ಸರಿತಾ ಜ್ಞಾನಾನಂದ
ಸರಿತಾ ಜ್ಞಾನಾನಂದ
ಕಥೆಗಾರ್ತಿಯಾಗಿ ಸ್ವಂತ ಬರಹಗಳ ಜೊತೆಗೆ ವಿವಿಧ ಭಾಷೆಗಳ ಪ್ರಸಿದ್ಧರ ಕಥೆ, ಕಾದಂಬರಿಗಳನ್ನು ನಿರಂತರವಾಗಿ ಕನ್ನಡಕ್ಕೆ ತರುತ್ತಿರುವವರಲ್ಲಿ ಸರಿತಾ ಜ್ಞಾನಾನಂದ ಪ್ರಮುಖರು.
ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಕ್ರಿಯಾಶೀಲರಾಗಿರುವ ಸರಿತಾ ಜ್ಞಾನಾನಂದರು 1942ರ ಜನವರಿ 21ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎನ್. ಆರ್. ನಂಜುಂಡಸ್ವಾಮಿ ಅವರು ಮತ್ತು ತಾಯಿ ಸುಬ್ಬಮ್ಮನವರು.
ಸರಿತಾ ಅವರ ಪ್ರಾರಂಭಿಕ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಮುಂದೆ ಮ್ಯೆಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಮತ್ತು ಬಿ.ಎಡ್ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ. ಎಡ್. ಪದವಿಗಳನ್ನು ಪಡೆದರು. ಹಿಂದಿಯಲ್ಲಿ ರಾಷ್ಟ್ರಭಾಷಾ ಪ್ರವೀಣರಾಗಿರುವುದಲ್ಲದೆ ಕನ್ನಡ, ಇಂಗ್ಲಿಷ್, ತೆಲುಗು, ತಮಿಳು, ಮರಾಠಿ, ಮಲಯಾಳಂ ಮತ್ತು ಸಂಸ್ಕೃತ ಭಾಷೆಗಳಲ್ಲಿಯೂ ಅವರು ಪ್ರಾವೀಣ್ಯತೆ ಸಾಧಿಸಿದ್ದಾರೆ. ಸರಿತಾ ಅವರು ಬೆಂಗಳೂರು ಮತ್ತು ಕೆಜಿಎಫ್‍ಗಳಲ್ಲಿ ಶಾಲಾ ಶಿಕ್ಷಕರಾಗಿ ಕಾರ‍್ಯನಿರ್ವಹಿಸಿ ನಿವೃತ್ತಿ ಪಡೆದಿದ್ದಾರೆ.
ಸಾಹಿತ್ಯದಲ್ಲಿ ಅಪಾರ ಒಲವುಳ್ಳ ಸರಿತಾ ಜ್ಞಾನಾನಂದರು ‘ಒಂದೂರಲ್ಲಿ ಒಬ್ಬ ನಿರ್ಮಲಾ', ‘ಬೆಂಕಿ ಹೂ’, ‘ಪರಿಪೂರ್ಣ’, ‘ಬಂಧನಕೆ ಬಂದ ಗಿಳಿ’, ‘ಒಲಿದರೆ ನಾರಿ’ ಮುಂತಾದ ಕಾದಂಬರಿಗಳಲ್ಲದೆ ಪಾಕೀಸ್ತಾನದಲ್ಲಿ ಶಂಕರ್, ಪ್ರಪಾತ, ಗಾಜಿನ ಕಣ್ಣು, ಎ ಹೌಸ್ ಟುಲೆಟ್ ಮುಂತಾದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿದ್ದಾರೆ. ‘ತನ್ನ ಮೀನು ತಾನಾದ’ ವೈಜ್ಞಾನಿಕ ಕಾದಂಬರಿಯು 'ಕನ್ನಡಪ್ರಭ'ದಲ್ಲಿ, 'ಪ್ರಪಾತ’ ಕಾದಂಬರಿಯು 'ಕರ್ಮವೀರ' ವಾರಪತ್ರಿಕೆಯಲ್ಲಿ, ‘ಒಲಿದರೆ ನಾರಿ’ ಮತ್ತು ‘ಸುವರ್ಣ ಮಾಲಿ’ ಕಾದಂಬರಿಗಳು ‘ಪ್ರಜಾಮತ' ವಾರಪತ್ರಿಕೆಯಲ್ಲಿ, ‘ವಿಷಗರ್ಭ’ ಕಾದಂಬರಿಯು 'ತರಂಗ' ವಾರಪತ್ರಿಕೆಯಲ್ಲಿ ಹೀಗೆ ಹಲವಾರು ಕಾದಂಬರಿಗಳು ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಜನಪ್ರಿಯ ಕಾದಂಬರಿಗಳೆನಿಸಿವೆ.
ಸರಿತಾ ಜ್ಞಾನಾನಂದ ಅವರು ಶಾಲಾಮಕ್ಕಳು ಅಭಿನಯಿಸಲು ಅನುಕೂಲವಾಗುವಂತಹ 'ಹೆಣ್ಣೇ ಹೆಚ್ಚು', ‘ಮೋಡಗಳು’, ನಾಯಿಕೊಡೆ’ ಮೊದಲಾದ ಅಸಂಗತ ನಾಟಕಗಳಲ್ಲದೆ ‘ರಾಕ್ಷಸ’, ‘ಥ್ಯಾಂಕ್ಯು ಮಿಸ್ಟರ್ ಗ್ಲಾಡ್’ (ಅನಿಲ್ ಬರ್ವೆಯವರ ಕಾದಂಬರಿ ಆಧಾರಿತ), ‘ನಾಳೆ ಯಾರದು ?’ ಮುಂತಾದ ಹಲವಾರು ನಾಟಕಗಳನ್ನು ರಚಿಸಿದ್ದಾರೆ.
ಸುಮಾರು ಮುನ್ನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ರಚಿಸಿದ್ದು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿರುವುದಲ್ಲದೆ ತೆಲುಗು, ತಮಿಳು, ಹಿಂದಿ ಭಾಷೆಗಳಿಗೂ ಅನುವಾದಗೊಂಡಿವೆ. ‘ಬೃಂದಾವನ’, ಹಾಗೂ ‘ತುಳಸೀ ಕಟ್ಟೆ’ ಎಂಬ ಎರಡು ಕಥಾಸಂಕಲನಗಳೂ ಪ್ರಕಟಗೊಂಡಿವೆ. ಇವರ ಹಲವಾರು ಕತೆಗಳು ದೂರದರ್ಶನದಲ್ಲೂ ಪ್ರಸಾರವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಣೆಯ ಭಾರತ-ಭಾರತಿ ಪುಸ್ತಕ ಮಾಲೆಗಾಗಿ, ಮೀರಾಬಾಯಿ, ಅಶ್ವಘೋಷ, ಗಡಿಯಾರ, ಮಿದುಳು, ಕಣ್ಣು ಮುಂತಾದ ಹಲವಾರು ಮಕ್ಕಳ ಪುಸ್ತಕಗಳನ್ನೂ ರಚಿಸಿದ್ದಾರೆ. ಸಂಪಾದಿತ ಕೃತಿಗಳಲ್ಲಿ ಪ್ರಮುಖವಾದವುಗಳೆಂದರೆ ಶರಭಾಂಕಲಿಂಗ ಶತಕಮು, ಡಾ. ಬಾ. ರಾ. ಗೋಪಾಲ್ ಅವರ ಕನ್ನಡ ಲೇಖನಗಳು, ಆಚಾರ‍್ಯ ಶ್ರೀ, ಆಚಾರ‍್ಯಾಭಿವಂದನೆ, ಜಕ್ಕಣಾಚಾರ‍್ಯ ಮುಂತಾದವು ಪ್ರಮುಖವಾದವುಗಳು.
ಅನುವಾದ ಸಾಹಿತ್ಯದಲ್ಲೂ ಸರಿತಾ ಅವರ ಕೊಡುಗೆ ದೊಡ್ಡದಿದೆ. ಯಂಡಮೂರಿ ವೀರೇಂದ್ರನಾಥ್, ಸೂರ‍್ಯದೇವರ ರಾಮಮೋಹನರಾವ್, ಡಾ. ಕೊಂಡೂರು ವೀರರಾಘವಾಚಾರ್ಯಲು, ಬಲಿವಾಡ ಕಾಂತರಾವ್, ಮಲ್ಲಾದಿ ವೆಂಕಟ ಕೃಷ್ಣಮೂರ್ತಿ, ಡಾ. ಸಮರಂ ಮುಂತಾದ ತೆಲುಗು ಲೇಖಕರು, ತಮಿಳಿನ ಶಿವ ಶಂಕರಿ, ನಾರಾಯಣದತ್ತ ಶ್ರೀಮಾಲಿಯವರ ಹಿಂದಿ, ರಾಮ ಮೊಹಮದ್ ಡಿಸೌಜರವರ ಉರ್ದು ಮತ್ತು ಮರಾಠಿ ಭಾಷೆಗಳಿಂದ ಸುಮಾರು 50ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸಂಗೀತದಲ್ಲಿ ಕೂಡ ಸಾಧನೆ ಮಾಡಿರುವ ಸರಿತಾ ಜ್ಞಾನಾನಂದರು ‘ನೀಗಿಕೊಂಡ ಸಂಸ’, 'ಜುಂನಾಳ ‘ಧೂಳ್ಯನ ಪ್ರಸಂಗ’, ‘ಸಂಗ್ಯಾ ಬಾಳ್ಯ’, ‘ಜೋಕುಮಾರ ಸ್ವಾಮಿ’ ‘ಸಖೀಗೀತ’, ಬೆನಕನ ಕೆರೆ’ ಮುಂತಾದ ಅನೇಕ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ನೃತ್ಯಗಳಲ್ಲಿ ತರಬೇತಿ ನೀಡಿದ್ದಾರೆ. ತಮ್ಮ ಸಂಗೀತದಲ್ಲಿ ಅನೇಕ ಧ್ವನಿಸುರುಳಿಗಳನ್ನೂ ಬಿಡುಗಡೆ ಮಾಡಿದ್ದಾರೆ.
ಸರಿತಾ ಜ್ಞಾನಾನಂದರು ಕೆ. ಜಿ.ಎಫ್. ನಲ್ಲಿ ಕನ್ನಡೇತರರಿಗೆ ಕನ್ನಡ ತರಗತಿಗಳನ್ನು ನಡೆಸಿ ಅನೇಕ ಇತರ ಭಾಷಿಗರಿಗೆ ಕನ್ನಡ ಭಾಷೆಯನ್ನು ಕಲಿಸಿದ್ದಾರೆ.
ಸರಿತಾ ಮತ್ತು ಜ್ಞಾನಾನಂದರದ್ದು ಅನುರೂಪ ದಾಂಪತ್ಯವಾಗಿದ್ದು ಸಾಹಿತ್ಯ, ನೃತ್ಯ, ಸಂಗೀತ, ಶಿಲ್ಪಕಲೆ, ಮುಂತಾದ ಕಲಾಪ್ರಕಾರಗಳಿಗೆ ಈ ಇಬ್ಬರ ಕೊಡುಗೆಯೂ ಮೆಚ್ಚುವಂತದ್ದು.
Sarita Jnanananda
ಕಾಮೆಂಟ್‌ಗಳು