ಎಸ್. ನಾಗಶ್ರೀ
ಎಸ್. ನಾಗಶ್ರೀ
ಎಸ್. ನಾಗಶ್ರೀ ಪ್ರತಿಭಾನ್ವಿತ ಬರಹಗಾರ್ತಿ ಮತ್ತು ಇನಿಧ್ವನಿಯ ಕಾರ್ಯಕ್ರಮ ನಿರೂಪಕಿ.
ಗಾಯಗಳಿಗೆ ಚೌಕಟ್ಟು
ನಲ್ಮೆಗಳಿಗೆ ಜಾಣಮರೆವು
ಯಾಕೆ ಹೀಗೆನ್ನುವ ಹೊತ್ತಿಗೆ
ಹವೆಯದೇ ನೆಪ
ನೋವಿನಲೆಯ ಹೊಡೆತದಲಿ
ಜಾರದಿರಲಿ ಒಲವು ಚೆಲುವು
ಸುಮ್ಮನುಳಿದ ಹೊತ್ತಿನಲಿ
ಬೆಚ್ಚಗಿರಲಿ ತುಂಟಕನಸು
ಇದು ನಾಗಶ್ರೀ ಅವರ ಕವನದ ಒಂದು ಚೂರು. ಅವರ ತುಂಟ ಕನಸಿನ ನಗೆಯನ್ನು ಹೊತ್ತ ನಗೆಮೊಗದ ಅವರ ಕಣ್ಣುಗಳನ್ನು ನೋಡುತ್ತಿದ್ದ ಹಾಗೆ ಗಂಭೀರ ಚಿಂತನೆಯಂತೆ
ಭಯವಾಗುವುದು ಒಮ್ಮೊಮ್ಮೆ
ಇಷ್ಟು ನಾಜೂಕು ನಲ್ಮೆಗಳೂ
ಉಲ್ಕೆಯಾಗಬಹುದು ಎಂದೋ
ಹರಿಯಬಹುದು ಸೂತ್ರ
ಸುಮವೊಂದು ಸೂಜಿಯಾಗಿ
ಇರಿಯಬಹುದು ಚೂರಿಯಂತೆ
ಎಂಬಂತಹ ಮತ್ತೊಂದು ನಿಟ್ಟಿನ ಅವರ ಚಿಂತನೆ ಬದುಕಿನಲ್ಲಿ ಎಷ್ಟು ನಿಜವಲ್ಲವೆ ಎನಿಸುತ್ತದೆ.
ಜನವರಿ 8 ಎಸ್. ನಾಗಶ್ರೀ ಅವರ ಜನ್ಮದಿನ.
ನಾಗಶ್ರೀ ಅವರು ಹುಟ್ಟಿದ್ದು ಬೆಂಗಳೂರು. ಬೆಳೆದಿದ್ದು ಮೈಸೂರು. ಎಂ ಕಾಂ ಪದವಿ ಅಲ್ಲದೆ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ 'ಐಸಿಎಂಎ ಇಂಟರ್ ಪದವಿ' ಸಹಾ ಗಳಿಸಿದ ಜಾಣೆ ನಮ್ಮ ನಾಗಶ್ರೀ ಅವರು. ಆದರೆ ಕನ್ನಡ ಅವರ ಪ್ರೀತಿ, ಕನ್ನಡ ಸಾಹಿತ್ಯ ಅವರ ನಲ್ಮೆ.
ನಾಗಶ್ರೀ ಕಳೆದ 14 ವರ್ಷಗಳಿಂದ ಎಫ್ ಎಂ ರೈನ್ ಬೋದಲ್ಲಿ ರೇಡಿಯೋ ಜಾಕಿಯಾಗಿ, 10 ವರ್ಷಗಳಿಂದ ಡಿಡಿ ಚಂದನದಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕ ಬಿಡುಗಡೆ, ಸಂಗೀತ ಸಭೆ, ಸರ್ಕಾರಿ ಕಾರ್ಯಕ್ರಮ ಮುಂತಾದವುಗಳಲ್ಲಿ ನಾಗಶ್ರೀ ಅವರ ನಗೆಮಿಂಚಿನ ಸುಮಧುರ ನಿರೂಪಣೆಗಳು ಹರಿದಿವೆ.
ನಾಗಶ್ರೀ ಅವರು ತಮ್ಮ ಸರಳ, ಸುಮಧುರ, ಅಚ್ಚುಕಟ್ಟಿನ ಬರಹಗಳನ್ನು ತಮ್ಮ ಕವಿತೆ, ಕತೆ, ಲಲಿತ ಪ್ರಬಂಧಗಳಲ್ಲಿ ಹರಿಸುತ್ತಾ ಬಂದಿದ್ದಾರೆ. 'ನಾಲ್ಕು ಋತುಗಳ ಹುಡುಗಿ' ಇವರ ಕವಿತೆಗಳ ಸಂಕಲನ.
ಈ ಹಿಂದೆ ನಾಗಶ್ರೀ ಅವರು 'ಕನ್ನಡಪ್ರಭ'ದ 'ಸಖಿ'ಯಲ್ಲಿ ಉಪ ಸಂಪಾದಕಿಯಾಗಿ ಮತ್ತು ಅಂಕಣಕಾರ್ತಿಯಾಗಿ ಸಹಾ ಪಾತ್ರವಹಿಸಿದ್ದರು.
ನಾಗಶ್ರೀ ಅವರಿಗೆ ಕನ್ನಡಪ್ರಭದ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯ ಯುವ ಬಹುಮಾನ, ಸಂಕ್ರಾಂತಿ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮುಂತಾದ ಪುರಸ್ಕಾರಗಳೂ ಸಂದಿವೆ. ಅವರ ಬರಹಗಳು ಎಲ್ಲ ನಿಯತಕಾಲಿಕಗಳಲ್ಲಿ ಮತ್ತು ಅಂತರಜಾಲದಲ್ಲಿ ನಿರಂತರವಾಗಿ ಹರಿದುಬಂದಿದೆ.
ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ.... "ಕನ್ನಡ, ಕನ್ನಡ ಸಾಹಿತ್ಯದ ಓದು, ಬರವಣಿಗೆ ಹಾಗೂ ನಿರೂಪಣೆ ನನಗೆ ತುಂಬಾ ನೆಮ್ಮದಿ ತರುವ ಕೆಲಸಗಳು ಎನ್ನುತ್ತಾರೆ" ನಾಗಶ್ರೀ. ತಮಗಿರುವ ವಾಣಿಜ್ಯ ಪದವಿಗಳ ಸಾಧನೆಯಲ್ಲಿ ಲಾಭದಾಯಕವಾದ ಹಾದಿಗಳಿರುವಾಗ, "ನನಗೆ ಸಂತೋಷದ ಹಾದಿ ಸಾಹಿತ್ಯ ಮತ್ತು ನಿರೂಪಣೆಯಲ್ಲಿದೆ" ಎನ್ನುವುದು ಕೂಡ ಸಂತಸದಿಂದ ಹಾಡುವ ಹಕ್ಕಿಯ ಖುಷಿಯೇ ಸರಿ.
ಹೊರಗೆ ಹುಡುಕಿದ್ದು
ಒಳಗೆ ಭದ್ರವಿರೆ
ತೆರೆಯಬೇಕು ಒಳಗಣ್ಣು
ನಾನು ಅಳಿದು
ಅವನಾಗಬೇಕು
ಬೆಳಕಾಗಿ ಹರಡಬೇಕು
ಆನಂದವನ್ನು
ಎಂಬ ಅವರ ಸಾಲು ಕೂಡಾ ಇದೇ ಹೇಳುತ್ತದೋ ಏನೊ.
ನಮ್ಮ 'ನಾಲ್ಕು ಋತುಗಳ ಹುಡುಗಿ' ನಾಗಶ್ರೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday S Nagashree Ajay 🌷🌷🌷
ಕಾಮೆಂಟ್ಗಳು