ಕೈಫಿ ಅಜ್ಮಿ
ಕೈಫಿ ಅಜ್ಮಿ
ಕೈಫಿ ಅಜ್ಮಿ ಎಂಬ ಕಾವ್ಯನಾಮದಿಂದ ಖ್ಯಾತರಾದ ಅತ್ತಾರ್ ಹುಸೇನ್ ರಿಜ಼್ವಿ, ಭಾರತದ ಶ್ರೇಷ್ಠ ಉರ್ದು ಕವಿಗಳಲ್ಲಿ ಒಬ್ಬರು.
ಕೈಫಿ ಅಜ್ಮಿ ಉತ್ತರ ಪ್ರದೇಶದ ಆಜ಼ಮ್ಗಡ ಜಿಲ್ಲೆಯ ಮಿಜ಼್ವಾನ್ ಗ್ರಾಮದಲ್ಲಿ 1919ರ ಜನವರಿ 14ರಂದು ಜನಿಸಿದರು. ಅವರ ಕುಟುಂಬವು ಮೊದಲಿನಿಂದಲೂ ಕಲಾವಿದರ ಕುಟುಂಬವಾಗಿತ್ತು. ಅವರಿಗೆ ಮೂವರು ಸಹೋದರರಿದ್ದರು. ಅವರು ಕೂಡ ಶಾಯರಿ ಪ್ರಾಜ್ಞರಾಗಿದ್ದರು.
ಅಜ್ಮಿ ಅವರು ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ತಮ್ಮ ಮೊದಲ ಗಜಲ್ ಆದ 'ಬಹ್ರೈಚ್ ಇತ್ನಾ ತೋ ಜಿಂದಗಿ ಮೇ ಕಿಸಿ ಕಿ ಖಲಾಲ್ ಪಡೆ' ರಚಿಸಿದರು. ಮುಷೈರಾಕ್ಕೆ ಆಹ್ವಾನಿತರಾಗಿ ತಮ್ಮ ಗಜಲ್ ಪಠಿಸಿದಾಗ, ಬಹುತೇಕ ಜನ, ಈ ಹುಡುಗ ತನ್ನ ಹಿರಿಯ ಸಹೋದರನ ಗಜಲ್ ಪಠಿಸಿದ್ದಾನೆಂದು ಭಾವಿಸಿದ್ದರು. ಅವರ ಹಿರಿಯ ಸಹೋದರ ಅದನ್ನು ನಿರಾಕರಿಸಿದಾಗ, ಅವರ ತಂದೆ ಮತ್ತು ಕೆಲವು ಹಿರಿಯರು ಅವರ ಕಾವ್ಯಾತ್ಮಕ ಪ್ರತಿಭೆಯನ್ನು ಪರೀಕ್ಷಿಸಲು ಅವರಿಗೆ ಕೆಲವು ಸಾಲುಗಳನ್ನು ನೀಡಿ, ತಾವು ಹೇಳಿದ ಪ್ರಾಸದಲ್ಲಿ ಗಜಲ್ ಬರೆಯಲು ಹೇಳಿದರು. ಈ ಸವಾಲನ್ನು ಸ್ವೀಕರಿಸಿದ ಅಜ್ಮಿ ಗಜಲ್ ಅನ್ನು ಪೂರ್ಣಗೊಳಿಸಿದರು. ಈ ಗಜಲ್ ಅಜ್ಮಿ ಅವರಿಗೆ ಹೆಸರನ್ನು ತಂದುಕೊಟ್ಟಿತು. ಈ ಗಜಲ್ ಅನ್ನು ಗಾಯಕಿ ಬೇಗಂ ಅಖ್ತರ್ ಹಾಡಿದ್ದರಿಂದಾಗಿ ಅದು ಸಾಕಷ್ಟು ಜನಮನ್ನಣೆ ಗಳಿಸಿತು. ಕೈಫಿ ಅಜ್ಮಿ ಅವರು ಪಿರ್ಜಾಡಾ ಕಾಸಿಮ್, ಜಾನ್ ಎಲಿಯಾ ಮುಂತಾದ ಪ್ರಸಿದ್ಧರೊಂದಿಗೆ ಇಪ್ಪತ್ತನೇ ಶತಮಾನದ ಅನೇಕ ಸ್ಮರಣೀಯ ಮುಷೈರಾ ಕೂಟಗಳಲ್ಲಿ ಭಾಗವಹಿಸಿದ್ದರು.
ಆಜ಼್ಮಿಯವರು ರಂಗಭೂಮಿ ಹಾಗು ಚಲನಚಿತ್ರ ಕಲಾವಿದೆಯಯಾದ ಶೌಕತ್ ಆಜ಼್ಮಿಯವರನ್ನು ವಿವಾಹವಾದರು. ಇವರ ಪುತ್ರಿ ಶಬಾನ ಆಜ಼್ಮಿ, ಹಿಂದಿ ಚಿತ್ರರಂಗದ ಪ್ರಖ್ಯಾತ ನಟಿ ಹಾಗು ಇವರ ಪುತ್ರ ಬಾಬಾ ಆಜ಼್ಮಿ, ಚಲನಚಿತ್ರ ಛಾಯಾಗ್ರಾಹಕರು. ಆಜ಼್ಮಿಯವರ ಸೊಸೆ, ತಾನ್ವಿ ಆಜ಼್ಮಿ ಕಿರುತೆರೆ ನಟಿ.
ಕೈಫಿ ಅಜ್ಮಿ ಅವರು ಚಲನಚಿತ್ರರಂಗದಲ್ಲಿ ಸಂಭಾಷಣೆ, ಗೀತರಚನೆ, ನಟನೆಗಳಲ್ಲಿ ಹೆಸರಾದರು. ಗೀತಸಾಹಿತ್ಯದಲ್ಲಂತೂ ಹೊಸ ಅಲೆಯನ್ನೇ ತಂದರು. ಚೇತನ್ ಆನಂದ್ ಅವರ 'ಹೀರ್ ರಾಂಜಾಹ್' ಚಿತ್ರದಲ್ಲಿ ಅವರ ಇಡೀ ಚಿತ್ರದ ಸಂಭಾಷಣೆಯೇ ಕಾವ್ಯದಂತಿದೆ. ಎಂ. ಎಸ್. ಸತ್ಯು ಅವರ 'ಗರಂ ಹವಾ'ದಲ್ಲಿನ ಗೀತರಚನೆ ಪ್ರಸಿದ್ಧವಾಗಿದೆ. ಶ್ಯಾಮ್ ಬೆನಗಲ್ ಅವರ 'ಮಂಥನ್', ಎಂ. ಎಸ್. ಸತ್ಯು ಅವರ 'ಕನ್ನೇಶ್ವರ ರಾಮ' ಚಿತ್ರಗಳಿಗೆ ಸಂಭಾಷಣೆ ಬರೆದರು. ಗುರುದತ್ ಅವರ 'ಕಾಗಜ್ ಕೆ ಫೂಲ್', ಚೇತನ್ ಆನಂದ ಅವರ 'ಹಕೀಕತ್' ಚಿತ್ರಗಳಲ್ಲಿನ ಗೀತೆಗಳಂತೂ ಅವಿಸ್ಮರಣೀಯ. ಕೊಹ್ರಾ, ಸಾತ್ ಹಿಂದೂಸ್ಥಾನಿ, ಶೋಲಾ ಔರ್ ಶಬಮನಮ್, ಪರ್ವಾನ, ಬಾವರ್ಚಿ, ಪಾಕೀಜಾ, ಅರ್ಥ್, ರಜಿಯಾ ಸುಲ್ತಾನ್ ಮುಂತಾದವು ಅವರ ಸಾಹಿತ್ಯದ ಇನ್ನಿತರ ಮಹತ್ವದ ಚಿತ್ರಗಳು.
ಕೈಫಿ ಅಜ್ಮಿ ಅವರಿಗೆ ಸಾತ್ ಹಿಂದೂಸ್ಥಾನಿ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ, ದೇಶದ 'ಪದ್ಮಶ್ರೀ', ಆವಾರ ಸಜ್ದೆ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಮಹಾರಾಷ್ಟ್ರ ಸರ್ಕಾರದ ಜ್ಞಾನೇಶ್ವರ ಪುರಸ್ಕಾರ, ಪ್ರತಿಷ್ಟಿತ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಕೈಫಿ ಅಜ್ಮಿ ಅವರ ಕವಿತೆಗಳ ಅನುವಾದವನ್ನು ಕವಯತ್ರಿ ವಿಭಾ ಅವರು 'ಬೆತ್ತಲೆ ರಸ್ತೆಯ ಕನಸಿನ ದೀಪ'ಎಂಬ ಕನ್ನಡ ಕೃತಿಯಾಗಿಸಿದ್ದಾರೆ. ಅದರಲ್ಲಿನ ಎರಡು ಕವಿತೆಗಳು ಇಲ್ಲಿವೆ:
೧
ನಾನು ಬಯಸುವ ಆ ಜಗತ್ತು ಸಿಕ್ಕುತ್ತಿಲ್ಲ
ಹೊಸ ಭೂಮಿ, ಹೊಸ ಆಗಸ ಸಿಗುತ್ತಿಲ್ಲ
ಹೊಸ ಭೂಮಿ, ಹೊಸ ಆಗಸ ದೊರೆತರೂ
ಹೊಸ ‘ಮನುಷ್ಯ’ರ ಗುರುತು ಸಿಗುತ್ತಿಲ್ಲ
ನನ್ನ ಕೊಲೆಗೈದ ಖಡ್ಗ ಸಿಕ್ಕರೂ ಕೂಡ
ಅಲ್ಲಿ ಕೊಲೆಗಾರನ ಕೈಯ ಗುರುತು ಸಿಗುತ್ತಿಲ್ಲ
ಅದು ನನ್ನೂರು, ಅವು ನನ್ನೂರಿನ ಒಲೆಗಳು
ಅವುಗಳಲ್ಲಿ ಬೆಂಕಿಯಷ್ಟೇ ಅಲ್ಲ, ಹೊಗೆ ಕೂಡ ಸಿಗುತ್ತಿಲ್ಲ
ದೇವರು ಸಿಗುತ್ತಿಲ್ಲವೆಂಬುದೇನು ಮಹಾ ದುರಂತವಲ್ಲ
ನನಗೆ ನನ್ನದೇ ಹೆಜ್ಜೆಗಳ ಗುರುತು ಸಿಗುತ್ತಿಲ್ಲ
ಅನಂತ ಕಾಲದಿಂದ ಜನಜಂಗುಳಿಯಲ್ಲಿ ನಿಂತಿದ್ದೇನೆ
ಎಲ್ಲೂ ನಿನ್ನ ಚಹರೆಯ ಗುರುತು ಸಿಗುತ್ತಿಲ್ಲ
೨
ಒಮ್ಮೆ ಬಿಸಿಲಿನ ಹಾಗೆ ಮಗದೊಮ್ಮೆ ನೆರಳಿನ ಹಾಗೆ
ಕಾಣುವುದು ನನ್ನೂರು ನನಗೆ ಹಲವಾರು ಬಗೆ
ಈಗಲೂ ಯಾರಾದರೂ ನನ್ನೊಡನೆ ಕಟ್ಟಿದರೆ ಪಣ
ಹೋಗಿ ಕುಳಿತುಕೊಳ್ಳುವೆ ನನ್ನೂರಿನ ಆಲದ ಮರದ ಕೆಳಗೆ
ಒಂದು ರೊಟ್ಟಿಯ ಬೆಂಬತ್ತಿ ಬಂದಿದ್ದೇನೆ ಇಷ್ಟು ದೂರ
ನಡೆದ ಹೆಜ್ಜೆಗಳು ನನ್ನ ಹೆಜ್ಜೆಗಳಲ್ಲವೆನಿಸುತ್ತಿದೆ ನನಗೆ
ಒಂದು ರೊಟ್ಟಿಯ ಬಯಕೆ ಯಾರನ್ನು ತುಳಿಯುತ್ತಿದೆಯೋ
ಅಂಥವನ ಪ್ರತಿಭಟನೆ ಹೆದರಿದ ಬೆಕ್ಕಿನ ದನಿಯ ಹಾಗೆ
ಮುಂಬೈ ಶಹರದ ನಕ್ಷತ್ರಗಳ ತಣ್ಣನೆಯ ನೆರಳೆನಗೆ
ಹಳ್ಳಿಯ ದನಗಾಹಿಗಳಿಗೆ ಬೇಸಿಗೆಯ ಬಿಸಿಲುರಿ ಹೇಗೋ ಹಾಗೆ.
ಮಹಾನ್ ಕವಿ ಕೈಫಿ ಅಜ್ಮಿ 2002ರ ಮೇ 10ರಂದು ನಿಧನರಾದರು.
Kaifi Azmi
ಕಾಮೆಂಟ್‌ಗಳು