ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೃಣಾಲಿನಿ


 ಮೃಣಾಲಿನಿ ಸಾರಾಭಾಯಿ 


ಪ್ರಖ್ಯಾತ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ಅವರು ಈ ಲೋಕವನ್ನಗಲಿದ ದಿನ  ಜನವರಿ 21, 2016. 

ಭರತನಾಟ್ಯಂ, ಕಥಕ್ಕಳಿ, ಮೋಹಿನಿಯಾಟ್ಟಂ ನೃತ್ಯ ಪ್ರಕಾರಗಳಲ್ಲಿ ಪ್ರಸಿದ್ಧಿ ಪಡೆದಿದ್ದ ಮೃಣಾಲಿನಿ ಅವರು ರಬೀಂದ್ರನಾಥ ಠಾಗೂರರ  ಮಾರ್ಗದರ್ಶನದಲ್ಲಿ  ಶಾಂತಿ ನಿಕೇತನದ  ವಿದ್ಯಾರ್ಥಿನಿಯಾಗಿದ್ದರು.  

ಮೃಣಾಲಿನಿ ಸಾರಾಭಾಯಿ ಅವರು 1918 ವರ್ಷದ ಮೇ 11ರಂದು ಜನಿಸಿದರು.  ಪಾಲಕ್ಕಾಡ್ ಆನಕ್ಕರ ವಡಕ್ಕತ್ ತರವಾಡು ಮನೆಯ ಡಾ. ಸ್ವಾಮಿನಾಥನ್ ಮತ್ತು ಅಮ್ಮ ದಂಪತಿಗಳ ಮಗಳಾದ  ಮೃಣಾಲಿನಿ, ಐಎನ್‌ಎ ಸೇನೆಯಲ್ಲಿದ್ದ ಕ್ಯಾಪ್ಟನ್ ಲಕ್ಷ್ಮಿ ಅವರ ಸಹೋದರಿ.  ಬಾಹ್ಯಾಕಾಶ ಸಂಶೋಧನೆಯ ಪಿತಾಮಹರಾದ  ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರೊಡನೆ ಮೃಣಾಲಿನಿ  ಸಾರಾಭಾಯಿ ಅವರ ವಿವಾಹ ನಡೆದಿತ್ತು.   ನೃತ್ಯ ಕಲಾವಿದೆ ಮಲ್ಲಿಕಾ ಸಾರಾಭಾಯಿ ಈ ದಂಪತಿಗಳ ಪುತ್ರಿ.   ಮೃಣಾಲಿನಿ ಅವರು  ನೃತ್ಯಕಲೆಯಲ್ಲಷ್ಟೇ ಅಲ್ಲದೆ  ಕವಯತ್ರಿಯಾಗಿ, ಬರಹಗಾರ್ತಿಯಾಗಿ ಹಾಗೂ ಸಮಾಜಪರ ಹೋರಾಟದ ನಿಲುವುಗಳಿಂದ ಸುದ್ಧಿಯಲ್ಲಿದ್ದರು.   

ಭಾರತದ ಶಾಸ್ತ್ರೀಯ ನೃತ್ಯಕಲೆಯನ್ನು ಜಗತ್ತಿಗೆ ಪರಿಚಯಿಸಿ, ಅದರ ಮಹತ್ವವನ್ನು ಸಾರಿದ ಮಹಾನ್ ಪ್ರತಿಭೆ ಮೃಣಾಲಿನಿ, 1949ರಲ್ಲಿ ಅಹಮ್ಮದಾಬಾದ್‌ನಲ್ಲಿ ದರ್ಪಣಂ ಎಂಬ ಕಲಾಕೇಂದ್ರವನ್ನು ಸ್ಥಾಪಿಸುವ ಮೂಲಕ ನೃತ್ಯ ಕಲೆಯ ಕಂಪನ್ನು ಪಸರಿಸಿದ್ದರು.

1992ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.  ವಾಯ್ಸ್ ಆಫ್ ದಿ ಹಾರ್ಟ್ ಎಂಬುದು ಅವರ ಆತ್ಮಚರಿತ್ರೆ.
 
ಮೃಣಾಲಿನಿ ಸಾರಾಭಾಯಿ ಅವರು 2016ರ ಜನವರಿ 21ರಂದು  ತಮ್ಮ 97ನೇ ವಯಸ್ಸಿನಲ್ಲಿ ಅಹಮದಾಬಾದಿನಲ್ಲಿ ನಿಧನರಾದರು.

On Remembrance Day of Mrinalini Sarabhai

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ