ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಸರಾನಿ


 ಮಹಾನ್ ನಟ ಅಸರಾನಿ ನಿಧನ


ಮಹಾನ್ ನಟ ಅಸರಾನಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. 

1941ರ ಜನವರಿ 1ರಂದು ಜೈಪುರದಲ್ಲಿ ಸಿಂಧಿ ಕುಟುಂಬದಲ್ಲಿ ಹುಟ್ಟಿದ ಗೋವರ್ಧನ್ ಅವರು ಅಸರಾನಿ ಎಂದೇ ಜನಪ್ರಿಯರಾಗಿದ್ದರು. ಅವರ ತಂದೆ ರತ್ನಗಂಬಳಿ‌ಗಳನ್ನು ಮಾರುವ ಅಂಗಡಿ ಇಟ್ಟಿದ್ದರು. ಆ ವ್ಯವಹಾರದಲ್ಲಿ ಆಸಕ್ತಿ ತೋರಿಸದ ಅಸರಾನಿ ಅವರಿಗೆ ಅಭಿನಯದಲ್ಲಿ ಒಲವಿತ್ತು. ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಕಲಿತು, ರಾಜಸ್ಥಾನ ಕಾಲೇಜಿನಿಂದ ಪದವಿ ಮುಗಿಸಿದರು. ಆ ಹೊತ್ತಿಗಾಗಲೇ ಅವರು ಜೈಪುರ ಆಕಾಶವಾಣಿಯಲ್ಲಿ ಕಂಠದಾನ ಕಲಾವಿದರಾಗಿ ಪಳಗಿದ್ದರು. 

ಅಸರಾನಿ ಅವರು ಪುಣೆಯ ಫಿಲ್ಮ್‌ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ (ಎಫ್‌ಟಿಐಐ)ನಲ್ಲಿ 1964ರಲ್ಲಿ ತರಬೇತಿ ಪಡೆದು ಹೊರಬಂದರಾದರೂ ಅವರಿಗೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು 1967ರಲ್ಲಿ ಬಂದ ‘ಹರೇ ಕಾಂಚ್‌ ಕಿ ಚೂಡಿಯಾಂ’  ಚಿತ್ರದಲ್ಲಿ. ಆ ಚಿತ್ರದಲ್ಲಿ ನಟ ಬಿಸ್ವಜೀತ್ ಸ್ನೇಹಿತನ ಪಾತ್ರದಲ್ಲಿ ನಟಿಸಿದರು.

ಅದೇ ಕಾಲಘಟ್ಟದಲ್ಲಿ ಕೆಲವು ಗುಜರಾತಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಅವರನ್ನು ಅರಸಿ ಬಂದವು. ಆ ಸಂದರ್ಭದಲ್ಲಿ ವಹೀದಾ ರಹಮಾನ್ ಅವರ ಜೊತೆ ನಾಯಕ ನಟನಾಗಿ ಗುಜರಾಥಿ ಚಿತ್ರವೊಂದರಲ್ಲಿ ನಟಿಸಿದ್ದರು. 

ಹೃಷಿಕೇಶ್ ಮುಖರ್ಜಿ, ಗುಲ್ಜಾರ್ ಹಾಗೂ ಬಿ.ಆರ್. ಚೋಪ್ರಾ ಮೊದಲಾದ ದಿಗ್ಗಜರ ಚಿತ್ರಗಳ ಮೂಲಕ ಅಭಿನಯದಲ್ಲಿ ಛಾಪು ಮೂಡಿಸಿದ ಅಸರಾನಿ ಅವರು ಸೂಪರ್‌ ಸ್ಟಾರ್ ರಾಜೇಶ್ ಖನ್ನಾ ಅವರ ಆಪ್ತಸ್ನೇಹಿತರಾಗಿದ್ದು, ಅವರೊಟ್ಟಿಗೆ ಸುಮಾರು 25 ಚಿತ್ರಗಳಲ್ಲಿ ನಟಿಸಿದ್ದರು. 

1970 ರಿಂದ 1979 ರವರೆಗೆ ಪೋಷಕ ನಟನಾಗಿ ಅಸರಾನಿ ಅವರ ಅತ್ಯಂತ ಸ್ಮರಣೀಯ ಚಿತ್ರಗಳು ಮೇರೆ ಅಪ್ನೆ, ಕೋಶಿಶ್, ಬಾವರ್ಚಿ, ಪರಿಚಯ್, ಅಭಿಮಾನ್, ಮೆಹಬೂಬಾ, ಪಾಲ್ಕೋನ್ ಕಿ ಚಾವ್ ಮೇ, ದೋ ಲಡ್ಕೆ ದೋನೋ ಕಡ್ಕೆ ಮತ್ತು ಬಂದಿಶ್. 1977 ರಲ್ಲಿ ಅವರು ಬರೆದು ನಿರ್ದೇಶಿಸಿದ ಹಿಂದಿ ಚಲನಚಿತ್ರ 'ಚಲ ಮುರಾರಿ ಹೀರೋ ಬನ್ನೆ'ಯಲ್ಲಿ ಅವರು ಪ್ರಮುಖ ನಾಯಕರಾಗಿ ನಟಿಸಿದರು, ಇದು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. 1970 ರ ದಶಕದಲ್ಲಿ ಹಾಸ್ಯನಟನಾಗಿ ಅವರ ಗಮನಾರ್ಹ ಪಾತ್ರಗಳು ಆಜ್ ಕಿ ತಾಜಾ ಖಬರ್, ರೋಟಿ, ಪ್ರೇಮ್ ನಗರ, ಚುಪ್ಕೆ ಚುಪ್ಕೆ, ಛೋಟಿ ಸಿ ಬಾತ್, ರಫೂ ಚಕ್ಕರ್, ಶೋಲೆ, ಬಾಲಿಕಾ ಬಾಧು, ಫಕೀರಾ, ಅನುರೋಧ್, ಚೈಲ್ಲಾ ಬಾಬು, ಚರಸ್, ಫಾನ್ಸಿ, ದಿಲ್ಲಗಿ, ವ್ಹ ಪನೀಲ್ ಮುಂತಾದವು. 

ಹಿರಿಯ ವಯಸ್ಸಿನಲ್ಲಿ ಅಸರಾನಿ ಅವರ ಎರಡನೇ ಇನಿಂಗ್ಸ್‌ ಶುರುವಾದದ್ದು ನಿರ್ದೇಶಕ ಪ್ರಿಯದರ್ಶನ್ ಅವರ ಹಾಸ್ಯಚಿತ್ರಗಳಿಂದ. ‘ಹೇರಾ ಫೇರಿ’, ‘ಆಮ್‌ದನಿ ಅಠನ್ನಿ ಖರ್ಚಾ ರುಪಯ್ಯಾ’, ‘ಬಾಗ್‌ಬನ್’, ‘ಚುಪ್ಕೆ ಚುಪ್ಕೆ’, ‘ಗರಮ್ ಮಸಾಲಾ’, ‘ಬೋಲ್‌ ಬಚ್ಚನ್’ ಇವೆಲ್ಲವೂ ಅವರ ಹಿರಿಯ ವಯಸ್ಸಿನಲ್ಲಿನ ಅಭಿನಯದ ಚಿತ್ರಗಳು. 

ನಟಿ ಮಂಜು ಬನ್ಸಲ್ ಅವರನ್ನು ವಿವಾಹವಾಗಿದ್ದ ಅಸರಾನಿ ಅವರಿಗೆ ನವೀನ್ ಎಂಬ ಪುತ್ರ ಇದ್ದಾರೆ. 

ಫಿಲ್ಮ್‌ಫೇರ್‌ ಸೇರಿದಂತೆ ಕೆಲವು ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅಸರಾನಿ ತಮ್ಮ ಹಾಸ್ಯವಲ್ಲರಿಯ ‘ಟೈಮಿಂಗ್‌’ನಿಂದಾಗಿ ಖ್ಯಾತರಾಗಿದ್ದರು. ‘ಶೋಲೆ’ ಚಿತ್ರದ ಅತಿರೇಕಿ ಜೈಲರ್ ಪಾತ್ರದಲ್ಲಂತೂ ಅವರು ಅವಿಸ್ಮರಣೀಯರು.  ಅವರು ಆರು ಚಿತ್ರಗಳನ್ನು ನಿರ್ದೇಶಿಸಿದ್ದರು.

ಅಸರಾನಿ 2025ರ ಅಕ್ಟೋಬರ್ 20ರಂದು ನಿಧನರಾದರು.

Respects to departed soul Great actor Asarani 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ