ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಂತ ಪೈ


 ಅನಂತ ಪೈ ಸಂಸ್ಮರಣೆ


ನಮ್ಮ ಪೀಳಿಗೆಯ ಹಿಂದಿನ ಕಾಲದಲ್ಲಿ ಕಥೆ ಅಂದ್ರೆ ರಾಮಾಯಣ, ಮಹಾಭಾರತ, ಭಾಗವತ ಅನ್ನೋವ್ರು. ಇಂದಿನ ಕಾಲದಲ್ಲಿ ಮಕ್ಕಳು ಸ್ಪೈಡರ್ ಮ್ಯಾನ್, ಹ್ಯಾರಿ ಪಾಟರ್, ಕ್ಯಾಪ್ಟನ್ ಅಮೆರಿಕ ಇತ್ಯಾದಿ ಹೇಳ್ತಾರೆ. ಕನ್ನಡದಲ್ಲಿ ಕಥೆಗಳು ಅನ್ನೋದನ್ನ ಮಕ್ಕಳು ಇಂದಿನ ದಿನಗಳಲ್ಲಿ ಕೇಳ್ತಾರ. ದೇವರಾಣೆ ನಂಗೊತ್ತಿಲ್ಲ. ನಮ್ಮ ಕಾಲದಲ್ಲಿ ಕಥೆಯ ದೊಡ್ಡದೊಂದು ಯುಗ ಇತ್ತು. ಅದು 'ಅಮರ ಚಿತ್ರ ಕಥಾ ಯುಗ'. ಆ ಯುಗದ ಪ್ರವರ್ತಕರೇ  'ಅನಂತ' ಪೈ.ಇಂದು ಅವರ ಸಂಸ್ಮರಣಾ ದಿನ.  ಅವರು ಈ ಲೋಕವನ್ನಗಲಿದ್ದು 2011ರ ಫೆಬ್ರವರಿ 24 ರಂದು.

ಅನಂತ ಪೈ 1929ರ ಸೆಪ್ಟೆಂಬರ್ 17ರಂದು ಕಾರ್ಕಳದಲ್ಲಿ ಜನಿಸಿದರು. ತಂದೆ ವೆಂಕಟರಾಯರು. ತಾಯಿ ಸುಶೀಲಾ ಪೈ. ಎರಡು ವರ್ಷದ ಮಗುವಾಗಿದ್ದಲೇ ಅಪ್ಪ ಅಮ್ಮನನ್ನು ಕಳಕೊಂಡ ಅನಂತ ಪೈ ಅಜ್ಜನ ಆರೈಕೆಯಲ್ಲಿ ಬಾಲ್ಯವನ್ನು ಕಳೆದರು. ಹನ್ನೆರಡನೇ ವಯಸ್ಸಿನಲ್ಲಿ ಅಜ್ಜನೂ ಕಣ್ಮುಚ್ಚಿದಾಗ ಸೋದರ ಸಂಬಂಧಿಯೊಂದಿಗೆ ಮುಂಬೈಗೆ ಬಂದರು. ಮಾಹಿಮ್ ಬಡಾವಣೆಯಲ್ಲಿನ ಓರಿಯೆಂಟಲ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದು ಮುಂದೆ ಮುಂಬಯಿ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದಲ್ಲಿನ ಎರಡು ಪದವಿಗಳನ್ನು ಗಳಿಸಿದರು. ಜೊತೆಗೆ ಎಂಟು ಭಾಷೆಗಳನ್ನೂ ಮಾತನಾಡಲಿಕ್ಕೆ ಕಲಿತರು.

ಬರವಣಿಗೆ ಮತ್ತು ಪ್ರಕಾಶನದಲ್ಲಿ ಆಸಕ್ತಿ ಹೊಂದಿದ್ದ ಅನಂತ ಪೈ ಮೊದಲು ನೌಕರಿ ಆರಂಭಿಸಿದ್ದು 1954ರಲ್ಲಿ ‘ಮಾನವ್’ ಎನ್ನುವ ನಿಯತಕಾಲಿಕೆ ಆರಂಭಿಸುವ ಮೂಲಕ. ಮಾನಸಿಕ ಮತ್ತು ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದ ಆ ನಿಯತಕಾಲಿಕೆ ಹೆಚ್ಚುಕಾಲ ಬಾಳಲಿಲ್ಲ. 1961ರಲ್ಲಿ ಪ್ರಕಾಶನ ಸಂಸ್ಥೆಯೊಂದರ ಪುಸ್ತಕ ವಿಭಾಗದಲ್ಲಿ ಸೇರ್ಪಡೆಯಾದ ಪೈ, ‘ಇಂದ್ರಜಾಲ ಕಾಮಿಕ್ಸ್’ ಪ್ರಕಟಣೆಯಲ್ಲಿ ತೊಡಗಿಕೊಂಡರು. ಅಮೆರಿಕದಲ್ಲಿ ಜನಪ್ರಿಯವಾಗಿದ್ದ ಫ್ಯಾಂಟಮ್, ಮಾಂಡ್ರೇಕರನ್ನು ಭಾರತದಲ್ಲೂ ಪರಿಚಯಿಸಿದರು. 

1965ರ ಸುಮಾರಿನಲ್ಲಿ ಐಬಿಎಚ್ ಸಂಸ್ಥೆಯಲ್ಲಿದ್ದ ಜಿ.ಕೆ. ಅನಂತರಾಮ್ ಅವರು ಶಿವರಾಮಕಾರಂತರಂತಹ ಮಹನೀಯರ ಜೊತೆಗೂಡಿ 'ಅಮರ ಚಿತ್ರ ಕಥಾ' ಎಂಬ ಚಿತ್ರಕಥಾ ಗುಚ್ಛವನ್ನು ಆರಂಭಿಸಿದ್ದರು. ಐಬಿಎಚ್ ಮಾಲೀಕರಾಗಿದ್ದ ಮಿರ್ಚಂದಾನಿ ಅವರು ಈ ಕ್ಷೇತ್ರಕ್ಕೆ ಅನಂತ ಪೈ ಅವರನ್ನು ಆಹ್ವಾನಿಸಿದರು. 'ದೈತ್ಯ ಪ್ರತಿಭೆ'ಯ ಅನಂತ ಪೈ ಚಿತ್ರಕಥೆಗಳನ್ನು ಸೊಗಸಾಗಿ ಹೆಣೆದು, ಮಕ್ಕಳಿಗೆ ಹೃದಯಂಗಮವಾಗಿ ಪ್ರಸ್ತುತಪಡಿಸಿ ಅಮರ ಚಿತ್ರ ಕಥೆಗಳಿಗೆ ವಿಶಾಲ ವಿಶ್ವವನ್ನೇ ತೆರೆದರು.

ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿದ್ದ ಅಮರ ಚಿತ್ರ ಕಥೆಗಳು ಕಾಲಾಂತರದಲ್ಲಿ ಭಾರತದ ಇಪ್ಪತ್ತು ಭಾಷೆಗಳು ಮತ್ತು ಹಲವು ವಿಶ್ವ ಪ್ರಮುಖ ಭಾಷೆಗಳಲ್ಲಿಯೂ ಬರಲಾರಂಭಿಸಿದವು. ಅಮರ ಚಿತ್ರಕಥೆಗಳೆಂದರೆ ಸುಂದರ ಚಿತ್ರಗಳು ಮತ್ತು ಸುಲಲಿತ ಓದಿಗೆ ಅನುವಾದ ಸುಂದರ ಹೊದಿಕೆ ಮತ್ತು ಎದ್ದು ಕಾಣುವ ಆಕಾರವುಳ್ಳ ಪುಸ್ತಕಗಳಾಗಿ ಈಗಲೂ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ರಾಮಾಯಣ ಮತ್ತು ಮಹಾಭಾರತದ ಅನೇಕ ಪಾತ್ರಗಳು ದೈವತ್ವದ ಲೇಪನ ಇಲ್ಲದಿದ್ದಾಗ್ಯೂ, ಔಚಿತವನ್ನು ಕಳೆದುಕೊಳ್ಳದ ರೋಚಕ ಮಕ್ಕಳ ಕತೆಗಳಾದವು. ಕೃಷ್ಣನ ಆಕರ್ಷಣೆಯ ಕತೆಗಳು ಮನಮೋಹಕ. ಕುಂಭಕರ್ಣನ ಕತೆಯನ್ನಂತೂ ನಾನು ಎಂದಿಗೂ ಮರೆಯಲಾರೆ. ಕನ್ನಡದಲ್ಲಿ ಅಂತಹ ಅನೇಕ ಕತೆಗಳನ್ನು ಶಿವರಾಮ ಕಾರಂತರು ರೋಚಕವಾಗಿ ಬರೆದಿದ್ದರು. ರಾಮ, ಕೃಷ್ಣ, ಭರತ, ಹನುಮಂತ, ಘಟೋತ್ಕಚ, ಸಾವಿತ್ರಿ,  ನಳ ದಮಯಂತಿ,  ವಸಂತಸೇನೆ - ಉದಯನ,  ಪರಶುರಾಮ, ಶ್ರವಣಕುಮಾರ, ಶಿಶುಪಾಲ, ಜರಾಸಂಧ, ಪ್ರಹಾದ, ಧ್ರುವ, ಶಕುಂತಲೆ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ತೆನಾಲಿ ರಾಮ ಹೀಗೆ ಅಂದಿನವರೆಗೆ ಇದ್ದ 440 ಚಿತ್ರಕತೆಗಳೂ 'ಅಮರ ಚಿತ್ರ ಕಥೆ'ಗಳೇ. 'ಅಮರ ಚಿತ್ರ ಕಥಾ’ ಇಂದೂ ಮಾರುಕಟ್ಟೆಯಲ್ಲಿವೆ. 

1969ರಲ್ಲಿ ಅನಂತ ಪೈ ‘ರಂಗ್ ರೇಖಾ ಫೀಚರ್ಸ್‌’ ಸ್ಥಾಪಿಸಿದರು. ಇದು ಭಾರತದ ಮೊಟ್ಟ ಮೊದಲ ಕಾಮಿಕ್ ಮತ್ತು ಕಾರ್ಟೂನ್ ಸಿಂಡಿಕೇಟ್. ‘ಟಿಂಕಲ್’ ನಿಯತಕಾಲಿಕೆ ಪೈ ಅವರ ಮಕ್ಕಳ ಪ್ರೀತಿಗೆ ಇನ್ನೊಂದು ಉದಾಹರಣೆ. 1981ರಲ್ಲಿ ಆರಂಭಗೊಂಡ ಈ ಮಕ್ಕಳ ಪತ್ರಿಕೆ ಚಿಣ್ಣರ ಕನಸುಗಳಿಗೆ ಕಚಗುಳಿ ಇಡುವಂತಿತ್ತು. ಇದರಲ್ಲಿನ ಲೇಟರ್ಸ್ ಟು ಅಂಕಲ್ ಪೈ ವಿಭಾಗದಲ್ಲಿ ಅವರು ಮಕ್ಕಳ ಪ್ರಶ್ನೆಗಳಿಗೆ ಸ್ವಾರಸ್ಯಕರವಾಗಿ ಉತ್ತರಗಳನ್ನು ನೀಡುತ್ತಿದ್ದ ಪರಿ ಪ್ರಖ್ಯಾತಿಗೊಂಡಿತ್ತು.

ಮಕ್ಕಳ ಪಠ್ಯದಲ್ಲಿ ಚಿತ್ರಕಥೆಗಳೂ ಒಂದು ಭಾಗವಾಗಿರಬೇಕು. ಇದರಿಂದ ಕಲಿಕೆ ಪರಿಣಾಮಕಾರಿ ಆಗುವುದಲ್ಲದೆ, ಮಕ್ಕಳ ಮನೋವಿಕಾಸವೂ ಸಾಧ್ಯವಾಗುತ್ತದೆ ಎನ್ನುವುದು ‘ಅಂಕಲ್ ಪೈ’ ಅವರ ನಂಬಿಕೆಯಾಗಿತ್ತು. 

ಅನಂತ ಪೈ ಅವರಿಗೆ ಕೊಂಕಣಿ ಮಿಲೇನಿಯಂ ಪ್ರಶಸ್ತಿ, ಹಿಂದಿ ಸಾಹಿತ್ಯ ಅಕಾಡೆಮಿ ಗೌರವ, ಮಹಾರಾಷ್ಟ್ರ ರಾಜ್ಯ ಹಿಂದಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,, ಟಿ.ಎಮ್.ಎ. ಪೈ ಸ್ಮಾರಕ ಪ್ರಶಸ್ತಿ,, ಪ್ರಿಯದರ್ಶಿನಿ ಅಕಾಡೆಮಿ ಪ್ರಶಸ್ತಿ,
ಚಂಢೀಗಡದ ಸಂಸ್ಕೃತಿ ಸಂಸ್ಥಾನ್ ಭಾರತ್ ಗೌರವ್ ಪ್ರಶಸ್ತಿ ಮುಂತಾದ ಹಲವು ಗೌರವಗಳು ಸಂದಿದ್ದವು. ಅನೇಕ ರಾಷ್ಟ್ರಮಟ್ಟದ ಪ್ರಶಸ್ತಿಗಳು ಅವರಿಗೆ ಸಲ್ಲದೆ ತಮ್ಮ ಗೌರವವನ್ನು ಕಡಿಮೆ ಮಾಡಿಕೊಂಡವೇನೋ ಅನಿಸುತ್ತದೆ.

81ವರ್ಷ ಈ ಲೋಕದ ಯಾತ್ರೆಯನ್ನು ಕೈಗೊಂಡಿದ್ದ ಅಂಕಲ್ ಪೈ, 2011ರ ಫೆಬ್ರವರಿ 24ರಂದು ನಿಧನರಾದರು. ಅವರ 'ಅಮರ ಚಿತ್ರ ಕಥೆ'ಗಳಲ್ಲಿ ಕಣ್ಣಿಟ್ಟುಕೊಂಡು ಮೈಮರೆತುಕೊಳ್ಳುತ್ತಿದ್ದ ನಮ್ಮ ಯುಗದವರಿಗಂತೂ ಅವರ ನೆನಪು 'ಅಮರ ಚಿತ್ರ ಕಥೆ' ಮಾತ್ರವೇ ಅಲ್ಲ 'ಅನಂತ'ವೂ ಹೌದು.

On Remembrance Day of Amar Chitta Katha fame Ananta Pai

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ