ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿಂತಾಮಣಿ ಕೊಡ್ಲೆಕೆರೆ


 ಚಿಂತಾಮಣಿ ಕೊಡ್ಲೆಕೆರೆ


ವೃತ್ತಿಯಲ್ಲಿ ಇಂಜಿನಿಯರ್ ಆದ ಡಾ. ಚಿಂತಾಮಣಿ ಕೊಡ್ಲೆಕೆರೆ ಬಹುಮುಖಿ ಬರಹಗಾರರು. 

ಚಿಂತಾಮಣಿ ಕೊಡ್ಲೆಕೆರೆಯವರು 1961ರ ಜನವರಿ 18ರಂದು ಗೋಕರ್ಣದ ಬಳಿಯ ಅಘನಾಶಿನಿಯಲ್ಲಿ ಜನಿಸಿದರು. ತಂದೆ ಎಂ.ಎ. ಭಟ್ಟ. ತಾಯಿ ರಾಧೆ. ಆರಂಭಿಕ ವಿದ್ಯಾಭ್ಯಾಸ ಹಿರೇಗುತ್ತಿಯಲ್ಲಿ ನಡೆಯಿತು.  ಕುಮಟಾ, ಶಿರ್ಸಿ, ಧಾರವಾಡಗಳಲ್ಲಿ ಕಾಲೇಜು ವ್ಯಾಸಂಗ ನಡೆಸಿ ಧಾರವಾಡದಲ್ಲಿ ಬಿ.ಎಸ್ಸಿ ಪದವಿ ಪಡೆದರು.  ತ್ರಿವೆಂಡ್ರಮ್‌ನಲ್ಲಿ ಒಂದು ವರ್ಷದ ಟೆಲಿಕಮ್ಯುನಿಕೇಶನ್  ಇಂಜಿನಿಯರಿಂಗ್ ತರಬೇತಿ ಪಡೆದರಲ್ಲದೆ, ಬೆಂಗಳೂರಿನಲ್ಲಿ ಎಂ.ಬಿ.ಎ. ಪದವಿ ಗಳಿಸಿದರು. 

ಚಿಂತಾಮಣಿ ಕೊಡ್ಲೆಕೆರೆಯವರು 'ಬಿಎಸ್ಎನ್ಎಲ್'ನಲ್ಲಿ  ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ತೀವ್ರ ಅಧ್ಯಯನಾಸಕ್ತಿ ಉಳ್ಳ ಇವರು ಹಂಪಿ ವಿಶ್ವವಿದ್ಯಾಲಯದಿಂದ “ಕನ್ನಡ ಕಾವ್ಯದ ಪರಿಪ್ರೇಕ್ಷ್ಯದಲ್ಲಿ  ಕಾವ್ಯ ಮತ್ತು ತಾತ್ವಿಕತೆಗಳ ಸಂಬಂಧ” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಗೌರವ ಗಳಿಸಿದ್ದಾರೆ.

ಚಿಂತಾಮಣಿ ಕೊಡ್ಲೆಕೆರೆ ಅವರಿಗೆ ಎಳೆವೆಯಿಂದಲೇ ಕಾವ್ಯಾಸಕ್ತಿ ಬೆಳೆಯಿತು. ಮಾಸಿಕ ಪತ್ರಿಕೆಗಳಿಗೆ ಮೊದಲು ಹನಿಗವನಗಳನ್ನು ಬರೆದರು. ಇವರ ಮೊದಲ ಕವಿತೆ ಉದಯವಾಣಿಯಲ್ಲಿ ಪ್ರಕಟಗೊಂಡಿತು. ವಿದ್ಯಾರ್ಥಿ ದೆಸೆಯಲ್ಲೇ ಬರೆದ ‘ಬದುಕು ಬೇಡ ಅನ್ನಿಸಲ್ಲಿಲ್ಲ’ ಎಂಬ ಪದ್ಯಕ್ಕೆ ಬಹುಮಾನ ಸಂದಿತು. ಹೊನ್ನಾವರದ ಸ್ಥಳೀಯ ಪತ್ರಿಕೆಗೆ ‘ಮುಖಾಮುಖಿ’ ಎಂಬ ತಲೆಬರಹದ ಅಂಕಣ ಬರಹ ಮಾಡಿದರು. ಕನ್ನಡಪ್ರಭ, ಕರ್ಮವೀರ ವಿಶೇಷಾಂಕಗಳಲ್ಲಿ  ಇವರ ಕಥೆಗಳು ಬಹುಮಾನ ಗಳಿಸಿದವು. ಕನ್ನಡಪ್ರಭ, ವಿಜಯಕರ್ನಾಟಕ ಪತ್ರಿಕೆಯಲ್ಲಿ ಕಾವ್ಯ ವಿಮರ್ಶೆ ಬರೆದರು. 

ಚಿಂತಾಮಣಿ ಕೊಡ್ಲೆಕೆರೆ ಅವರ ಕೃತಿಗಳಲ್ಲಿ ಈ ಜಗತ್ತು, ಭೂಮಧ್ಯರೇಖೆ, ಚಂದ್ರದೀಪ, ಮೈಮರೆತು ಕುಣಿವೆ, ನೀರ ಹೆಜ್ಜೆ ಕವನ ಸಂಕಲನಗಳು; ಬಭ್ರುವಾಹನ ಮತ್ತು ಇರುವೆ, ಮಾಯಾವಿ ಮಾಂಗಿ, ಭರತದ ಮಧ್ಯಾಹ್ನ ಕಥಾಸಂಕಲನಗಳು; ಸಿಂಡ್ರೆಲಾ-ಅಂಬ್ರಲಾ ಮಕ್ಕಳ ಕವಿತೆಗಳು; ಮೊದಲ ಮನೆಯ ಮೆಟ್ಟಿಲು ಪ್ರಬಂಧ ಸಂಕಲನ; 68ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಪ್ರಕಟವಾದ ‘ಜನಕನ ಕನಸು’ ಲೇಖನ ಸಂಗ್ರಹ; ವಿನೋಬಾ ಭಾವೆ, ರಮಣ ಮಹರ್ಷಿ, ರಾಘವೇಂದ್ರ ಪಾಟೀಲ ವ್ಯಕ್ತಿ ಚಿತ್ರಣಗಳು; ಪೀಟರ್ ವ್ಯಾಟ್ಸನ್ ವಿಚಾರ ಕಥನ ಅನುವಾದ (ಡಾ. ವಿಜಯಾ ಗುತ್ತಲ ಅವರೊಂದಿಗೆ), ‘ಗಿಂಡಿಯಲ್ಲಿ ಗಂಗೆ‘ ಪ್ರವಾಸ ಕಥನ  ಸೇರಿದಂತೆ ಅನೇಕ ವೈವಿಧ್ಯಗಳಿವೆ.

ಚಿಂತಾಮಣಿ ಕೊಡ್ಲೆಕೆರೆ ಅವರ 'ತಲೆಮಾರಿನ ಕೊನೆಯ ಕೊಂಡಿ' ಕೃತಿಗೆ ಬಿ.ಎಚ್. ಶ್ರೀಧರ ಪ್ರಶಸ್ತಿ, ಎರಡು ಬಾರಿ ರತ್ನಾಕರವರ್ಣಿ ಮುದ್ದಣ ಪ್ರಶಸ್ತಿ, ಆರ್.ಬಿ.ಐ.ನ ಬೆಳ್ಳಿ ಹಬ್ಬದ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.


Happy birthday Chintamani Kodlekere Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ