ಅ.ರಾ.ಸೇ.
ಅ.ರಾ.ಸೇ.
ಅ.ರಾ.ಸೇ. ಎಂದು ಪ್ರಖ್ಯಾತರಾದ ಅಣಜಿ ರಾಮಪ್ಪ ಸೇತುರಾಮರಾಯರು ಕನ್ನಡ ಸಾರಸ್ವತಲೋಕ ಕಂಡ ಮಹಾನ್ ವಿದ್ವಾಂಸರು ಮತ್ತು ಬರಹಗಾರರು. ಅವರನ್ನು ಬಹಳ ಜನ ಹಾಸ್ಯಸಾಹಿತಿ ಎಂದು ಗುರುತಿಸುವುದು ಸಾಮಾನ್ಯವಾಗಿತ್ತು. ಆದರೆ ಅವರು ನೀಡಿರುವ ಮಹಾನ್ ಕೊಡುಗೆಗಳ ನಿಟ್ಟಿನಲ್ಲಿ 'ಹಾಸ್ಯ ಸಾಹಿತ್ಯವೂ ಅವರ ಒಂದು ಪ್ರಮುಖ ಕೊಡುಗೆ' ಎಂದು ಹೇಳುವುದು ಸರಿಯಾದೀತು.
ಅ. ರಾ. ಸೇ. ಅವರು 1931ರ ಜನವರಿ 26ರಂದು ಭರಮಸಾಗರದಲ್ಲಿ ಜನಿಸಿದರು. ಭರಮಸಾಗರದ ಸುತ್ತಮುತ್ತಲಿನ ಗ್ರಾಮಗಳಾದ ಮರಡಿಹಳ್ಳಿ, ಮಾಯಕೊಂಡ, ದುರ್ಗಗಳ ಶಾಲೆಗಳಲ್ಲಿ ಅಧ್ಯಾಪನ ನಡೆಸಿದ ಅವರು ಕಾಲೇಜಿನ ಉಪನ್ಯಾಸಕರಾಗಿ ನಿವೃತ್ತರಾದರು.
ಅ.ರಾ.ಸೇ. ಅವರು ತಮ್ಮ ಊರು ಭರಮಸಾಗರದ ಬಗ್ಗೆ ಬರೆದ ಕವಿತೆಯ ಸಾಲು ಹೀಗಿದೆ:
ಭರಮಸಾಗರ, ಭರಮಸಾಗರ ಮರೆವೆನೆಂತಾ ಊರನು?
ಮರೆವೆನೆಂತಾ ಊರ ಗಾಳಿಯ ಸೊಳ್ಳೆಗಳ ಝೇಂಕಾರವನು?
ಮರೆವೆನೆಂತಮೃತವನು ಹಳಿಯುವ ನಿನ್ನ ಹಲಸಿನ ಹಣ್ಣನು?
ಮರೆವೆನೆಂತಪ್ಸರೆಯ ಜರೆಯುವ ಕಳೆಯ ಕೀಳುವ ಹೆಣ್ಣನು?
ಅ.ರಾ.ಸೇ ಅವರು ತಮ್ಮ ಬರಹಗಳಲ್ಲಿ ಮೂಡಿಸಿದ ಕಾಲ್ಪನಿಕ ಹಳ್ಳಿ ಅಂತಿಂಥ ಹಳ್ಳಿಯಲ್ಲ, ಅದು 'ಮುಗಿಲಹಳ್ಳಿ'.
ಮುಗಿಲಹಳ್ಳಿಯಲ್ಲಿ ತಾವು ಸೃಜಿಸಿದ ಶೀನು, ರಾಮಿ, ಕಿಟ್ಟಿ, ಪ್ರಸನ್ನ, ಪಾಂಡಿ, ಭಿಕ್ಕು, ತಥಾಗತ, ಗುರೂಜಿ ಮುಂತಾದ ಪಾತ್ರಗಳ ಮೂಲಕ ಅವರು ಸಮಾಜದ ಹಲವಾರು ಓರೆಕೋರೆಗಳನ್ನು ವಿನೋದಪೂರ್ಣ ನೋಟದಿಂದ ನೋಡುತ್ತಾ, ಕನ್ನಡಿಗರಿಗೆ ಸಾಹಿತ್ಯಕ ರಸದೌತಣ ನೀಡಿದರು.
ಅ.ರಾ.ಸೇ. ಅವರ ಮುಗಿಲಹಳ್ಳಿಯಲ್ಲಿ ಕ್ರಿಕೆಟ್, ರಾಜಕಾರಣ, ಕಾಲೇಜು ಹುಡುಗರ ಪ್ರೇಮದಾಟ, ವ್ಯಾಪಾರಿಗಳ ಕುತಂತ್ರ, ಕನ್ನಡ ಚಳವಳಿ, ಅಧ್ಯಾಪಕರನ್ನು ಬೇಸ್ತುಬೀಳಿಸುವ ವಿದ್ಯಾರ್ಥಿಗಳು ಹೀಗೆ ಎಲ್ಲರೂ ಇದ್ದರು. ಇನ್ನು ಅಲ್ಲಿನ ಭಗ್ನಪ್ರೇಮಿಗಳದೋ 'ಅಖಿಲ ಕರ್ನಾಟಕ ವಿಫಲ ಪ್ರೇಮಿಜನರ ಪರಿಷತ್' ಎಂಬ ಬೃಹತ್ ಜಾಲವೇ ಇತ್ತು. ಈ 'ಅ.ಕ.ವಿ.ಪ್ರೇ.ಪ.' ಸರಣಿಯ ಒಂದೊಂದು ಕಥೆಯಲ್ಲೂ ಒಂದೊಂದು ವಿಧದ ಪ್ರೇಮಸಂದಿಗ್ಧತೆಯ ಮೂಲಕ ಅ.ರಾ.ಸೇ. ಓದುಗರಲ್ಲಿ ತುಂಬುತ್ತಿದ್ದ ಪರವಶತೆ ಅಪ್ಯಾಯಮಾನವೆನಿಸಿತ್ತು.
ಅ.ರಾ.ಸೇ ಅವರು ತಮ್ಮ ಬರಹಗಳಲ್ಲಿ ಕಾಲದಿಂದ ಕಾಲಕ್ಕೆ ಎಷ್ಟರಮಟ್ಟಿಗಿನ ಪ್ರಸ್ತುತೆಯನ್ನು ಮೂಡಿಸುತ್ತಿದ್ದರೆಂದರೆ
ಯೂರಿ ಗಗರಿನ್ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣ ಮಾಡಿದ ಸಂದರ್ಭದಲ್ಲಿ
‘ಗಗರಿನ್ನಗೊಂದು ಕಾಲ;
ಷೆಪರ್ಡಿಗೊಂದು ಕಾಲ;
ನನಗೊಂದು ಕಾಲ’
ಎಂಬ ವಿಶಿಷ್ಟ ಹಾಸ್ಯಲೇಖನ ಬರೆದಿದ್ದರು.
ಅ.ರಾ.ಸೇ ಕವನಗಳ ಮೂಲಕವೂ ನಗೆ ಚೆಲ್ಲುತ್ತಿದ್ದರು. ಡಾಲರ್ ಲೆಕ್ಕದಲ್ಲಿ ಸಂಪಾದಿಸಬೇಕೆನ್ನುವವನನ್ನು 'ತೆಂಕಣ ಗಾಳಿ ಸೋಂಕಿದೊಡೆಂ’ ಎಂದು ಪಂಪನೆಂದ ರೀತಿಯಲ್ಲೇ ಹೀಗೆ ಕಾಣಿಸಿದ್ದರು:
ಮಂಕನ ಗಾಳಿ ಸೋಂಕಿದೊಡಂ; ಕಳ್ನುಡಿಗೇಳ್ದಿಡಂ;
ಹಾರ್ಮೋನಿಯಂ ಭೋಂಕನೆ ಕಿವಿಗೊರೆದೊಡಂ;ಬೀರಿದ ದತ್ತುರಿಗಂಡೊಡಂ;
ಮೇಣ್ ತಾಂಕುವ ಸುಂಟರ್ ಬೀಸಿದೊಡಂ;
ಮದಮಹೋತ್ಸವ ಮಾದೊಡೇನನೆಂಬೆನ್ನಾ ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಡಾಲರಿನ ಡಿಂಗರಿಗರಂ.
ಕಾಫಿಯನ್ನು ಕುರಿತು ಅವರು ಬರೆದ ಸಾಲುಗಳು ಹೀಗಿವೆ:
ಸೂರ್ಯನುದಿಸಿಹನೋಡು ನಿದ್ದೆಯನು ಕೊನೆಮಾಡು
ಏಳೆನ್ನ ಮನದನ್ನೆ ಗಂಟೆ ಎಂಟಾಯ್ತು
ಕಣ್ತೆರೆದು ದಯಮಾಡು ಕಾಫಿ ಒಲೆಯನುಹೂಡು
ಆಳಿಂಡಿಯಾಕಾಶ ವಾಣಿ ಒರಲುತಿದೆ!
ಅ.ರಾ.ಸೇ.ಯವರ ಹತ್ತಿರದ ವಿದ್ವಾಂಸ ಸ್ನೇಹಿತರೊಬ್ಬರು ‘I have maintained level of poverty throughout my life’ ಎಂದಿದ್ದರು. ಅ.ರಾ.ಸೇ. ಅವರಲ್ಲಿ ಇದ್ದ ಶ್ರೀಮಂತಿಕೆಗಳೆಂದರೆ, ಸಾಹಿತ್ಯ ಶ್ರೀಮಂತಿಕೆ ಮತ್ತು ಹೃದಯ ಶ್ರೀಮಂತಿಕೆ ಮಾತ್ರ. ಆದರೆ ಬಡತನವನ್ನೂ ನಗುನಗುತ್ತಲೇ ಸ್ವೀಕರಿಸಿದ ಅವರ ಪರಿ ಇಂತಿದೆ:
ನಾನು ಕೊಟ್ಟ ಎಂಟಾಣೆಗಳೆಲ್ಲವು
ಬಂದರೆ ಸಾವಿರ ರೂಪಾಯಿ
ನನಗೆ ಕೊಟ್ಟ ಎಂಟಾಣೆಗಳೆಲ್ಲವು
ಹೋದರೆ ಸಾವಿರ ರೂಪಾಯಿ.
ಆದುದರಿಂ ಡಬಲೆಂಟ್ರಿಯ ಲೆಕ್ಕದ
ಲಯಬಿಲಿಟಿಗಳು ಅಸೆಟ್ಟುಗಳು ಈಕ್ವಲೈಸಿದವು ಎಂದಿನಂತೆಯೇ ನಾನಾಗಿರುವೆನು ಪಾಪರ್!
ಅ.ರಾ.ಸೇ. ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರ ಇಂಗ್ಲಿಷ್ ಮೇಲಿನ ಪ್ರಭುತ್ವ, ಛಂದೋಬದ್ಧ ಕಾವ್ಯರಚನೆ, ಸಂಸ್ಕೃತದ ಮೇಲಿನ ಹಿಡಿತ ಬೆರಗು ಹುಟ್ಟಿಸುವಂತದಾಗಿತ್ತು. 1950ರಿಂದ 1990ರ ದಶಕದವರೆಗೆ ನಗುವನಂದ, ಪ್ರಜಾವಾಣಿ, ಸುಧಾ, ಕೊರವಂಜಿ, ಅಪರಂಜಿ ಮತ್ತು ಹಲವಾರು ವಿಶೇಷಾಂಕಗಳಲ್ಲಿ ಅವರ ಹೆಸರು ಚಿರವಿರಾಜಮಾನವೆಂಬಂತೆ ಪ್ರಕಾಶಿಸುತ್ತಿತ್ತು. ಕೊರವಂಜಿ, ಅಪರಂಜಿಗಳ ಪುನರುತ್ಥಾನದಲ್ಲಂತೂ ಅವರ ಶ್ರಮ ಅಪಾರ.
ಅ.ರಾ.ಸೆ. ಅವರದು ಎಲ್ಲ ಬಗೆಯ ಸಾಹಿತ್ಯಗಳಲ್ಲೂ ಮಹತ್ವದ ಕೊಡುಗೆ. ಅವರ ‘ಪರಮಾರ್ಥ ಪದ ಕೋಶ’ ಅಧ್ಯಾತ್ಮದಲ್ಲಿ ಬರುವ ಎಲ್ಲ ಕ್ಲಿಷ್ಟ ಪದಗಳ ಅರ್ಥವನ್ನು ನೀಡುವ ವಿಶೇಷ ಹೊತ್ತಿಗೆ. ಅ.ರಾ.ಸೇ. ಬಾದರಾಯಣರು ರಚಿಸಿದರು ಎಂದು ನಂಬಲಾದ ಬ್ರಹ್ಮಸೂತ್ರಗಳನ್ನು ಕನ್ನಡಕ್ಕೆ ತಂದರು. ಸದ್ಗುರು ಶಂಕರಲಿಂಗ ಭಗವಾನರ ಜೀವನ ಚಿತ್ರಣವನ್ನು ಶ್ರೀಗುರುಕಥಾಮೃತದಲ್ಲಿ ತಂದರು. ಬೇಂದ್ರೆಯವರ ಪ್ರಸಿದ್ದವಾದ 'ಬೆಳಗು' ಕವಿತೆಯಲ್ಲಿನ ‘ಇದು ಬರಿ ಬೆಳಗಲ್ಲೂ ಅಣ್ಣ' ಎನ್ನುವ ರೂಪಕವನ್ನು ಅವಧೂತ ಗೀತೆಯ ಅವಿಭಜಿತ ಆಕಾಶಕ್ಕೆ ಹೋಲಿಸಿ ಬ್ರಹ್ಮಾನಂದ ಸ್ಥಿತಿಯಾಗಿ ವಿಶ್ಲೇಷಿಸಿದ್ದರು. ಅರವಿಂದರು ಹೇಳುವ ಉಷಾಲೋಕವನ್ನು ಈ ಕವಿತೆಯಲ್ಲಿ ಕಂಡ ಅ.ರಾ.ಸೇ ಹೊಸ ನೆಲೆಯ ಚಿಂತನೆಯನ್ನು ತಂದಿದ್ದರು.
ಅ.ರಾ.ಸೇ. ಅವರ ‘ಕುಮಾರವ್ಯಾಸ ಭಾರತ ತಾತ್ಪರ್ಯ ಸಹಿತ’ ಮತ್ತು ‘ಜೈಮಿನಿ ಭಾರತ’ ಶ್ರೇಷ್ಠ ಕೃತಿಗಳ ಸಾಲಿನಲ್ಲಿ ನಿಲ್ಲುವಂತದ್ದು. ‘ಕುಮಾರವ್ಯಾಸ ಭಾರತ’ ಒಂದು ಬೃಹತ್ ಗ್ರಂಥ. ಫುಲ್‌ಸ್ಕೇಪ್ ಆಕಾರದ, 1500ಕ್ಕೂ ಹೆಚ್ಚು ಪುಟಗಳಿರುವ ಈ ಮಹಾನ್ ಗ್ರಂಥ ಅ.ರಾ.ಸೇ.ಯವರ ಮೇರು ಕೃತಿ.
ಸುಳಿನಗು, ಮುಗಿಲುಹಳ್ಳಿ ಬಖೈರು, ಚಿರತೆ ವೀರನ ಕೋಟೆ, ಸೀನಣ್ಣನ ರೊಮಾನ್ಸ್ ಮುಂತಾದವು ಅ. ರಾ. ಸೇ ಅವರ ಹಾಸ್ಯ ಲೇಖನ ಸಂಕಲನಗಳಲ್ಲಿ ಸೇರಿವೆ. 'ಯಥಾಗತ’ ಮತ್ತು ‘ತದನಂತರ’ ಎಂಬ ಅ.ರಾ.ಸೇ. ಅವರ ಎರಡು ಕಾದಂಬರಿಗಳು 'ಸುಧಾ' ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದವು. ‘ಸ್ವಗದಿರುಳು ನಲ್ವಗಲು’ ಇವರು ಬರೆದ ಮತ್ತೊಂದು ಹಾಸ್ಯಕಾದಂಬರಿ. ‘ನಗೆಮುಗಿಲು’, ‘ಸುಸ್ಮಿತ’ ಕಾವ್ಯ ಸಂಕಲನಗಳು. ‘ಮೂಡಲ ಪಯಣ’ ಎಂಬುದು ಪ್ರವಾಸ ಕಥನ ಕೃತಿ. ಅಧ್ಯಾತ್ಮಿಕ ಬರಹಗಳಲ್ಲಿ ತೊರವೆ ರಾಮಾಯಣ, ವಾಲ್ಮೀಕಿ ರಾಮಾಯಣಗಳನ್ನಾಧರಿಸಿ ಬರೆದ ಕೃತಿ ‘ಶ್ರೀ ಸುಂದರ ಕಾಂಡ’, ದಕ್ಷಿಣ ವಾರಣಾಸಿ ಅಲಂಪೂರು, ಶಿಶುನಾಳ ಶರೀಫರ ನೂರಾರು ತತ್ತ್ವಪದಗಳು, ಕುಮಾರವ್ಯಾಸ ಭಾರತ, ಲಕ್ಷ್ಮೀಶನ ಜೈಮಿನಿ ಭಾರತ, ಬ್ರಹ್ಮ ಸೂತ್ರಗಳು, ಶ್ರೀ ದೇವೀ ಮಹಾತ್ಮೆ, ಅನುಭವಾಮೃತ, ನಾಗರಸನ ಭಗವದ್ಗೀತೆಗಳ ಗದ್ಯರೂಪಾಂತರ, ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಜೀವನ ಚರಿತ್ರೆ ‘ಶ್ರೀ ಗುರುಕಥಾಮೃತ’, ತುಂಬುಗೆರೆ ‘ಬ್ರಹ್ಮಾನಂದರು’ ಜೀವನ ಚರಿತ್ರೆ, ಅಧ್ಯಾತ್ಮಿಕ ಪಾರಿಭಾಷಿಕ ಶಬ್ದಗಳ ಪದಕೋಶವಾದ ‘ಪರಮಾರ್ಥ ಪದಕೋಶ’, ಮಿನಿ ವಿಶ್ವಕೋಶ, ಮುಂತಾದವು ಇವರ ಕೃತಿಗಳಲ್ಲಿ ಸೇರಿವೆ.
ಅ.ರಾ.ಸೆ.ಯವರನ್ನು ಒಬ್ಬ ಮಹನೀಯರು ‘what is the purpose of your life?’ ಎಂದು ಕೇಳಿದುದಕ್ಕೆ ಅವರು ಉತ್ತರಿಸಿದ್ದು ಹೀಗೆ:
ಲೋಕಕ್ಕೆ ಬಂದೆ ನಾನ್, ಏಕೆ? ನಾನದನರಿಯೆ.
ಚೇಳುಕೊಂಡಿಗೆ ವಿಷವದೇಕೆ ಬಂತು?
ಪೋಪೆ ನಿಲ್ಲಿಂ ನಾನು; ಎಲ್ಲಿಗೋ? ಅದನರಿಯೆ,
ಸಿಗರೇಟು ಹೊಗೆಯವೊಲು ಹಾರಿಹೋಗುವೆನು.
ಹೀಗೆ ಹಾರಿಹೋಗುವುದನು ಮನಗಂಡಿದ್ದ ಅ.ರಾ.ಸೇ. ಅವರು ಈ ಲೋಕವೆಂಬ ಮರದಿಂದ ಹಾರಿಹೋಗಿದ್ದು 2015ರ ಏಪ್ರಿಲ್ 9ರಂದು. ಈ ಮಹಾನ್ ಚೇತನಕ್ಕೆ ನಮನ.
ಕೆಲವು ಮಾಹಿತಿ ಕೃತಜ್ಞತೆ: ರಾಮ್ ಮತ್ತು ಶ್ರೀಧರಮೂರ್ತಿ Sreedhara Murthy ಅವರ ಬರಹಗಳು
On the birth anniversary of great scholar and writer A. R. Sethurama Rao
ಕಾಮೆಂಟ್‌ಗಳು