ವಿದ್ಯಾ ಬಾಲನ್
ವಿದ್ಯಾ ಬಾಲನ್
ವಿದ್ಯಾ ಬಾಲನ್ ಪ್ರತಿಭಾವಂತ ಚಲನಚಿತ್ರ ಕಲಾವಿದೆ. ಒಂದು ರಾಷ್ಟ್ರ ಪ್ರಶಸ್ತಿ, ಆರು ಫಿಲಂ ಫೇರ್, ಹಲವು ಸ್ಕ್ರೀನ್ ಪ್ರಶಸ್ತಿಗಳನ್ನು ಗಳಿಸಿರುವ ವಿದ್ಯಾಬಾಲನ್ ಚಲನಚಿತ್ರವೆಂಬ ಬಣ್ಣದ ಲೋಕದಲಿ ಏಕತಾನತೆಯ ಪಾತ್ರಗಳಲ್ಲಿ ಕಳೆದುಹೋಗುವ ಕಲಾವಿದರ ನಡುವೆ ಅಪವಾದವೆಂಬಂತೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ಪ್ರತಿಭೆಯನ್ನು ಪ್ರಕಾಶಪಡಿಸುತ್ತಿರುವವರು.
ವಿದ್ಯಾಬಾಲನ್ 1978ರ ಜನವರಿ 1ರಂದು ಜನಿಸಿದರು. ಸೋಷಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿದ್ಯಾ ತಮ್ಮ ಹದಿನಾರರ ವಯಸ್ಸಿನಲ್ಲೇ ‘ಹಂ ಪಾಂಚ್’ ಎಂಬ ಕಿರುತೆರೆ ಧಾರಾವಾಹಿಯ ಪಾತ್ರದಲ್ಲಿ ಕಂಡಿದ್ದರು. ತಮ್ಮ ವ್ಯಾಸಂಗದ ಜೊತೆ ಜೊತೆಗೆ ಸಿನಿಮಾಗಳಲ್ಲಿ ಪಾತ್ರವಹಿಸಲು ಹಲವಾರು ಪ್ರಯತ್ನನಡೆಸಿ ವಿಫಲರಾದ ವಿದ್ಯಾ ಹಲವು ಕಿರುತೆರೆಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. 2003ರಲ್ಲಿ ಬಂಗಾಳಿ ಚಿತ್ರವೊಂದರಲ್ಲಿ ನಟಿಸಿದ ಅವರು, 2005ರ ವರ್ಷದಲ್ಲಿ ಪರಿಣೀತಾ ಹಿಂದೀ ಚಿತ್ರದಲ್ಲಿನ ಅಭಿನಯದಿಂದ ಎಲ್ಲರ ಗಮನ ಸೆಳೆದರು.
ಮುಂದೆ ‘ಲಗೇ ರಹೋ ಮುನ್ನಾಭಾಯ್’ ಹಾಸ್ಯ ಚಿತ್ರದಲ್ಲಿ ತಮ್ಮ ಸುಂದರ ನಗೆಯ ಅಭಿನಯ ನೀಡಿದ ವಿದ್ಯಾ ಬಾಲನ್ ಕಿಸ್ಮತ್ ಕನೆಕ್ಷನ್, ಹೇಯ್ ಬೇಬಿ ಮುಂತಾದ ಮತ್ತಷ್ಟು ಹಾಸ್ಯ ಪಾತ್ರಗಳಲ್ಲಿ ಮೂಡಿಬಂದರು.
2009ರಿಂದ ಈಚೆಗೆ ಬಂದ ಪಾತ್ರಗಳಾದ ಪಾ, ಬ್ಲಾಕ್ ಕಾಮೆಡಿ ಇಷ್ಕಿಯಾ, ನೋ ಒನ್ ಕಿಲ್ಡ್ ಜೆಸ್ಸಿಕಾ, ದ ಡರ್ಟಿ ಪಿಕ್ಚರ್, ಕಹಾನಿ, ತುಮ್ಹಾರಿ ಸುಲು, ಮಿಷನ್ ಮಂಗಲ್, ಶಕುಂತಲಾ ದೇವಿ ಮುಂತಾದವುಗಳಿಂದ ವಿದ್ಯಾಬಾಲನ್ ಎಲ್ಲೆಡೆ ಪ್ರಸಿದ್ಧರಾದರು. ಸಾಮಾನ್ಯವಾಗಿ ಮೈತುಂಬಾ ಸೀರೆ ಉಟ್ಟು ಕಾರ್ಯಕ್ರಮಗಳಲ್ಲಿ ಕಂಡು ಸಭ್ಯತೆಯಿಂದ ನಡೆದುಕೊಳ್ಳುವ ವಿದ್ಯಾಳನ್ನು ಸಹಿಸದ ಇಂದಿನ ಮೀಡಿಯಾ ಪ್ರಪಂಚ ಆಕೆಯನ್ನು ಡ್ರೆಸ್ ಸೆನ್ಸ್ ಇಲ್ಲದಾಕೆ ಎಂದು ಟೀಕೆಗೆ ಮಾಡಿತು. ಇದಕ್ಕೆ ಸೊಪ್ಪುಹಾಕದ ವಿದ್ಯಾಬಾಲನ್ ತಾನು ಆಯ್ದುಕೊಂಡ ವಿವಿಧಪಾತ್ರಗಳಲ್ಲಿನ ಅಭಿನಯದ ಮೂಲಕ ಸಮರ್ಥ ಉತ್ತರ ನೀಡಿದಾಕೆ.
ವಿದ್ಯಾಬಾಲನ್ ಅವರಿಗೆ ಪದ್ಮಶ್ರೀ ಪುರಸ್ಕಾರವೂ ಸಂದಿದೆ.
ವಿದ್ಯಾಬಾಲನ್ ಕೆಲ ವರ್ಷದ ಹಿಂದೆ ಚಲನಚಿತ್ರ ನಿರ್ಮಾಪಕ ಸಿದ್ಧಾರ್ಥ ರಾಯ್ ಕಫೂರ್ ಅವರನ್ನು ವಿವಾಹವಾಗಿದ್ದಾರೆ. ಈ ನಗೆಮುಗದ ಸುಂದರಿಯ ನಗೆ, ಸಂತಸ, ಸಭ್ಯತೆ ಮತ್ತು ಅಭಿನಯ ಸಾಮರ್ಥ್ಯಗಳು ಮಾಸದಿರಲಿ.
On the birth day of distinctively talented actress Vidya Balan
ಕಾಮೆಂಟ್‌ಗಳು