ಸಕ್ಲಾನಿ
ವೃಕ್ಷಮಾನವ ವಿಶ್ವೇಶ್ವರ ದತ್ತ ಸಕ್ಲಾನಿ
ಉತ್ತರಾಖಂಡ ರಾಜ್ಯದ ಬೆಟ್ಟಗುಡ್ಡಗಳ ನಡುವೆ, ತಾವೇ ನಾಟಿದ ಸಸಿಗಳು ಹೆಮ್ಮರವಾಗಿರುವುದನ್ನು ನೋಡುತ್ತ ಅವುಗಳ ನಡುವೆ ಪುಟ್ಟ ಮನೆಯಲ್ಲಿದ್ದ ಅವರ ಹೆಸರು ವಿಶ್ವೇಶ್ವರ ದತ್ತ ಸಕ್ಲಾನಿ. ಪರಿಸರ ಪ್ರಿಯರು ಅವರನ್ನು ಪ್ರೀತಿಯಿಂದ 'ವೃಕ್ಷಮಾನವ', 'ವೃಕ್ಷಮಿತ್ರ' ಎಂದೆಲ್ಲ ಕರೆಯುತ್ತಿದ್ದರು. 96 ವರ್ಷಗಳ ಬದುಕಿನ ಬಳಿಕ 2019ರ ಜನವರಿ 18ರಂದು ಅವರು ತೀರಿಕೊಂಡಾಗಲಷ್ಟೇ ಅವರದು ಎಂಥ ತುಂಬು ಬಾಳು ಎಂಬುದು ಜಗತ್ತಿಗೆ ಗೊತ್ತಾದದ್ದು.
ಪರಿಸರಮಿತ್ರ, ಗಿಡ ನೆಡುವ ಧ್ಯೇಯವನ್ನೇ ಬದುಕಿನಾದ್ಯಂತ ಪಾಲಿಸಿದ ಸಕ್ಲಾನಿ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. 1922ರ ಜೂನ್ 2ರಂದು ಉತ್ತರಾಖಂಡದ ತೆಹ್ರಿ ಘರ್‌ವಾಲ್ ಜಿಲ್ಲೆಯ ಸಕ್ಲಾನಾ ಕಣಿವೆಯ ಸುಜರ್‌ಗಾಂವ್ ಎಂಬ ಪುಟ್ಟ ಗ್ರಾಮವೊಂದರಲ್ಲಿ ದತ್ ಜನಿಸಿದರು. ಆಗ ಅವರಿದ್ದ ಪ್ರಾಂತ್ಯ ಒದ್ದೆ ಮರುಭೂಮಿಯಾಗಿತ್ತು. ಹಾಗೆಂದರೆ ಬೇಸಿಗೆಯಲ್ಲಿ ಹಿಮ ಕರಗಿದ ನದಿ ಹರಿಯುವ, ಆದರೆ ಗಿಡಮರಗಳೊಂದೂ ಇಲ್ಲದ, ಚಳಿಗಾಲದಲ್ಲಿ ಹಿಮ ಸುರಿದು ಮುಚ್ಚುವ ಪ್ರಾಂತ್ಯ. ಇಂಥ ಜಾಗದಲ್ಲಿ ಜನಿಸಿದ ದತ್, ಎಂಟರ ವಯಸ್ಸಿನಲ್ಲೇ ಗಿಡ ನೆಡುವ ದೀಕ್ಷೆ ತೊಟ್ಟರು. ಅಲ್ಲಿಂದೀಚೆಗೆ ಸುಮಾರು ಹಲವು ಸಹಸ್ರ ಮರ ನೆಟ್ಟಿದ್ದಾರೆ, ನೆಡಿಸಿದ್ದಾರೆ ಎಂಬ ಪ್ರಸಿದ್ಧಿಯಿದೆ.
ಸಕ್ಲಾನಿಯವರ ಅಣ್ಣ ನಾಗೇಂದ್ರ ದತ್ತ ಸಕ್ಲಾನಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸ್ವಾತಂತ್ರ್ಯಾನಂತರ ಭಾರತೀಯ ಒಕ್ಕೂಟದಲ್ಲಿ ರಾಜಸಂಸ್ಥಾನಗಳು ಸೇರುತ್ತಿದ್ದಾಗ, ಕೊಸರಾಡುತ್ತಿದ್ದ ತೆಹ್ರಿ ಸಂಸ್ಥಾನವನ್ನು ಒಕ್ಕೂಟದಲ್ಲಿ ಸೇರುವಂತೆ ಒತ್ತಾಯಿಸಲು ನಡೆದ ಹೋರಾಟದಲ್ಲಿ ನಾಗೇಂದ್ರ ದತ್ತ ಮಹತ್ವದ ಪಾತ್ರ ವಹಿಸಿದ್ದರು. ವಿಶ್ವೇಶ್ವರ ಅಣ್ಣನನ್ನು ತುಂಬಾ ಪ್ರೀತಿಸುತ್ತಿದ್ದವರು. ನಾಗೇಂದ್ರ ದತ್ತ ವಿಧಿವಶರಾದ ಬಳಿಕ, ತಮ್ಮ ದುಃಖವನ್ನು ಮರೆಯಲು ವಿಶ್ವೇಶ್ವರ ಗಿಡ ನೆಡುವುದರಲ್ಲಿ ತೊಡಗಿಕೊಂಡರು. 1958ರಲ್ಲಿ ಇನ್ನೊಂದು ದುರಂತ. ಅವರ ಮೊದಲ ಪತ್ನಿ ತೀರಿಕೊಂಡರು. ಈಗ ಇನ್ನಷ್ಟು ಮೌನಿಯಾದ ವಿಶ್ವೇಶ್ವರ, ಗ್ರಾಮದ ಸುತ್ತ ಸುತ್ತಾಡುತ್ತ ಗಿಡಗಳನ್ನು ನೆಡುವುದರಲ್ಲಿ ಪೂರ್ತಿ ಮಗ್ನರಾದರು.
ತೊಂಬತ್ತು ವರ್ಷಗಳ ಹಿಂದೆ ಬೆಂಗಾಡಾಗಿದ್ದ ಅವರ ಗ್ರಾಮದ ಸುತ್ತಮುತ್ತಲಿನ ನೂರು ಹೆಕ್ಟೇರ್ ಎಕರೆ ಪ್ರದೇಶ ಇಂದು ಹಣ್ಣು ಕೊಡುವ ಪೇರಳೆ, ರ್ಹೊಡೊಡೆಂಡ್ರಾನ್ ಮುಂತಾದ ಮರಗಳಿಂದ ತುಂಬಿದೆ. ಇಂದು ಅವರು ನೆಟ್ಟ ಮರಗಳಿರುವ ಹಸಿರಾದ ಪ್ರದೇಶವನ್ನು ಅವರ ಅಣ್ಣನ ನೆನಪಿನಲ್ಲಿ 'ನಾಗೇಂದ್ರ ದತ್ತ ಸಕ್ಲಾನಿ ಫಾರೆಸ್ಟ್' ಎಂದು ಕರೆಯಲಾಗುತ್ತಿದೆ. ಎಂಬತ್ತರ ವಯಸ್ಸಿನಲ್ಲಿ ಅವರ ಕಣ್ಣುಗಳಿಗೆ ತೊಂದರೆ ಬಾಧಿಸಿತು. ಸಸಿ ನೆಡುವ ನಿರಂತರ ಪ್ರಕ್ರಿಯೆಯಲ್ಲಿ ಅವರ ಕಂಗಳಿಗೆ ಹೋದ ಧೂಳು, ಕೆಸರಿನಿಂದ ಕಣ್ಣುಗಳ ಹ್ಯಾಮರೇಜ್ ಉಂಟಾಯಿತು.
''ಮರಗಳೇ ಅವರಿಗೆ ಎಲ್ಲವೂ ಆಗಿದ್ದವು. ಮರಗಳೇ ನನ್ನ ಕುಟುಂಬ, ನನ್ನ ತಂದೆತಾಯಿ, ನನ್ನ ಗೆಳೆಯರು ಮತ್ತು ನನ್ನ ಜಗತ್ತು ಅಂತ ಅವರು ಹೇಳುತ್ತಿದ್ದರು. ಈ ಗ್ರಾಮ ಮತ್ತು ಅವರು ನೆಟ್ಟ ಮರಗಳನ್ನು ಹೊರತುಪಡಿಸಿ ಬೇರೆ ಹೊರಜಗತ್ತನ್ನು ನೋಡಲು ಅವರು ಬಯಸಲೇ ಇಲ್ಲ. ಯಾಕೆಂದರೆ ಪ್ರತಿಯೊಂದು ಮರವೂ ಸ್ವಂತ ಜಗತ್ತನ್ನು ಹೊಂದಿದೆ ಎಂದು ಅವರು ಹೇಳುತ್ತಿದ್ದರು".
ಸಕ್ಲಾನಿಯವರ ಕೆಲಸ ಸುಲಭವಾಗಿರಲಿಲ್ಲ. ತಮ್ಮ ನಿಸ್ವಾರ್ಥ ಸೇವಾಕಾರ್ಯಕ್ಕಾಗಿ ಅವರು ಊರವರಿಂದಲೇ ವಿರೋಧವನ್ನೂ ಎದುರಿಸಬೇಕಾಯಿತು. ಸಕ್ಲಾನಿಯವರು ತಮ್ಮದು ಪರರದು ಎಂಬ ಭೇದವಿಲ್ಲದೆ ಎಲ್ಲೆಂದರಲ್ಲಿ ಗಿಡ ನೆಡುತ್ತಿದ್ದರು. ಇತರರ ಜಮೀನುಗಳಿಗೆ ಹೋಗಿ ಗಿಡ ನೆಟ್ಟು ಬರುತ್ತಿದ್ದರು. ಈತ ತಮ್ಮ ಜಮೀನನ್ನು ಒಳಹಾಕಿಕೊಳ್ಳಲು ಸಂಚು ಹೂಡುತ್ತಿದ್ದಾನೆ ಎಂಬುದು ಗ್ರಾಮಸ್ಥರ ಆತಂಕ. ಆದರೆ ಈ ಆತಂಕ ಬಹುಬೇಗ ಕರಗಿತು; ಇಂದು ಸಕ್ಲಾನಿಯವರ ಸತ್ಕರ್ಮದ ಫಲವನ್ನು ಇತರರು ಉಣ್ಣುತ್ತಿದ್ದಾರೆ. ಕೆಲವೊಮ್ಮೆ, ಸರಕಾರಿ ಜಾಗದಲ್ಲಿ ಹೋಗಿ ಓಕ್ ಮತ್ತು ರ್ಹೊಡೊಡೆಂಡ್ರಾನ್ ಗಿಡಗಳನ್ನು ನಾಟಿ ಬರುತ್ತಿದ್ದರು. ಅಲ್ಲಿ ಗಿಡ ನೆಟ್ಟದ್ದಕ್ಕಾಗಿ ಅವರನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದೂ ಹಲವು ಸಲ! ತೆಹ್ರಿಯ ಬೆಟ್ಟಗಳಲ್ಲಿ ನೀರಿನ ಕೊರತೆ. ಹೀಗಾಗಿ ನೆಟ್ಟ ಗಿಡಗಳನ್ನು ಉಳಿಸಿಕೊಳ್ಳುವುದೂ ಸವಾಲಾಗಿತ್ತು. ಅವಕ್ಕೆ ನೀರೂ ಬೇಕು. ನೆಟ್ಟ ಗಿಡಗಳನ್ನು ಮೂರು ವರ್ಷ ಸತತ ಆರೈಕೆ ಮಾಡುತ್ತಿದ್ದರು. ಅದಕ್ಕಾಗಿ ಮಳೆನೀರು ಕೊಯ್ಲಿನ ಹಲವು ಕ್ರಮಗಳನ್ನು ಅನುಸರಿಸಿದರು.
ಪರಿಸರ ಸೇವೆಗಾಗಿ ವಿಶ್ವೇಶ್ವರ ದತ್ತ ಸಕ್ಲಾನಿ ಅವರಿಗೆ 1986ರಲ್ಲಿ ಪ್ರಧಾನಿ ರಾಜೀವ್ ಗಾಂಧಿಯವರು ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ದೊಡ್ಡ ಪರಿಸರ ಚಳವಳಿಗಳ ಹಂಗಿಲ್ಲದೆ ಇವರು ದುಡಿದರು. ಆದರೆ ಬದುಕಿನ ಎರಡನೇ ಹಂತದಲ್ಲಿ ಇವರ ಕೆಲಸ ಜಗತ್ತಿನ ಗಮನ ಸೆಳೆಯಿತು; ಆಗ ಪರಿಸರವಾದಿಗಳೂ ಇವರ ಜತೆ ಸೇರಿಕೊಂಡರು. ಚಿಪ್ಕೋ ಚಳವಳಿಯ ನೇತಾರರಾದ ಸುಂದರಲಾಲ್ ಬಹುಗುಣ ಇವರ ಬಹುದಿನಗಳ ಗೆಳೆಯ. ''ಸಕ್ಲಾನಿ ಎಲ್ಲರ ಹಾಗಲ್ಲ. ಹಸಿರಿನ ಬಗ್ಗೆ ಅವರಿಗೆ ಹುಚ್ಚು ವ್ಯಾಮೋಹ. ಅವರಿಗೆ ಮರಗಿಡಗಳೇ ಜೀವನವಾಗಿದ್ದವು. ಅವರು ಕಣ್ಣು ಕಳೆದುಕೊಂಡಿದ್ದರೂ ಒಳನೋಟ ಕಳೆದುಕೊಂಡಿರಲಿಲ್ಲ,'' ಎಂದು ಬಹುಗುಣ ಗೆಳೆಯನನ್ನು ನೆನಪಿಸಿಕೊಳ್ಳುತ್ತಾರೆ. ಬಿಬಿಸಿ ಮುಂತಾದ ಚಾನೆಲ್‌ಗಳಲ್ಲಿ ಅವರ ಬಗ್ಗೆ ಸಾಕ್ಷ್ಯಚಿತ್ರಗಳು ಪ್ರಕಟವಾದರೂ, ಭಾರತದೊಳಗೆ ಅವರು ಅಪರಿಚಿತರಾಗಿಯೇ ಉಳಿದರು.
ಸಕ್ಲಾನಿ ಕವಿಯೂ ಹೌದು. ಹಸಿರಿನ ಬಗ್ಗೆ ಪುಟ್ಟ ಪುಟ್ಟ ಕವನಗಳನ್ನು ಬರೆದಿದ್ದಾರೆ. ಮುಂಜಾನೆ 5 ಗಂಟೆಗೆ ಎದ್ದು ಗುಡ್ಡ ಹತ್ತಲು ಶುರುಮಾಡುತ್ತಿದ್ದ ಅವರ ಬಗಲಲ್ಲಿ ಸದಾ ಒಂದು ಪಿಕ್ಕಾಸು ಇರುತ್ತಿತ್ತು. ''ಪಿಕ್ಕಾಸೇ ನನ್ನ ಪೆನ್ನು, ಭೂಮಿಯೇ ಪುಸ್ತಕ. ಮರಗಳ ಕಾಂಡಗಳೇ ಅದರ ಪುಟಗಳು. ಕೊಂಬೆಗಳೇ ಪದಗಳು. ಎಲೆಗಳೇ ಸ್ವರಗಳು. ಈ ಪೆನ್ನಿನಿಂದ ಕೊನೆಯುಸಿರಿನವರೆಗೂ ಬರೆಯುತ್ತಲೇ ಇರುತ್ತೇನೆ,'' ಎನ್ನುತ್ತಿದ್ದ ಅವರನ್ನು ಬೆಟ್ಟಗಳಲ್ಲಿ ಹಿಂಬಾಲಿಸಲು ತರುಣರಿಗೂ ಕಷ್ಟವಾಗುತ್ತಿತ್ತು. ಕೆಲವರು ಅವರನ್ನು ಹುಚ್ಚನೆಂದು ಭಾವಿಸಿದ್ದರು. ''ಹೌದು ನಾನೊಬ್ಬ ಹುಚ್ಚ. ಹುಚ್ಚುತನವಿಲ್ಲದಿದ್ದರೆ ಇಷ್ಟೆಲ್ಲ ಮಾಡಲು ಸಾಧ್ಯವಾಗುತ್ತಿರಲಿಲ್ಲ,'' ಎಂಬುದು ಅವರ ನಗುವಿನಿಂದ ಕೂಡಿದ ಉತ್ತರವಾಗಿತ್ತು. ಹುಚ್ಚರೇ ಅದ್ಬುತವಾದ ಬದುಕು ಬಾಳಲು ಸಾಧ್ಯ. ಉಳಿದವರಿಗೆಲ್ಲ ತಾವು ಹುಚ್ಚರಲ್ಲ ಎಂದು ಜಗತ್ತನ್ನು ನಂಬಿಸುವುದೊಂದೇ ಬದುಕು.
ಆಧಾರ: ವಿಜಯ ಕರ್ನಾಟಕದಲ್ಲಿ ಹರೀಶ್ ಖೇರ ಬರಹ
Remembrance of Uttarakhand’s ‘Tree Man’ Vishweshwar Dutt Saklani
ಕಾಮೆಂಟ್‌ಗಳು