕನ್ನಡ ಚಿತ್ರರಂಗಕ್ಕೆ ಈ ಚಿತ್ರ ಚೇತರಿಕೆ ನೀಡಿತು. ಇದೇ ಚಿತ್ರದ ತಮಿಳು ಅವತರಿಣಿಕೆಯಲ್ಲೂ ಹೊನ್ನಪ್ಪ ಭಾಗವತರ್ ಅವರು ಅಭಿನಯಿಸಿದಾಗ ಆ ಚಿತ್ರದಲ್ಲಿ ಕೃಷ್ಣನ ಪಾತ್ರವನ್ನು ಪ್ರಖ್ಯಾತ ಸಂಗೀತ ಕಲಾವಿದ ಟಿ. ಆರ್. ಮಹಾಲಿಂಗಂ ನಿರ್ವಹಿಸಿದ್ದರು. ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಎನ್ನಿಸಿಕೊಂಡಿದ್ದರೂ ಹೊನ್ನಪ್ಪನವರು ಕನ್ನಡ ಚಿತ್ರರಂಗದ ಬಗ್ಗೆ ಪ್ರೀತಿ ಹೊಂದಿದ್ದರು. ಬೊಮ್ಮನ್ ಡಿ. ವಿರಾನಿಯವರ ಸಹಯೋಗದಲ್ಲಿ ‘ಭಕ್ತ ಕುಂಬಾರ’ ಚಿತ್ರವನ್ನು ನಿರ್ಮಿಸಿದರು. ಭಕ್ತಿಭಾವವನ್ನು ಸಂಯಮದಿಂದ ಮೂಡಿಸಿದ ಈ ಚಿತ್ರ ಸಂಪೂರ್ಣ ಕನ್ನಡ ವಾದ್ಯವೃಂದವನ್ನು ಬಳಸಿದ ಕಾರಣದಿಂದಲೂ ಮುಖ್ಯವಾದದ್ದಾಗಿತ್ತು.
ಹೊನ್ನಪ್ಪ ಭಾಗವತರ್ ಅವರು ಸ್ವಯಂ ನಿರ್ಮಿಸಿದ ಬಹಳ ಮುಖ್ಯವಾದ ಚಿತ್ರ ‘ಮಹಾಕವಿ ಕಾಳಿದಾಸ’. ಚಿತ್ರದ ಸಂಗೀತದ ಬಗ್ಗೆ ಹೊನ್ನಪ್ಪನವರಿಗೆ ಕೆಲವು ಖಚಿತ ನಿಲುವುಗಳಿದ್ದಿದ್ದರಿಂದ ತಾವೇ ಸಂಗೀತ ನೀಡಿದರು. ಈ ಚಿತ್ರದಲ್ಲಿ ಅವರು ಕರ್ನಾಟಕೀ ಸಂಗೀತದ ನವರಸ ರಂಜಿನಿ, ಶುದ್ಧ ಧನ್ಯಾಸಿಯಂತಹ ಅಪರೂಪದ ರಾಗಗಳನ್ನು ಬಳಸಿರುವುದಲ್ಲದೆ ವೀಣೆ, ಕೊಳಲು, ಮೃದಂಗ ಮೊದಲಾದ ಸಾಂಪ್ರದಾಯಿಕ ವಾದನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಈ ಚಿತ್ರದಲ್ಲಿನ ಅರಮನೆ, ದರ್ಬಾರ್, ಅಂತಃಪುರ ಮೊದಲಾದ ಸನ್ನಿವೇಶಗಳಿಗೆ ಚಿತ್ರೀಕರಣ ನಡೆಯುತ್ತಿದ್ದ ವಾಹಿನಿ ಸ್ಟುಡಿಯೊದ ಬಿ. ನಾಗೀರೆಡ್ಡಿಯವರು ತಮ್ಮ ‘ಚಂದ್ರಹಾಸ’ ಚಿತ್ರದ ಸೆಟ್ ಬಿಟ್ಟು ಕೊಟ್ಟಿದ್ದರು. ಇದೆಲ್ಲವೂ ಸೇರಿ ‘ಮಹಾಕವಿ ಕಾಳಿದಾಸ’ ವಸ್ತು ಮತ್ತು ವಿನ್ಯಾಸಗಳೆರಡಲ್ಲಿಯೂ ಮೈಲುಗಲ್ಲು ಎನ್ನಿಸಿಕೊಂಡಿತು.
ಹೊನ್ನಪ್ಪ ಭಾಗವತರ್ ಅಭಿನಯಿಸಿದ ಚಿತ್ರಗಳಲ್ಲಿ ‘ಜಗಜ್ಯೋತಿ ಬಸವೇಶ್ವರ’ ಮುಖ್ಯವಾದದ್ದು. ಈ ಚಿತ್ರದಲ್ಲಿ ಅವರು ಬಸವೇಶ್ವರರ ಪಾತ್ರವನ್ನು ವಹಿಸಿದ್ದರು. ಬಿಜ್ಜಳನಾಗಿದ್ದವರು ರಾಜಕುಮಾರ್. ಸರಳ ವ್ಯಕ್ತಿಚಿತ್ರಕ್ಕೆ ಮಹತ್ವವನ್ನು ನೀಡದೆ ಕಲ್ಯಾಣ ಕ್ರಾಂತಿಯ ಹಲವು ನೆಲೆಗಳನ್ನು ಹಿಡಿದು ಸಾರ್ವಕಾಲಿಕ ನೆಲೆಯಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಸಿಂಗ್ ಠಾಕೂರರು ನಿರ್ದೇಶಿಸಿದ ಇನ್ನೊಂದು ಚಾರಿತ್ರಿಕ ನೆಲೆಯ ಚಿತ್ರ ‘ಕೈವಾರ ಮಹಾತ್ಮೆ’ಯಲ್ಲಿಯೂ ಹೊನ್ನಪ್ಪ ಭಾಗವತರ್ ಮುಖ್ಯಪಾತ್ರವನ್ನು ನಿರ್ವಹಿಸಿದರು. ಗುಬ್ಬಿ ವೀರಣ್ಣನವರ ‘ಗುಣಸಾಗರಿ’ ಹೊನ್ನಪ್ಪ ಭಾಗವತರ ಹಲವು ಪ್ರತಿಭೆಗಳನ್ನು ವೈವಿಧ್ಯವಾಗಿ ಮೂಡಿಸಿದ ಚಿತ್ರ. ‘ಪಂಚರತ್ನ’ ಚಿತ್ರ ಅವರು ನಾಯಕನಾಗಿ ಅಭಿನಯಿಸಿದ ಇನ್ನೊಂದು ಮುಖ್ಯವಾದ ಚಿತ್ರ.
ಹೊನ್ನಪ್ಪ ಭಾಗವತರ್ ಅವರ ಪ್ರತಿಭೆ ವೈವಿಧ್ಯಮುಖಿಯಾದದ್ದು. ಸಿನಿಮಾ ಮತ್ತು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಅವರು ಗಾಯಕರಾಗಿದ್ದರು. ವಾಗ್ಗೇಯಕಾರರಾಗಿ ರಾಮದಾಸ ಎಂಬ ಅಂಕಿತದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದ್ದರು. ಈ ಕೃತಿಗಳೆಲ್ಲ ‘ಓಂಕಾರ ನಾದ ಸುಧಾ’ ಎಂಬ ಕೃತಿಯಲ್ಲಿ ಪ್ರಕಟಗೊಂಡಿದ್ದವು. ನಟನೆಯಲ್ಲಿ ಬಹಳ ಜನಪ್ರಿಯರಾಗಿದ್ದರೂ ಸಹಾ ಹೊನ್ನಪ್ಪ ಭಾಗವತರು ಸಂಗೀತ ಕ್ಷೇತ್ರವನ್ನು ತಮ್ಮ ಪ್ರಮುಖ ಆಸಕ್ತಿಯ ಕ್ಷೇತ್ರ ಎಂದು ಆಪ್ತವಾಗಿ ನುಡಿಯುತ್ತಿದ್ದರು. ಹರಿಕಥಾ ವಿದ್ವಾಂಸರಾಗಿ ಸಹಾ ಅವರು ಹೆಸರಾಗಿದ್ದರು.
ಹೊನ್ನಪ್ಪ ಭಾಗವತರ್ ಅವರು ‘ಉಮಾ ಮಹೇಶ್ವರಿ ಕಂಪನಿ’ಯನ್ನು ಸ್ಥಾಪಿಸಿ ಅನೇಕ ನಾಟಕಗಳನ್ನು ರೂಪಿಸಿದರು. ಶ್ರೀನಿವಾಸ ಕಲ್ಯಾಣ, ಜಗಜ್ಯೋತಿ ಬಸವೇಶ್ವರ ಮುಂತಾದ ಮಹತ್ವದ ನಾಟಕಗಳನ್ನು ನಿರ್ಮಿಸಿದರು. ರಂಗಭೂಮಿ ಮತ್ತು ಸಿನಿಮಾದಲ್ಲಿನ ಎಲ್ಲ ವಿಭಾಗಗಳಲ್ಲಿಯೂ ಅವರಿಗೆ ಅಸಾಧಾರಣ ಪರಿಜ್ಞಾನವಿತ್ತು.
ಬಿ. ಸರೋಜಾದೇವಿ, ಕು.ರಾ. ಸೀತಾರಾಮಶಾಸ್ತ್ರಿ ಅಂತಹವರನ್ನೂ ಒಳಗೊಂಡಂತೆ ಅನೇಕ ಮಹಾನ್ ಪ್ರತಿಭೆಗಳನ್ನು ರೂಪಿಸುವಲ್ಲಿ ಹೊನ್ನಪ್ಪ ಭಾಗವತರ್ ಅವರ ಪಾತ್ರ ಹಿರಿದು. ವರನಟ ರಾಜಕುಮಾರ್ ಅವರ ಅಭಿಪ್ರಾಯದಲ್ಲಿ ‘ಚಿತ್ರರಂಗದಲ್ಲಿ, ಹೊನ್ನಪ್ಪ ಭಾಗವತರು ಸೂರ‍್ಯನಂತೆ. ನಾವು ಏನನ್ನು ಗುರುತಿಸಿದರೂ, ಅವರ ವ್ಯಕ್ತಿತ್ವದ ಒಂದು ಮಗ್ಗುಲನ್ನು ಮಾತ್ರ ನೋಡುತ್ತಿರುತ್ತೇವೆ’. ಅಂತಹ ಅಪೂರ್ವ ಪ್ರತಿಭೆ ಭಾಗವತರದ್ದು.
ಸಿನಿಮಾ ಮತ್ತು ರಂಗಭೂಮಿಗಳಲ್ಲಿ ಹಲವು ಬೀಳುಗಳನ್ನೂ ಅನುಭವಿಸಬೇಕಾಗಿ ಬಂದ ಹೊನ್ನಪ್ಪ ಭಾಗವತರ್ ಅವರು ಕೆಲವು ವರ್ಷಗಳ ನಂತರದಲ್ಲಿ ಎಂ.ಕೆ. ಇಂದಿರಾ ಅವರ ಕಾದಂಬರಿಯನ್ನು ಆಧರಿಸಿದ ‘ಸದಾನಂದ’ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದರು.
ಬದುಕಿದ್ದಾಗಲೇ ದಂತಕತೆ ಎನ್ನಿಸಿಕೊಂಡಿದ್ದ ಹೊನ್ನಪ್ಪ ಭಾಗವತರ್ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡಮಿ ಫೆಲೋಶಿಪ್ ದೊರಕಿತ್ತು. ಈ ಗೌರವವನ್ನು ಪಡೆದ ಮೊದಲ ಕನ್ನಡಿಗರೆಂಬ ಎಂಬ ಹೆಗ್ಗಳಿಕೆ ಅವರದು. 1959ರಲ್ಲಿ ಕನ್ನಡ ಚಲನಚಿತ್ರ ಅಭಿಮಾನಿಗಳಿಂದ ‘ಉತ್ತಮ ನಟ’ ಎಂಬ ಗೌರವವನ್ನು ಪಡೆದಿದ್ದ ಅವರ ‘ಮಹಾಕವಿ ಕಾಳಿದಾಸ’ ಮತ್ತು ‘ಜಗಜ್ಯೋತಿ ಬಸವೇಶ್ವರ’ ಚಿತ್ರಗಳು ರಾಷ್ಟ್ರಪ್ರಶಸ್ತಿ ಗಳಿಸಿದ್ದವು.
ಮಹೋನ್ನತ ಸಾಧನೆಗಳ ಪರ್ವತವಾಗಿದ್ದರೂ ಜನಸಮುದಾಯದಲ್ಲಿ ಸಾಧಾರಣರಂತೆ ತಮ್ಮನ್ನು ಕಾಣಿಸಿಕೊಳ್ಳುತ್ತಿದ್ದ ಹೊನ್ನಪ್ಪ ಭಾಗವತರ ಬದುಕು ಮತ್ತು ಸಾಧನೆಯನ್ನು ಶ್ರೀಧರಮೂರ್ತಿ ಅವರು ‘ಹೊನ್ನಪರ್ವತ’ ಎಂಬ ಕೃತಿಯಲ್ಲಿ ನಿರೂಪಿಸಿದ್ದಾರೆ.
1992ರ ಅಕ್ಟೋಬರ್ 2ರಂದು ಹೊನ್ನಪ್ಪ ಭಾಗವತರ್ ಅವರು ಈ ಲೋಕವನ್ನು ಅಗಲಿದರು. ಕನ್ನಡ ನಾಡು ಈ ಮಹಾನ್ ಕಲಾವಿದನ ಜನ್ಮಶತಮಾನೋತ್ಸವವನ್ನು 2015ರಲ್ಲಿ ಆಚರಿಸಿ ಅವರ ಕೊಡುಗೆಗಳನ್ನು ಸ್ಮರಿಸಿತು.
On the birth anniversary of great musician, playwright, actor, Director, producer and scholar Honnappa Bhagavatar

ಕಾಮೆಂಟ್‌ಗಳು