ರಾ. ಸತ್ಯನಾರಾಯಣ
ರಾ. ಸತ್ಯನಾರಾಯಣ ಸಂಸ್ಮರಣೆ
ಮಹೋಪಾಧ್ಯಾಯ ರಾ. ಸತ್ಯನಾರಾಯಣ ಅವರು ಸಂಗೀತ, ನೃತ್ಯ, ಭೌತ ವಿಜ್ಞಾನ, ಪುರಾತತ್ವ ಶಾಸ್ತ್ರ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಖ್ಯಾತರೆನಿಸಿದ್ದವರು. ಇಂದು ಅವರ ಸಂಸ್ಮರಣಾ ದಿನ.
ರಾ. ಸತ್ಯನಾರಾಯಣರು 1927ರ ಮೇ 8 ರಂದು ಮೈಸೂರಿನಲ್ಲಿ ಜನಿಸಿದರು. ಅವರದ್ದು ಸಂಗೀತಗಾರರ ಮನೆತನ. ತಂದೆ ರಾಮಯ್ಯ. ತಾಯಿ ವರಲಕ್ಷಮ್ಮ. ಇವರ ಅಣ್ಣಂದಿರಾದ ರಾ. ಚಂದ್ರಶೇಖರಯ್ಯ, ರಾ. ಸೀತಾರಾಮ್‌ರವರು ಮೈಸೂರು ಸಹೋದರರೆಂದೇ ಗಾಯನದಲ್ಲಿ ಪ್ರಖ್ಯಾತರಾದರೆ ರಾ. ವಿಶ್ವೇಶ್ವರನ್ ರವರು ವೀಣೆಯಲ್ಲಿ ಪ್ರಸಿದ್ಧರು.
ಎಸ್.ಎಸ್.ಎಲ್.ಸಿ.ಯಲ್ಲಿ ರ‍್ಯಾಂಕ್ ಪಡೆದ ಸತ್ಯನಾರಾಯಣ ಅವರು ಪ್ರತಿವರ್ಷವೂ ಹಲವಾರು ಬಹುಮಾನಗಳನ್ನು ಗಳಿಸುತ್ತಿದ್ದವರು. ಅರಮನೆಯ ಸ್ಕಾಲರ್‌ಶಿಪ್, ಜನರಲ್ ಮೆರಿಟ್ ಸ್ಕಾಲರ್‌ಶಿಪ್‌ಗಳಿಂದಲೇ ಶಾಲೆಯ ಶಿಕ್ಷಣ ಪಡೆದವರು. ಬರವಣಿಗೆಯೂ ಅಷ್ಟೆ. ಭಿನ್ನವಾದ ವಿಚಾರಗಳಿಂದ ಅವರ ಉತ್ತರ ಕೂಡಿರುತ್ತಿತ್ತು. ನಾಲ್ವರು ಮಕ್ಕಳ ಸುಪ್ತವಾಗಿದ್ದ ಸೃಜನಶೀಲತೆಗೆ ನೀರೆರೆದವರು ತಾಯಿಯೇ. ಪ್ರತಿಯೊಬ್ಬರಿಗೂ ಅವರವರಿಗೆ ಇಷ್ಟವಾದ ಹಾದಿಯಲ್ಲಿ ತರಬೇತಿ ಸಂದಿತು. ಮನೆಯಲ್ಲಿ ಸದಾ ಸಾಂಸ್ಕೃತಿಕ ವಾತಾವರಣ.
ರಾ. ಸತ್ಯನಾರಾಯಣ ಅವರು ಕೈಲಾಸಂ ರವರ ಟೊಳ್ಳುಗಟ್ಟಿ, ಬಂಡ್ವಾಳವಿಲ್ಲದ ಬಡಾಯಿ, ಅಮ್ಮಾವ್ರಗಂಡ ಮುಂತಾದ ನಾಟಕಗಳ ಪ್ರಯೋಗ ಮಾಡಿದ್ದರು. ಮೊದ್ದುಮಣಿ ಪಾತ್ರಗಳಿಗೆ ಹೇಳಿ ಮಾಡಿಸಿದ ಮುಖ ಸತ್ಯನಾರಾಯಣರದ್ದು. ಅವರು ಉತ್ತಮ ಭಾಷಣಕಾರರು. ಥಿಯರಿ ಆಫ್ ರಿಲೆಟಿವಿಟಿ ಬಗ್ಗೆ ಭಾಷಣಕೊಡಬೇಕಾದ ಸಂದರ್ಭದಲ್ಲಿ ಬಂದ ಹಲವಾರು ಪ್ರಶ್ನೆಗಳಿಂದ ಅವರು ಕಲಿತ ಪಾಠ ಅನೇಕ. ತಲಸ್ಪರ್ಶಿ ಅಧ್ಯಯನ ನಡೆಸಬೇಕೆಂಬ ಛಲ ಮೂಡಿತ್ತು. ಮುಂದೆ ತಾಯಿಯ ಪ್ರೇರಣೆಯಿಂದ ’ವರಲಕ್ಷ್ಮೀ ಮ್ಯೂಸಿಕ್ ಅಕಾಡೆಮಿ’ ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿದರು. ಇವರ ಮನೆಯಲ್ಲಿ ನಡೆಸುತ್ತಿದ್ದ ರಾಮೋತ್ಸವಕ್ಕೆ ಮೈಸೂರು ವಾಸುದೇವಾಚಾರ್ಯ, ದ್ವಾರಂ, ವೆಂಕಟಗಿರಿಯಪ್ಪ ಮುಂತಾದವರೆಲ್ಲ ಪಾಲ್ಗೊಳ್ಳುತ್ತಿದ್ದುದೇ ವಿಶೇಷ. ಸಂಗೀತಗಾರರಾದ ಟೈಗರ್ ವರದಾಚಾರ್, ಬೂದಲೂರು ಕೃಷ್ಣಮೂರ್ತಿ ಮುಂತಾದವರೊಡನೆ ನಿರಂತರ ಸಂಪರ್ಕ ಇತ್ತು. ಮನೆಯಲ್ಲಿ ಸದಾ ಸಂಗೀತದ ಚರ್ಚೆ ಏರ್ಪಡುತ್ತಿತ್ತು. ಸತ್ಯನಾರಾಯಣರು ಗಾಯನಕ್ಕೆ ಬೇಕಾದ ಶಾಸ್ತ್ರ ಸಂಬಂಧ, ವಾದನ ಶೈಲಿ, ಲಕ್ಷ್ಯ-ಲಕ್ಷಣ ಗಳೆರಡಕ್ಕೂ, ವಾದನ ಬೋಧನೆಗಳಿಗೂ ಮಹತ್ತರ ಕೊಡುಗೆ ನೀಡಿದರು.
ಮೈಸೂರು ಶಾರದಾ ವಿಲಾಸ್ ಕಾಲೇಜಿನ ವಿಜ್ಞಾನ ಉಪನ್ಯಾಸಕರಾಗಿ, ರಸಾಯನ ಶಾಸ್ತ್ರದ ಪ್ರೊಫೆಸರಾಗಿ ಸತ್ಯನಾರಾಯಣ ಅವರ ಸೇವೆ ಸಂದಿತ್ತು. ಕರ್ನಾಟಕದ ಸಂಗೀತವಾಹಿನಿ, MUSIC OF MADHWA MONKS, ನೃತ್ಯ ನಿರ್ಣಯ, ಬೃಹದ್ದೇಶಿ, ಪುಂಡರೀಕ ಮಾಲಾಗಳಿಗೆ ಪ್ರವೇಶಿಕಾ ಗ್ರಂಥಗಳನ್ನು ರಚಿಸಿದರು. ಯೋಗ, ವ್ಯಾಕರಣ, ಮಂತ್ರ-ತಂತ್ರ, ಸಂಗೀತಶಾಸ್ತ್ರ, ಪ್ರಯೋಗನೃತ್ಯ, ವೇದವೇದಾಂತ, ಮೀಮಾಂಸೆ, ಛಂದಸ್ಸು ಹೀಗೆ ಪ್ರತಿಯೊಂದು ವಿಷಯದಲ್ಲೂ ಅಧಿಕೃತವಾಗಿ ಮಾತನಾಡಬಲ್ಲ ವ್ಯಕ್ತಿತ್ವ ರಾ. ಸತ್ಯನಾರಾಯಣ ಅವರದಾಗಿತ್ತು.
ರಾ.ಸತ್ಯನಾರಾಯಣ ಅವರಿಗೆ ಪದ್ಮಶ್ರೀ, ಕಾಶಿ ವಿಶ್ವವಿದ್ಯಾಲಯದಿಂದ ಮಹೋಪಾಧ್ಯಾಯ, ರಾಜ್ಯ ಸಂಗೀತ ವಿದ್ವಾನ್, ಸಂಗೀತ ನಾಟಕ ಅಕಾಡೆಮಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು. ಇವರ ಶಿಷ್ಯರು ಜರ್ಮನಿ, ಇಟಲಿ ಸೇರಿದಂತೆ ಪ್ರಪಂಚದ ನಾನಾ ಭಾಗಗಳಲ್ಲಿ ಇದ್ದಾರೆ.
ನಾಡಿನ ಮಹಾನ್ ಚೇತನರಾಗಿದ್ದ ರಾ. ಸತ್ಯನಾರಾಯಣರು 2020ರ ಜನವರಿ 17ರಂದು ಈ ಲೋಕವನ್ನು ಅಗಲಿದರು. ಈ ಮಹಾನ್ ಚೇತನಕ್ಕೆ ನಮನ.
Dr. Ra Satyanarayana, a great music scholar and a multifaceted personality
ಕಾಮೆಂಟ್‌ಗಳು