ಸ್ಮಿತಾ ಅಮೃತರಾಜ್
ಸ್ಮಿತಾ ಅಮೃತರಾಜ್
ಸ್ಮಿತಾ ಅಮೃತರಾಜ್ ಸಂಪಾಜೆ ಅವರು ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ಜನವರಿ 8, ಸ್ಮಿತಾ ಅವರ ಜನ್ಮದಿನ. ಇವರು ಜನಿಸಿದ್ದು. ದ.ಕ.ಜಿಲ್ಲೆಯ ಸುಳ್ಯ ಸೀಮೆಯ ಪಂಜದ ಪಳಂಗಾಯ ಮನೆತನದಲ್ಲಿ. ತಂದೆ ವೆಂಕಟರಮಣ ಪಳಂಗಾಯ. ತಾಯಿ ಮೀನಾಕ್ಷಿ ಪಳಂಗಾಯ. ಸ್ಮಿತಾ ಅವರ ಓದು ಮಡಿಕೇರಿ, ಸುಳ್ಯ ಮತ್ತು ಪುತ್ತೂರಿನಲ್ಲಿ. ಇವರು ಎಂ.ಎ. ಕನ್ನಡ ಸ್ನಾತಕ ಪದವೀಧರೆ. ಮದುವೆಯಾಗಿ ಬಂದದ್ದು ಕೊಡಗಿನ ಸಂಪಾಜೆ ಬಳಿಯ ಚೆಂಬುವಿನ ಕುಯಿಂತೋಡು ಮನೆಗೆ. ಪತಿ ಅಮೃತರಾಜ್ ಕುಯಿಂತೋಡು ಅವರು ಕೃಷಿಕರು. ಮಕ್ಕಳು ಮನಾಲಿ ಮತ್ತು ಆಶಯ್. ಮಗಳು ಎಂ.ಸ್ ಮುಗಿಸಿ ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಮಗ ಇಂಜಿನಿಯರಿಂಗ್ ಅಂತಿಮ ಹಂತದಲ್ಲಿದ್ದಾರೆ. ಕೊಡಗಿನ ಸಂಪಾಜೆ ಬಳಿಯ ಚೆಂಬುವಿನಲ್ಲಿ ವಾಸವಾಗಿದ್ದಾರೆ.
ಸ್ಮಿತಾ ಅಮೃತರಾಜ್ ಅವರ ಲಲಿತ ಪ್ರಬಂಧ, ಕವನ ಸಂಕಲನ, ಪುಸ್ತಕ ಪರಿಚಯ ಸೇರಿದಂತೆ ಒಟ್ಟು ಒಂಭತ್ತು ಪುಸ್ತಕಗಳು ಪ್ರಕಟಗೊಂಡಿವೆ. ಇವುಗಳಲ್ಲಿ ‘ಕಾಲ ಕಾಯುವುದಿಲ್ಲ’, ‘ತುಟಿಯಂಚಿನಲ್ಲಿ ಉಲಿದ ಕವಿತೆಗಳು’, ‘ಮಾತು ಮೀಟಿ ಹೋಗುವ ಹೊತ್ತು’, ‘ಅವರೆ ಚಪ್ಪರದ ಹಾಡು’ ಕವನ ಸಂಕಲನಗಳು. ‘ಅಂಗಳದಂಚಿನ ಕನವರಿಕೆಗಳು’, ‘ಒಂದು ವಿಳಾಸದ ಹಿಂದೆ’, ‘ನೆಲದಾಯ ಪರಿಮಳ’ ಲಲಿತ ಪ್ರಬಂಧ ಸಂಕಲನಗಳು. 'ಹೊತ್ತಗೆ ಹೊತ್ತು’ ಎಂಬುದು ಪುಸ್ತಕ ಪರಿಚಯ ಕೃತಿ. 'ಹಾಯ್ ಮೆಟಾ' ಕಥಾ ಸಂಕಲನ.
ಸ್ಮಿತಾ ಅಮೃತರಾಜ್ ಅವರು 2021 ರಲ್ಲಿ ದೆಹಲಿಯ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಕವಿಗೋಷ್ಟಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಹೈದರಾಬಾದಿನಲ್ಲಿ ನಡೆದ ಹೊರನಾಡ ಕನ್ನಡಿಗರ ಕವಿಗೋಷ್ಠಿ, ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಹಾವೇರಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಮಂಡನೆ, ಮೈಸೂರು ದಸರಾ ಕವಿಗೋಷ್ಠಿ , ಹಾಸನದ ಹೊಯ್ಸಳೋತ್ಸವದ ಕವಿಗೋಷ್ಟಿ, ಬೆಂಗಳೂರಿನ ಲಿಟರೇಚರ್ ಪೆಸ್ಟಿವಲ್, ಬುಕ್ ಬ್ರಹ್ಮ ಲಿಟರೇಚರ್ ಪೆಸ್ಟಿವಲ್ ಮುಂತಾದ ವೇದಿಕೆಗಳಲ್ಲಿ ಭಾಗವಹಿಸಿದ್ದಾರೆ. ಒಂದು ಕವಿತೆ, ಒಂದು ಪ್ರಬಂಧ ಮಂಗಳೂರು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಆಗಿದೆ. ಮಡಿಕೇರಿ, ಬೆಂಗಳೂರು ಆಕಾಶವಾಣಿ ಸೇರಿದಂತೆ ಅನೇಕ ಕವಿಗೋಷ್ಠಿಗಳಲ್ಲಿ ಕವಿತೆ ವಾಚನ ಮಾಡಿದ್ದಾರೆ. ಇವರ ಕೆಲವು ಕತೆ, ಕವಿತೆ ಮತ್ತು ಪ್ರಬಂಧಗಳಿಗೆ ಬಹುಮಾನಗಳು ಸಂದಿವೆ. ಇವರ ಕೆಲ ಕವಿತೆಗಳು ಇಂಗ್ಲಿಷ್ , ತೆಲುಗು ,ಮತ್ತು ಮಲಯಾಳಂಗೆ ಅನುವಾದಗೊಂಡಿದೆ. ಎರಡು ಕತೆಗಳು ತಮಿಳು ಮತ್ತು ಮಲಯಾಳಂಗೆ ಅನುವಾದಗೊಂಡಿದೆ.
ಸ್ಮಿತಾ ಅಮೃತರಾಜ್ ಅವರಿಗೆ ಮುಂಬೈಯ ಸುಶೀಲಾ ಸೀತಾರಾಮ ಶೆಟ್ಟಿ ಪ್ರಶಸ್ತಿ, ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ, ಕೊಡಗಿನ ಗೌರಮ್ಮ ಪ್ರಶಸ್ತಿ, ಬಿ.ಎಂ.ಕಾವ್ಯ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ , ಅಡ್ವೈಸರ್ ಕಾವ್ಯ ಪ್ರಶಸ್ತಿ, ಕಾವ್ಯ ಮಾಣಿಕ್ಯ, ಗುರುಕುಲ ಶರಭ ಪ್ರಶಸ್ತಿ, ಸಮರ್ಥ ಕನ್ನಡಿಗ, ಬುದ್ದ ಬಸವ ಗಾಂಧಿ , ಅಪ್ಪ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಬಹುಮಾನ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಪ್ರತಿಭಾನ್ವಿತ ಬರಹಗಾರ್ತಿ ಸ್ಮಿತಾ ಅಮೃತರಾಜ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
ಕೃತಜ್ಞತೆಗಳು: Geetha DC 🌷🙏🌷
Happy birthday Smitha Amrith Raj 🌷🙏🌷
ಕಾಮೆಂಟ್ಗಳು