ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಧು ದಂಡವತೆ


 ಪ್ರೊ. ಮಧು ದಂಡವತೆ


ರಾಜಕಾರಣ ಜನರ ಏಳಿಗೆಗೆ ದುಡಿಯಲು ಒಂದು ಸಾಧನ ಎಂದು ಬಗೆದಿದ್ದ ಅಪರೂಪದ ರಾಜಕಾರಣಿಗಳ ಸಾಲಿನಲ್ಲಿ  ಪ್ರೊಫೆಸರ್‌ ಮಧು ದಂಡವತೆ ಒಬ್ಬರು. ದಂಡವತೆ ತಮ್ಮ ಕೊನೆಯ ದಿನಗಳವರೆಗೂ  ಸರಳ ಸಜ್ಜನಿಕೆಯ ರಾಜಕಾರಣಿ ಎಂಬ ಹೆಗ್ಗಳಿಕೆಯನ್ನು  ಉಳಿಸಿಕೊಂಡಿದ್ದರು. 

ಸಮಾಜವಾದಿ ಚಿಂತನೆಯ ಮೂಸೆಯಿಂದ ಬಂದ ಹಲವಾರು ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ದಂಡವತೆ ಎಂದೂ ತಮ್ಮ ಸಿದ್ಧಾಂತಗಳಿಂದ ದೂರ ಸರಿಯಲಿಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ದಂಡವತೆ ಅದಕ್ಕಾಗಿ ರಾಜಕೀಯವಾಗಿ ಭಾರಿ ಬೆಲೆ ತೆರಬೇಕಾಯಿತು. ಮನಸ್ಸು ಮಾಡಿದ್ದರೆ ಇತರ ಹಲವಾರು ಸಮಾಜವಾದಿಗಳಂತೆ ದಂಡವತೆ ಸಹ ಬಣ್ಣ ಬದಲಾಯಿಸಿ ಕಾಂಗ್ರೆಸ್‌ ಪಾಳಯ ಸೇರಿ ಅಧಿಕಾರ ರಾಜಕಾರಣದಲ್ಲಿ ಮೆರೆಯಬಹುದಿತ್ತು. ಆದರೆ ಕಾಂಗ್ರೆಸ್‌ ಮತ್ತು ಇಂದಿರಾಗಾಂಧಿ ಅವರ ನಿರಂಕುಶ ಪ್ರಭುತ್ವದ ವಿರುದ್ಧ ಸೆಟೆದು ನಿಂತ ದಂಡವತೆ ಜಯಪ್ರಕಾಶ್‌ ನಾರಾಯಣ್‌ ಅವರ ಕರೆಗೆ ಓಗೊಟ್ಟು ಮಹಾರಾಷ್ಟ್ರದಲ್ಲಿ ಜನತಾ ಪರಿವಾರದ ಸಂಘಟನೆಗೆ ಟೊಂಕ ಕಟ್ಟಿ ನಿಂತರು. 

1924ರ ಜನವರಿ 21ರಂದು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಜನಿಸಿದ ದಂಡವತೆ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಗುರುತಿಸಿಕೊಂಡರು. ನಂತರ 1946ರಲ್ಲಿ ಸಮಾಜವಾದಿ ಚಳವಳಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇ ಅಲ್ಲದೇ ಗೋವಾ ವಿಮುಕ್ತಿ ಮತ್ತು 1969ರಲ್ಲಿ ಭೂ ಸುಧಾರಣಾ ಚಳವಳಿಗಲ್ಲಿ ಸಹ ಮುಂಚೂಣಿಯ ಪಾತ್ರ ನಿರ್ವಹಿಸಿದ್ದರು. 

ಪ್ರಜಾ ಸೋಷಲಿಸ್ಟ್‌ ಪಾರ್ಟಿಯ ಮೂಲಕ 1967ರಲ್ಲಿ ರಾಜಾಪುರದಿಂದ ಲೋಕಸಭೆಗೆ ಆಯ್ಕೆಯಾದ ದಂಡವತೆ ನಂತರ ಐದು ಬಾರಿ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ನಡುವೆ ಸಮಾಜವಾದಿ ಸಿದ್ಧಾಂತಗಳಿಂದಲೇ ಕೂಡಿದ್ದ ಜನತಾ ಪರಿವಾರದ ಮೇರು ನಾಯಕರ ಸಾಲಿಗೆ ಸೇರಿದ ದಂಡವತೆ ಎರಡು ಬಾರಿ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಇಂದಿರಾಗಾಂಧಿ ವಿರೋಧಿ ಅಲೆಯಲ್ಲಿ ಪ್ರಥಮ ಬಾರಿಗೆ ಜನತಾ ಪಕ್ಷ 1977ರಲ್ಲಿ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದಾಗ ದಂಡವತೆ ರೈಲ್ವೆ ಖಾತೆ ಸಚಿವರಾಗಿ ನಿಯುಕ್ತಿಗೊಂಡರು. ಈ ಅವಧಿಯಲ್ಲಿಯೇ ಪ್ರತಿಷ್ಠಿತ ಕೊಂಕಣ ರೈಲು ಯೋಜನೆಯ ರೂಪುರೇಷೆ ತಯಾರಿಸಿದ ಕೀರ್ತಿ ದಂಡವತೆ ಅವರಿಗೆ ಸಲ್ಲುತ್ತದೆ.  ರೈಲ್ವೇಗೆ ಒಂದು ಹೊಸ ಚೇತನ ತಂದು ಹೊಸ ಮಾರ್ಗಗಳು, ಸೇವೆಯಲ್ಲಿ ಸುಧಾರಣೆಗಳು, ಆಡಳಿತದಲ್ಲಿ ಚುರುಕುತನ ಮುಂತಾದವುಗಳನ್ನು ತಂದ ಮಧು ದಂಡವತೆ ಅವರು ಅಂದಿನ ಅವರ ಕಾರ್ಯಕ್ಕಾಗಿ ಚಿರಸ್ಮರಣೀಯರು. ಜನತಾ ಪಕ್ಷ ಹೋಳಾದ ನಂತರವೂ ಪರಿವಾರದಲ್ಲಿಯೇ ಮುಂದುವರಿದ ದಂಡವತೆ ಬೊಫೋರ್ಸ್‌ ವಿರೋಧಿ ಅಲೆಯ ಮೇಲೆ ಅಧಿಕಾರಕ್ಕೆ ಬಂದ ವಿ.ಪಿ.ಸಿಂಗ್‌ ಸರಕಾರದಲ್ಲಿ ಹಣಕಾಸು ಸಚಿವರಾಗಿ ನೇಮಕಗೊಂಡರು. ಈ ಅವಧಿಯಲ್ಲಿ ದೇಶಾದ್ಯಂತ ಭ್ರಷ್ಟರ ವಿರುದ್ಧ ಆದಾಯ ತೆರಿಗೆ ದಾಳಿಯನ್ನು ಚುರುಕುಗೊಳಿಸುವ ಮೂಲಕ ದಂಡವತೆ ತಮ್ಮ ಸಾಮರ್ಥ್ಯ ಮೆರೆದರು. 

ಮಧು ದಂಡವತೆ ಅವರ ರಾಜಕೀಯ ಜೀವನ 1990ರ ನಂತರ ಇಳಿಮುಖವಾಯಿತು. ಐದು ಬಾರಿ ಪ್ರತಿನಿಧಿಸಿದ್ಧ ರಾಜಾಪುರ ಕ್ಷೇತ್ರದಲ್ಲಿ ಸೋಲಿನ ರುಚಿ ಕಂಡ ದಂಡವತೆ ಮತ್ತೆ ಲೋಕಸಭೆಗೆ ಆಯ್ಕೆಯಾಗುವಲ್ಲಿ ವಿಫಲರಾದರು. ಇಷ್ಟಾದರೂ 1998ರಲ್ಲಿ ಎನ್‌ಸಿಪಿ ಜತೆ ಕೈ ಜೋಡಿಸಿ ಮತ್ತೆ ಚುನಾವಣಾ ಕಣಕ್ಕಿಳಿದ ದಂಡವತೆಗೆ ಅಲ್ಲಿಯೂ ಜಯ ಲಭಿಸಲಿಲ್ಲ.    

1996ರಲ್ಲಿ ಎಚ್‌.ಡಿ.ದೇವೇಗೌಡರು ಪ್ರಧಾನಿ ಆದಾಗ ಪಕ್ಷದ ಹಿರಿಯ ಮುಖಂಡರಾಗಿದ್ದ ದಂಡವತೆ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಯಲ್ಲಿ ಕುಳ್ಳಿರಿಸಿದರು. ಈ ನಡುವೆ ಪತ್ನಿ ಪ್ರಮೀಳಾ ದಂಡವತೆ 2002ರಲ್ಲಿ ನಿಧನರಾದ ನಂತರ ಆರೋಗ್ಯವೂ ಕೈ ಕೊಟ್ಟಿತು. ಪ್ರಮೀಳಾ ಸಹ ಸಮಾಜವಾದಿ ಚಳವಳಿಯ ಜತೆ ಗುರುತಿಸಿಕೊಂಡಿದ್ದರಲ್ಲದೆ ಲೋಕಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.   ಸುದೀರ್ಘ ಕಾಲದ ಅನಾರೋಗ್ಯದ ನಂತರದಲ್ಲಿ ನವೆಂಬರ್ 2005ರ ವರ್ಷದಲ್ಲಿ ಈ ಲೋಕವನ್ನಗಲಿದರು.  

ಪ್ರಖರ ಚಿಂತನೆಗೆ ಹೆಸರಾಗಿದ್ದ ದಂಡವತೆ ಗಾಂಧೀಜಿ, ಮಾರ್ಕ್ಸ್‌, ಜೆಪಿ ಚಿಂತನೆಗಳ ಆಧಾರದ ಮೇಲೆ ಹಲವಾರು ಪುಸ್ತಕಗಳನ್ನು ಸಹ ಬರೆದಿದ್ದರು.  ಅವರ ಭಾಷಣಗಳಲ್ಲೂ ಒಂದು ಸೊಬಗಿತ್ತು.  ರಾಜಕಾರಣದಲ್ಲಿ ಅಪರೂಪವಾದ ನಿಷ್ಠೆ, ಸ್ವಚ್ಚತೆ, ಹಿರಿಮೆ, ಸಚ್ಚಾರಿತ್ರ್ಯ, ಉತ್ಕೃಷ್ಟ ಹಾಗೂ ದಕ್ಷ ಸೇವೆಗಳಲ್ಲಿ ನೆನಪಾಗಿ ಉಳಿಯುವ ಬೆರಳೆಣಿಕೆ ರಾಜಕಾರಾಣಿಗಳ ಇತಿಹಾಸದಲ್ಲಿ ಪ್ರೊ. ಮಧು ದಂಡವತೆ ಅವರು ಚಿರಕಾಲ ನೆನಪಿನಲ್ಲಿ ಉಳಿಯುತ್ತಾರೆ.

Madhu Dandavate


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ